ಬೆಂಗಳೂರು: ನೋಟುಗಳಲ್ಲಿ ಲಕ್ಷ್ಮೀ ಮತ್ತು ಗಣೇಶನ ಚಿತ್ರ ಮುದ್ರಿಸಬೇಕೆಂಬ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಕೆಗೆ ಪ್ರತಿಕ್ರಿಯೆ ನೀಡಿರುವ ನಟ ಚೇತನ್ ‘ಇಂತಹ ಅಸಾಂವಿಧಾನಿಕ, ಮೌಢ್ಯಗಳ ಹೇರಿಕೆಯನ್ನು ಕೇಜ್ರಿವಾಲ್ ಅವರು ನಿಲ್ಲಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ. ಇನ್ನೊಂದರ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ನಟ ಚೇತನ್, ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಖಂಡಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) October 26, 2022
ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಬದಲಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ನೆನ್ನೆ(ಅಕ್ಟೋಬರ್ 26) ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅರವಿಂದ ಕೇಜ್ರಿವಾಲ್ ಹೇಳಿಕೆ ನೀಡಿದ್ದರು.
‘ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನು ಪಡಬೇಕಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಕೆಲವೊಮ್ಮೆ ಉತ್ತಮ ಫಲಿತಾಂಶ ದೊರೆಯದೇ ಇರುವುದರಿಂದ ದೇವರ ಆಶೀರ್ವಾದ ಬೇಕಿರುತ್ತದೆ. ಅದಕ್ಕಾಗಿ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಭಾವಚಿತ್ರದ ಜತೆಗೆ ಲಕ್ಷ್ಮಿದೇವಿ, ಗಣೇಶನ ಫೋಟೊಗಳನ್ನು ಹಾಕಬೇಕೆಂಬುದು ನನ್ನ ಬಯಕೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆʼ ಎಂದು ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.