ಮುಂಬೈ: ಗುಜರಾತಿ ಅದಾನಿ ಬಂದರಿನಲ್ಲಿ ಸಿಕ್ಕ 3 ಸಾವಿರ ಕೆಜಿ ಡ್ರಗ್ಸ್ ಮತ್ತು ಬಿಜೆಪಿ ಶಾಸಕನ ಮಗ ಮಾಡಿದ ರೈತರ ಕೊಲೆ ಪ್ರಕರಣವನ್ನು ಮರೆಮಾಚಲು ಶಾರುಖ್ ಖಾನ್ ಮತ್ತು ಅವರ ಕುಟುಂಬದವರ ಮೇಲೆ ಟಾರ್ಗೆಟ್ ಮಾಡಲಾಗಿದೆ’ ಎಂದು ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ವಿಶಾಲ್ ದದ್ಲಾನಿ ಹೇಳಿಕೊಂಡಿದ್ದಾರೆ.
‘ಕಳೆದ 30 ವರ್ಷದಲ್ಲಿ ಶಾರುಖ್ ಖಾನ್ ಜೊತೆ ಕೆಲಸ ಮಾಡಿದವರಲ್ಲಿ ಎಷ್ಟು ಜನರು ಈಗ ಅವರ ಪರವಾಗಿ ಇದ್ದೀರಿ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಡ್ರಗ್ಸ್ ಪಾರ್ಟಿ ಮಾಡಿ ಎನ್ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಬಲಿಸಿ ಈಗಾಗಲೇ ಹಲವು ಬಾಲಿವುಡ್ ಮಂದಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ವಿಶಾಲ್ ದದ್ಲಾನಿ ಅವರು ಸೇರ್ಪಡೆಗೊಂಡಿದ್ದಾರೆ. ಆರ್ಯನ್ ಖಾನ್ ಬಂಧನ ಒಂದು ಸಂಚು ಎಂದು ಅವರು ಆರೋಪಿಸಿದ್ದಾರೆ.
ಈಗಾಗಲೇ ಫರ್ಹಾ ಖಾನ್, ಶೇಖರ್ ಸುಮನ್, ಹೃತಿಕ್ ರೋಷನ್ ಸೇರಿದಂತೆ ಅನೇಕರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ವಿಶಾಲ್ ದದ್ಲಾನಿ ಅವರು ಶಾರುಖ್ ಖಾನ್ ಬೆಂಬಲಿಸುತ್ತಾ, ಕೊಂಚ ಖಾರವಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಶಾಲ್ ದದ್ಲಾನಿ ಶಾರುಖ್ ಪುತ್ರನನ್ನು ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಸಿದ್ದರ ಹಿಂದೆ ದೊಡ್ಡ ಹುನ್ನಾರ ಇದೆ ಎಂಬ ಟ್ವೀಟರ್ ಸಂದೇಶ ಸಾಕಷ್ಟು ವೈರಲ್ ಆಗುತ್ತಿದೆ.
ಆರ್ಯನ್ ಖಾನ್ ಅವರೊಂದಿಗೆ 8 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಶುಕ್ರವಾರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಮುಂಬೈನ ನ್ಯಾಯಾಲಯ ಜಾಮೀನು ನೀಡಲಿಲ್ಲ.