ಈಗ ನವ–ಉದಾರವಾದಿ ಬಂಡವಾಳಶಾಹಿಯು ಒಂದು ಸ್ಥಗಿತತೆಯಲ್ಲಿ ಸಿಲುಕಿಕೊಂಡು, ಬಂಡವಾಳಶಾಹಿ ವ್ಯವಸ್ಥೆಯು ಒಳಗೊಳಗೇ ಕುಸಿಯಲಾರಂಭಿಸಿದೆ, ಯುಎಸ್ ಇತರ ಬಂಡವಾಳಶಾಹಿ ದೇಶಗಳೊಂದಿಗೆ, ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳೊಂದಿಗೆ, “ನೆರೆಯವನು ಹಾಳಾಗಿ ಹೋಗಲಿ ನನಗೇನು” ಎನ್ನುವ ನೀತಿಯನ್ನು ಅನುಸರಿಸುತ್ತಿದೆ. ಈ ಹಿಂದೆ ಬಂಡವಾಳಶಾಹಿಯು ಬಂಡವಾಳಶಾಹಿ-ಪೂರ್ವ ವಲಯಗಳನ್ನು/ಪ್ರದೇಶಗಳನ್ನು ತನ್ನ ‘ಹೊರ ಮಾರುಕಟ್ಟೆ‘ಯನ್ನಾಗಿ ವಶಪಡಿಸಿಕೊಂಡಿತ್ತು. ಆ ಸನ್ನಿವೇಶವು ಬದಲಾಗಿ, ಈಗ ಯುಎಸ್ ಅರ್ಥವ್ಯವಸ್ಥೆಯು ಕಡಿಮೆ ಅಭಿವೃದ್ಧಿ ಹೊಂದಿದ, ಮುಖ್ಯವಾಗಿ, ಜಾಗತಿಕ ದಕ್ಷಿಣದ ದೇಶಗಳ ಬಂಡವಾಳಶಾಹಿ ಅರ್ಥವ್ಯವಸ್ಥೆಗಳನ್ನು ತನ್ನ ‘ಹೊರ ಮಾರುಕಟ್ಟೆ‘ಗಳಾಗಿ ವಶಪಡಿಸಿಕೊಳ್ಳುವ ಚಿತ್ರ ಕಾಣಬರುತ್ತಿದೆ. ಟ್ರಂಪ್ ಆಡಳಿತ ಬಳಸುತ್ತಿರುವ ಎರಡು ಪ್ರಾಥಮಿಕ ಉಪಕರಣಗಳು, ಅಂದರೆ ಏಕಪಕ್ಷೀಯ ಸುಂಕಗಳ ಹೇರಿಕೆ ಮತ್ತು ಆಮದು ಬಾಧ್ಯತೆಗಳ ಏಕಪಕ್ಷೀಯ ಹೇರಿಕೆ ಇದನ್ನೇ ಸೂಚಿಸುತ್ತವೆ. ಭಾರತ–ಯುಎಸ್ ವ್ಯಾಪಾರ ಒಪ್ಪಂದ ಸಾರ್ವಜನಿಕಗೊಂಡಾಗ, ಅದರಲ್ಲಿ ಈ ಅಂಶಗಳನ್ನು ಬಹುಮಟ್ಟಿಗೆ ಖಚಿತವಾಗಿ ಕಾಣಬಹುದು. ಭಾರತದಂತಹ
ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ಬಂಡವಾಳಶಾಹಿ ವ್ಯವಸ್ಥೆಯು ಆರ್ಥಿಕ ಬೆಳವಣಿಗೆಯ ಪ್ರಕ್ರಿಯೆಯ ಹೊರಗಿನಿಂದಲೇ ಉದ್ಭವಿಸುವ ಒಂದು ಉತ್ತೇಜಕವಿಲ್ಲದಿದ್ದರೆ ಸುಸ್ಥಿರ ಬೆಳವಣಿಗೆಯನ್ನು ಕಾಣುವುದು ಸಾಧ್ಯವಿಲ್ಲ. ಏಕೆಂದರೆ, ಬಂಡವಾಳಶಾಹಿ ವ್ಯವಸ್ಥೆಯು ತೇಜಿ(boom)ಗಳು ಮತ್ತು ಕುಸಿತ(slumps)ಗಳನ್ನು ಕಾಣುತ್ತಲೇ ಇರುತ್ತವೆ. ತೇಜಿಗಳು ಉತ್ಪಾದನಾ ಸಾಮರ್ಥ್ಯವು ಸಂಪೂರ್ಣವಾಗಿ ಬಳಕೆಯಾದಾಗ ತಾವಾಗಿಯೇ ಕೊನೆಗೊಳ್ಳುತ್ತವೆ. ಆದರೆ, ಕುಸಿತಗಳು ತಾವಾಗಿಯೇ ಕೊನೆಗೊಳ್ಳುವುದಿಲ್ಲ. ಕೆಲವು ಯಂತ್ರೋಪಕರಣಗಳನ್ನು ನಿರುಪಯುಕ್ತವೆಂದು ಮೂಲೆಗೆಸೆಯುವುದರಿಂದ ಕುಸಿತವು ತಾನಾಗಿಯೇ ಕೊನೆಗೊಳ್ಳುತ್ತದೆ ಎಂದು ಮಾರ್ಕ್ಸ್ ಭಾವಿಸಿದ್ದರು. ಆದರೆ, ಯಂತ್ರೋಪಕರಣಗಳನ್ನು ಮೂಲೆಗೆಸೆಯುವುದರಿಂದ ಉತ್ಪಾದನಾ ಸಾಮರ್ಥ್ಯ ಮಾತ್ರವೇ ಇಳಿಕೆಯಾಗುವುದಿಲ್ಲ; ಜೊತೆಗೆ ಅದು ಬೇಡಿಕೆಯನ್ನೂ ಇಳಿಸುತ್ತದೆ. ಏಕೆಂದರೆ, ಮೂಲೆಗೆಸೆಯಲಾಗುತ್ತಿರುವ ಹಳೆಯ ಯಂತ್ರೋಪಕರಣಗಳ ನಿರ್ವಹಣೆಗಾಗಿ ಮಾಡುತ್ತಿದ್ದ ವೆಚ್ಚವು ನಿಂತುಹೋಗುತ್ತದೆ. ಬೇಡಿಕೆಯಲ್ಲಿ ಉಂಟಾಗುವ ಈ ಇಳಿಕೆಯು, ಒಂದು ವೇಳೆ, ಮೂಲೆಗೆಸೆಯಲಾಗುತ್ತಿರುವ ಬಳಕೆಯ ಸಾಮರ್ಥ್ಯದ ನಷ್ಟಕ್ಕಿಂತಲೂ ಹೆಚ್ಚಿಗೆ ಇದ್ದರೆ, ಆಗ ಯಂತ್ರೋಪಕರಣಗಳನ್ನು ಮೂಲೆಗೆಸೆಯುವ ಕ್ರಮದಿಂದ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುವುದಿಲ್ಲ.
ಇದು ಸಾಮಾನ್ಯವಾಗಿ ನಡೆಯುವ ಒಂದು ಕ್ರಮವಾದುದರಿಂದ, ಬಂಡವಾಳ ಶೇಖರಣೆಯ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ ಒಂದಿಷ್ಟು ಬೇಡಿಕೆಯನ್ನು ವ್ಯವಸ್ಥೆಯ ಹೊರಗಿನಿಂದ ಪಡೆಯುವುದು ಅತ್ಯಗತ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಬಂಡವಾಳಶಾಹಿ ವ್ಯವಸ್ಥೆಗೆ ಒಂದು “ಬಾಹ್ಯ ಮಾರುಕಟ್ಟೆ”ಯು ಅತ್ಯಗತ್ಯವಾಗುತ್ತದೆ ಮತ್ತು ಇದು ಸಾಮ್ರಾಜ್ಯಶಾಹಿಯ ತಳದಲ್ಲಿರುವ ಅಂಶಗಳಲ್ಲಿ ಒಂದು.
ʼಬಾಹ್ಯ ಮಾರುಕಟ್ಟೆʼಗಳ ಅಗತ್ಯತೆ

ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ರೋಸಾ ಲಕ್ಸೆಂಬರ್ಗ್ ಅವರ ಸಾಮ್ರಾಜ್ಯಶಾಹಿ ಸಿದ್ಧಾಂತವಾಗಿತ್ತು. ಈ ಸಿದ್ಧಾಂತದ ಮೂಲ ರೂಪದಲ್ಲಿ ದೋಷಗಳಿವೆ ಎಂದು ಒಟ್ಟೊ ಬಾಯರ್, ಲೆನಿನ್ ಮತ್ತು ಬುಖಾರಿನ್ ಅವರು ಗುರುತಿಸಿದ್ದರಾದರೂ, ಪ್ರಸಿದ್ಧ ಅರ್ಥಶಾಸ್ತ್ರಜ್ಞೆ ಜೋನ್ ರಾಬಿನ್ಸನ್ ಅವರ ಮಾತುಗಳಲ್ಲಿ ಹೇಳುವುದಾದರೆ, ರೋಸಾ ಲಕ್ಸೆಂಬರ್ಗ್ ಅವರ ಸಿದ್ಧಾಂತವು ಗಮನಾರ್ಹ ಮಟ್ಟದ ಒಂದು “ಮುನ್ನರಿವು” ಪ್ರದರ್ಶಿಸಿತ್ತು. ಈ “ಮುನ್ನರಿವು” ಮೌಲ್ಯಯುತವಾಗಿತ್ತು. ಏಕೆಂದರೆ, ಅದು ವಾಸ್ತವ ಜಗತ್ತಿನಲ್ಲಿ ಸಂಭವಿಸಿದ ಒಂದು ವಿದ್ಯಮಾನವನ್ನು ವಿವರಿಸಿತ್ತು. ಅಂದರೆ, ವಸಾಹತುಶಾಹಿಯು ತಾನು ಜಯಿಸಿದ ವಸಾಹತುಗಳಲ್ಲಿ ಕರಕುಶಲ ಉತ್ಪಾದನೆಯನ್ನು ನಾಶಪಡಿಸಿತ್ತು ಮತ್ತು ಕೈಗಾರಿಕೆಗಳ ನಾಶದ ಪ್ರಕ್ರಿಯೆಯನ್ನು ಕೈಗೊಂಡಿತ್ತು.
ಈ ವಿನಾಶವು ಅಗ್ಗದ ಸರಕುಗಳು ದುಬಾರಿ ಸರಕುಗಳನ್ನು ಹಿಂದಿಕ್ಕುವ ಮಾರುಕಟ್ಟೆ ಪೈಪೋಟಿಯಿಂದ ಉಂಟಾದ ಪರಿಣಾಮ ಮಾತ್ರವೇ ಆಗಿರಲಿಲ್ಲ. ವಸಾಹತುಶಾಹಿ ಅರ್ಥವ್ಯವಸ್ಥೆಯಲ್ಲಿ ಸರಕು ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಪರಿಚಯಿಸುವುದಕ್ಕಾಗಿ ಬಲ-ಪ್ರಯೋಗ ಮತ್ತು ದಬ್ಬಾಳಿಕೆಯ ಅಗತ್ಯವಿತ್ತು ಮತ್ತು ಅದಕ್ಕಾಗಿ ಆ ಪ್ರದೇಶಗಳ ಮೇಲೆ ಸಾಮ್ರಾಜ್ಯಶಾಹಿ ನಿಯಂತ್ರಣ ಅತ್ಯಗತ್ಯವಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಪ್ರದೇಶಗಳಿಂದ ಕಚ್ಚಾ ವಸ್ತುಗಳು ಮತ್ತು ಆಹಾರ ಧಾನ್ಯಗಳನ್ನು ಪಡೆಯುವ ಉದ್ದೇಶದ ಜೊತೆಗೆ, ಬಂಡವಾಳಶಾಹಿ ವ್ಯವಸ್ಥೆಯು ದೂರದ ಪ್ರದೇಶಗಳ ಮೇಲೆ ಸಾಮ್ರಾಜ್ಯಶಾಹಿ ನಿಯಂತ್ರಣವನ್ನು ಸಾಧಿಸುವ ಮೂಲಕ ತನ್ನ ಇನ್ನೊಂದು ಪ್ರಮುಖ ಉದ್ದೇಶವನ್ನು ಪೂರೈಸುವ ಒಂದು ಬಾಹ್ಯ ಉತ್ತೇಜಕವನ್ನು ಕಂಡುಕೊಂಡಿತು.
ಬಂಡವಾಳ ಶೇಖರಣೆಯ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ ಒಂದಿಷ್ಟು ಬೇಡಿಕೆಯನ್ನು ವ್ಯವಸ್ಥೆಯ ಹೊರಗಿನಿಂದ ಪಡೆಯುವುದು ಅತ್ಯಗತ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಬಂಡವಾಳಶಾಹಿ ವ್ಯವಸ್ಥೆಗೆ ಒಂದು “ಬಾಹ್ಯ ಮಾರುಕಟ್ಟೆ”ಯು ಅತ್ಯಗತ್ಯವಾಗುತ್ತದೆ ಮತ್ತು ಇದು ಸಾಮ್ರಾಜ್ಯಶಾಹಿಯ ತಳದಲ್ಲಿರುವ ಅಂಶಗಳಲ್ಲಿ ಒಂದು.
ಹೊರಗಿನ ಈ ಪ್ರದೇಶಗಳು ಬಾಹ್ಯ ಮಾರುಕಟ್ಟೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಸಹ, ಆ ಸಾಮರ್ಥ್ಯವು ಕಾಲಕ್ರಮೇಣ ಖಂಡಿತವಾಗಿಯೂ ಬರಿದಾಗುತ್ತದೆ. ಏಕೆಂದರೆ, ಬಂಡವಾಳಶಾಹಿ ಉತ್ಪನ್ನಗಳು ಮಾರುಕಟ್ಟೆಯೊಂದನ್ನು ಒಮ್ಮೆ ಆಕ್ರಮಿಸಿಕೊಂಡರೆ, ಆ ಹೊರಗಿನ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿ ಇಲ್ಲದ ಕಾರಣದಿಂದ ಮಾರಾಟವು ಅಲ್ಲಿ ಏರಿಕೆಯಾಗುವುದಿಲ್ಲ. ಆದ್ದರಿಂದ, ಇಂತಹ ಬಾಹ್ಯ ಉತ್ತೇಕಜವನ್ನು ಒದಗಿಸುವುದಕ್ಕಾಗಿ ಹೊಸ ಮಾರುಕಟ್ಟೆಗಳನ್ನು ನಿರಂತರವಾಗಿ ಅನ್ವೇ಼ಷಿಸಬೇಕಾಗುತ್ತದೆ. ಈ ಅಂಶವು ಲಕ್ಸಂಬರ್ಗ್ ಅವರು ಪ್ರಸ್ತಾಪಿಸಿದ ವ್ಯವಸ್ಥೆಯ “ಕುಸಿತ” ಸಿದ್ಧಾಂತದ ಆಧಾರವಾಗಿತ್ತು. ಅಂದರೆ, ಅಸ್ತಿತ್ವದಲ್ಲಿರುವ ಬಂಡವಾಳಶಾಹಿ-ಪೂರ್ವ ಮಾರುಕಟ್ಟೆಗಳು ಬರಿದಾದ ನಂತರ, ಹೊಸ ಮಾರುಕಟ್ಟೆಗಳು ಲಭ್ಯವಿಲ್ಲದಿದ್ದಾಗ, ಬಂಡವಾಳ ಶೇಖರಣೆಯನ್ನು ಮುಂದುವರಿಸುವುದು ವ್ಯವಸ್ಥೆಗೆ ಸಾಧ್ಯವಾಗುವುದಿಲ್ಲ. ಆದರೆ, ಇಂತಹ ಒಂದು ನಿರ್ಣಾಯಕ ಹಂತವನ್ನು ತಲುಪುವ ಮೊದಲೇ ಕಾರ್ಮಿಕ ವರ್ಗವು ಈ ವ್ಯವಸ್ಥೆಯನ್ನು ಉರುಳಿಸುತ್ತದೆ ಎಂದು ಅವರು ನಂಬಿದ್ದರು.
ಕೀನ್ಸ್- ಪರ್ಯಾಯ ಸಾಧ್ಯತೆಗೆ ಪ್ರತಿರೋಧ
ಬಂಡವಾಳಶಾಹಿ ವ್ಯವಸ್ಥೆಯ ಸ್ಥಿರತೆಗೆ ಅಗತ್ಯವಾದ ಬಾಹ್ಯ ಮಾರುಕಟ್ಟೆಯನ್ನು ಪ್ರಭುತ್ವದ ವೆಚ್ಚಗಳ ಮೂಲಕವೂ ಒದಗಿಸಬಹುದು ಎಂಬ ಒಂದು ಪರ್ಯಾಯ ಸಾಧ್ಯತೆಯನ್ನು ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಮಂಡಿಸಿದ ವಾದವು ಸೂಚಿಸಿತು. ಸರ್ಕಾರದ ವೆಚ್ಚಗಳನ್ನು ಬೇಕಾದಾಗ ಏರಿಕೆ ಮಾಡಬಹುದು ಅಥವಾ ಇಳಿಕೆ ಮಾಡಬಹುದು ಮತ್ತು ಅದನ್ನು ಮಿತಿಯಿಲ್ಲದೆ ವಿಸ್ತರಿಸಬಹುದು. ಆದುದರಿಂದ, ಬಂಡವಾಳಶಾಹಿ-ಪೂರ್ವ ಮಾರುಕಟ್ಟೆಗಳ ಸಂದರ್ಭದಲ್ಲಿ ಲಕ್ಸಂಬರ್ಗ್ ಊಹಿಸಿದ ವ್ಯವಸ್ಥೆಯು “ಕುಸಿತ”ದತ್ತ ಸಾಗುತ್ತದೆ ಎನ್ನುವ ಪರಿಸ್ಥಿತಿಯು, ಸರ್ಕಾರದ ವೆಚ್ಚಗಳ ರೂಪದ ಬಾಹ್ಯ ಉತ್ತೇಜನ ದೊರೆತಾಗ ಉದ್ಭವಿಸಬೇಕಿಲ್ಲ ಎಂದಾಗುತ್ತದೆ. ಈ ಕೀನ್ಸ್ ವಿದ್ಯಮಾನದ ಪರಿಣಾಮವಾಗಿ, ಬೂರ್ಜ್ವಾ ಚಿಂತಕರು ಮಾತ್ರವಲ್ಲದೆ, ಮಾರ್ಕ್ಸ್ವಾದದಿಂದ ಪ್ರಭಾವಿತರಾದ ಅನೇಕ ಲೇಖಕರು ಕೂಡ, ಬಂಡವಾಳಶಾಹಿಯು ಅಂತಿಮವಾಗಿ ಆರ್ಥಿಕವಾಗಿ ಸ್ಥಿರಗೊಂಡಿದೆ ಎಂದು ನಂಬತೊಡಗಿದರು. ಬಂಡವಾಳಶಾಹಿಯ ಕುರಿತಾದ ಅವರ ಟೀಕೆಯು ನೈತಿಕ ನೆಲೆಗೆ ಹೊರಳಿತು. ಅಂದರೆ, ಬಂಡವಾಳಶಾಹಿಯು ಹೇಗೆ ಸಾಮುದಾಯಿಕ ಪ್ರಜ್ಞೆಯನ್ನು ನಾಶಪಡಿಸುತ್ತದೆ ಎಂಬುದರತ್ತ ಮತ್ತು ಬೇರೆಯವರ ವೆಚ್ಚದಲ್ಲಿ ಸ್ವಾರ್ಥಪರ ಸಂಪತ್ತಿನ ಸಂಗ್ರಹಣೆಯನ್ನು ಹೇಗೆ ವೈಭವೀಕರಿಸುತ್ತದೆ ಎಂಬುದರತ್ತ ಅವರ ಗಮನ ಹರಿಯಿತು. ಆದರೆ, ಅವರು ಬಂಡವಾಳಶಾಹಿಯ ಆರ್ಥಿಕ ವೈರುಧ್ಯಗಳತ್ತ ಹೆಚ್ಚಿನ ಒತ್ತು ನೀಡುವುದನ್ನು ನಿಲ್ಲಿಸಿದರು.
ನಿಜ, ಇದು ಪೂರ್ಣವಾಗಿ ಒಂದು ತಪ್ಪು ಕಲ್ಪನೆ. ಏಕೆಂದರೆ, ಬಾಹ್ಯ ಉತ್ತೇಜನವನ್ನು ಎಲ್ಲ ಸಂದರ್ಭಗಳಲ್ಲೂ ಒದಗಿಸಲು ಸರ್ಕಾರಿ ವೆಚ್ಚಗಳನ್ನೇ ನಂಬಿಕೊಳ್ಳುವುದು ಸಾಧ್ಯವಿಲ್ಲ. ಸರ್ಕಾರದ ವೆಚ್ಚಗಳ ಮೂಲಕ ಬಾಹ್ಯ ಉತ್ತೇಜನವನ್ನು ಒದಗಿಸಬೇಕು ಎಂದಾದರೆ, ಅದು ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಅಥವಾ ವಿತ್ತೀಯ ಕೊರತೆಯ ಮೂಲಕವೇ ಆಗಬೇಕು. ಏಕೆಂದರೆ, ಕಾರ್ಮಿಕರ ಮೇಲೆ ತೆರಿಗೆ ವಿಧಿಸಿ ಆ ಹಣವನ್ನು ಖರ್ಚು ಮಾಡುವುದರಿಂದ ಒಟ್ಟು ಬೇಡಿಕೆಯಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ, ಏಕೆಂದರೆ, ಕಾರ್ಮಿಕರು ತಮ್ಮ ಆದಾಯದ ಬಹುಪಾಲನ್ನು ಅದಾಗಲೇ ತಮ್ಮ ಬಳಕೆಗಾಗಿ ವ್ಯಯಿಸಿರುತ್ತಾರೆ. ಆದಾಯ ಸಂಗ್ರಹಣೆಯ ಈ ಎರಡೂ ಮಾರ್ಗಗಳನ್ನೂ ಬಂಡವಾಳಶಾಹಿ ಶಕ್ತಿಗಳು ಇಷ್ಟಪಡುವುದಿಲ್ಲ. ಆದ್ದರಿಂದ, ಕೀನ್ಸ್ ಪ್ರತಿಪಾದಿಸಿದ ಬೇಡಿಕೆ “ನಿರ್ವಹಣೆ”ಯನ್ನು ತಾತ್ಕಾಲಿಕವಾಗಿ ಒಪ್ಪಿಕೊಂಡಿದ್ದರೂ, ಒಂದು ಹಂತದಲ್ಲಿ ಅದನ್ನು ಬಂಡವಾಳಶಾಹಿ ಶಕ್ತಿಗಳು ಖಂಡಿತವಾಗಿಯೂ ವಿರೋಧಿಸುತ್ತಿದ್ದವು. ಯಾವಾಗ ಹಾಗಾಗಬಹುದು ಎಂಬ ಪ್ರಶ್ನೆಯಷ್ಟೇ ಉಳಿದಿತ್ತು. ಜಾಗತೀಕರಣದೊಂದಿಗೆ ಹಣಕಾಸು ಬಂಡವಾಳದ ಪ್ರಭಾವವು ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ಪಡೆದುಕೊಂಡಾಗ, ಕೀನ್ಸ್ ಅವರ ಬೇಡಿಕೆ “ನಿರ್ವಹಣೆ”ಯ ವಿರುದ್ಧ ಬಂಡವಾಳಶಾಹಿ ಶಕ್ತಿಗಳ ಪ್ರತಿರೋಧವು ಯಶಸ್ವಿಯಾಯಿತು.
ಪ್ರಭುತ್ವದ ವ್ಯಾಪ್ತಿಯು ದೇಶವೊಂದರ ಗಡಿಗಳಿಗೆ ಸೀಮಿತವಾಗಿದ್ದರೆ, ನವ-ಉದಾರವಾದಿ ಬಂಡವಾಳವು ಇಡೀ ಜಗತ್ತನ್ನೇ ವ್ಯಾಪಿಸಿದೆ. ಈ ಪರಿಸ್ಥಿತಿಯು ಕೀನ್ಸ್ ಮಾದರಿಯ ಬೇಡಿಕೆ “ನಿರ್ವಹಣೆ”ಯನ್ನು ನಿಷ್ಪ್ರಯೋಜಕವಾಗಿಸುತ್ತದೆ.
ಈಗ ನವ-ಉದಾರವಾದಿ ಬಂಡವಾಳಶಾಹಿಯು ಒಂದು ಸ್ಥಗಿತತೆಯಲ್ಲಿ ಸಿಲುಕಿಕೊಂಡಿರುವಾಗ, ತನ್ನ ಹದ್ದುಬಸ್ತಿನಲ್ಲಿರುವ ನಿರ್ದಿಷ್ಟ ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಈ ಸ್ಥಗಿತತೆಯಿಂದ ಹೊರತರುವಲ್ಲಿ ಪ್ರಭುತ್ವವು ಬಹುತೇಕ ಅಸಹಾಯಕವಾಗಿದೆ ಎಂಬುದು ಒಂದು ಆಶ್ಚರ್ಯದ ವಿಷಯವೇನಲ್ಲ. ಸರಳವಾಗಿ ಹೇಳುವುದಾದರೆ, ಪ್ರಭುತ್ವವು ಪರಿಣಾಮಕಾರಿಯಾಗಿರಬಲ್ಲ ಆರ್ಥಿಕ ಅಧಿಕಾರವ್ಯಾಪ್ತಿಯನ್ನು ಹೊಂದಿರುವ “ನಿಯಂತ್ರಣ ವಲಯ” ಮತ್ತು ನವ-ಉದಾರವಾದಿ ಯುಗದಲ್ಲಿ ಬೃಹತ್ ಬಂಡವಾಳವು ಕಾರ್ಯಾಚರಣೆ ನಡೆಸುವ ವಲಯ – ಇವೆರಡೂ ಈಗ ಒಂದೇ ಆಗಿಲ್ಲ. ಪ್ರಭುತ್ವದ ವ್ಯಾಪ್ತಿಯು ದೇಶವೊಂದರ ಗಡಿಗಳಿಗೆ ಸೀಮಿತವಾಗಿದ್ದರೆ, ನವ-ಉದಾರವಾದಿ ಬಂಡವಾಳವು ಇಡೀ ಜಗತ್ತನ್ನೇ ವ್ಯಾಪಿಸಿದೆ. ಈ ಪರಿಸ್ಥಿತಿಯು ಕೀನ್ಸ್ ಮಾದರಿಯ ಬೇಡಿಕೆ “ನಿರ್ವಹಣೆ”ಯನ್ನು ನಿಷ್ಪ್ರಯೋಜಕವಾಗಿಸುತ್ತದೆ.
ಇದನ್ನೂ ಓದಿ : ಸಾಮ್ರಾಜ್ಯಶಾಹಿಯ ಆಯುಧವಾಗಿ ಡಾಲರ್ ಬಳಕೆ- ಪ್ರೊ. ಪ್ರಭಾತ್ ಪಟ್ನಾಯಕ್
ಬಂಡವಾಳಶಾಹಿ ವ್ಯವಸ್ಥೆಯ ಅಂತಃಸ್ಫೋಟ
ಈ ಮಾತನ್ನು ಹೇಳುವಾಗ, ಮಿಲಿಟರಿಯಂತಹ ನಿರ್ದಿಷ್ಟ ವಲಯಗಳಲ್ಲಿ ಸರ್ಕಾರದ ವೆಚ್ಚಗಳು ಏರಿಕೆಯಾಗುವುದಿಲ್ಲ ಎಂದಲ್ಲ. ನಾಟೋ(NATO) ಕೂಟದ ದೇಶಗಳು ತಮ್ಮ ಜಿಡಿಪಿಯ ಶೇ. 5ರಷ್ಟನ್ನು ಮಿಲಿಟರಿಗಾಗಿ ಖರ್ಚು ಮಾಡಬೇಕೆಂಬ ಡೊನಾಲ್ಡ್ ಟ್ರಂಪ್ ಅವರ ಸಲಹೆಯನ್ನು, ಸ್ಪೇನ್ ಹೊರತುಪಡಿಸಿದರೆ, ಅಮೆರಿಕದ ಇತರ ನಾಟೋ ಮಿತ್ರ ದೇಶಗಳು ಗಂಭೀರವಾಗಿ ವಿರೋಧಿಸಲಿಲ್ಲ. ಈ ಸಂಗತಿಯಿಂದ, ಜಾಗತೀಕರಣದ ಯುಗದಲ್ಲಿ ಯಾವುದೇ ನಿರ್ದಿಷ್ಟ ದೇಶದಲ್ಲಿ ಒಟ್ಟು ಬೇಡಿಕೆಯನ್ನು ಹೆಚ್ಚಿಸುವ ಸಾಮರ್ಥ್ಯ ಸರ್ಕಾರಕ್ಕಿಲ್ಲ ಎಂಬ ನಮ್ಮ ಹಿಂದಿನ ವಾದವು ಸರಿಯಲ್ಲವೇನೋ ಎಂಬ ಭಾವನೆ ಉಂಟಾಗಬಹುದು. ಆದರೆ, ಈ ಬೃಹತ್ ಮಿಲಿಟರಿ ವೆಚ್ಚವನ್ನು ನಾಟೋದ ಯಾವುದೇ ಒಂದು ಸದಸ್ಯ ದೇಶದಲ್ಲೂ ಒಂದು ಬೃಹತ್ ವಿತ್ತೀಯ ಕೊರತೆಯ ಮೂಲಕವೋ ಅಥವಾ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕವೋ ಭರಿಸಲಾಗುವುದಿಲ್ಲ. ಬದಲಾಗಿ, ದುಡಿಯುವ ಜನರ ಮೇಲೆ ಅಧಿಕ ತೆರಿಗೆಗಳನ್ನು ಹೇರುವ ಮೂಲಕ ಮತ್ತು ಜನಕಲ್ಯಾಣ ಕಾರ್ಯಕ್ರಮಗಳಿಗಾಗಿ ಮಾಡುವ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಈ ಬೃಹತ್ ಮಿಲಿಟರಿ ವೆಚ್ಚವನ್ನು ಭರಿಸಲಾಗುತ್ತದೆ. ಜನಕಲ್ಯಾಣ ವೆಚ್ಚದ ಬದಲಿಗೆ ಮಿಲಿಟರಿ ವೆಚ್ಚವನ್ನು ಹೆಚ್ಚಿಸುವುದರಿಂದ, ದುಡಿಯುವ ಜನರ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುವುದು ಮಾತ್ರವಲ್ಲದೆ, ಒಟ್ಟು ಬೇಡಿಕೆಯೂ ಏರಿಕೆಯಾಗುವುದಿಲ್ಲ. ಪರಿಣಾಮವಾಗಿ, ಬಂಡವಾಳಶಾಹಿಯು ಈಗ ಸಿಲುಕಿಕೊಂಡಿರುವ ಸ್ಥಗಿತತೆಯಿಂದ ಹೊರಬರುವುದು ಸಾಧ್ಯವಾಗುವುದಿಲ್ಲ.
ಈಗ ರೋಸಾ ಲಕ್ಸಂಬರ್ಗ್ ಪ್ರಸ್ತಾಪ ಮಾಡಿದ್ದ ‘ಬಂಡವಾಳಶಾಹಿ–ಪೂರ್ವ‘ ಮಾರುಕಟ್ಟೆಗಳ ರೂಪದಲ್ಲಿ “ಹೊರಗಿನ ಮಾರುಕಟ್ಟೆಗಳು” ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಚಲಾಯಿಸುವ ವೀಟೋ(ನಿಷೇಧಾಧಿಕಾರ)ದಿಂದಾಗಿ ಲಭ್ಯವಿಲ್ಲ. ಏಕೆಂದರೆ, ಬಂಡವಾಳದ ಉತ್ಪನ್ನಗಳನ್ನು ನುಗ್ಗಿಸಲು ಸಾಧ್ಯವಾಗುವಂತಹ ಬಂಡವಾಳಶಾಹಿ ಪ್ರಭಾವಕ್ಕೆ ಒಳಗಾಗದ ನಿರ್ಮಲ ಪ್ರದೇಶಗಳೇ ಈಗ ಉಳಿದಿಲ್ಲ. ಹಾಗೆಯೇ, ಪ್ರಭುತ್ವದ ವೆಚ್ಚಗಳ ರೂಪದ ‘ಹೊರ ಮಾರುಕಟ್ಟೆ’ಗಳೂ ಲಭ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ, ಬಂಡವಾಳಶಾಹಿ ವ್ಯವಸ್ಥೆಯ ಗತಿಯೇನು? ‘ಬಾಹ್ಯ ಮಾರುಕಟ್ಟೆ’ಗಳ ಈ ಕೊರತೆಯನ್ನು ಅದು ಹೇಗೆ ನಿಭಾಯಿಸುತ್ತದೆ? ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕೆಲವು ಕ್ರಮಗಳು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸುಳಿವು ನೀಡುತ್ತವೆ. ಆ ಉತ್ತರ ಏನೆಂದರೆ, ಇಂತಹ ಪರಿಸ್ಥಿತಿಗಳಲ್ಲಿ ಈ ವ್ಯವಸ್ಥೆಯು ತನ್ನ ಮೇಲೇ ತಿರುಗಿಬೀಳುತ್ತದೆ.
ಬಂಡವಾಳಶಾಹಿ ವ್ಯವಸ್ಥೆಯು ಒಳಗೊಳಗೇ ಕುಸಿಯಲಾರಂಭಿಸುತ್ತದೆ, ಪ್ರಧಾನ ಬಂಡವಾಳಶಾಹಿ ದೇಶವು ಇತರ ಬಂಡವಾಳಶಾಹಿ ದೇಶಗಳೊಂದಿಗೆ, ವಿಶೇಷವಾಗಿ ಜಾಗತಿಕ ದಕ್ಷಿಣ ದೇಶಗಳೊಂದಿಗೆ, “ನನ್ನ ನೆರೆಯವನು ಹಾಳಾಗಿ ಹೋಗಲಿ” ಎನ್ನುವ ನೀತಿಯನ್ನು ಅನುಸರಿಸುತ್ತದೆ. ರೋಸಾ ಲಕ್ಸೆಂಬರ್ಗ್ ಅವರು ಚಿತ್ರಿಸಿದ್ದ ಜಗತ್ತಿನ ಬಂಡವಾಳಶಾಹಿ ವಲಯವು ಬಂಡವಾಳಶಾಹಿ-ಪೂರ್ವ ವಲಯವನ್ನು ತನ್ನ ‘ಬಾಹ್ಯ ಮಾರುಕಟ್ಟೆ’ಯನ್ನಾಗಿ ವಶಪಡಿಸಿಕೊಳ್ಳುವ ಚಿತ್ರವು ಬದಲಾಗಿ ಈಗ ಅದಕ್ಕಿಂತಲೂ ಮೇಲಿನ ಮಟ್ಟದಲ್ಲಿ ಜಗತ್ತಿನ ಪ್ರಧಾನ ಬಂಡವಾಳಶಾಹಿ ಅರ್ಥವ್ಯವಸ್ಥೆಯು ಕಡಿಮೆ ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ಅರ್ಥವ್ಯವಸ್ಥೆಗಳನ್ನು (ಅಂದರೆ, ಜಾಗತಿಕ ದಕ್ಷಿಣ ದೇಶಗಳ ಅರ್ಥವ್ಯವಸ್ಥೆಗಳನ್ನು) ತನ್ನ ‘ಬಾಹ್ಯ ಮಾರುಕಟ್ಟೆ’ಯನ್ನಾಗಿ ವಶಪಡಿಸಿಕೊಳ್ಳುವ ಚಿತ್ರವಾಗಿ ಬಿಡುತ್ತಿದೆ.
‘ಬಾಹ್ಯ ಮಾರುಕಟ್ಟೆ’ಗಳ ಕೊರತೆಯನ್ನು ಅದು ಹೇಗೆ ನಿಭಾಯಿಸುತ್ತದೆ? ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕೆಲವು ಕ್ರಮಗಳು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸುಳಿವು ನೀಡುತ್ತವೆ. ಆ ಉತ್ತರ ಏನೆಂದರೆ, ಇಂತಹ ಪರಿಸ್ಥಿತಿಗಳಲ್ಲಿ ಈ ವ್ಯವಸ್ಥೆಯು ತನ್ನ ಮೇಲೇ ತಿರುಗಿಬೀಳುತ್ತದೆ. ಯುಎಸ್ ಈಗ ದಬ್ಬಾಳಿಕೆಯ ಎರಡು ಪ್ರಾಥಮಿಕ ಉಪಕರಣಗಳನ್ನು ಬಳಸುತ್ತಿದೆ.
ಯುಎಸ್ ದಬ್ಬಾಳಿಕೆಯ ಎರಡು ಪ್ರಾಥಮಿಕ ಉಪಕರಣಗಳು
ಈ ವಿದ್ಯಮಾನ ಬಂಡವಾಳಶಾಹಿ ಪದ್ಧತಿಯಲ್ಲಿ ಸಾಮಾನ್ಯವಾಗಿ ನಡೆಯುವ ಒಂದು ಸಂಗತಿಯಷ್ಟೇ, ಅದಕ್ಕಿಂತ ಹೆಚ್ಚಿನದೇನೂ ಅಲ್ಲ ಎಂದು ಅನಿಸಬಹುದು: ಏಕೆಂದರೆ, ಬಂಡವಾಳಶಾಹಿ ಘಟಕಗಳು ಮತ್ತು ಈ ಘಟಕಗಳನ್ನು ಹೊಂದಿರುವ ಬಂಡವಾಳಶಾಹಿ ದೇಶಗಳು ಸದಾ ಪರಸ್ಪರ ಸ್ಪರ್ಧೆಯಲ್ಲಿ ತೊಡಗಿರುತ್ತವೆ. ಪ್ರಧಾನ ಬಂಡವಾಳಶಾಹಿ ಅರ್ಥವ್ಯವಸ್ಥೆಯು ‘ಜಾಗತಿಕ ದಕ್ಷಿಣ’ದ ದೇಶಗಳೊಂದಿಗೆ ಸ್ಪರ್ಧಿಸುತ್ತಿರುವುದು ಒಂದು ಸಾಮಾನ್ಯ ಬಂಡವಾಳಶಾಹಿ ಪದ್ಧತಿಯೇ ಹೊರತು, ಈ ಸ್ಪರ್ಧೆಗೂ ಮತ್ತು ಸಾಮ್ರಾಜ್ಯಶಾಹಿಗೂ ಯಾವ ಸಂಬಂಧವೂ ಇಲ್ಲ ಎಂದು ಕೆಲವರು ವಾದಿಸಬಹುದು. ಆದರೆ, ಇಂತಹದೊಂದು ದೃಷ್ಟಿಯು ತಪ್ಪುಗಳಿಂದ ಕೂಡಿದೆ: ಒಂದು ಸಾಮಾನ್ಯ ಬಂಡವಾಳಶಾಹಿ ಸ್ಪರ್ಧೆಯಡಿಯಲ್ಲಿ, ಸರಕುಗಳ ಇಡೀ ಶ್ರೇಣಿಯಲ್ಲಿ (ಅಮೆರಿಕ ಸರ್ಕಾರವು ಭಾರಿ ಸಬ್ಸಿಡಿಗಳನ್ನು ನೀಡುವ ಕೃಷಿ ಉತ್ಪನ್ನಗಳಂತಹ ವಲಯಗಳನ್ನು ಹೊರತುಪಡಿಸಿ) ‘ಜಾಗತಿಕ ದಕ್ಷಿಣ’ದ ದೇಶಗಳು ಇಂದು ಅಮೆರಿಕಕ್ಕಿಂತಲೂ ಉತ್ತಮವಾಗಿ ಸ್ಪರ್ಧಿಸಬಲ್ಲವು. ಆದರೆ ಅಮೆರಿಕ ಈಗ ಏನು ಮಾಡಲು ಹೊರಟಿದೆಯೆಂದರೆ, ಅದು ತನಗಾಗಿ “ಬಾಹ್ಯ ಮಾರುಕಟ್ಟೆ”ಗಳನ್ನು ಬಲವಂತದಿಂದ ‘ಜಾಗತಿಕ ದಕ್ಷಿಣ’ದ ದೇಶಗಳ ಬಂಡವಾಳಶಾಹಿ ಅರ್ಥವ್ಯವಸ್ಥೆಗಳೊಳಗೇ ಕಂಡುಕೊಳ್ಳುವ ಯೋಜನೆ ಹಾಕಿಕೊಂಡಿದೆ. ಇದು ವಸಾಹತುಶಾಹಿ ಯುಗದಲ್ಲಿ ಏನು ನಡೆಯಿತೋ ಅದರದ್ದೇ – ರೋಸಾ ಲಕ್ಸೆಂಬರ್ಗ್ “ಬಾಹ್ಯ ಮಾರುಕಟ್ಟೆ”ಗಳ ಪಾತ್ರದ ಬಗ್ಗೆ ವಿಶ್ಲೇಷಿಸಲು ಉತ್ತೇಜಿಸಿದ್ದ ಸನ್ನಿವೇಶದ ಪುನರಾವರ್ತನೆಯಾಗಿದೆ.
ಯುಎಸ್ ದಬ್ಬಾಳಿಕೆಯ ಎರಡು ಪ್ರಾಥಮಿಕ ಉಪಕರಣಗಳನ್ನು ಬಳಸುತ್ತಿದೆ: ಮೊದಲನೆಯದು, ಏಕಪಕ್ಷೀಯ ಸುಂಕಗಳ ಹೇರಿಕೆ. ಅಂದರೆ, ‘ಜಾಗತಿಕ ದಕ್ಷಿಣ’ದ ದೇಶಗಳಿಂದ ಯುಎಸ್ ಮಾರುಕಟ್ಟೆಗೆ ಬರುವ ಸರಕುಗಳ ಮೇಲೆ ಸುಂಕಗಳನ್ನು ಅಮೆರಿಕ ವಿಧಿಸುತ್ತದೆ. ಆದರೆ, ಯುಎಸ್ ನಿಂದ ಈ ದೇಶಗಳ ಮಾರುಕಟ್ಟೆಗೆ ಬರುವ ಸರಕುಗಳ ಮೇಲೆ, ಅದೇ ರೀತಿಯ ಸುಂಕಗಳನ್ನು ವಿಧಿಸಲು ‘ಜಾಗತಿಕ ದಕ್ಷಿಣ’ದ ದೇಶಗಳಿಗೆ ಅವಕಾಶ ನೀಡುವುದಿಲ್ಲ. ದಬ್ಬಾಳಿಕೆಯ ಎರಡನೆಯ ಉಪಕರಣವೆಂದರೆ, ಆಮದು ಬಾಧ್ಯತೆಗಳನ್ನು ಏಕಪಕ್ಷೀಯವಾಗಿ ಹೇರುವುದು. ‘ಜಾಗತಿಕ ದಕ್ಷಿಣ’ ದೇಶವೊಂದು ಅಮೆರಿಕದಿಂದ ಇಂತಿಷ್ಟೇ ಪ್ರಮಾಣದ ಸರಕುಗಳನ್ನು ಆಮದು ಮಾಡಿಕೊಳ್ಳಬೇಕೆಂಬ ಗುರಿಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಅದಕ್ಕೆ ಪ್ರತಿಯಾಗಿ, ಅಮೆರಿಕದ ಮೇಲೆ ಇಂತಹ ಯಾವುದೇ ಬಾಧ್ಯತೆಗಳು ಇರುವುದಿಲ್ಲ. ಅಂದರೆ, ‘ಜಾಗತಿಕ ದಕ್ಷಿಣ’ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ವಿಷಯದಲ್ಲಿ ಅಮೆರಿಕದ ಮೇಲೆ ಯಾವ ನಿರ್ಬಂಧವೂ ಇಲ್ಲ.
ಈ ಎರಡೂ ನಿಬಂಧನೆಗಳೂ ಅಂತಿಮಗೊಳಿಸಿದ್ದ ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿ ಒಂದು ಯುಎಸ್ ನ್ಯಾಯಾಲಯ ಟ್ರಂಪ್ ಅವರು ಕೈಗೊಂಡ ವ್ಯಾಪಾರ ಕ್ರಮಗಳನ್ನು ರದ್ದುಗೊಳಿಸುವವರೆಗೂ ಇದ್ದವು. ಈ ಒಪ್ಪಂದ ಕುರಿತು ಮರು-ಮಾತುಕತೆ ನಡೆಯುತ್ತಿದ್ದು, ಅದು ಈಗಾಗಲೇ ಅಂತಿಮಗೊಂಡಿದೆ ಎಂದು ವರದಿಯಾಗಿದೆ. ಈ ಒಪ್ಪಂದವನ್ನು ಸಾರ್ವಜನಿಕಗೊಳಿಸಿದಾಗ, ಅದರಲ್ಲಿ ಇಂತಹ ದಬ್ಬಾಳಿಕೆಯ ಅಂಶಗಳನ್ನು ಬಹುಮಟ್ಟಿಗೆ ಖಚಿತವಾಗಿ ಕಾಣಬಹುದು.
ಇದನ್ನೂ ನೋಡಿ : ಕೃಷಿಮೇಳ | ಕೃಷಿಯಲ್ಲಿ ಹೊಸ ಸಾಧ್ಯತೆಗಳ ಅನಾವರಣ: ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ Janashakthi Media
