ನ್ಯಾಯಕ್ಕಾಗಿ ಬಿಲ್ಕಿಸ್ ಬಾನು ಹೋರಾಟಕ್ಕೆ ಸಿಪಿಐ(ಎಂ) ಸಂಪೂರ್ಣ ಕಾನೂನು ನೆರವು | ಕೇರಳದಲ್ಲಿ 15,627 ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ತೆರವಿನ ವಿಚಾರ ಮುಂದಿಟ್ಟು ಕಾಂಗ್ರೆಸ್ ವಿರುದ್ಧವೂ ಟೀಕೆ
ತಿರುವನಂತಪುರಂ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಸದಸ್ಯರ ಹತ್ಯೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ನ ನಿರ್ಧಾರ ಅತ್ಯಂತ ಆತಂಕಕಾರಿ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಹೇಳಿದ್ದಾರೆ. ಬಿಲ್ಕಿಸ್ ಬಾನು ಅವರ ನ್ಯಾಯದ ಹೋರಾಟಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಂಪೂರ್ಣ ಬೆಂಬಲ ನೀಡಲಿದ್ದು, ಅಗತ್ಯವಿರುವ ಎಲ್ಲ ರೀತಿಯ ಕಾನೂನು ನೆರವು ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ. ಬಿಲ್ಕಿಸ್
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ವಿಜಯನ್, ಸಂಘಪರಿವಾರದ ಶಕ್ತಿಗಳು ಸೃಷ್ಟಿಸಿದ ಭಯ ಮತ್ತು ಬೆದರಿಕೆಯ ವಾತಾವರಣದಿಂದಾಗಿ ಬಿಲ್ಕಿಸ್ ಬಾನು ಅವರು ಹಿಂದೆ ಗುಜರಾತ್ ತೊರೆದು ಸುರಕ್ಷತೆಗಾಗಿ ಬೇರೆಡೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದ್ದಾರೆ. ಅವರ ನ್ಯಾಯದ ಹೋರಾಟ ಯಾವುದೇ ಕಾರಣಕ್ಕೂ ಸೋಲಬಾರದು. ಅದನ್ನು ಖಚಿತಪಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದ ಇಬ್ಬರು ಅಪರಾಧಿಗಳಾದ ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೋಧಿಯಾ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಸುಪ್ರೀಂ ಕೋರ್ಟ್ ಅಕ್ಟೋಬರ್ 28ರಂದು ಜಾಮೀನು ಮಂಜೂರು ಮಾಡಿತ್ತು. 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವುದು, ಅವರಲ್ಲಿ ಒಬ್ಬರಿಗೆ ತೀವ್ರ ದೈಹಿಕ ಅಂಗವೈಕಲ್ಯ ಇರುವುದು ಹಾಗೂ ಮೇಲ್ಮನವಿಯಲ್ಲಿ ವಿಚಾರಣೆ ನಡೆಸಬೇಕಾದ ಕಾನೂನು ಮತ್ತು ವಾಸ್ತವಿಕ ಅಂಶಗಳಿರುವುದನ್ನು ನ್ಯಾಯಾಲಯ ಪರಿಗಣಿಸಿತ್ತು. ಈ ಆದೇಶದ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಬಿಲ್ಕಿಸ್ ಬಾನು ತಿಳಿಸಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಸಿಪಿಐ(ಎಂ) ಬಿಲ್ಕಿಸ್ ಬಾನು ಅವರಿಗೆ ಕಾನೂನು ನೆರವು ನೀಡುವುದಾಗಿ ಘೋಷಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಕೂಡ ಸುಪ್ರೀಂ ಕೋರ್ಟ್ನ ನಿರ್ಧಾರವನ್ನು ಆಘಾತಕಾರಿ, ನೋವುಂಟುಮಾಡುವ ಮತ್ತು ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದ್ದಾರೆ. ಬಿಲ್ಕಿಸ್ ಬಾನು ಅವರ ನ್ಯಾಯದ ಹೋರಾಟದಲ್ಲಿ ಪಕ್ಷ ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ. ಬಿಲ್ಕಿಸ್
ಇದನ್ನೂ ಓದಿ : ಫಾರಂ 7 ದುರ್ಬಳಕೆ ಆರೋಪ: ಬಿಜೆಪಿಯ 10 ಬೂತ್ ಏಜೆಂಟ್ಗಳ ತನಿಖೆಗೆ ಹೈಕೋರ್ಟ್ ತಡೆ | Form 7 Case
ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ತೆರವು: ಕಾಂಗ್ರೆಸ್ ವಿರುದ್ಧ ವಿಜಯನ್ ಟೀಕೆ
ಇದೇ ವೇಳೆ, ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ವಿರುದ್ಧವೂ ಪಿಣರಾಯಿ ವಿಜಯನ್ ಟೀಕೆ ವ್ಯಕ್ತಪಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಅವರು, ಕಳೆದ ಆರು ತಿಂಗಳಲ್ಲಿ ಪೊಲೀಸರ ಮಧ್ಯಪ್ರವೇಶದ ಮೂಲಕ 15,627 ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ವಿ.ಡಿ. ಸತೀಶನ್ ಸಾರ್ವಜನಿಕವಾಗಿ ನಿರಾಕರಿಸಿದ್ದರೂ, ವಿಧಾನಸಭೆಯಲ್ಲಿ ಗೃಹ ಸಚಿವರು ನೀಡಿದ ಉತ್ತರದಿಂದ ಪೋಸ್ಟ್ಗಳ ತೆರವು ನಡೆದಿರುವುದು ಬಹಿರಂಗವಾಗಿದೆ ಎಂಬುದು ವಿಜಯನ್ ಅವರ ವಾದ. ಈ ಬೆಳವಣಿಗೆಯು ಕಾಂಗ್ರೆಸ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಲುವಿನಲ್ಲಿರುವ ದ್ವಂದ್ವವನ್ನು ಬಹಿರಂಗಪಡಿಸಿದೆ ಎಂದು ಅವರು ಟೀಕಿಸಿದ್ದಾರೆ.
ಇತರ ರಾಜ್ಯಗಳಲ್ಲಿ ಸಂಘಪರಿವಾರದ ವಿರುದ್ಧ ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುವ ಕಾಂಗ್ರೆಸ್, ಅಧಿಕಾರದಲ್ಲಿರುವಾಗ ಅದೇ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ವಿಜಯನ್ ಆರೋಪಿಸಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದ ಕುರಿತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದರ ಜೊತೆಗೆ, ಕೇರಳದಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ತೆರವು ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಲುವನ್ನು ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.
ಇದನ್ನೂ ನೋಡಿ : SIR vs SSR: ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಫಲಿತಾಂಶ ಬದಲಿಸುತ್ತಾ? ಅಕ್ರಮಗಳಿಗೆ ಬ್ರೇಕ್ ಹಾಕುತ್ತಾ
