ಟೀಂ ಇಂಡಿಯಾಗೆ ಸುಲಭ ತುತ್ತಾದ ನೆದರ್‌ಲೆಂಡ್ಸ್‌

  • ಸೂಪರ್‌-12 ಹಂತದಲ್ಲಿ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡಕ್ಕೆ ಸತತ ಗೆಲುವು
  • ನೆದರ್ಲೆಂಡ್ಸ್‌ ವಿರುದ್ಧದ 56 ರನ್‌ಗಳ ಜಯದೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನ ಪಡೆದ ಟೀಮ್ ಇಂಡಿಯಾ.

ಸಿಡ್ನಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಆಕರ್ಷಕ ಬ್ಯಾಟಿಂಗ್, ಅಶ್ವಿನ್, ಅಕ್ಷರ್ ಹಾಗೂ ಭುವನೇಶ್ವರ್ ಕುಮಾರ್ ಸಂಘಟಿತ ಪ್ರದರ್ಶನದ ನೆರವಿನಿಂದ ನೆದರ್‌ಲೆಂಡ್ಸ್‌ ವಿರುದ್ದ ಟೀಂ ಇಂಡಿಯಾ 56 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಟೀಂ ಇಂಡಿಯಾ ನೀಡಿದ್ದ 180 ರನ್‌ಗಳ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್‌ ತಂಡವು 9 ವಿಕೆಟ್ ಕಳೆದುಕೊಂಡು 123 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೂಪರ್ 12 ಹಂತರದ ಎರಡನೇ ಗುಂಪಿನಲ್ಲಿ ಎರಡನೇ ಗೆಲುವಿನೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ನೀಡಿದ್ದ 180 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್ ತಂಡಕ್ಕೆ ಆರಂಭದಲ್ಲೇ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಮೊದಲ ಎರಡು ಓವರ್ ಮೇಡನ್ ಮಾಡಿದ ಭುವನೇಶ್ವರ್ ಕುಮಾರ್, ವಿಕ್ರಂಜಿತ್ ಸಿಂಗ್(01) ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಮ್ಯಾಕ್ಸ್‌ ಒ ಡೌಡ್(16), ಬಾಸ್ ಡೆ ಲೀಡೆ(16) ಹಾಗೂ ಕಾಲಿನ್ ಆಕೆರ್‌ಮನ್(17) ಭಾರತೀಯ ಬೌಲರ್‌ಗಳೆದುರು ಕೊಂಚ ಪ್ರತಿರೋಧ ತೋರಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಅಕ್ಷರ್ ಪಟೇಲ್‌ ಅವಕಾಶ ಮಾಡಿಕೊಡಲಿಲ್ಲ.

ಇನ್ನು ರವಿಚಂದ್ರನ್ ಅಶ್ವಿನ್‌ ಒಂದೇ ಓವರ್‌ನಲ್ಲಿ ಕಾಲಿನ್ ಅಕೆರ್‌ಮನ್‌ ಹಾಗೂ ಟಾಮ್ ಕೂಪರ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇನ್ನು ಕೊನೆಯಲ್ಲಿ ಟಿಮ್ ಪ್ರಿಂಗಲ್‌(20) ಹಾಗೂ ಶೆರಿಜ್ ಅಹಮ್ಮದ್ ಭಾರತೀಯ ಬೌಲರ್‌ಗಳೆದುರು ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ.

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಕೆ ಎಲ್ ರಾಹುಲ್ ನೆದರ್‌ಲೆಂಡ್ಸ್ ವಿರುದ್ದ ಸಿಡಿಯಬಹುದು ಎನ್ನುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಯಿತು. ಕೆ ಎಲ್ ರಾಹುಲ್ 12 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ ಕೇವಲ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಎರಡನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ನಾಯಕ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜತೆಗೂಡಿ 73 ರನ್‌ಗಳ ಜತೆಯಾಟವಾಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ಕೇವಲ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ 53 ರನ್ ಬಾರಿಸಿ ಫ್ರಿಡ್ ಕ್ಲಾಸೆನ್‌ಗೆ ವಿಕೆಟ್‌ ಒಪ್ಪಿಸಿದರು.

12ನೇ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ರೋಹಿತ್ ಅಬ್ಬರಿಸುವವರೆಗೂ ಶಾಂತ ರೀತಿಯಲ್ಲಿ ಬ್ಯಾಟ್ ಬೀಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ ಜತೆಗೂಡಿ ಟೀಂ ಇಂಡಿಯಾ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದರು. ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಕೊನೆಯ 8 ಓವರ್‌ಗಳಲ್ಲಿ ಮುರಿಯದ 95 ರನ್‌ಗಳ ಜತೆಯಾಟ ನಿಭಾಯಿಸಿದರು. ಪಾಕಿಸ್ತಾನ ವಿರುದ್ದ ಅಜೇಯ 82 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ, ಇದೀಗ ನೆದರ್‌ಲೆಂಡ್ಸ್ ಎದುರು ಕೇವಲ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 62 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 51 ರನ್ ಬಾರಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿ ಸಂಭ್ರಮಿಸಿದರು.

ದ.ಆಫ್ರಿಕಾ ಮುಂದಿನ ಎದುರಾಳಿ : ಬ್ಯಾಕ್‌ ಟು ಬ್ಯಾಕ್‌ ಜಯದೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಟೀಮ್ ಇಂಡಿಯಾ, ಇದೀಗ ತನ್ನ ಮೂರನೇ ಪಂದ್ಯದಲ್ಲಿ ಅಪಾಯಕಾರಿ ದಕ್ಷಿಣ ಆಫ್ರಿಕಾ ಎದುರು ಅಕ್ಟೋಬರ್‌ 30ರಂದು (ಭಾನುವಾರ) ಪೈಪೋಟಿ ನಡೆಸಲಿದೆ.

Donate Janashakthi Media

Leave a Reply

Your email address will not be published. Required fields are marked *