ಕಾಸರಗೋಡು ಫೆ 14 : ಕೇಂದ್ರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಕೇರಳ ಸರಕಾರ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕಾಸರಗೋಡಿನ ಉಪ್ಪಳದಲ್ಲಿ ಎಲ್.ಡಿ.ಎಪ್ ಹಮ್ಮಿಕೊಂಡಿದ್ದ ಉತ್ತರ ಮಲಬಾರ್ ಪ್ರಾದೇಶಿಕ ಜಾಥಾ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದರು. ಈ ಕಾಯ್ದೆ ಜಾರಿ ಮೂಲಕ ರಾಜ್ಯದಲ್ಲಿ ಅನಾಹುತಗಳಾಗಲು ಅವಕಾಶ ನೀಡುವುದಿಲ್ಲ. ಈ ಕಾಯ್ದೆ ಜಾರಿ ಮೂಲಕ ಕೇರಳದಲ್ಲಿ ಅನಾಹುತ ಸೃಷ್ಟಿಸಲು ನಾವು ಬಯಸುವುದಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಕೇರಳ ಸ್ಪಷ್ಟ ನಿಲುವು ಹೊಂದಿದ್ದು ಯಾವುದೇ ಕಾರಣಕ್ಕೂ ಸಿಎಎನ್ನು ಜಾರಿಗೊಳಿಸುವುದಿಲ್ಲ ಎಂದು ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಹೇಳಿದ್ದಾರೆ.
ಕೊರೊನಾ ವೈರಸ್ ಲಸಿಕೆ ಅಭಿಯಾನ ಮುಗಿದ ತಕ್ಷಣವೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದ ಬೆನ್ನಲ್ಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವರಿಗೆ ಸಡ್ಡು ಹೊಡೆದಿದ್ದಾರೆ.
ಪಶ್ಚಿಮ ಬಂಗಾಳದ ಹಿಂದೂ ವಲಸಿಗರಿಗೆ ಪೌರತ್ವ ನೀಡಲು ಅನುವಾಗುವಂತೆ ಸಿಎಎನ್ನು ಕೊರೊನಾ ಲಸಿಕೆ ಅಭಿಯಾನ ಮುಗಿದ ತಕ್ಷಣ ಜಾರಿ ಮಾಡುವುದಾಗಿ ಅಮಿತ್ ಶಾ ಹೇಳಿಕೆ ನೀಡಿದ್ದ ಬೆನ್ನಲ್ಲೆ ಕೇರಳ ಮುಖ್ಯಮಂತ್ರಿ ಪಿ. ವಿಜಯನ್ ಕೇಂದ್ರಕ್ಕೆ ಸಡ್ಡು ಹೊಡೆದಿದ್ದಾರೆ.
ಸಿಎಎನ್ನು ಸಂಸತ್ತಿನಲ್ಲಿ ಅಂಗೀಕಾರಗೊಂಡ ಬೆನ್ನಲ್ಲೆ ಕೇರಳ ರಾಜ್ಯ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳಿ ಈ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೂ ಅರ್ಜಿ ಸಲ್ಲಿಸಿತ್ತು. ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಚಳವಳಿಗಳು ನಡೆದಿದ್ದರು ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸುವ ಹಠ ತೊಟ್ಟು ಕಾಯ್ದೆ ಜಾರಿಗೆ ಮುಂದಾಗಿದೆ.