ಮಂಗಳೂರು : ಪ್ರವೀಣ್ ಹತ್ಯೆ ಮಾಸುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಂದು ಅಹಿತಕರ ಘಟನೆ ನಡೆದಿದ್ದು, ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ ತಂಡವೊಂದು ಗುರುವಾರ ರಾತ್ರಿ ಯುವಕನೋರ್ವನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಮಂಗಳ ಪೇಟೆಯ ಫಾಝಿಲ್ (23) ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿತ್ತು. ನಾಳೆ ಹುಟ್ಟು ಹಬ್ಬದ ಆಚರಣೆಗೆಂದು ಚಪ್ಪಲಿ ಮತ್ತು ಸ್ಮಾರ್ಟ್ ವಾಚ್ ಖರೀದಿಗೆ ಬಂದಿದ್ದ ಫಾಝಿಲ್ ಮೇಲೆ ರಾತ್ರಿ ಅಂಗಡಿಯ ಎದುರಿನ ಜಗಲಿಯಲ್ಲೇ ಮಾರಕಾಯುಧಗಳಿಂದ ದಾಳಿ ನಡೆಸಿದರು. ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಫಾಝಿಲ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದ್ದು, ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಿದ್ದಾರೆ. ಸಿಎಂ ಮಂಗಳೂರಿಗೆ ಭೇಟಿ ನೀಡಿ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬೆಂಗಳೂರಿಗೆ ವಾಪಾಸಾಗುವ ಮುನ್ನವೇ ಕರಾವಳಿಯಲ್ಲಿ ನೆತ್ತರು ಹರಿದಿರುವುದು ಕಾನೂನು ಸುವ್ಯವಸ್ಥೆಯ ಕುರಿತು ಪ್ರಶ್ನೆ ಮೂಡಿಸುವಂತೆ ಮಾಡಿದೆ.