403 ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ; ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಲ್ಲಿ ಅಸಮಾಧಾನ
ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ನಡುವೆ ಸೀಟು ಹಂಚಿಕೆ ಕುರಿತು ಅಧಿಕೃತ ಮಾತುಕತೆ ಆರಂಭವಾಗಿದೆ. ರಾಜ್ಯದ 403 ವಿಧಾನಸಭಾ ಕ್ಷೇತ್ರಗಳ ಪೈಕಿ 175ರಿಂದ 200 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಕಾಂಗ್ರೆಸ್ ವ್ಯಕ್ತಪಡಿಸಿದ್ದು, ಈ ಸಂಬಂಧ ಸಂಭಾವ್ಯ ಕ್ಷೇತ್ರಗಳ ಪಟ್ಟಿಯನ್ನು ಸಮಾಜವಾದಿ ಪಕ್ಷದ ನಾಯಕರಿಗೆ ಸಲ್ಲಿಸಿದೆ. ಆದರೆ ಕಾಂಗ್ರೆಸ್ನ ಈ ಬೇಡಿಕೆ ಅದರ ಪ್ರಸ್ತುತ ಚುನಾವಣಾ ಬಲಕ್ಕೆ ಅನುಗುಣವಾಗಿದೆಯೇ ಎಂಬ ಪ್ರಶ್ನೆ ಸಮಾಜವಾದಿ ಪಕ್ಷದ ಕೆಲವು ನಾಯಕರಲ್ಲಿ ಮೂಡಿದೆ.
ಕಾಂಗ್ರೆಸ್ನ ಉತ್ತರ ಪ್ರದೇಶ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ಪಿಟಿಐ ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದು, ಎರಡು ದಿನಗಳ ಹಿಂದೆಯೇ ಸಂಭಾವ್ಯ ಕ್ಷೇತ್ರಗಳ ಪಟ್ಟಿಯನ್ನು ಎಸ್ಪಿ ನಾಯಕರಿಗೆ ಸಲ್ಲಿಸಲಾಗಿದೆ ಎಂದಿದ್ದಾರೆ. ಸೀಟು ಹಂಚಿಕೆಯ ವಿವರಗಳನ್ನು ಅಂತಿಮಗೊಳಿಸಲು ಎರಡೂ ಪಕ್ಷಗಳ ನಾಯಕರು ಶೀಘ್ರದಲ್ಲೇ ಸಭೆ ನಡೆಸಲಿದ್ದಾರೆ. ಕ್ಷೇತ್ರಗಳ ಹಂಚಿಕೆಯಲ್ಲಿ ಗೆಲುವಿನ ಸಾಧ್ಯತೆ, ಸ್ಥಳೀಯ ಸಂಘಟನೆಯ ಬಲ ಮತ್ತು ಅಭ್ಯರ್ಥಿಗಳ ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವನ್ನು ಸಮಾಜವಾದಿ ಪಕ್ಷದ ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ. ಉತ್ತರ
ಇದನ್ನೂ ಓದಿ : ನನ್ನ ತೇಜೋವಧೆ, ಬ್ಲ್ಯಾಕ್ಮೇಲ್ಗೆ ಸ್ಟಿಂಗ್ ಆಪರೇಷನ್: ಸಿದ್ದರಾಮಯ್ಯ ಆರೋಪ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ಚುನಾವಣಾ ಸಾಧನೆ ದೀರ್ಘಕಾಲದಿಂದ ದುರ್ಬಲವಾಗಿದ್ದರೂ, 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ಹೊಸ ಭರವಸೆ ನೀಡಿದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 33 ಸ್ಥಾನಗಳಿಗೆ ಸೀಮಿತವಾಗಿತ್ತು. ಇದಕ್ಕೂ ಮೊದಲು, 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಸ್ಥಾನಗಳನ್ನು ಗೆದ್ದಿತ್ತು. 2022ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದಾಗ ಕೇವಲ ಎರಡು ಸ್ಥಾನಗಳನ್ನು ಗಳಿಸಿತ್ತು. ಈ ಹಿನ್ನೆಲೆ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ದೊರೆತ ಬೆಂಬಲವನ್ನು ವಿಧಾನಸಭಾ ಚುನಾವಣೆಯಲ್ಲಿಯೂ ಮುಂದುವರಿಸುವ ಉದ್ದೇಶ ಕಾಂಗ್ರೆಸ್ ಹೊಂದಿದೆ.
ಇನ್ನೊಂದೆಡೆ, ಲಖನೌನಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಕಾಂಗ್ರೆಸ್ ಮತ್ತು ‘ಇಂಡಿಯಾ’ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಮೈತ್ರಿಯ ಸಾಮಾನ್ಯ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ನ ನಾಯಕತ್ವ ಬದಲಾವಣೆಯೂ ಸೀಟು ಹಂಚಿಕೆ ಮಾತುಕತೆಗೆ ಮಹತ್ವದ್ದಾಗಿದೆ. ಮಾಜಿ ರಾಜ್ಯಾಧ್ಯಕ್ಷ ಅಜಯ್ ರೈ ಬದಲಿಗೆ ಶಾಸಕಿ ಆರಾಧನಾ ಮಿಶ್ರಾ ‘ಮೋನಾ’ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಕ್ಷೇತ್ರಗಳ ಹಂಚಿಕೆ, ಸ್ಥಳೀಯ ರಾಜಕೀಯ ಬಲಾಬಲ ಮತ್ತು ಗೆಲುವಿನ ಸಾಧ್ಯತೆಗಳ ಆಧಾರದಲ್ಲಿ ಎರಡೂ ಪಕ್ಷಗಳು ಒಪ್ಪಂದಕ್ಕೆ ಬರಬೇಕಿದೆ. ಬಿಜೆಪಿಯನ್ನು ಎದುರಿಸಲು ಮೈತ್ರಿ ಮುಂದುವರಿಯುವ ನಿರೀಕ್ಷೆಯಿದ್ದರೂ, ಕಾಂಗ್ರೆಸ್ ಕೇಳಿರುವ ಕ್ಷೇತ್ರಗಳ ಸಂಖ್ಯೆಯೇ ಮಾತುಕತೆಯ ಪ್ರಮುಖ ಸವಾಲಾಗಿದೆ. ಉತ್ತರ
ಇದನ್ನೂ ನೋಡಿ : ಸುರತ್ಕಲ್ ಎಚ್ಪಿಸಿಎಲ್ನಲ್ಲಿ 4 ಮಹಿಳಾ ಕಾರ್ಮಿಕರ ವಜಾ: 50 ದಿನಗಳಿಂದ ಧರಣಿ, ನ್ಯಾಯಕ್ಕೆ ಡಿವೈಎಫ್ಐ ಆಗ್ರಹ
