ಕೃಷಿ ಮಸೂದೆ ವಿರುದ್ಧ ಸಹಿ ಸಂಗ್ರಹ

ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಧರಣಿ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ.

ನಾವು ಭಾರತೀಯರು ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದ ಈ ಧರಣಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಬಟ್ಟೆ ಬ್ಯಾನರ್ ಮೇಲೆ ಅಭಿಪ್ರಾಯ ದಾಖಲಿಸಿ ಸಹಿ ಮಾಡುವ ಹಾಗೂ ಕೃಷಿ ಕಾಯ್ದೆಗಳ ವಿವಿಧ ಜನ ಸಮುದಾಯಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಗೋಷ್ಠಿ ಏರ್ಪಾಡು ಮಾಡಲಾಗಿತ್ತು.

ಈ ಗೋಷ್ಠಿಯಲ್ಲಿ ಕೃಷಿ ಕೂಲಿಕಾರರ ಮೇಲೆ ಹೊಸ ಕೃಷಿ ಕಾಯ್ದೆಗಳ ಪರಿಣಾಮ ಕುರಿತು ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿ ಸದಸ್ಯ ಟಿ ಯಶವಂತ ಮಾತಾನಾಡಿ ,ಈ ಕಾಯ್ದೆಗಳು ಭೂಮಿ ಕೇಂದ್ರೀಕರಣವನ್ನು ಉತ್ತೇಜಿಸುತ್ತವೆ. ಇದು, ಶೇಕಡಾ 55 ಕ್ಕಿಂತ ಹೆಚ್ಚು ಕೃಷಿ ಅವಲಂಬನೆಯ ಜನರನ್ನು ಕೃಷಿ ಯಿಂದ ಒಕ್ಕಲೆಬ್ಬಿಸುವ ನಿರ್ದಯಿ ಕಾನೂನಾಗಿದೆ. ಇದರಿಂದ ಈಗಾಗಲೇ ಇರುವ ಗ್ರಾಮೀಣ ನಿರುದ್ಯೋಗ ಮತ್ತಷ್ಟು ಉಲ್ಬಣಗೊಳ್ಳುತ್ತದೆ.ಇದರಿಂದ ಇಡೀ ಗ್ರಾಮೀಣ ಜನರ ಆರೋಗ್ಯ ಆಯಸ್ಸು ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು

ಪರ್ಯಾಯ ವಕೀಲರ ವೇದಿಕೆಯ ವಕೀಲ ಬಸವ ಪ್ರಸಾದ್ ಕುನಾಲೆ, ನಮ್ಮೂರ ಭೂಮಿ ನಮಗಿರಲಿ ಅಭಿಯಾನದ ವಿ ಗಾಯಿತ್ರಿ ಕರ್ನಾಟಕ ಜನಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್ ರವರು ಕ್ರಮವಾಗಿ ದಲಿತರು ಹಾಗೂ ಭೂಮಿ ಮಾಲೀಕತ್ವ ,ಮಹಿಳಾ ಕೃಷಿಕರು ಹಾಗೂ ಕೃಷಿ ಕಾಯ್ದೆಗಳು ,ವಸತಿರಹಿತರ ಮೇಲೆ ಪರಿಣಾಮಗಳು ಕುರಿತು ಮಾತಾನಾಡಿದರು.

ಈ ಗೋಷ್ಠಿ ಅಧ್ಯಕ್ಷತೆಯನ್ನು AICCTU ನ ಮಣಿ ರವರು ವಹಿಸಿದ್ದರು. ಇಂದಿನ ಧರಣಿಯಲ್ಲಿ ವಿಶ್ರಾಂತ ಹೈಕೋರ್ಟ್ ನ್ಯಾಯದೀಶರಾದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ರವರು ಭಾಗವಹಿಸಿ ಬೆಂಬಲ ನೀಡಿದ್ದು ವಿಶೇಷವಾಗಿತ್ತು.

ಇಂದಿನ ಪ್ರತಿಭಟನೆಯ ನೇತೃತ್ವವನ್ನು ನಾವು ಭಾರತೀಯರು ವೇದಿಕೆಯ ವಿನಯ್ ಶ್ರೀನಿವಾಸನ್, ಸಾಹೀನ್ ,ಸುಧಾ ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ.ಭಟ್, ಆರ್ ಕೆ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ್, ಕರ್ನಾಟಕ ಜನ ಶಕ್ತಿ ಸಂಘಟನೆ ಯ ಮಲ್ಲಿಗೆ ಮುಂತಾದವರು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *