ಪಿಎಸ್ಐ ಅಕ್ರಮದ ಪ್ರಭಾವಿ ಸಚಿವರ ಹೆಸರನ್ನು ಬಹಿರಂಗಪಡಿಸಿ: ಡಿ ಕೆ ಶಿವಕುಮಾರ್‌ ಆಗ್ರಹ

ಬೆಂಗಳೂರು: ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ‘ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿದೆ. ಇದರೊಂದಿಗೆ, ಈ ಹಗರಣದಲ್ಲಿ ಭಾಗಿಯಾಗಿರುವ ಸಚಿವರು, ನಾಯಕರ ಹೆಸರನ್ನು ಬಹಿರಂಗಪಡಿಸಲು ಸಿದ್ಧವಿದ್ದರೂ ತನಿಖಾಧಿಕಾರಿಗಳು ಅದನ್ನು ದಾಖಲಿಸಿಕೊಳ್ಳುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

‘ಕರ್ನಾಟಕ ಇಂದು ಬ್ರಹ್ಮಾಂಡ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಈ ಕುರಿತು ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಗಳನ್ನು ಸಹ ಗಮನಿಸಬಹುದಾಗಿದೆ. ಪಿಎಸ್ಐ ಹಗರಣದಲ್ಲಿ ರಾಜ್ಯದ ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು, ಮಂತ್ರಿಗಳು ಭಾಗಿಯಾಗಿದ್ದಾರೆ. ಸಚಿವರೇ ನಮ್ಮ ಜಿಲ್ಲೆಯ ಅಭ್ಯರ್ಥಿಗಳಿಗೆ ಶರಣಾಗುವಂತೆ ಹೇಳಿದ್ದಾರೆ. ಇದುವರೆಗೂ 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಅವರ ಹೇಳಿಕೆ, ಬಂಧನವಾಗಿರುವ ಎಡಿಜಿಪಿ ಅವರ ಹೇಳಿಕೆಗಳನ್ನು ತನಿಖಾಧಿಕಾರಿಗಳು ಸಂಪೂರ್ಣವಾಗಿ ದಾಖಲೆ ಮಾಡಿಕೊಳ್ಳುತ್ತಿಲ್ಲ. ತನಿಖೆಯಲ್ಲಿ ಆಂತರಿಕವಾಗಿ ಏನೆಲ್ಲಾ ಆಗುತ್ತಿದೆ ಎಂಬುದು ಗೊತ್ತಿದೆ. ಇಂತಹ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕುʼʼ ಎಂದು ಡಿ ಕೆ ಶಿವಕುಮಾರ್‌ ಆಗ್ರಹಿಸಿದರು.

ರಾಜ್ಯದಲ್ಲಿ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ. ಬಿಜೆಪಿ ಪಕ್ಷ ರಾಜ್ಯದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅವರ ಕತೆ ಮುಕ್ತಾಯದ ಹಂತದಲ್ಲಿದ್ದು, ಜನ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ ಎಂದರು.

ಬಿಜೆಪಿ ಶಾಸಕರ ಅಧ್ಯಯನ ಪ್ರವಾಸ ಕುರಿತು ಮಾತನಾಡಿದ ಅವರು, ‘ಅಧ್ಯಯನದ ಹೆಸರಲ್ಲಿ ಬಿಜೆಪಿ ಶಾಸಕರು ಪ್ರವಾಸ ಮಾಡುತ್ತಿದ್ದಾರೆ. ಇದು ಅವರ ಇಚ್ಛೆ. ನಾವು ನಮ್ಮ ಶಾಸಕರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ಮುಂದಾದಾಗ ಅವರು ಟೀಕಿಸಿದ್ದರು’ ಎಂದು ತಿಳಿಸಿದರು.

ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾಯಕರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಅವರ ವೈಯಕ್ತಿಕ ಹಾಗೂ ಅಭಿಮಾನಿಗಳ ಇಚ್ಛೆಗೆ ಬಿಟ್ಟದ್ದು. ಪಕ್ಷಕ್ಕೆ ಏನೆಲ್ಲಾ ಕಾರ್ಯಕ್ರಮಗಳು ಅನುಕೂಲವಾಗುತ್ತವೋ ಅದಕ್ಕೆ ಪಕ್ಷದ ಅಧ್ಯಕ್ಷನಾಗಿ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಸೋನಿಯಾ ಗಾಂಧಿ ಅವರು ಆಗಸ್ಟ್ 15 ರಂದು ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ವಿಚಾರವಾಗಿ ನನಗೆ ಜವಾಬ್ದಾರಿ ವಹಿಸಿದ್ದು, 75 ಸಾವಿರದಿಂದ 1 ಲಕ್ಷ ಕಾರ್ಯಕರ್ತರು ಬೆಂಗಳೂರಿನಲ್ಲಿ ಮೆರವಣಿಗೆಯನ್ನು ಮಾಡಲಿದ್ದಾರೆ. ಇದರ ಜತೆಗೆ 75 ಕಿ.ಮೀ ಪಾದಯಾತ್ರೆ ಮಾಡಲು ತಿಳಿಸಿದ್ದಾರೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ಸೂಚಿಸಲಾಗಿದ್ದು, ಈ ವಿಚಾರವಾಗಿ ನಾಳೆ ಸಭೆ ಕರೆದಿದ್ದೇನೆ. ನಾನು ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದೇನೆ ಎಂದರು.

ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಸಂವಿಧಾನವನ್ನು ನೀಡಿದೆ. ಈ ಕಾರ್ಯಕ್ರಮದ ಆಚರಣೆ ನಮ್ಮ ಕರ್ತವ್ಯ. ಈ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರವನ್ನು ಎಲ್ಲರಿಗೂ ತಿಳಿಸಬೇಕಿದೆ. ಉಳಿದಂತೆ ನಾಯಕರ ಹುಟ್ಟುಹಬ್ಬ ಆಚರಣೆ ವಿಚಾರವಾಗಿ ನನಗೆ ಯಾವುದೇ ಆಕ್ಷೇಪವಿಲ್ಲ’ ಎಂದರು.

ಸಿದ್ದರಾಮಯ್ಯ ಸವಾಲು

ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ಅಕ್ರಮ ನೇಮಕಾತಿಗಳ ಕುರಿತು ದಾಖಲೆ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ಕಿಡಿ ಕಾರಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾಖಲೆಗಳಿದ್ದರೆ ನಮ್ಮ ಕಾಲದ ನೇಮಕಾತಿಯ ಬಗ್ಗೆಯೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂಬುದು ಸುಳ್ಳು, ಅವರು ಆಗ ವಿರೋಧ ಪಕ್ಷದಲ್ಲಿದ್ದರು, ಆಗೇನು ಮಾಡುತ್ತಿದ್ದರು. ಕಡಲೆ ಪುರಿ ತಿಂತಾ ಇದ್ದರಾ, ಯಾಕೆ ಸುಮ್ಮನಿದ್ದರು. ಆಗ ಏಕೆ ಮಾತನಾಡಲಿಲ್ಲ ಎಂದು ಹರಿಹಾಯ್ದರು.

ದಾಖಲೆ ಇದ್ದರೆ ಆಗಲೇ ಹೇಳಬೇಕಿತ್ತಲ್ಲ. ಸುಮ್ಮನೆ ಇದ್ದಿದ್ದು ಅಪರಾಧವಲ್ಲವೇ, ಕಾನೂನು ಇವರಿಗೆ ಗೊತ್ತಿಲ್ಲವಾ? ನನ್ನ ಕುರ್ಚಿಯನ್ನು ಉರಳಿಸೋಕೆ ಮಾತನಾಡಿರಲಿಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಚಿವರಾಗಿ ಮುಂದುವರೆಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿರವರಿಗೆ ನೈತಿಕತೆ ಇದ್ದರೆ ಅವರನ್ನು ವಜಾ ಮಾಡಲಿ ಎಂದರು.

Donate Janashakthi Media

Leave a Reply

Your email address will not be published. Required fields are marked *