ಭಾವೋದ್ರೇಕದಿಂದ ವರದಿ ಮಾಡಿ-ಮಕ್ಕಳನ್ನೇ ದೂಷಿಸುವುದು ತರವಲ್ಲ

ಬೆಂಗಳೂರು: ಮಕ್ಕಳ ಶಾಲಾ ಬ್ಯಾಗ್‌ ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಕಾಂಡೋಮ್ಸ್‌, ಗರ್ಭಪಾತ ಗುಳಿಗೆ, ನೀರಿನ ಬಾಟಲ್ ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವನ್ನು  ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟಿಸಿವೆ. ಇಂದು ಮಕ್ಕಳ ಶಿಕ್ಷಣದ ಕ್ರಮ ಹಾಗೂ ವಿಧಾನಗಳ ಬಗ್ಗೆ ಕುಟುಂಬ, ಸಮಾಜ ಹಾಗೂ ಸರಕಾರಗಳು ಗಂಭೀರವಾಗಿ ಯೋಚಿಸುವುದಕ್ಕೆ ಇದು ಪ್ರಚೋದನೆಯಾಗಬೇಕು ಎನ್ನುವುದು ನಿಜವಾದರೂ, ಈ ಬಗ್ಗೆ ಭಾವೋದ್ರೇಕದಿಂದ ವರದಿ ಮಾಡುವುದು ಮತ್ತು ಮಕ್ಕಳನ್ನೇ ದೂಷಿಸುವುದು ಅಪೇಕ್ಷಣೀಯವಲ್ಲ, ಅದರಿಂದ ಮಕ್ಕಳಿಗೆ ಇನ್ನಷ್ಟು ಹಾನಿಯೇ ಆಗಬಹುದು ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ .ವಿ.ಪಿ ಮತ್ತಿತರರು ತಿಳಿಸಿದ್ದಾರೆ.

ಜಂಟಿ ಹೇಳಿಕೆಯನ್ನು ನೀಡಿರುವ ಸಮಾನ ಮನಸ್ಕರು, ಹಲವು ರೀತಿಯಲ್ಲಿ ಇಂಥಹ ಬೆಳವಣಿಗೆಗಳಿಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರಣವಾಗಿರುವ ಸರ್ಕಾರವೇ ಈ  ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲಕ್ಕಿಂತ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಮೊದಲನೆಯದಾಗಿ, ಕೋವಿಡ್ ಕಾಲದಲ್ಲಿ ಒಂದೆರಡು ವರ್ಷ ಶಾಲೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ ಮತ್ತು ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ನಾವು ಜೂನ್ 2020ರಿಂದಲೇ ಪದೇ ಪದೇ ಎಚ್ಚರಿಕೆ ನೀಡಿದ್ದೆವು. ಮಕ್ಕಳಿಗೆ ನೇರ ಶಿಕ್ಷಣವಷ್ಟೇ ನೀಡಬೇಕೆಂದೂ, ಮೊಬೈಲ್  ಸಾಧನಗಳ ಮೂಲಕ ಆನ್‌ಲೈನ್ ಪಾಠಗಳನ್ನು ಮಾಡುವುದು ಹಲವು ತರದ ತೊಂದರೆಗಳನ್ನುಂಟು ಮಾಡಲಿವೆ ಎಂದೂ ಎಚ್ಚರಿಸಿದ್ದೆವು. ಅವನ್ನೆಲ್ಲ ಕಡೆಗಣಿಸಿ ಮಾಡಬಾರದ್ದನ್ನು ಮಾಡಿದ್ದರ ದುಷ್ಪರಿಣಾಮಗಳನ್ನೇ ಈಗ ಕಾಣುತ್ತಿದ್ದೇವೆ. ಇವುಗಳಿಗೆ ಕಾರಣರಾದ ಆಡಳಿತ, ಶಾಲಾ ವ್ಯವಸ್ಥಾಪಕರು ಮುಂತಾದವರು ಹೊಣೆ ಹೊರಬೇಕಲ್ಲದೆ ಮಕ್ಕಳನ್ನು ದೂಷಿಸಿ ದೊಡ್ಡದಾಗಿ ಚರ್ಚಿಸುವುದು ಅನ್ಯಾಯ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌! ಶಾಲಾ ಸಿಬ್ಬಂದಿಗೆ ಆಘಾತ

ಎರಡನೆಯದಾಗಿ, ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು  ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರಯದಲ್ಲಿ ತಮ್ಮ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ ಹಾಗು ಆತಂಕಗಳಿಗೆ ಈಡಾಗದೆ ಅವನ್ನು ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ,  ಸರ್ಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗು ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸಿದ ಕಾರಣ ಇಂದು ಮಕ್ಕಳು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ  ಗೊಂದಲಕ್ಕೆ ಸಿಲುಕುತ್ತಿರುವುದು ಮತ್ತು ಪ್ರಯೋಗಗಳಿಗೆ ಮುಂದಾಗುವಂತಾಗಿದೆ ಎಂದು ಸಮಾನ ಮನಸ್ಕರು ತಿಳಿಸಿದ್ದಾರೆ.

ಸರ್ಕಾರವು ಈಗಲಾಗದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಮುಂದಾಗುವುದು ಸರಿಯಾದ ಕ್ರಮವೆಂದು ತಿಳಿಸಿಲಾಗಿದೆ. ಈಗಾಗಲೇ ಹಲವು  ದೇಶಗಳಲ್ಲಿ ಇದು ಜಾರಿಯಲ್ಲಿದ್ದು ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನಿಸೆಫ್‌ ಮತ್ತು ಯುನೆಸ್ಕೊ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗು ಮಾಡ್ಯೂಲ್‌ ಗಳನ್ನು ತಯಾರಿಸಿವೆ, ಅವನ್ನೇ ಇಲ್ಲೂ ಬಳಸಲು ಸಾಧ್ಯವಿದೆ.

ಮೂರನೆಯದಾಗಿ, ಇಂಥಹ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಮತ್ತು ತಜ್ಞತೆಯನ್ನು ಹೊಂದಿರುವವರ ಮಾರ್ಗದರ್ಶನದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕೇ ಹೊರತು ರಜೆ ನೀಡಿ ಕೌನ್ಸಿಲಿಂಗ್‌ ಗೆ ಕಳಿಸುತ್ತೇವೆಂದು ಬಹಿರಂಗವಾಗಿ ಸಾರಿ ಹೇಳುವುದು ಅಥವಾ ಸಲಹೆ ನೀಡುವುದು ಅತ್ಯಂತ ಅವಿವೇಕದ ನಿರ್ಧಾರ. ಅಂಥಹ  ಮಕ್ಕಳನ್ನು ಗುರುತಿಸಿ, ಅವರ ಗೌಪ್ಯತೆಯನ್ನು ಕಾಪಾಡಿ ತಜ್ಞರ ಸಹಾಯದಿಂದ ಅವರು ಅದನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲು ನೆರವಾಗಬೇಕೇ ಹೊರತು ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಾಗಲಿ ಅಥವಾ ಸುದ್ದಿಯಾಗಿ ವೈಭವೀಕರಿಸುವುದಾಗಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೂ, ಜೀವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿದೆಯೆಂದು ಸಮಾಜ ಹಾಗು ಸರ್ಕಾರ ಅರಿಯಬೇಕಿದೆ ಎಂದು ತಿಳಿಸಲಾಗಿದೆ.

ಹೇಳಿಕೆಗೆ ವೈದ್ಯಕೀಯ ತಜ್ಞ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಜಿ . ರಾಮಕೃಷ್ಣ, ಡಾ. ಕೆ ಮರಳುಸಿದ್ದಪ್ಪ, ಪ್ರೊ. ಎಸ್ ಜಿ  ಸಿದ್ಧರಾಮಯ್ಯ, ಪ್ರೊ.ಕಾಳೇಗೌಡ ನಾಗವಾರ, ಡಾ. ವಸುಂಧರಾ ಭೂಪತಿ, ಡಾ. ವಿಜಯ, ಟಿ.ಸುರೇಂದ್ರ ರಾವ್, ಬಿ.ಶ್ರೀಪಾದ ಭಟ್‌, ನೀಲಾ ಕೆ, ಡಾ.ಎನ್‌. ಗಾಯತ್ರಿ, ಲೀಲಾ ಸಂಪಿಗೆ, ವಿಮಲಾ ಕೆ.ಎಸ್‌ ಸಹಮತ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *