ಬೆಂಗಳೂರು : ಆಡಳಿತರೂಢ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಇದೇ 9 ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದೆ.
ತುಮಕೂರಿನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಭ್ರಷ್ಟಾಚಾರ ಖಂಡಿಸಿ ಮಾರ್ಚ್ 9 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 11 ಗಂಟೆವರೆಗೆ ಎಲ್ಲಾ ವ್ಯಾಪರಿಗಳು ಬಂದ್ಗೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಬಂದ್ ವೇಳೆ ಯಾವುದೇ ಶಾಲೆ, ಕಾಲೇಜು ಆಸ್ಪತ್ರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತಮಾಡಲು ನಿಮ್ಮ ಸಹಕಾರ ಬೇಕು. ಅದಕ್ಕಾಗಿ ಎಲ್ಲ ಸಂಘ, ಸಂಸ್ಥೆಗಳು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ರಾಷ್ಟ್ರದ ನಾಯಕರ ಬಳಿ ಅನೇಕ ವಿಚಾರಗಳನ್ನ ಚರ್ಚೆ ಮಾಡಿದ್ದೇವೆ. ಕಳೆದ ಮೂರುವರೆ ವರ್ಷದಿಂದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೇವೆ. ಬಿಜೆಪಿ ಇಡೀ ರಾಜ್ಯಕ್ಕೆ ಅಗೌರವ ತರುವ ಕೆಲಸ ಬಿಜೆಪಿ ಮಾಡಿದೆ. ಸಿಎಂ ಭ್ರಷ್ಟಾಚಾರಕ್ಕೆ ಆಧಾರ ಕೊಡಿ ಎಂದು ಕೇಳಿದ್ದರು. ಗುತ್ತಿಗೆದಾರ ಸಂಘದ ಅಧ್ಯಕ್ಷರು ನೇರವಾಗಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಈವರೆಗೂ ಯಾವುದೇ ಉತ್ತರ ಕೊಡದೇ ಮೋದಿ ನಾನು ತಿನ್ನೋದಿಲ್ಲ, ತಿನ್ನೋರಿಗೂ ಬಿಡಲ್ಲ’ ಎಂದು ಹೇಳಿದ್ದಾರೆ ಎಂದರು.
ಎಲ್ಲ ಕಚೇರಿಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೇವೆ. ಭ್ರಷ್ಟಾಚಾರದಿಂದ ಸಾವಿರಾರು ಜನ ನೊಂದಿದ್ದಾರೆ. ಸಿಎಂ ಕೇಳಿದ ಸಾಕ್ಷಿಗೆ ಲೋಕಾಯುಕ್ತ ಅಧಿಕಾರಿಗಳು ಕೊಟ್ಟಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಎಲ್ಲಾ ಲೊಕಾಯುಕ್ತ ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದರ ನೈತಿಕ ಹೊಣೆಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.