“1916ರ…. ಆಸಿಫಾಬಾದ್ನ ಸಂಕೇಪಲ್ಲಿ… ಕಾಡಿನಲ್ಲಿ ಉರುವಲು ಕತ್ತರಿಸಿದ್ದಕ್ಕಾಗಿ ಅರಣ್ಯಾಧಿಕಾರಿಗಳು ಚಿನ್ನು ಎಂಬ ವ್ಯಕ್ತಿಯನ್ನು ಹೊಡೆಯುತ್ತಿದ್ದರು, ತನ್ನ ತಂದೆಯನ್ನು ಹೊಡೆಯುತ್ತಿದ್ದಾಗ ಅಸಹಾಯಕನಾಗಿದ್ದ ಆ ಹುಡುಗ ನಿಂತು ನೋಡುತ್ತಿದ್ದ. ಆಗವನ ವಯಸು ಹದಿನೈದು ವರ್ಷ. ಅವನ ಕಣ್ಣುಗಳು ಬೆಂಕಿಯ ಉಂಡೆಯಂತೆ ಕೆಂಪಾಗಿದ್ದವು, ಕೋಪದಿಂದ ಮುಖವ ರಕ್ತವೇರಿ ಧಮುಧಮು ಅನ್ನುತ್ತಿತ್ತು. ಅರಣ್ಯಾಧಿಕಾರಿಗಳ ಹೊಡೆತಕ್ಕೆ ಅವನ ಕಣ್ಮುಂದೆಯೇ ತಂದೆಯ ಸಾವು.
ತಂದೆಯ ಸಾವಿಗೆ ಕಾರಣರಾದವರ ಮೇಲೆ ಅವನಿಗೆ ಸಿಟ್ಟಿತ್ತು. ದ್ವೇಷ ಬೆಳೆಯಿತು ಸಹಜವಾಗಿಯೇ. ತಂದೆಯ ಮರಣದ ನಂತರ ಅವನ ಕುಟುಂಬ ಸರ್ದಾರ್ಪುರದ ಕಲಮೆರಾಕ್ಕೆ ವಲಸೆ ಬಂದಿತು. ಅವನ ಸಹೋದರ ಕೃಷಿ ಮಾಡುತ್ತಿದ್ದ. ಅವರ ಜಮೀನುಗಳನ್ನು, ಜಮೀನ್ದಾರ ಸಿದ್ಧಿಕಿ ಆಕ್ರಮಿಸಿಕೊಂಡನು. ಒಳಗೆ ಸುಪ್ತವಾಗಿದ್ದ ಕೋಪ, ಜಮೀನ್ದಾರನನ್ನು ಹೊಡೆದು ಸಾಯಿಸಿತು.
ನಿಜಾಮನ ಪೊಲೀಸರು ಏನಾದರೂ ತೊಂದರೆ ಮಾಡುತ್ತಾರೆ ಎಂದು ಭಯದಿಂದ ತಲೆ ಮರೆಸಿಕೊಳ್ಳುವ ಉದ್ದೇಶದಿಂದ ಐದು ವರ್ಷಗಳ ಕಾಲ ಅಸ್ಸಾಂ ನ ಚಹಾ ತೋಟಗಳಲ್ಲಿ ಕೆಲಸ ಮಾಡಿಕೊಂಡು ಇರುತ್ತಾನೆ ಆ ಹುಡುಗ… ಆ ಹುಡುಗನೇ “ಕೊಮುರಂ ಭೀಮು”.
ಪರಿಶ್ರಮ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವೆಂದು ಹೇಳುವ “ಗೊಂಡ” ಆದಿವಾಸಿ ಗಿರಿಜನ (ಬುಡಕಟ್ಟು) ಜನಾಂಗದ ಯುವಕ ಈತ.
1928ರಲ್ಲಿ ಮತ್ತೆ ಕಲಮೇರಾಕ್ಕೆ ಬಂದು ಕಾಡುಗಳಲ್ಲಿ ಆದಿವಾಸಿ ಗಿರಿಜನರ ಮೇಲೆ ನಿಜಾಮರು ವಿಧಿಸಿದ್ದ ಅಪಾಯಕಾರಿ ತೆರಿಗೆ ಮತ್ತು ಅರಣ್ಯ ಉತ್ಪನ್ನಗಳ ನಿರ್ಬಂಧ, ಅರಣ್ಯ ವಾಸಿಗಳ ಮೇಲೆ ದಬ್ಬಾಳಿಕೆಯನ್ನು ಖಂಡಿಸಿ ನಿಜಾಮ್ (ಹೈದರಾಬಾದ್) ದೊರೆಯ ಅರಾಜಕತೆಯನ್ನು ನೋಡಿ ಆಘಾತಕ್ಕೊಳಗಾಗಿ ತನ್ನ ಸಮುದಾಯವನ್ನು ಒಟ್ಟುಗೂಡಿಸಿ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದ.
“ಜಲ್ ಜಂಗಲ್ ಜಮೀನ್” ಎಂಬ ಘೋಷಣೆಯಡಿಯಲ್ಲಿ ಬುಡಕಟ್ಟು ಜನರನ್ನು ಒಂದುಗೂಡಿಸಿ. ನಿಜಾಮನ ಕಾನೂನು ಪಾಲಿಸುವುದನ್ನು ನಿಲ್ಲಿಸಿದರು. ಅನೇಕ ಹಳ್ಳಿಗಳಲ್ಲಿ, ಗೊಂಡ ಸಮುದಾಯದ ಆಡಳಿತವು ನಿಜಾಮನ ಆಳ್ವಿಕೆಗೆ ಸಮಾನಾಂತರವಾಗಿ ಹೋಯಿತು. ಅವನೊಂದಿಗೆ ಹೋರಾಡಲು ಸಾಧ್ಯವಾಗದೆ, ನಿಜಾಮನು ಗೊಂಡ ನಾಯಕ ಕೊಮುರಂ ಭೀಮುನನ್ನು ಸದೆ ಬಡೆಯಲು ಸಂಚು ರೂಪಿಸಿದನು.
ಆ ಸಂಚಿನ ಭಾಗವಾಗಿ ಕೊಮುರಂ ಭೀಮುನ ವಿಶ್ವಾಸಿಯಾದ “ಕುರ್ದೋ ಪಟೇಲ್” ಎಂಬ ವ್ಯಕ್ತಿಗೆ ದೊಡ್ಡ ಮೊತ್ತದ ಹಣದ ಆಮಿಷ ಒಡ್ಡಿದರು. ಅಕ್ಟೋಬರ್ 27, 1940ರ ರಾತ್ರಿ, ಜೋದೆಘಾಟ್ ಗುಹೆಗಳಲ್ಲಿ ಮಲಗಿದ್ದ ಕೊಮುರಂ ಭೀಮುನನ್ನು ಕುರ್ದು ಪಟೇಲ್ ಸಹಾಯ ಪಡೆದು ನಿಜಾಮನ ಸೈನ್ಯವು ಸುತ್ತುವರೆದಿತ್ತು. ಆದರೂ ಭೀಮು ಹಿಂಜರಿಕೆಯಿಲ್ಲದೆ ಅವರನ್ನು ಎದುರಿಸಿದ. ನಿಜಾಮನ ಸೈನ್ಯದ ಆಧುನಿಕ ಆಯಧಗಳ ಮುಂದೆ ಕೊಮುರಂ ಭೀಮು ಗೆಲ್ಲಲಾಗದೆ ಕೊನೆ ಉಸಿರೆಳೆಯುತ್ತಾನೆ. ಆಗವನ ವಯಸ್ಸು ಕೇವಲ 39 ವರ್ಷ.
ಆದಿವಾಸಿ ಜನಾಂಗದ ಧೀರೋದಾತ್ತ ಹೋರಾಟಗಾರನಾದ ಕೊಮುರಂ ಭೀಮು ಕುರಿತು ಪ್ರಸಿದ್ಧ ಕ್ರಾಂತಿಕಾರಿ ಕವಿ ವರವರರಾವ್ ಅವರು ವರ್ತಮಾನ ಮುಖಾಮುಖಿಯಾಗಿಸುವ ಜೀವನ ಚರಿತ್ರೆಯನ್ನು ಬರೆದರು. ಅದನ್ನು ಬಿ. ಸುಜ್ಞಾನಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ..
ಪುಸ್ತಕದ ಬೆಲೆ ರೂ 80/ ಇದ್ದು, ರಿಯಾಯಿತಿ ದರವಾಗಿ 64 ರೂ ಗೆ ಲಭ್ಯವಿದೆ.