- ಸೋಮವಾರ ಮತ್ತು ಮಂಗಳವಾರ ವಿವಿಧ ವಲಯಗಳಿಂದ ರಾಷ್ಟ್ರವ್ಯಾಪಿ ಮುಷ್ಕರ
- ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಮುಷ್ಕರಕ್ಕೆ ಕರೆನೀಡಿರುವ ಕಾರ್ಮಿಕ ಒಕ್ಕೂಟ
- ಕೇಂದ್ರ ವಾಣಿಜ್ಯ ಒಕ್ಕೂಟಗಳ ಜಂಟಿ ವೇದಿಕೆಯ ಸಭೆಯಲ್ಲಿ ಮುಷ್ಕರಕ್ಕೆ ನಿರ್ಧಾರ
- ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಎಲ್ಐಸಿ, ಮುಂತಾದವುಗಳ ಬೆಂಬಲ
ಬೆಂಗಳೂರು : ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಕಾರ್ಮಿಕ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರವಿರೋಧಿ ನೀತಿಗಳ ವಿರುದ್ಧ ಒಕ್ಕೂಟಗಳು ಎರಡು ದಿನಗಳ ಅಖಿಲ ಭಾರತ ಮುಷ್ಕರವನ್ನು ಘೋಷಿಸಿವೆ.
ಕಾರ್ಪೊರೇಟ್ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದು ಹಾಗೂ ರೈತರು ಮತ್ತು ಕೂಲಿಕಾರರನ್ನು ರಕ್ಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು. ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ರದ್ದತಿಗಾಗಿ ಒತ್ತಾಯಿಸಲಾಗುವುದು. ಬೆಲೆ ಏರಿಕೆ ನಿಯಂತ್ರಣಕ್ಕಾಗಿ ರೈತ ಹಾಗೂ ಕೂಲಿಕಾರರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. 26 ಸಾವಿರ ರೂಪಾಯಿ ಸಮಾನ ಕನಿಷ್ಠ ವೇತನ ಸಿಗುವಂತಾಗಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತಡೆಯಬೇಕು. ಅಂಗನವಾಡಿ, ಬಿಸಿಯೂಟ ಮತ್ತು ಕಾರ್ಯಕರ್ತರನ್ನು ಕೆಲಸಗಾರರೆಂದು ಗುರುತಿಸಿ ನ್ಯಾಯಬದ್ಧ ಸವಲತ್ತುಗಳನ್ನು ನೀಡಬೇಕು ಎಂಬುದು ಮುಷ್ಕರದ ಪ್ರಮುಖ ಬೇಡಿಕೆಯಾಗಿದೆ.
ಮಾರ್ಚ್ 28ರಂದು ಕೈಗಾರಿಕಾ ವಲಯ, ಗ್ರಾಮ ಪಂಚಾಯತ್ ಮತ್ತು ತಾಲೂಕು ಹಂತದ ಪ್ರತಿಭಟನೆ ನಡೆದರೆ, ಮಾರ್ಚ 29ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾರ್ಚ್ 29ರಂದು ಭಾರಿ ಪ್ರತಿಭಟನೆ ಹಮ್ಮಿಕೊಡಿದ್ದು, ಉದ್ಯಾನದಲ್ಲೇ ಬಹಿರಂಗ ಸಭೆಯನ್ನೂ ಆಯೋಜಿಸಲಾಗಿದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಈ ಮುಷ್ಕರದಲ್ಲಿ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಬ್ಯಾಂಕ್, ರೈಲ್ವೇ ಮತ್ತು ರಕ್ಷಣಾ ವಲಯದ ಒಕ್ಕೂಟಗಳು, ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ ಮತ್ತು ವಿಮೆಯಂತಹ ವಿವಿಧ ಕ್ಷೇತ್ರಗಳ ಕಾರ್ಮಿಕರು ಭಾಗಿಯಾಗಲಿದ್ದಾರೆ.