ಚೆನ್ನೈ: ತಮಿಳು ನಟ ಸಿಲಂಬರಸನ್(ಸಿಂಬು) ಅವರ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದಾರಿಹೋಕ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ, ಮಾರ್ಚ್ 18 ರಂದು ಸಿಂಬು ಅವರ ತಂದೆ ಟಿ. ರಾಜೇಂದ್ರ, ತಮ್ಮ ಮೊಮ್ಮಗಳೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ.
ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಟ ಸಿಂಬು ಅವರ ಹೆಸರಿನಲ್ಲಿ ನೋಂದಣಿ ಆಗಿರುವ ಕಾರನ್ನು ಚಾಲಕ ಸೆಲ್ವಂ ಚಲಾಯಿಸುತ್ತಿದ್ದರು. ಅಂದು ರಾತ್ರಿ 7 ಗಂಟೆ ವೇಳೆ ಎಲಂಗೋ ಸಲೈ-ಪೋಸ್ ರಸ್ತೆಯ ತಿರುವಿನಲ್ಲಿ ರಸ್ತೆ ದಾಟುತ್ತಿದ್ದ 70 ವರ್ಷದ ಮುನುಸ್ವಾಮಿ ಎಂಬ ದಾರಿಹೋಕರಿಗೆ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಮೃತ ಮುನುಸ್ವಾಮಿ ಅಂಗವಿಕಲರಾಗಿದ್ದು, ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ರಾಜೇಂದ್ರ ಅವರು ಕಾರಿನಿಂದ ಕೆಳಗಿಳಿದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತನ್ನ ಚಾಲಕನನ್ನು ಹೇಳಿದ್ದಾರೆ. ಸಿಂಬು ಅವರಿಗಾಗಿ ಮತ್ತೊಂದು ಕಾರನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಮರುದಿನ ಚಾಲಕನನ್ನು ಬಂಧಿಸಲಾಗಿದೆ.
ಬೀದಿ ಬದಿಯಲ್ಲಿ ಮುನಿಸ್ವಾಮಿ ವಾಸಿಸುತ್ತಿದ್ದರು. ತೇನಂಪೇಟ್ ಪ್ರದೇಶನದ ಸುತ್ತಮುತ್ತ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಂಡು ಮುನಿಸ್ವಾಮಿ ಜೀವನ ನಡೆಸುತ್ತಿದ್ದರು. ವಾರದ ಹಿಂದೆಯಷ್ಟೇ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಮುನಿಸ್ವಾಮಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ನಡೆಯಲು ಆಗದೆ ನಿಧಾನವಾಗಿ ರಸ್ತೆ ದಾಟುತ್ತಿದ್ದ ವೇಲೆ ಅಪಘಾತವಾಗಿದೆ.
ಅಪಘಾತದಿಂದ ಗಾಯಗೊಂಡಿದ್ದ ಮುನಿಸ್ವಾಮಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುನಿಸ್ವಾಮಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಸುಳ್ಳು ಮಾಹಿತಿಗಳು ಹರಡುತ್ತಿದೆ. ಘಟನೆ ವೇಳೆ ಸಿಂಬು ಅವರು ಕಾರಿನಲ್ಲಿರಲಿಲ್ಲ, ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.