ಉದ್ಯೋಗ ಚೀಟಿ, ಕೆಲಸ ನಿರಾಕರಣೆ, ವೇತನ ವಿಳಂಬದ ದೂರುಗಳ ವಿಚಾರಣೆ | ಮಹಿಳೆಯರು ಮತ್ತು ದುರ್ಬಲ ವರ್ಗಗಳ ಮೇಲಿನ ತಾರತಮ್ಯ, ಕಿರುಕುಳದ ದೂರುಗಳಿಗೂ ಅವಕಾಶ
ನವದೆಹಲಿ: ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿನ ಲೋಪಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಹಾಗೂ ವೇತನ ಪಾವತಿಯ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ದೂರುಗಳನ್ನು ಸ್ವೀಕರಿಸಿ ಪರಿಹರಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಕಾಯ್ದೆ–2025ರ ಅಡಿಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಲೋಕಪಾಲರನ್ನು (ಒಂಬುಡ್ಸ್ಮನ್) ನೇಮಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಗ್ರಾಮೀಣ ಉದ್ಯೋಗ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಲೋಕಪಾಲರು ಹಾಗೂ ಮೇಲ್ಮನವಿ ಪ್ರಾಧಿಕಾರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಚಿವಾಲಯ ಹೊರಡಿಸಿದೆ. ಉದ್ಯೋಗ ಚೀಟಿ ವಿತರಣೆ, ಉದ್ಯೋಗ ನಿರಾಕರಣೆ, ಕೂಲಿ ಪಾವತಿ ವಿಳಂಬ, ವಿಳಂಬ ಪರಿಹಾರ, ಕೆಲಸದ ಸ್ಥಳದಲ್ಲಿನ ಸೌಲಭ್ಯಗಳ ಕೊರತೆ, ಹಾಜರಾತಿ ದಾಖಲೆಗಳಲ್ಲಿನ ಲೋಪಗಳು ಹಾಗೂ ಕಾರ್ಮಿಕರಿಗೆ ಕಾನೂನಿನಡಿ ದೊರೆಯಬೇಕಾದ ಸೌಲಭ್ಯಗಳನ್ನು ನಿರಾಕರಿಸುವ ಪ್ರಕರಣಗಳ ಕುರಿತು ಲೋಕಪಾಲರು ದೂರುಗಳನ್ನು ಪರಿಶೀಲಿಸಲಿದ್ದಾರೆ.
ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಮಹಿಳೆಯರು ಮತ್ತು ದುರ್ಬಲ ವರ್ಗಗಳ ವಿರುದ್ಧ ನಡೆಯುವ ತಾರತಮ್ಯ, ಕಿರುಕುಳದ ದೂರುಗಳನ್ನೂ ಈ ವ್ಯವಸ್ಥೆಯಡಿ ಪರಿಗಣಿಸಲಾಗುತ್ತದೆ. ಉದ್ಯೋಗ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಸಿಬ್ಬಂದಿಯಿಂದ ಆಗುವ ಲೋಪಗಳ ವಿರುದ್ಧ ಗ್ರಾಮೀಣ ಜನರು ದೂರು ಸಲ್ಲಿಸಲು ಇದರಿಂದ ಅವಕಾಶ ಕಲ್ಪಿಸಿದಂತಾಗಿದೆ.
ಲೋಕಪಾಲರ ಹುದ್ದೆಗೆ ಅರ್ಹರಾಗುವವರ ಆಯ್ಕೆಯ ವ್ಯಾಪ್ತಿಯನ್ನೂ ವಿಸ್ತರಿಸಲಾಗಿದೆ. ಗ್ರಾಮೀಣಾಭಿವೃದ್ಧಿ, ಸಾರ್ವಜನಿಕ ಆಡಳಿತ, ಕಾನೂನು, ಶಿಕ್ಷಣ, ಸಮಾಜಕಾರ್ಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರನ್ನು ಈ ಹುದ್ದೆಗೆ ಪರಿಗಣಿಸಬಹುದು. ಲೋಕಪಾಲರ ಅಧಿಕಾರಾವಧಿ ಮತ್ತು ಗೌರವಧನಕ್ಕೆ ಸಂಬಂಧಿಸಿದ ನಿಯಮಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದ ಈ ವ್ಯವಸ್ಥೆಯ ನಿರಂತರ ಕಾರ್ಯನಿರ್ವಹಣೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು ಸಚಿವಾಲಯದ ಉದ್ದೇಶವಾಗಿದೆ.
ದೂರುಗಳ ನೋಂದಣಿ, ಪರಿಶೀಲನೆಗೆ ಪ್ರತ್ಯೇಕ ಅಂತರ್ಜಾಲ ವ್ಯವಸ್ಥೆ
ದೂರುಗಳ ಸ್ವೀಕಾರ ಮತ್ತು ಪರಿಹಾರ ಪ್ರಕ್ರಿಯೆಯನ್ನು ಸುಗಮಗೊಳಿಸಲು ಲೋಕಪಾಲರಿಗಾಗಿ ಪ್ರತ್ಯೇಕ ಅಂತರ್ಜಾಲ ವೇದಿಕೆಯನ್ನು ರೂಪಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ದೂರುಗಳನ್ನು ಆನ್ಲೈನ್ ಮೂಲಕ ದಾಖಲಿಸುವುದು, ಅವುಗಳ ಸ್ಥಿತಿಗತಿಯನ್ನು ಪರಿಶೀಲಿಸುವುದು, ವಿಚಾರಣೆಯ ವಿವರಗಳನ್ನು ದಾಖಲಿಸುವುದು, ಆದೇಶಗಳನ್ನು ಅಪ್ಲೋಡ್ ಮಾಡುವುದು ಮತ್ತು ಕೈಗೊಂಡ ಕ್ರಮಗಳ ಮೇಲ್ವಿಚಾರಣೆ ನಡೆಸಲು ಅವಕಾಶವಿರುತ್ತದೆ.
ಲೋಕಪಾಲರು ಕ್ಷೇತ್ರ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಭೌಗೋಳಿಕ ಗುರುತು ಹೊಂದಿರುವ ಹಾಗೂ ಸಮಯ ದಾಖಲಿಸಿರುವ ಛಾಯಾಚಿತ್ರಗಳನ್ನು ಈ ವ್ಯವಸ್ಥೆಯಲ್ಲಿ ದಾಖಲಿಸಬೇಕಾಗುತ್ತದೆ. ಇದರಿಂದ ಸ್ಥಳ ಪರಿಶೀಲನೆ ಮತ್ತು ದೂರುಗಳ ವಿಚಾರಣೆಗೆ ಸಂಬಂಧಿಸಿದ ದಾಖಲೆಗಳನ್ನು ಹೆಚ್ಚು ಪಾರದರ್ಶಕವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ : ಬಿಲ್ಕಿಸ್ ಬಾನು ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದ್ದಕ್ಕೆ ಜನವಾದಿ ಮಹಿಳಾ ಸಂಘಟನೆ ಖಂಡನೆ
ತಿಂಗಳಿಗೆ ಕನಿಷ್ಠ ಮೂರು ಗ್ರಾಮಸಭೆ, ಸಾಮಾಜಿಕ ಪರಿಶೋಧನಾ ಸಭೆಗಳಲ್ಲಿ ಭಾಗವಹಿಸಬೇಕು
ದೂರುಗಳ ವಿಚಾರಣೆಯನ್ನು ಕಚೇರಿಗೆ ಸೀಮಿತಗೊಳಿಸದೆ ಗ್ರಾಮೀಣ ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಲೋಕಪಾಲರು ಪ್ರತಿ ತಿಂಗಳು ಕನಿಷ್ಠ ಮೂರು ಸಾಮಾಜಿಕ ಪರಿಶೋಧನಾ ಸಾರ್ವಜನಿಕ ಸಭೆಗಳು ಅಥವಾ ಗ್ರಾಮಸಭೆಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಈ ಸಭೆಗಳಲ್ಲಿ ಜನರ ಅಹವಾಲುಗಳನ್ನು ನೇರವಾಗಿ ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು.
ಸಾಮಾಜಿಕ ಪರಿಶೋಧನೆಯಿಂದ ಲಭ್ಯವಾಗುವ ಅಂಶಗಳು, ಗ್ರಾಮಸ್ಥರ ಅಭಿಪ್ರಾಯಗಳು ಮತ್ತು ವೈಯಕ್ತಿಕ ದೂರುಗಳನ್ನು ಒಟ್ಟಾಗಿ ಪರಿಶೀಲಿಸಿ ಯೋಜನೆಯ ಅನುಷ್ಠಾನದಲ್ಲಿನ ಲೋಪಗಳನ್ನು ಗುರುತಿಸಬೇಕು. ನಿಯಮಗಳ ಪ್ರಕಾರ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಲು ಈ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ.
ಡಿಜಿಟಲ್ ಮೇಲ್ವಿಚಾರಣೆ, ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವ ವ್ಯವಸ್ಥೆ ಮತ್ತು ಸಾಮಾಜಿಕ ಪರಿಶೋಧನೆಯಂತಹ ಈಗಿರುವ ಹೊಣೆಗಾರಿಕೆ ಕ್ರಮಗಳಿಗೆ ಲೋಕಪಾಲರು ಹಾಗೂ ಮೇಲ್ಮನವಿ ಪ್ರಾಧಿಕಾರಗಳ ವ್ಯವಸ್ಥೆ ಪೂರಕವಾಗಿರಲಿದೆ ಎಂದು ಸಚಿವಾಲಯ ತಿಳಿಸಿದೆ.
ಇದಕ್ಕೂ ಮೊದಲು, ನವೆಂಬರ್ 2ರಂದು ಕೇಂದ್ರ ಸರ್ಕಾರ ಈ ಯೋಜನೆಯಡಿ ದೂರು ಪರಿಹಾರ ನಿಯಮಗಳು–2026ನ್ನು ಪ್ರಕಟಿಸಿತ್ತು. ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬಹುಹಂತದ ದೂರು ಪರಿಹಾರ ವ್ಯವಸ್ಥೆ ರೂಪಿಸುವುದು, ದೂರುಗಳನ್ನು ಏಳು ಕೆಲಸದ ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸುವುದು ಹಾಗೂ ಸ್ವೀಕರಿಸಿದ ದಿನದಿಂದ 15 ದಿನಗಳೊಳಗೆ ಪರಿಹರಿಸುವುದನ್ನು ಆ ನಿಯಮಗಳು ಕಡ್ಡಾಯಗೊಳಿಸಿವೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ದೂರುಗಳನ್ನು ಮೇಲಿನ ಹಂತಕ್ಕೆ ವರ್ಗಾಯಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರಕಾರ, ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಕಾಯ್ದೆ ಜುಲೈ 1, 2026ರಿಂದ ಜಾರಿಗೆ ಬಂದಿದ್ದು, ಹಿಂದಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) ವ್ಯವಸ್ಥೆಯ ಬದಲಿಗೆ ಜಾರಿಗೆ ಬಂದಿದೆ. ಗ್ರಾಮೀಣ ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಯೋಜನೆಯ ಅನುಷ್ಠಾನದಲ್ಲಿ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಇದನ್ನೂ ನೋಡಿ : SIR vs SSR: ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಫಲಿತಾಂಶ ಬದಲಿಸುತ್ತಾ? ಅಕ್ರಮಗಳಿಗೆ ಬ್ರೇಕ್ ಹಾಕುತ್ತಾ
