ನವದೆಹಲಿ: ಭಾರತದ ಕೊವಿಶೀಲ್ಡ್ ಲಸಿಕೆ ನಾವು ಅನುಮೋದಿಸುತ್ತೇವೆ. ಆದರೂ ಭಾರತದಿಂದ ನಮ್ಮ ದೇಶಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ನೀತಿ ಬದಲಾವಣೆ ಮಾಡಿರುವ ಯುಕೆ (ಇಂಗ್ಲೆಂಡ್) ಸರ್ಕಾರ ಅಕ್ಟೋಬರ್ 11ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ನಿಯಮದ ಪ್ರಕಾರ ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆ ಮತ್ತು ಯುಕೆ ಸರ್ಕಾರ ಅನುಮೋದನೆ ನೀಡಿರುವ ಯಾವುದೇ ಲಸಿಕೆ ಪಡೆದುಕೊಂಡ ಭಾರತದ ಪ್ರಯಾಣಿಕರು ಇಂಗ್ಲೆಂಡಿಗೆ ಆಗಮಿಸಿದ್ದಲ್ಲಿ ಅವರು ಕ್ವಾರಂಟೈನ್ಗೆ ಒಳಗಾಗಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸಂಬಂಧ ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಟ್ವೀಟರ್ನಲ್ಲಿ ಸ್ಪಷ್ಟಪಡಿಸಿದೆ.
ಇದನ್ನು ಓದಿ: ಎಲ್ಲಾ ದೇಶಗಳಿಗೂ ಡಬ್ಲ್ಯುಎಚ್ಒ ನಿಯಮಗಳೇ ಅನ್ವಯ-ಯಾರು ಮೀರುವಂತಿಲ್ಲ: ಸೌಮ್ಯ ಸ್ವಾಮಿನಾಥನ್
ವಿಡಿಯೋವೊಂದನ್ನು ಶೇರ್ ಮಾಡಿರುವ ಅಲೆಕ್ಸ್ ಎಲ್ಲಿಸ್, ಭಾರತದ ಕೊವಿಶೀಲ್ಡ್ ಲಸಿಕೆಯನ್ನು ಎರಡೂ ಡೋಸ್ ಪಡೆದವರು ಅಥವಾ ಯುಕೆ ಅನುಮೋದಿತ (ಆಕ್ಸ್ಫರ್ಡ್/ಅಸ್ಟ್ರಾಜೆನೆಕಾ, ಫಿಜರ್ ಬಯೋಟೆಕ್, ಮಾಡರ್ನಾ, ಜಾನ್ಸೆನ್) ಕೊವಿಡ್-19 ಲಸಿಕೆ ಪಡೆದವರು ಭಾರತ ಆಗಮಿಸಿದಲ್ಲಿ ಕ್ವಾರಂಟೈನ್ಗೆ ಒಳಗಾಗುವುದು ಬೇಡ ಎಂದಿದ್ದಾರೆ.
ಈ ಹಿಂದೆ ಕೊವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಲು ಹಿಂದೇಟು ಹಾಕಿತ್ತು. ಆದರೆ ಭಾರತ ತನ್ನು ನಿಲುವನ್ನು ಕಠಿಣವಾಗಿಸಿದ ಮೇಲೆ ಸೆಪ್ಟೆಂಬರ್ 22ರಂದು ಲಸಿಕೆಗೆ ಅನುಮೋದನೆ ನೀಡಿತ್ತು. ಭಾರತ ನೀಡುತ್ತಿರುವ ಸರ್ಟಿಫಿಕೇಟ್ ಬಗ್ಗೆ ನಮಗೆ ಆಕ್ಷೇಪವಿದೆ ಎಂದು ಹೇಳಿತ್ತು. ಅದರಲ್ಲಿ ಜನ್ಮದಿನಾಂಕದ ಉಲ್ಲೇಖವಿಲ್ಲ ಎಂದು ಹೇಳಿತ್ತು. ನಂತರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಆವೃತ್ತಿಯ ಕೊವಿಡ್-19 ಲಸಿಕೆಯನ್ನೂ ಭಾರತ ಬಿಡುಗಡೆ ಮಾಡಿತ್ತು. ಅಷ್ಟಾದರೂ ಯುಕೆ ಸರ್ಕಾರ ಭಾರತದ ಪ್ರಯಾಣಿಕರಿಗೆ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು.
ಭಾರತದಿಂದಲೂ ಇದೇ ನಿಯಮ ಜಾರಿ
ಇಂಗ್ಲೆಂಡ್ ಸರ್ಕಾರದ ಮಾರ್ಗಸೂಚಿಗೆ ಸಂಬಂಧಪಟ್ಟಂತೆ ಭಾರತ ಸರ್ಕಾರ ನಿರಂತರ ಮಾತುಕತೆ ನಡೆಸಿದಾಗ್ಯೂ ಕೂಡ ಯುಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಇದ್ದಾಗ ಭಾರತ ಕೂಡ ಇದೇ ನಿಯಮವನ್ನು ಜಾರಿಗೊಳಿಸಿತ್ತು. ಇಂಗ್ಲೆಂಡ್ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೂ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ. ಭಾರತ ಪ್ರಯಾಣಕ್ಕೆ 72 ಗಂಟೆ ಮುಂಚಿತವಾಗಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಭಾರತಕ್ಕೆ ಬಂದ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಲಸಿಕೆ ಪಡೆದಿರಲಿ, ಪಡೆಯದೇ ಇರಲಿ ಪರೀಕ್ಷೆ ಮತ್ತು ಕ್ವಾರಂಟೈನ್ ಕಡ್ಡಾಯ ಎಂದು ಹೇಳಿತ್ತು.