ನವದೆಹಲಿ: ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸಿನ ಮೇರೆಗೆ ಏಳು ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಸೇರಿದಂತೆ ಏಳು ಹೈಕೋರ್ಟ್ಗಳ ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್ಗಳಿಗೆ ವರ್ಗಾವಣೆ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಕೊಲಿಜಿಯಂ ಸೆಪ್ಟೆಂಬರ್ 21ರಂದು ನ್ಯಾಯಮೂರ್ತಿಗಳ ವರ್ಗಾವಣೆಗಳಿಗೆ ಶಿಫಾರಸು ಮಾಡಿತ್ತು.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಮೂರ್ತಿ ರಾಜನ್ ಗುಪ್ತಾ ಹಾಗೂ ರಾಜಸ್ಥಾನ ಹೈಕೋರ್ಟ್ನ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರನ್ನು ಪಟ್ನಾ ಹೈಕೋರ್ಟ್ಗೆ ವರ್ಗಾಯಿಸಲಾಗಿದೆ.
ಇದನ್ನು ಓದಿ: ಹೈಕೋರ್ಟ್ನ ಕಾಯಂ ನ್ಯಾಯಮೂರ್ತಿಗಳಾಗಿ 10 ಮಂದಿ ಪ್ರಮಾಣ ವಚನ ಸ್ವೀಕಾರ
ಉಳಿದಂತೆ, ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮದ್ರಾಸ್ ಹೈಕೋರ್ಟ್ನಿಂದ ಕಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿದೆ. ಹಿಮಾಚಲ ಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿ ಸುರೇಶ್ವರ್ ಠಾಕೂರ್ ಪಂಜಾಬ್ ಮತ್ತು ಹರಿಯಾಣಕ್ಕೆ, ತೆಲಂಗಾಣ ಹೈಕೋರ್ಟ್ನ ನ್ಯಾಯಮೂರ್ತಿ ಟಿ ಅಮರನಾಥ ಗೌಡ್ ತ್ರಿಪುರಾಕ್ಕೆ ಕಳುಹಿಸಲಾಗಿದೆ. ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಸುಭಾಷ್ ಚಂದ್ ಜಾರ್ಖಂಡ್ ಹೈಕೋರ್ಟ್ಗೆ ವರ್ಗಾವಣೆಗೊಂಡಿದ್ದಾರೆ.
ಇತ್ತೀಚೆಗಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಟ್ನಾ ನ್ಯಾಯಾಲಯಕ್ಕೆ ಮೂವರು ಹೊಸ ನ್ಯಾಯಮೂರ್ತಿಗಳು ದೊರೆತಂತಾಗಿದೆ.
ಅಕ್ಟೋಬರ್ 5 ರಂದು 11 ಹೈಕೋರ್ಟ್ಗಳ 15 ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಒಂದೇ ವಾರದಲ್ಲಿ ಎರಡನೇ ಬಾರಿ ಏಳು ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ನ್ಯಾಯಮೂರ್ತಿಗಳ ಪಟ್ಟಿಯನ್ನು ಕಾನೂನು ಸಚಿವಾಲಯ ಟ್ವೀಟ್ ಮಾಡಿದೆ.