ಅಹಮದಾಬಾದ್ : ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿದ ದಲಿತರ ಮೇಲೆ ಸುಮಾರು 20 ಜನರು ಸೇರಿ ಹಲ್ಲೆ ನಡೆಸಿದ್ದಾರೆ. 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಕಿಶೋರಸಿಂಹ ಝಲಾ ಹೇಳಿದ್ದಾರೆ.
ಈ ದುರ್ಘಟನೆ ನಡೆದಿದ್ದು ಗುಜರಾತ್ನ ಕಚ್ ಜಿಲ್ಲೆಯಲ್ಲಿ. ಗಾಂಧಿಧಾಮ ಎಂಬ ಪಟ್ಟಣದ ಬಳಿ ಇರುವ ಹಳ್ಳಿಯ ದೇಗುಲಕ್ಕೆ ದಲಿತ ಕುಟುಂಬದ ಆರು ಮಂದಿ ಭೇಟಿ ನೀಡಿದ್ದರು. ದಲಿತರು ಎಂಬ ಕಾರಣಕ್ಕೆ ಸುಮಾರು 20 ಮಂದಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಹಲ್ಲೆಗೊಳಗಾದ ಗೋವಿಂದ್ ವಾಘೇಲಾ ಮತ್ತು ಅವರ ತಂದೆ ಜಗಭಾಯ್ ಎಂಬುವರಿಂದ ಪ್ರತ್ಯೇಕ ದೂರು ದಾಖಲಾಗಿದೆ. ಇವರಿಬ್ಬರೂ ಒಂದೇ ತರಹದಲ್ಲಿ ದೂರು ನೀಡಿದ್ದಾರೆ. ಸುಮಾರು 20 ಜನರು ಬಂದು ನಮ್ಮ ಮೇಲೆ ದಾಳಿ ನಡೆಸಿದರು ಎಂದು ಹೇಳಿದ್ದಾರೆ. ಆ 20 ಮಂದಿಯನ್ನು ಹಿಡಿಯಲು ನಾವು ಎಂಟು ತಂಡಗಳನ್ನು ರಚಿಸಿದ್ದೇವೆ ಎಂದು ಝಲಾ ಮಾಹಿತಿ ನೀಡಿದ್ದಾರೆ.
ಗೋವಿಂದ್ ವಾಘೇಲಾ ಮತ್ತು ಅವರ ಕುಟುಂಬದವರು ನೆರ್ ಎಂಬ ಗ್ರಾಮದ ಶ್ರೀರಾಮನ ದೇವ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಪ್ರಾಣ ಪ್ರತಿಷ್ಠಾ ಆಚರಣೆ ನಡೆಸಿದ್ದರು. ಅಕ್ಟೋಬರ್ 20ರಂದು ಇವರೆಲ್ಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದಾದ ನಂತರ ಅಕ್ಟೋಬರ್ 26ರಂದು ವಾಘೇಲಾ ಅವರ ಅಂಗಡಿಯಲ್ಲಿ ಇದ್ದಾಗ, ಸುಮಾರು 20 ಜನರು ಅವರ ಹೊಲಕ್ಕೆ ಹೋಗಿ ಬೆಳೆ ನಾಶ ಮಾಡಿದ್ದಾರೆ. ಅಲ್ಲಿಗೆ ಜಾನುವಾರುಗಳನ್ನು ಬಿಟ್ಟಿದ್ದಾರೆ ಎಂದೂ ಕೂಡ ಸಂತ್ರಸ್ತ ಕುಟುಂಬ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗೋವಿಂದ್ ವಾಘೇಲಾ ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
ಬಿಜೆಪಿ ಆಡಳಿತ ಈರುವ ರಾಜ್ಯಗಳಲ್ಲೆ ದಲಿತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಹಿಂದು ನಾವೆಲ್ಲ ಒಂದು ಎಂದು ಹೇಳುವ ಸಂಘಪರಿವಾರದರು ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ. ಶ್ರೀರಾಮ ದಲಿತರಿಗೆ ಸಂಬಂಧವಿಲ್ಲವೆ? ನಿಮ್ಮ ಆಟಗಳನ್ನು ನಿಲ್ಲಿಸಿ, ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಿ ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.