ಬೆಂಗಳೂರು : ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಅಕ್ಟೋಬರ್ 27ರಂದು ಪ್ರಕಟಿಸಿದೆ. ಕರಡು ಪಟ್ಟಿ ಪ್ರಕಟಣೆ, ಹಕ್ಕು ಮತ್ತು ಆಕ್ಷೇಪಣೆಗಳ ಸ್ವೀಕಾರ ಹಾಗೂ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. ಮತದಾರರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR – Special Intensive Revision) ಪ್ರಕ್ರಿಯೆಯ ಬಳಿಕ ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಿಂದ 99.32 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದರೊಂದಿಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.55 ಕೋಟಿಗೆ ಇಳಿಕೆಯಾಗಿದೆ.
ಅಂತಿಮ ಮತದಾರರ ಪಟ್ಟಿ ಮಂಗಳವಾರ ಪ್ರಕಟವಾಗಿದೆ. ಅಂತಿಮ ಪಟ್ಟಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ 2.29 ಕೋಟಿ ಮಹಿಳಾ ಮತದಾರರು ಹಾಗೂ 2.25 ಕೋಟಿ ಪುರುಷ ಮತದಾರರಿದ್ದಾರೆ.
ಜೂನ್ 30ರಂದು ಕರ್ನಾಟಕದಲ್ಲಿ SIR ಪ್ರಕ್ರಿಯೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ಬಳಿಕ ಗೈರುಹಾಜರು, ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ನಕಲಿ ಮತದಾರರು (ASDD) ಎಂಬ ವರ್ಗಗಳ ಅಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಮತದಾರರನ್ನು ಗುರುತಿಸಲಾಗಿತ್ತು.
ಇದಲ್ಲದೆ, ಮತದಾರರ ಗಣತಿ ಅರ್ಜಿಗಳಲ್ಲಿನ ತಾರ್ಕಿಕ ಅಸಂಗತತೆಗಳನ್ನು ಉಲ್ಲೇಖಿಸಿ ಒಟ್ಟು 43.82 ಲಕ್ಷ ನೋಟಿಸ್ಗಳನ್ನು ನೀಡಲಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಈವರೆಗೆ 10.42 ಲಕ್ಷ ಫಾರ್ಮ್-6 ಅರ್ಜಿಗಳು ಸಲ್ಲಿಕೆಯಾಗಿವೆ.
ಇದನ್ನೂ ಓದಿ : ನವೆಂಬರ್ 1ರಂದು ದೆಹಲಿಯಲ್ಲಿ INDIA ಒಕ್ಕೂಟದ ಬೃಹತ್ ಸಮಾವೇಶ: 10 ಲಕ್ಷ ಜನರನ್ನು ಸೇರಿಸಲು ಕಾಂಗ್ರೆಸ್ ಸಿದ್ಧತೆ
ಅಂತಿಮ ಪಟ್ಟಿಯಲ್ಲಿ ಸುಮಾರು 4.54 ಕೋಟಿ ಮತದಾರರು
2026ರ ಜೂನ್ 16ರಂದು ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭವಾಗುವ ಮೊದಲು ಕರ್ನಾಟಕದಲ್ಲಿ ಒಟ್ಟು 5,54,32,314 ಮತದಾರರಿದ್ದರು. ಇವರಲ್ಲಿ ಸುಮಾರು 2.76 ಕೋಟಿ ಪುರುಷರು, 2.78 ಕೋಟಿ ಮಹಿಳೆಯರು ಮತ್ತು 4,995 ಇತರ ಲಿಂಗದ ಮತದಾರರಿದ್ದರು.
ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 4,46,35,975 ಮತದಾರರ ಹೆಸರುಗಳಿದ್ದವು. ಅಂದರೆ, ಹಿಂದಿನ ಪಟ್ಟಿಯಲ್ಲಿದ್ದ ಸುಮಾರು 1.08 ಕೋಟಿ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸಿರಲಿಲ್ಲ.
ಇದಾದ ಬಳಿಕ ಪರಿಶೀಲನೆ, ಆಕ್ಷೇಪಣೆಗಳ ವಿಲೇವಾರಿ ಮತ್ತು ಹೆಸರುಗಳ ಮರುಸೇರ್ಪಡೆಯ ಪ್ರಕ್ರಿಯೆ ನಡೆಯಿತು. ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಸುಮಾರು 4.55 ಕೋಟಿ ಮತದಾರರಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಅದರಲ್ಲಿ ಪುರುಷ ಮತದಾರರ ಸಂಖ್ಯೆ – 2,25,83,107 ಇದೆ. ಮಹಿಳಾ ಮತದಾರರ ಸಂಖ್ಯೆ – 2,29,14,63 ಮತದಾರರಿದ್ದಾರೆ. 2,841 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಇದ್ದಾರೆ
ಮತದಾರರು ತಮ್ಮ ಹೆಸರು ಪರಿಶೀಲಿಸಿಕೊಳ್ಳಲು: ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್ಸೈಟ್.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣವಾದ ceo.karnataka.gov.in ತೆರೆಯಿರಿ.
ಅಲ್ಲಿ ‘ ಫೈನಲ್ ಎಲೆಕ್ಟೊರಲ್ ರೋಲ್” SIR 2026’ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
ಆ ಪುಟದಲ್ಲಿ ನಿಮ್ಮ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ. ಆಗ ಕೆಳಭಾಗದಲ್ಲಿ ನಿಮ್ಮ ಕ್ಷೇತ್ರದ ಮತಗಟ್ಟೆಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಮತಗಟ್ಟೆಯ ಸಂಖ್ಯೆ ಅಥವಾ ನಿಮ್ಮ ಪ್ರದೇಶದ ಹೆಸರನ್ನು ಗುರುತಿಸಿ, ಅದರ ಮೇಲೆ ಕ್ಲಿಕ್ ಮಾಡಿ.
ನಂತರ ಕಾಣಿಸುವ ಕ್ಯಾಪ್ಚಾ ನಮೂದಿಸಿ, ‘Download’ ಆಯ್ಕೆಯನ್ನು ಒತ್ತಿ. ಆಗ ನಿಮ್ಮ ಮತಗಟ್ಟೆಯ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ.
ಈ ಪ್ರಕ್ರಿಯೆಯಲ್ಲಿ ನಿಮಗೆ ತೊಂದರೆಯಾದರೆ ನಿಮ್ಮ ಪ್ರದೇಶದ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಅವರನ್ನು ಸಂಪರ್ಕಿಸಿ. ಅವರು ಮತದಾರರ ಪಟ್ಟಿಯನ್ನು ಪರಿಶೀಲಿಸಲು ಮತ್ತು ಅಗತ್ಯ ಮಾಹಿತಿ ಪಡೆಯಲು ಸಹಾಯ ಮಾಡಬಹುದು.
ವಿಧಾನ 2: ವೋಟರ್ ಐಡಿ ಸಂಖ್ಯೆ ಮೂಲಕ ತಕ್ಷಣ ಚೆಕ್ ಮಾಡಿ
- ಭಾರತೀಯ ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ: voters.eci.gov.in
- ಹೋಮ್ ಪೇಜ್ನಲ್ಲಿರುವ ‘Search in Electoral Roll’ ಆಯ್ಕೆಯನ್ನು ಕ್ಲಿಕ್ ಮಾಡಿ.
- ಅಲ್ಲಿ ‘Search by EPIC’ ಆಯ್ಕೆಯನ್ನು ಆರಿಸಿ.
- ನಿಮ್ಮ ಭಾಷೆ, ವೋಟರ್ ಐಡಿ ಕಾರ್ಡ್ ಸಂಖ್ಯೆ (EPIC No.), ರಾಜ್ಯ (Karnataka) ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ ‘Search’ ಕೊಡಿ.
- ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನಿಮ್ಮ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಮತಗಟ್ಟೆಯ ವಿವರ ಪರದೆಯ ಮೇಲೆ ಕಾಣಿಸುತ್ತದೆ.
ಇದನ್ನೂ ನೋಡಿ : ಎಸ್ಐಆರ್ | ತಿರಂಗ ಹಿಡಿದು ರಸ್ತೆಗಿಳಿದ ಹೋರಾಟಗಾರರು: ಹತ್ತಿಕ್ಕಿದಷ್ಟೂ ಹುಟ್ಟಲಿವೆ ಸಾವಿರಾರು ಜಂತರ್ ಮಂತರ್!
