- ಕೊರೊನಾ ಸೋಂಕಿಗೆ ಬಲಿಯಾದ ಬಾಲಸುಬ್ರಹ್ಮಣ್ಯಂ
ಚೆನ್ನೈ: ಭಾರತೀಯ ಚಿತ್ರರಂಗದ ಮಹಾನ್ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ(74) ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಆ.5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 1.04ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಚರಣ್ ತಿಳಿಸಿದ್ದಾರೆ.
ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಸ್.ಪಿ.ಬಾಲಸುಬ್ರಹ್ಮಣಂ ಅವರನ್ನು ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 13ರಂದು ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ತಜ್ಞ ವೈದ್ಯರ ಸಲಹೆಯಂತೆ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಆಸ್ಪತ್ರೆಯ ಬೆಡ್ ಮೇಲೆ ಮಲಗಿಯೇ ಹೆಬ್ಬೆರಳು ತೋರಿದ್ದ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಮತ್ತೆ ಆ.20ರಂದು ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿ, ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ನಂತರ ಎಸ್ಪಿಬಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ, ವೆಂಟಿಲೇಟರ್ನಲ್ಲೇ ಇಡಲಾಗಿತ್ತು. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಕುರಿತಾಗಿ ಅವರ ಮಗ ಚರಣ್ ಸಾಮಾಜಿಕ ಜಾಲತಾಣದ ಮೂಲಕ ಅಪ್ಡೇಟ್ ನೀಡುತ್ತಿದ್ದರು. ಈ ನಡುವೆ ಎಸ್ಪಿಬಿ ಅವರಿಗೆ ಕೊರೊನಾ ಪರೀಕ್ಷೆ ಸಹ ಮಾಡಲಾಗಿದ್ದು, ಅದು ಸಹ ನೆಗೆಟಿವ್ ಬಂದಿತ್ತು. ಈ ವಿಷಯವನ್ನು ಹಂಚಿಕೊಂಡಿದ್ದ ಚರಣ್ ಅವರು, ಸದ್ಯದಲ್ಲೇ ತಮ್ಮ ತಂದೆಯನ್ನು ಮನೆಗೆ ಕರೆದುಕೊಂಡು ಹೋಗುವ ಆಶಯ ವ್ಯಕ್ತಪಡಿಸಿದ್ದರು.
1946ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಜನಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ತಂದೆ ಎಸ್.ಪಿ.ಸಾಂಬಮೂರ್ತಿ ಅವರೇ ಮೊದಲ ಗುರುಗಳು. ತಂದೆ ಹರಿಕಥೆ ವಿದ್ವಾಂಸರಾಗಿದ್ದು, ಹಾಡುಗಾರಿಕೆ, ಹಾರ್ಮೋನಿಯಂ ಮತ್ತು ಕೊಳಲನ್ನು ಶಾಸ್ತ್ರೀಯ ಕಲಿಕೆಯಿಲ್ಲದೆ ನುಡಿಸುತ್ತಿದ್ದರು. ನಂತರ ವಿದ್ಯಾರ್ಥಿಯಾಗಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಅಂದರೆ 1966ರಲ್ಲಿ ತೆಲುಗಿನ ಮರ್ಯಾದ ರಾಮಣ್ಣ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಎಸ್ಪಿಬಿ ಎರಡನೇ ಹಾಡನ್ನು ಹಾಡಿದ್ದು 1966ರಲ್ಲಿ ಬಿಡುಗಡೆಯಾದ ನಕ್ಕರೆ ಅದೇ ಸ್ವರ್ಗ ಕನ್ನಡ ಸಿನಿಮಾಕ್ಕೆ. ಈ ಸಿನಿಮಾ ಎಸ್ಪಿಬಿ ಅವರಿಗೆ ಮೊದಲ ಕನ್ನಡ ಹಾಡು ಆಗಿರುವಂತೆಯೇ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಎಂ.ರಂಗರಾವ್ ಸಂಗೀತ ನೀಡಿದ ಮೊದಲ ಕನ್ನಡ ಸಿನಿಮಾ ಕೂಡ. ನಂತರ 50 ವರ್ಷಗಳಲ್ಲಿ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ.
ಕನ್ನಡದಲ್ಲಿ ವಿಷ್ಣುವರ್ಧನ್, ಶ್ರೀನಾಥ್, ಅನಂತ್ನಾಗ್, ಶಂಕರ್ ನಾಗ್, ತಮಿಳು ಹಾಗೂ ತೆಲುಗಿನಲ್ಲಿ ಕಮಲ್ ಹಾಸನ್, ರಜಿನಿಕಾಂತ್, ಚಿರಂಜೀವಿ, ಎಂಜಿಆರ್, ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರರಾವ್ ಹೀಗೆ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಹಿಟ್ ಹಾಡುಗಳನ್ನು ಹಾಡಿದ್ದಾರೆ.
ಹಿಂದಿಯಲ್ಲಿ ಏಕ್ ದೂಜೆ ಕೆ ಲಿಯೆ ಸಿನಿಮಾದಲ್ಲಿ ಎಸ್ಪಿಬಿ ಹಾಡಿದ ಹಾಡಿಗಳಿಗೆ ಕೇಳುಗರು ಫಿದಾ ಆಗಿದ್ದರು. ಆಗಲೇ ಹಿಂದಿ ಚಿತ್ರರಂಗದಲ್ಲೂ ತಮ್ಮದೇ ಆದ ಸ್ಥಾನ ಮಾಡಿಕೊಳ್ಳಲು ಆರಂಭಿಸಿದ್ದರು. ನಂತರದಲ್ಲಿ ಸಲ್ಮಾನ್ ಖಾನ್ ಅವರ ಸಾಕಷ್ಟು ಚಿತ್ರಗಳಲ್ಲಿ ಅಂದರೆ, ಸಾಜನ್, ಮೈ ನೆ ಪ್ಯಾರ್ ಕಿಯಾ, ಲವ್, ಹಮ್ ಆಪ್ ಕೆ ಹೈ ಕೌನ್ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.
ಅಭಿನಯದ ವಿಷಯಕ್ಕೆ ಬಂದರೆ, ಬಾಲಸುಬ್ರಹ್ಮಣ್ಯಂ ಅವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ತಮ್ಮದೇ ಆದ ಸ್ಥಾನ ಪಡೆದುಕೊಂಡಿದ್ದಾರೆ. ಹಲವಾರು ಧಾರವಾಹಿಗಳು ಹಾಗೂ ಕನ್ನಡ. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಮೊದಲು ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದವರು ನಂತರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಕೊಳ್ಳಲು ಆರಂಭಿಸಿದರು. ಕನ್ನಡದಲ್ಲಿ ಬಾಳೊಂದು ಚದುರಂಗ, ತಿರುಗು ಬಾಣ, ಮುದ್ದಿನ ಮಾವ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಡೆಯದಾಗಿ 2018ರಲ್ಲಿ ತೆರೆಕಂಡ ದೇವ್ದಾಸ್ ತೆಲುಗು ಚಿತ್ರದಲ್ಲಿ ಅಭಿನಯಿದ್ದಾರೆ.
ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ.
ಸಂಗೀತ ಕ್ಷೇತ್ರದಲ್ಲಿ ಎಸ್ಪಿಬಿ ಸಾಧನೆ:
ಕನ್ನಡದ ಸಾಹಿತಿ ಉಪೇಂದ್ರ ಕುಮಾರ್ ಅವರಿಗಾಗಿ 12 ಗಂಟೆಗಳಲ್ಲಿ ಎಸ್ಪಿಬಿ 21 ಕನ್ನಡ ಹಾಡುಗಳನ್ನು ಹಾಡಿ ರೆಕಾರ್ಡ್ ಮಾಡಿದ್ದರು. ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ 19 ಹಾಡುಗಳನ್ನೂ ರೆಕಾರ್ಡ್ ಮಾಡಿದ್ದರು. ಅಂತೆಯೇ ಹಿಂದಿಯಲ್ಲಿ 16 ಹಾಡುಗಳನ್ನು ಧ್ವನಿ ಮುದ್ರಿಸಿದ್ದರಂತೆ. ಇದು ಎಸ್ ಪಿ ಬಿ ಅವರ ಸಾಮರ್ಥ್ಯ ಹಾಗೂ ಅವರಿಗಿದ್ದ ಬೇಡಿಕೆಗೆ ನಿದರ್ಶನ.
ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಹೆಚ್ಚು ಹಾಡಿರುವ ಗಾಯಕ ಬಾಲಸುಬ್ರಹ್ಮಣ್ಯಂ. ಅತಿ ಹೆಚ್ಚು ಹಾಡು ಹಾಡಿರುವ ಕಾರಣದಿಂದಲೇ ಅವರ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕ ಸೇರಿದೆ. ವರ್ಷದಲ್ಲಿ 930 ಹಾಡುಗಳು ಅಂದರೆ, ದಿನಕ್ಕೆ ಅಂದಾಜು 3 ಹಾಡುಗಳು ಎಂದರೂ 2018ರ ಹೊತ್ತಿಗೆ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಖಾಸಗಿ ಆಲ್ಬಂಗಳೂ ಇವರ ಖಾತೆಯಲ್ಲಿವೆ.
ಎಪಿಬಿ ಪಡೆದ ಪ್ರಶಸ್ತಿಗಳ ವಿವಿರ:
ಎಸ್ಪಿಬಿ ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿ ಪಡೆದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರು. ತೆಲುಗಿನ ಸಾಗರ ಸಂಗಮಂ, ರುದ್ರವೀಣಾ ಹಾಗೂ ಶಂಕರಾಭರಣಂ, ತಮಿಳಿನ ಮಿನ್ಸಾರೆ ಕನವು, ಕನ್ನಡದ ಸಂಗೀತ ಸಾಗರ ಪಂಚಾಕ್ಷರಿ ಗವಾಯಿ ಸಿನಿಮಾಗಳಿಗೆ ಒಟ್ಟು 6 ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ ಬಾಲಿವುಡ್ನ ಫಿಲ್ಮ್ಫೇರ್ ಪ್ರಶಸ್ತಿ, 25 ನಂದಿ ಅವಾರ್ಡ್, ಪದ್ಮಶ್ರೀ (2001), ಪದ್ಮಭೂಷಣ(2011) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ದಕ್ಷಿಣ ಭಾರತದ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನವಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲೂ ಸಾಧನೆ ಮಾಡಿದ್ದಾರೆ. ಇವರ ನಿರ್ವಹಣೆಯಲ್ಲಿ ಮೂಡಿ ಬರುತ್ತಿದ್ದ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮವಂತೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿದೆ.