ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮೂಕನಾಯಕ’ ಕನ್ನಡ ಚಲನಚಿತ್ರಕ್ಕೆ ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ‘ದಶಕದ ಅತ್ಯುತ್ತಮ ಚಿತ್ರ’ ಎಂಬ ಪ್ರಶಸ್ತಿ ಲಭಿಸಿದೆ.
ನೋಯ್ಡಾದ ಸಂಸ್ಥೆಯೊಂದು ‘ಇನ್‌ಕ್ರೆಡಿಬಲ್ ಸಿನಿ ಅವಾರ್ಡ್ಸ್’ಗಾಗಿ ಹತ್ತು ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲ ಭಾಷೆಯ ಚಿತ್ರಗಳನ್ನು ಆಹ್ವಾನಿಸಿತ್ತು. ಈ ಸ್ಪರ್ಧೆಯಲ್ಲಿ ‘ಮೂಕನಾಯಕ’ ಚಿತ್ರವು ಆಯ್ಕೆಯಾಗಿ ಪ್ರದರ್ಶನ ಕಂಡಿದ್ದವು. ಪ್ರವೇಶ ಪಡೆದ ಹಲವು ಚಿತ್ರಗಳಿಗೆ ವಿವಿಧ ಪ್ರಕಾರಗಳ ಸ್ಪರ್ಧೆಗೆ ನಾಮನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮನಿರ್ದೇಶನಗೊಂಡ ‘ಮೂಕನಾಯಕ’ ಚಿತ್ರವು ವಿಶ್ವದ ವಿವಿಧ ಭಾಷೆಗಳ ಸಿನಿಮಾಗಳೊಂದಿಗೆ ಸ್ಪರ್ಧಿಸಿ ದಶಕದ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿ ಪಡೆದುಕೊಂಡಿದೆ.
ಇದನ್ನು ಓದಿ: ಚಲನಚಿತ್ರ ಬಿಡುಗಡೆ ನಂತರವೂ ಸೆನ್ಸಾರ್ ಮಾಡುವ ಅಧಿಕಾರ: ಕಾಯ್ದೆ ತಿದ್ದುಪಡಿಗೆ ಕೇಂದ್ರ ನಿರ್ಧಾರ
‘ಮಾತು ಬಾರದ ಚಿತ್ರಕಲಾವಿದನ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿರುವ ಈ ಚಿತ್ರವು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಪರಿಚಯಿಸಲಿದೆ. ಚಿತ್ರವನ್ನು ‘ಸಮುದಾಯದತ್ತ ಸಿನಿಮಾ’ ಪರಿಕಲ್ಪನೆಯಡಿ ‘ಚಿತ್ರಯಾತ್ರೆ’ ನಡೆಸಿ ಈಗಾಗಲೇ ಅನೇಕ ಊರುಗಳಲ್ಲಿ ಪ್ರದರ್ಶನ ಕಂಡಿದೆ. ಈ ಹಿಂದೆ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿತ್ತುʼ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ ಅವರು.
ಬರಗೂರು ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು 2017ರಲ್ಲಿ ಬಾಲರಾಜ್ ಅವರು ನಿರ್ಮಿಸಿದ್ದರು. ಮೂಕಚಿತ್ರ ಕಲಾವಿದನ ಪಾತ್ರದಲ್ಲಿ ಕುಮಾರ್ ಗೋವಿಂದ್ ನಟಿಸಿದ್ದಾರೆ. ಸೋದರಿ ಪಾತ್ರದಲ್ಲಿ ರೇಖಾ ಅವರು ನಟಿಸಿದ್ದು, ಇತರೆ ಪಾತ್ರಗಳಲ್ಲಿ ಸುಂದರರಾಜ್, ಯತಿರಾಜ್, ಶೀತಲ್ ಶೆಟ್ಟಿ, ಆರ್.ವೆಂಕಟರಾಜು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.