ಲಕ್ಷಾಂತರ ರೂಪಾಯಿ ತೆತ್ತು ವಿದ್ಯಾಭ್ಯಾಸ ಪಡೆದರೂ ಉದ್ಯೋಗವೆಲ್ಲಿದೆ: ಜೀವನ್‌ರಾಜ್‌ ಕುತ್ತಾರ್ ಪ್ರಶ್ನೆ

ಮಂಗಳೂರು: ಪ್ರಸ್ತುತ ಶಿಕ್ಷಣವು ಮಾರಾಟದ ಸರಕಾಗಿದೆ. ನಾವು ಅಧಿಕ ಶುಲ್ಕ ಪಾವತಿ ಶಿಕ್ಷಣ ಪಡೆದೆವು ಎಂದುಕೊಳ್ಳಿ, ಮುಂದೇನು?. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮಾಡಿದವರು ಉದ್ಯೋಗವಿಲ್ಲದೆ ಅಲೆಯುವಂತಾಗಿದೆ. ಮಂಗಳೂರಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಯಾವುದೇ ಉದ್ಯೋಗವಿಲ್ಲ. ಅದಕ್ಕಾಗಿ ಬೆಂಗಳೂರಿಗೆ ತೆರಳಿ 10 ಸಾವಿರ ರೂಪಾಯಿಗೆ ದುಡಿಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೆನಪೋಯ ಕಾಲೇಜು ಉಪ ಪ್ರಾಂಶುಪಾಲ ಜೀವನ್‌ರಾಜ್ ಕುತ್ತಾರ್ ತಿಳಿಸಿದರು.

ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡಪಾಲು, ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ಘೋಷಣೆಯಡಿಯಲ್ಲಿ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್‌ನ (ಡಿವೈಎಫ್‌ಐ) 13ನೇ ಮಂಗಳೂರು ನಗರ ಸಮ್ಮೇಳನವು ನಡೆಯಿತು.

ಇದನ್ನು ಓದಿ: ಮಾಫಿಯಾಗಳನ್ನು ಮಟ್ಟ ಹಾಕಲು ಪೊಲೀಸರ ವೈಫಲ್ಯ ; ಕ್ರಮಕ್ಕೆ ಒತ್ತಾಯಿಸಿದ ಡಿವೈಎಫ್‌ಐ

ಈ ಸಮ್ಮೇಳನವನ್ನು ಉದ್ಘಾಟನೆ ಮಾಡಿ ಮಾತನಾಡಿದ ಜೀವನ್‌ರಾಜ್ ಕುತ್ತಾರ್, ʻʻಡಿವೈಎಫ್‌ಐ ಈ ಹಿಂದಿನಿಂದ ಉದ್ಯೋಗ, ಶಿಕ್ಷಣ, ಆರೋಗ್ಯವೆಂಬ ಮೂರು ವಿಚಾರದಲ್ಲಿ ಹೋರಾಟ ನಡೆಸುತ್ತಿದೆ. ಈ ಹೋರಾಟ ಮುಂದುವರಿಯಬೇಕಾಗಿದೆ. ಸರ್ಕಾರ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಹೋರಾಟ ಮುಂದುವರಿಸಬೇಕಾಗಿದೆʼʼ ಎಂದು ಹೇಳಿದರು.

ʻʻಪ್ರಸ್ತುತ ಶಿಕ್ಷಣವು ಮಾರಾಟದ ಸರಕಾಗಿದೆ. ಎಲ್‌ಕೆಜಿ, ಯುಕೆಜಿಯ ಶುಲ್ಕ ಪಾವತಿಸಲು ಕೂಡಾ ಸಾಲ ಮಾಡಬೇಕಾದ ಸ್ಥಿತಿಯಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಈ ಸರ್ಕಾರದ ವ್ಯವಸ್ಥೆ. ನಮ್ಮ ತುಳುನಾಡಿನ ಅಭಿವೃದ್ಧಿಗೆ ನಮ್ಮ ಜನರ ಪಾಲು ದೊಡ್ಡದು. ಆದರೆ ಇಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗವನ್ನು ನೀಡಲಾಗುತ್ತಿಲ್ಲʼʼ ಎಂದು ಹೇಳಿದರು.

ʻʻಜನರಿಗೆ ಯಾವುದೇ ಸುಳಿವು ಇಲ್ಲದೆಯೇ ನಗರದಲ್ಲಿ ಡ್ರಗ್ಸ್ ಜಾಲ ಅತೀ ವಿಸ್ತಾರವಾಗಿ ಬೆಳೆದಿದೆ. ಪ್ರಮುಖವಾಗಿ ಹೈಸ್ಕೂಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಡ್ರಗ್ಸ್ ಪೆಡ್ಲರ್‌ಗಳಾಗುತ್ತಿದ್ದಾರೆ. ಕ್ಲಬ್‌, ಪಬ್‌ಗಳಲ್ಲಿ ಮಾಸಿಕ ಒಂದು ಬಾರಿ ನಡೆಸಲಾಗುವ ಉಚಿತ ಪಾರ್ಟಿಗೆ ಹೋದ ವಿದ್ಯಾರ್ಥಿಗಳು ಡ್ರಗ್ಸ್ ಚಟಕ್ಕೆ ಒಳಗಾಗುತ್ತಿದ್ದಾರೆ. ಯುವಜನರು ಉದ್ಯೋಗ, ಮೊದಲಾದ ಸಮಸ್ಯೆಯ ಬಗ್ಗೆ ಮಾತನಾಡಬಾರದು ಎಂದೇ ವ್ಯವಸ್ಥಿತವಾಗಿ ಅವರು ಡ್ರಗ್ ವ್ಯಸನಿಗಳಾಗುವಂತೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿದಿದ್ದರೂ ಏನೂ ಕ್ರಮಕೈಗೊಳ್ಳದಂತಹ ಸ್ಥಿತಿಯಲ್ಲಿ ಈ ಜಾಲ ವಿಸ್ತರಿಸಬಹುದುʼʼ ಎಂದು ಜೀವನ್‌ರಾಜ್ ಕುತ್ತಾರ್ ಆತಂಕ ವ್ಯಕ್ತಪಡಿಸಿದರು.

ಇದನ್ನು ಓದಿ: ಜೂಜುಕೇಂದ್ರಗಳು ಮುಚ್ಚುವವರೆಗೆ ಹಲವು ಹಂತದ ಹೋರಾಟಕ್ಕೆ ಡಿವೈಎಫ್‌ಐ ಕರೆ

ʻʻಆರೋಗ್ಯ, ಶಿಕ್ಷಣ, ಉದ್ಯೋಗ ಇಂದಿನ ಯುವಜನರ ಮನಸ್ಸಿನಲ್ಲಿ ಮುಖ್ಯವಾಗಿ ಇರಬೇಕಾದ ವಿಚಾರವಾಗಿದೆ. ಆದರೆ ಇಂದಿನ ಯುವಜನರ ಮನಸ್ಸಿನಲ್ಲಿ ಧಾರ್ಮಿಕ ವಿಷಬೀಜವಿದೆ. ಡಿವೈಎಫ್‌ಐ ಜನರ ನಡುವೆ ಹಲವಾರು ಕಾರ್ಯಗಳನ್ನು ಮಾಡಿದೆ. ಜನರ ಸಮಸ್ಯೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಆದರೆ ಇದನ್ನೂ ರಾಜಕೀಯವಾಗಿ, ಧಾರ್ಮಿಕವಾಗಿ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಎದುರಿಸಿ ಡಿವೈಎಫ್‌ಐ ಜನಪರ ಹೋರಾಟ ನಡೆಸಬೇಕುʼʼ ಎಂದು ತಿಳಿಸಿದರು.

ʻʻಒಂದೆಡೆ ಬಡ ಯುವಜನರು ಕೋಮು ವಿಚಾರದಲ್ಲಿ ಗಲಭೆ ಮಾಡುತ್ತಿದ್ದರೆ, ಇನ್ನೊಂದೆಡೆ ಆ ಗಲಭೆಯನ್ನು ಸೃಷ್ಟಿ ಮಾಡುವ ಶ್ರೀಮಂತರು ಧರ್ಮ ಬೇಧವಿಲ್ಲದೆ ಜೊತೆಯಾಗಿರುತ್ತಾರೆ. ವಿದ್ಯಾರ್ಥಿ ಯುವಜನ ಸಮುದಾಯದಲ್ಲಿ ಕೆಲವರು ಡ್ರಗ್ಸ್ ಅಮಲಿನಲ್ಲಿದ್ದರೆ, ಕೆಲವರು ಧರ್ಮದ ಅಮಲಿನಲ್ಲಿದ್ದಾರೆʼʼ ಎಂದರು.

ಬಳಿಕ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ʻʻನಾವು ದೇಶವನ್ನು ಮೋದಿ ಆಳುತ್ತಿದ್ದಾರೆ ಎಂದುಕೊಂಡಿದ್ದೇವೆ, ಆದರೆ ನೈಜವಾಗಿ ಆಳುವುದು ಆರ್‌ಎಸ್‌ಎಸ್‌ ಸಂಘಟನೆಯಾಗಿದೆ. ಆರ್‌ಎಸ್‌ಎಸ್‌ ಶತ್ರುಗಳನ್ನು ಗುರುತಿಸಿಕೊಂಡೇ ಯೋಜನೆ ರೂಪಿಸುತ್ತಿದೆ. ಮುಸ್ಲಿಮರು, ಕ್ರೈಸ್ತರು, ಎಡಪಕ್ಷದವರನ್ನು ಗುರಿಯಾಗಿಸಿಕೊಂಡಿದೆ. ತಮ್ಮ ವಿರುದ್ಧ ಮಾತನಾಡುವವರ ಮೇಲೆ ನೇರ ದಾಳಿಯನ್ನು ನಡೆಸುತ್ತಿದೆ. ನ್ಯಾಯಾಂಗ ವ್ಯವಸ್ಥೆಯನ್ನೇ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದೆʼʼ ಎಂದು ಆರೋಪಿಸಿದರು.

ಇದನ್ನು ಓದಿ: ಉದ್ಯೋಗ ಕೇಳಿದರೆ ಜೈಲಿಗೆ ಅಟ್ಟುವ ಸರ್ಕಾರ: ಡಿವೈಎಫ್‌ಐ ಆರೋಪ

ʻʻಸ್ಕಿಲ್‌ಗೇಮ್-ಜೂಜುಕೇಂದ್ರಗಳ ವಿರುದ್ಧವಾಗಿ, ಟೋಲ್‌ಗೇಟ್ ವಿರುದ್ಧವಾಗಿ, ಖಾಸಗಿ ಆಸ್ಪತ್ರೆಯ ಲೂಟಿಯ ವಿರುದ್ಧ ಡಿವೈಎಫ್‌ಐ ಯಶಸ್ವಿ ಹೋರಾಟವನ್ನು ನಡೆಸಿದೆ. ಇಂತಹ ಹಲವಾರು ಯಶಸ್ವಿ ಹೋರಾಟವನ್ನು ನಡೆಸಿದ ಡಿವೈಎಫ್‌ಐಗೆ ಜನರು ಸದಸ್ಯರಾಗಬೇಕು. ಡ್ರಗ್ಸ್, ಜೂಜು, ಧರ್ಮದ ಅಮನಿನಲ್ಲಿರುವ ಯುವಜನರು ಅದರಿಂದ ಹೊರಬಂದು ಜನಪರ ಹೋರಾಟಗಳಲ್ಲಿ ಜೊತೆಯಾಗಬೇಕುʼʼ ಎಂದು ಕರೆ ನೀಡಿದರು.

ಡಿವೈಎಫ್‌ಐ ಮಂಗಳೂರು ನಗರ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಿವೈಎಫ್‌ಐ ಅಧ್ಯಕ್ಷ ನವೀನ್ ಕೊಂಚಾಡಿ ವಹಿಸಿದರು. ಸಮಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಉಪಾಧ್ಯಕ್ಷೆ ಮಾಧುರಿ ಬೋಳಾರ್ ಹಾಜರಿದ್ದರು. ನಗರ ಕಾರ್ಯದರ್ಶಿ ಸಾಧಿಕ್ ಕಣ್ಣೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *