ಮೈಸೂರು: ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 93ನೇ ಹುತಾತ್ಮ ದಿನದ ಹಿನ್ನೆಲೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಅರ್ಗನೈಜೇಶನ್(ಎಐಡಿಎಸ್ಓ) ವತಿಯಿಂದ ಕನಸಿನ ಸಮಾಜವಾದಿ ಭಾರತ ನಿರ್ಮಿಸಲು ವಿದ್ಯಾರ್ಥಿಗಳ ಸಂಕಲ್ಪದ ಕಾರ್ಯಕ್ರಮ ಮೈಸೂರಿನ ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ಸುಭಾಷ್ ಮಾತನಾಡಿ, ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಹೋರಾಟದ ಸ್ಪೂರ್ತಿ ಎಂದೆಂದಿಗೂ ಜೀವಂತ. ನಮ್ಮ ದೇಶವನ್ನು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿಗೊಳಿಸಿ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ತನ್ನ 23ನೇ ವಯಸ್ಸಿಗೆ ನಗುನಗುತ್ತಾ ಗಲ್ಗಂಭವನ್ನೇರಿದ ಭಗತ್ ಸಿಂಗ್ ಅವರ ಆದರ್ಶ ಮತ್ತು ಉದಾತ್ತ ವಿಚಾರಗಳು ಇಂದಿಗೂ ಪ್ರಸ್ತುತ ಎಂದರು.
ಇದನ್ನು ಓದಿ: ಅದಮ್ಯ ಚೇತನ ‘ಭಗತ್ ಸಿಂಗ್’ ನೆನಪು…!!
ಭಗತ್ ಸಿಂಗ್ ಅವರು ಮಾನವನಿಂದ ಮಾನವನ ಮೇಲೆ ನಡೆಯುವ ಶೋಷಣೆ ಅಂತ್ಯವಾದಗಲೇ ನಮಗೆ ನಿಜವಾದ ಸ್ವಾತಂತ್ರ್ಯ ದೊರಕುವುದು ಎಂದು ಹೇಳಿದ್ದರು. ಇವರು ಹೇಳಿದ ಈ ಮಾತುಗಳು ಅತ್ಯಂತ ಪ್ರಸ್ತುತವಾಗಿದೆ. ಈ ದೇಶದ ಅತಿ ದೊಡ್ಡ ಶ್ರೀಮಂತರು ಬಡ- ಮಧ್ಯಮ ವರ್ಗದ ಸಾಮಾನ್ಯ ಜನರ ಮೇಲೆ ಶೋಷಣೆಯನ್ನು ಎಸಗುತ್ತಲೇ ಇದ್ದಾರೆ. ಪರಿಣಾಮ ಇಂದು ಶಿಕ್ಷಣದ ವ್ಯಾಪಾರೀಕರಣ, ಬಡತನ ನಿರುದ್ಯೋಗ ಹೀಗೆ ಹಲವು ಸಾಮಾಜಿಕ ಸಮಸ್ಯೆಗಳು ತಾಂಡವವಾಡುತ್ತಿದೆ. ಭಗತ್ ಸಿಂಗ್ ಅವರ ಉತ್ತರಾಧಿಕಾರಿಗಳಾದ ನಾವು ಈ ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ. ಅವರು ಕನಸು ಕಂಡಂತೆ ಎಲ್ಲರಿಗೂ ಶಿಕ್ಷಣ, ಉದ್ಯೋಗ, ಹೆಣ್ಣು ಮಕ್ಕಳು ಘನತೆ ಗೌರವದಿಂದ ಬದುಕುವ ಸಮಾಜವಾದಿ ಭಾರತವನ್ನು ಕಟ್ಟಲು ವಿದ್ಯಾರ್ಥಿಗಳಾದ ನಾವು ಶ್ರಮಿಸಬೇಕಿದೆ ಎಂದು ಕರೆ ಕೊಟ್ಟರು.
ಇದನ್ನು ಓದಿ: ಭಗತ್ಸಿಂಗ್ ತನ್ನ ಸಣ್ಣ ವಯಸ್ಸಿಗೆ ಅಷ್ಟೊಂದು ಪ್ರಕಾರ ಜ್ಞಾನ ಪಡೆದಿರುವುದೇ ಸೋಜಿಗ
ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಹುತಾತ್ಮ ದಿನಾಚರಣೆಯನ್ನು ಮೈಸೂರಿನ ರಾಮಸ್ವಾಮಿ ವೃತ್ತ, ಮಹಾರಾಜ ಮೈದಾನ, ಮಹಾರಾಜ ಪಿಯು ಕಾಲೇಜು, ಯುವರಾಜ ಪದವಿ ಕಾಲೇಜು, ಮಹಾರಾಣಿ ಕಾಲೇಜಿನಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳು ಮಹಾನ್ ಕ್ರಾಂತಿಕಾರಿಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಐಡಿಎಸ್ಓನ ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯರಾದ ಪುಷ್ಪ, ಸ್ವಾತಿ, ನಿತಿನ್ ಹಾಗೂ ವಿವಿಧ ಕಾಲೇಜಿನ ಕಾರ್ಯಕರ್ತರು ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ