ಬೆಂಗಳೂರು : ರಾಜ್ಯದ ಏಕೈಕ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರಂಭಿಸಲಾಗಿರುವ ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚಲು ಸರಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಹುನ್ನಾರ ನಡೆಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ. ನಂಜುಂಡಪ್ಪ ನೀಡಿದ ವರದಿಯ ಆಧಾರದ ಮೇಲೆ ಹಿಂದುಳಿದ ವಿಜಯಪುರ ಜಿಲ್ಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಮಹಿಳೆಯರ ಶಿಕ್ಷಣದ ಪ್ರಗತಿಗಾಗಿ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ಆದರೆ, ಸಂಪನ್ಮೂಲ ಕೊರತೆಯ ನೆಪ ಹೇಳಿ ಈ ವಿಶ್ವವಿದ್ಯಾಲಯವನ್ನು ಮುಚ್ಚುವ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದರು.
ಮಹಿಳೆಯರಿಗೆ ಮೀಸಲಾಗಿರುವ ಈ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯಿಂದ ಆದಾಯ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಕೋ ಎಜುಕೇಶನ ಅಂದರೆ ಇತರ ವಿಶ್ವವಿದ್ಯಾಲಯಗಳಂತೆ ಪುರುಷರಿಗೂ ಅವಕಾಶ ಕಲ್ಪಿಸುವ ವಿಶ್ವವಿದ್ಯಾಲಯವಾಗಿ ಬದಲಾಯಿಸುವ ಹುನ್ನಾರ ನಡೆದಿದೆ ಎಂದು ಜನಪರ ಚಳುವಳಿಗಳು ಆರೋಪಿಸುತ್ತಿವೆ.
ಮಹಿಳಾ ವಿವಿ ಬಲಪಡಿಸಬೇಕೆ ಹೊರತು ಮುಚ್ಚುವುದಲ್ಲ : ವಿಜಯಪುರದಲ್ಲಿ ಕಳೆದ 2 ದಶಕಗಳಿಂದ ನಾಡು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಈಗ ಏಕಾಏಕಿಯಾಗಿ ಕೊನೆಗಾಣಿಸುವ ಸಂಚು ಆಘಾತಕಾರಿಯಾಗಿದೆ. ಮಹಿಳೆಯರ ಭವಿಷ್ಯದ ಆಶಾಕಿರಣವಾಗಿರುವ ಈ ವಿವಿಯನ್ನು ಬಲಪಡಿಸಬೇಕೆ ಹೊರತು ಮುಚ್ಚಬಾರದು ಎಂದು ಮಹಿಳಾ ವಿವಿಯ ವಿಶ್ರಾಂತ ಉಪಕುಲಪತಿ ಸಬಿಹಾ ಭೂಮಿಗೌಡ ಆಗ್ರಹಿಸಿದ್ದಾರೆ.
ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಮಹಿಳಾ ಪದವಿ ಕಾಲೇಜುಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ನಾಡಿನ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಈಗ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಳಗೆ ಬರುವ ಎಲ್ಲ ಪದವಿ ಕಾಲೇಜುಗಳನ್ನು ಒಳಗೊಳ್ಳುವಂತಹ ವಿಶ್ವವಿದ್ಯಾಲಯದ ಮಟ್ಟಕ್ಕೆ ಇಳಿಸಿ, ಅದನ್ನು ಸಹಶಿಕ್ಷಣ( Co-Education) ವಿಶ್ವವಿದ್ಯಾಲಯವನ್ನಾಗಿಸುವ ಹುನ್ನಾರ ನಡೆದಿದೆ.
ಮಹಿಳಾ ವಿವಿಯ ಪ್ರಸಕ್ತ ಪರಿಸ್ಥಿತಿ ಹೇಗಿದೆಯೆಂದರೆ ಅಲ್ಲಿ ಅಧ್ಯಯನ ಮಾಡುತ್ತಿರುವ ಶೇಕಡಾ 75 ರಷ್ಟು ವಿದ್ಯಾರ್ಥಿನಿಯರ ಹಿನ್ನೆಲೆಯನ್ನು ಗಮನಿಸಿದರೆ ಮಹಿಳಾ ವಿಶ್ವವಿದ್ಯಾಲಯದ ಅವಶ್ಯಕತೆ ಮನದಟ್ಟಾಗುತ್ತದೆ. ಅವರಲ್ಲಿ ಒಂಟಿ ಮಹಿಳೆಯರು – ವಿಚ್ಛೇದಿತರು, ವಿಧವೆಯರು, ಅಲ್ಪಸಂಖ್ಯಾತ ಹೆಣ್ಣುಮಕ್ಕಳೇ ಹೆಚ್ಚಿನವರು. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ ಮಹಿಳಾ ವಿದ್ಯಾಲಯಗಳಿದ್ದರೆ ಮಾತ್ರ ಇಂತಹ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುವುದು ಸಾಧ್ಯವೆನ್ನುವಂತಹ ಪರಿಸ್ಥಿತಿ ಇದೆ.
ವಾಸ್ತವ ಪರಿಸ್ಥಿತಿ ಹೀಗಿರುವಾಗ, ಬಹಳ ಕಷ್ಟದಿಂದ ಅಸ್ತಿತ್ವಕ್ಕೆ ಬಂದಿರುವ ವಿಶ್ವವಿದ್ಯಾಲಯವನ್ನು ಮತ್ತಷ್ಟು ಚೆನ್ನಾಗಿ ಕೆಲಸ ಮಾಡುವಂತೆ ಎಲ್ಲ ರೀತಿಯ ಪ್ರೋತ್ಸಾಹ, ಧನಸಹಾಯ ಕೊಡುವುದು ಬಿಟ್ಟು ಅದನ್ನು ಕೊನೆಗೊಳಿಸ ಹೊರಟಿರುವುದು ಸರ್ಕಾರದ ಮಹಿಳಾ ವಿರೋಧ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಸರಕಾರ ಕೂಡಲ ಮುಚ್ಚುವ ಪ್ರಸ್ತಾಪವನ್ನು ಕೈ ಬಿಟ್ಟು ವಿವಿಯನ್ನು ಉಳಿಸಿ, ಬಲಪಡಿಸಬೇಕಿದೆ ಎಂದು ಸಬಿಹಾ ಭೂಮಿಗೌಡ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು?
ಮಹಿಳಾ ವಿವಿಯ ಉಳಿವಿಗಾಗಿ ಮನವಿ : ಕೈಬಿಡಬೇಕೆಂದು ಒತ್ತಾಯಿಸುತ್ತಿರುವ ಎಲ್ಲ ಮಹಿಳಾಪರ, ಪ್ರಗತಿಪರ ಚಿಂತಕರು, ಹೋರಾಟಗಾರರು ಜನವರಿ 21ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹಾಗೂ ಕೆಪಿಸಿಸಿಯ ರಾಜ್ಯಾಧ್ಯಕ್ಷರಾದ ಶ್ರೀ ಡಿ. ಕೆ. ಶಿವಕುಮಾರ್ ರವರನ್ನು ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ ವಿವಿ ಉಳಿಸುವ ಹೋರಾಟದ ಜೊತೆ ನಿಲ್ಲುವುದಾಗಿ ಹೇಳಿದರೆ. ತಕ್ಷಣವೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣರನ್ನು ಸಂಪರ್ಕಿಸಿ ವಿವಿ ಮುಚ್ಚಾವ ಪ್ರಸ್ತಾಪ ಕೈ ಬಿಡುವಂತೆ ಆಗ್ರಹಿಸಿದರು. ಈ ವಿಷಯದ ಕುರಿತು ಸರಿಯಾದ ಮಾತುಕತೆಯಾಗದ ಹೊರತು ಖಂಡಿತವಾಗಿಯೂ ಮುಂದುವರೆಯುವುದಿಲ್ಲ ಎಂದು ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್, ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರರಾದ ಅಕ್ಕಯ್ ಪದ್ಮಶಾಲಿ, ಹಾಗೂ ಮಹಿಳಾ ಹಕ್ಕು ಹೋರಾಟಗಾರರಾದ ಡಾ ಕೆ. ಶರೀಫಾ, ಡಾ. ವಸುಂಧರ ಭೂಪತಿ, ದು. ಸರಸ್ವತಿ, ಡಾ. ಎಚ್. ಜಿ. ಜಯಲಕ್ಷ್ಮಿ, ಅಖಿಲಾ ವಿದ್ಯಾಸಂದ್ರ, ಪ್ರತಿಭಾ, ಮಧು ಭೂಷಣ್, ಮಮತಾ, ಚಂದ್ರಾವತಿ ಮತ್ತಿತರರು ಇದ್ದರು.