ಅತಿ-ಬಲಪಂಥೀಯರು 1990ರ ದಶಕದ ಆರಂಭದ ನಂತರದ ಗಣನೀಯ ಚುನಾವಣಾ ಹಿನ್ನಡೆಯನ್ನು ಅನುಭವಿಸಿರುವುದು ಎದ್ದು ಕಾಣುತ್ತಿದೆ. ಸಾಮಾನ್ಯವಾಗಿ ಜೀವನಾವಶ್ಯಕತೆಗಳು ಕೈಗೆಟಕದಿರುವ ಬಿಕ್ಕಟ್ಟು ಎಂದು ಹೇಳಲಾಗುವ ಜೀವನೋಪಾಯದ ಪ್ರಶ್ನೆಗಳು, ಅಸ್ಮಿತೆಗಳಾದ್ಯಂತ ಒಗ್ಗಟ್ಟು ಮತ್ತು ಎಲ್ಲರನ್ನೂ ಒಳಗೊಳ್ಳುವ ಭವಿಷ್ಯದ ಆಗ್ರಹದೊಂದಿಗೆ ಪರಸ್ಪರ ತಳಕು ಹಾಕಿಕೊಳ್ಳುತ್ತಿವೆ. ಇದು ಬೀದಿಗಳಲ್ಲೂ, ಚುನಾವಣಾ ಫಲಿತಾಂಶಗಳಲ್ಲೂ ಬಿಂಬಿತವಾಗುತ್ತಿದೆ. ಅದು ಲುಲಾ ಅಥವಾ ಬೆರ್ನಿ ಸ್ಯಾಂಡರ್ಸ್ ಆಗಿರಬಹುದು, ಚುನಾವಣಾ ಮುನ್ನಡೆಗಳು ಯಾವತ್ತೂ ಸಮಾನತೆ, ಉದ್ಯೋಗ, ನ್ಯಾಯ ಮತ್ತು ಒಳಗೊಳ್ಳುವ ಭವಿಷ್ಯದ ಕುರಿತ ಜನರ ಹೋರಾಟಗಳಿಂದ ಬೇರ್ಪಟ್ಟಿರಲು ಸಾಧ್ಯವಿಲ್ಲ….. ಬೀಸುತಿಹುದು
* ನೀಲೋತ್ಪಲ್ ಬಸು
* ಕನ್ನಡಕ್ಕೆ: ವಿಶ್ವ
ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಾಣುತ್ತಿದ್ದ ಮಂಕು ಕವಿದ ವಾತಾವರಣ ಕರಗಿ ತಾಜಾ ಗಾಳಿಯ ಉಸಿರಾಟಕ್ಕೆ ಹಾದಿಯಾಗುತ್ತಿದೆ.`ಇದು ಅತಿಕೆಟ್ಟ ಕಾಲ, ಇದು ಅತ್ಯುತ್ತಮ ಕಾಲ. ಇದು ಅತೃಪ್ತಿಯ ಚಳಿಗಾಲ; ಇದು ಭರವಸೆಯ ವಸಂತ ಕಾಲ’ ಎಂಬ ಡಿಕನ್ಸ್ ರ ಪ್ರಖ್ಯಾತ ವರ್ಣನೆ ಸಾಕಾರಗೊಂಡಂತಿದೆ..
ಅತಿ-ಬಲಪಂಥೀಯರು 1990ರ ದಶಕದ ಆರಂಭದ ನಂತರ ಗಣನೀಯ ಚುನಾವಣಾ ಹಿನ್ನಡೆಯನ್ನು ಅನುಭವಿಸಿರುವುದು ಈ ಸನ್ನಿವೇಶದಲ್ಲಿ ಎದ್ದು ಕಾಣುತ್ತಿದೆ. ತಕ್ಕಡಿಯು ನಿರ್ಣಾಯಕವಾಗಿ ಒಂದು ಕಡೆ ವಾಲಿದೆ ಎಂದರೆ ಅದು ತೀರಾ ಸರಳೀಕರಣವಾಗಬಹುದು. ಆದರೂ ಸೆರ್ಬಿಯಾದ ಸೃಜನಶೀಲ ವಿದ್ಯಾರ್ಥಿ ಚಳವಳಿಯಿಂದ ಮೂಡಿ ಬಂದಿರುವ ತುರ್ತಿನ ಮತ್ತು ಭರವಸೆಯ ದನಿಯನ್ನು ಗುರುತಿಸದಿರುವುದು ಕೂಡ ಅಷ್ಟೇ ಮೊದ್ದುತನವಾಗುತ್ತದೆ. ಆ ಚಳವಳಿಯು 15 ವರ್ಷಗಳ ಕಾಲ ಕಠೋರವಾಗಿ ಆಡಳಿತ ನಡೆಸಿದ ಅಲೆಕ್ಸಾಂಡರ್ ವುಸಿಕ್ರ ಸರ್ವಾಧಿಕಾರಶಾಹೀ ಆಳ್ವಿಕೆಯನ್ನು ಬೆರಗುಗೊಳಿಸಿತು. ಬ್ರೆಜಿಲ್ ಚುನಾವಣೆಗಳಲ್ಲಿ ಈಗಿನ ಅಧ್ಯಕ್ಷ ಲುಲಾ ಮತ್ತು ಎಡಪಂಥೀಯರ ಮಹೋನ್ನತ ಸಾಧನೆ, ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ರ ರಿಪಬ್ಲಿಕನ್ ಪಕ್ಷ ಅನುಭವಿಸಿದ ಅಚ್ಚರಿಯ ಹಿನ್ನಡೆ ಮತ್ತು ಅಜೇಯ ಎಂದು ಬೀಗುತ್ತಿದ್ದ ಇಸ್ರೇಲ್ನ ಬೆಂಜಮಿನ್ ನೆತನ್ಯಾಹು ಮಣ್ಣುಮುಕ್ಕಿದ್ದು -ಇವೆಲ್ಲವೂ ಈ ಪಲ್ಲಟಕ್ಕೆ ಸಾಕ್ಷಿಯಾಗಿವೆ. ಹಲವು ಖಂಡಗಳಲ್ಲಿ ಆಗಿರುವ ಈ ಸ್ಥಿತ್ಯಂತರಗಳನ್ನು ಕ್ಷುಲ್ಲಕ ಎಂದು ಹೇಳಿಬಿಟ್ಟರೆ ನಾವು ವಸ್ತುನಿಷ್ಠತೆಯಲ್ಲಿ ಸೋತಂತಾಗುತ್ತದೆ.
`ಇತಿಹಾಸದ ಅಂತ್ಯ‘ವಲ್ಲ, ಅಂತ್ಯವಿಲ್ಲದ ಬಿಕ್ಕಟ್ಟು
ಅತಿ-ಬಲಪಂಥೀಯತೆಯ ಪುನರುಜ್ಜೀವನವು ಸೋವಿಯತ್ ಒಕ್ಕೂಟದ ಕುಸಿತ ಮತ್ತು ಏಕಧ್ರುವೀಯ ಜಗತ್ತಿನತ್ತ ಲಂಗುಲಗಾಮಿಲ್ಲದ ಧಾವಂತದಿಂದ ಶಕ್ತಿಗೂಡಿಸಿಕೊಂಡಿತ್ತು ಎಂಬುದು ಸ್ವಯಂವೇದ್ಯ. ಜಾಗತೀಕರಣದಿಂದ ಪ್ರೇರಿತ ಅತಿ-ಬಲಪಂಥೀಯತೆಯ ಮುನ್ನಡೆ ಎಲ್ಲೆಡೆಗಳಲ್ಲೂ ಕಂಡುಬಂತು. ನಿಜ, ಅವುಗಳ ದಿಕ್ಪಥ ಒಂದೇ ತೆರನದ್ದು ಆಗಿರಲಿಲ್ಲ, ಪ್ರತಿಯೊಂದು ದೇಶದಲ್ಲಿ ನವ-ಉದಾರೀಕರಣದ ನಿರ್ದಿಷ್ಟ ಹಾದಿಯನ್ನು ಅದು ಅವಲಂಬಿಸಿತ್ತು. ಅಮೆರಿಕ ಸಾಮ್ರಾಜ್ಯಶಾಹಿ ನೇತೃತ್ವದಲ್ಲಿ ಸಾಮ್ರಾಜ್ಯವಾದ ಸಂಪೂರ್ಣ ಮೇಲುಗೈ ಸಾಧಿಸಿರುವುದರಿಂದ `ಇತಿಹಾಸದ ಅಂತ್ಯ’ ಎಂದು ಫ್ರಾನ್ಸಿಸ್ ಫುಕುಯಾಮಾ ವಿಶಿಷ್ಟವಾಗಿ ವರ್ಣಿಸಿದಂತಹ ಒಂದು ಪರಿಸರವನ್ನು ಸೃಷ್ಟಿಸಿತು.
ಸಾಮ್ರಾಜ್ಯಶಾಹಿಯು ಮತ್ತು ಬಂಡವಾಳವಾದವು ಐತಿಹಾಸಿಕವಾಗಿಯೂ, ಅವುಗಳ ಆಂತರ್ಯದಲ್ಲೂ ಬಿಕ್ಕಟ್ಟಿನಿಂದ ಕೂಡಿದ ವ್ಯವಸ್ಥೆಗಳಾಗಿವೆ. ಹಣಕಾಸು ಬಂಡವಾಳದ ವಿಪರೀತ ಕೇಂದ್ರೀಕರಣ ಮತ್ತು ಕ್ರೋಡೀಕರಣ ಮತ್ತು ಅದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವಾಗಿ ಏಕೀಭವಿಸುವುದು ಖಂಡಿತವಾಗಿಯೂ ಒಂದು ದೊಡ್ಡ ಅಡಚಣೆ ಎದುರಿಸಬೇಕಾಗಿತ್ತು . ವಿಪರೀತ ಅಸಮಾನತೆ ಮತ್ತು ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗದ ಏರಿಕೆಯು ಕಾರ್ಮಿಕ ವರ್ಗ ಮತ್ತು ವಂಚಿತರನ್ನೇ ಅತಿ ಹೆಚ್ಚಾಗಿ ತಟ್ಟಿದ್ದರೂ, ಅಂತಿಮವಾಗಿ ಅದು ಸಮಕಾಲೀನ ಬಂಡವಾಳದ ಅಬಾಧಿತ ಮುನ್ನಡೆ ಸಾಧ್ಯವಾಗದಂತೆ ಮಾಡಿತು. ಸಾಲದ ಉತ್ಕರ್ಷದಿಂದಾಗಿ ಉಂಟಾದ 2008ರ ಆರ್ಥಿಕ ಕುಸಿತ ಹೆಚ್ಚಿನ ನವ-ಉದಾರವಾದಿ ಪಂಡಿತರು ಊಹಿಸಲೂ ಆಗದಂಥ ಒಂದು ಅನಾಹುತವಾಗಿತ್ತು.
ಅದರ ನಂತರದ ಪರಿಣಾಮವನ್ನು ಖಾಸಗಿ ಸಾಲಗಳನ್ನು ಸಾರ್ವಭೌಮ ಸಾಲವನ್ನಾಗಿ ಪರಿವರ್ತಿಸಲು ಯತ್ನಿಸುವ ಮೂಲಕ ಸರಿಪಡಿಸಲು ಯತ್ನಿಸಲಾಯಿತು, ಅದರಿಂದಾಗಿ ಅಸಮಾನತೆ ಇನ್ನಷ್ಟು ಉಲ್ಬಣಗೊಂಡಿತು. ರಾಜಕೀಯ ಆಳ್ವಿಕೆಯನ್ನು ಮಾಮೂಲಿನಂತೆ ನಡೆಸಲಾಗದು ಎನ್ನುವುದು ಕೂಡ ಸ್ಪಷ್ಟವಾಯಿತು. ದುಡಿಯುವ ಜನಗಳ ಸಾಮಾನ್ಯ ಜನತಾಂತ್ರಿಕ ಅವಕಾಶವನ್ನು ಕೊಡಮಾಡುತ್ತಲೇ, ಆರ್ಥಿಕವಾಗಿ ಅವರ ಕತ್ತು ಹಿಸುಕುವುದನ್ನು ಮುಂದುವರೆಸುವುದೂ ಸಾಧ್ಯವಿರಲಿಲ್ಲ.ಇಂತಹ ಸನ್ನಿವೇಶದಲ್ಲಿ ಬಲಪಂಥೀಯ ಸರ್ವಾಧಿಕಾರಿ ಆಳ್ವಿಕೆಗಳು, ವಿಪರೀತ, ವಿಷಪೂರಿತ ದ್ವೇಷದ ರಾಜಕೀಯ ಮತ್ತು ಅಸ್ಮಿತೆಯ ರಾಜಕಾರಣ ಆಧಾರಿತವಾಗಿ ನಿರ್ದಿಷ್ಟ ಜನವಿಭಾಗವನ್ನು ʼಅನ್ಯರುʼ (ಹೊರಗಿನವರು) ಎಂದು ಬೊಟ್ಟುಮಾಡುವುದು ಪ್ರಮುಖ ಲಕ್ಷಣಗಳಾಗಿ ಬೆಳೆದು ಬಂದವು.
ಕಳೆದ ಬಹುತೇಕ ಎರಡು ದಶಕಗಳು ಈ ಅತಿ-ಬಲಪಂಥೀಯ ಸನ್ನಿವೇಶದ ಬೆಳವಣಿಗೆಗೆ ಸಾಕ್ಷಿಯಾಗಿವೆ. ಹಂಗರಿಯಲ್ಲಿ ಒರ್ಬಾನ್, ಸೆರ್ಬಿಯಾದಲ್ಲಿ ವುಸಿಕ್, ಟರ್ಕಿಯಲ್ಲಿ ಎರ್ಡೋಗನ್, ಇಸ್ರೇಲ್ನಲ್ಲಿ ನೆತನ್ಯಾಹು, ಭಾರತದಲ್ಲಿ ಮೋದಿ ಮತ್ತು ಅಮೆರಿಕದಲ್ಲಂತೂ ಡೊನಾಲ್ಡ್ ಟ್ರಂಪ್ -ಈ ಸಮಕಾಲೀನ ಇತಿಹಾಸದ ವಿಪರೀತ ಪ್ರತಿಗಾಮಿ ಹಂತದ ಧ್ವಜಧಾರಿಗಳಾಗಿ ಹೊರಹೊಮ್ಮಿದರು.ಬೀಸುತಿಹುದು
ಯೇ… ದೋಸ್ತೀ….

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ
ಇದನ್ನೂ ಓದಿ : ಕಾರ್ಮಿಕ ಸಂಹಿತೆಗಳ ವಿರುದ್ಧ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ
ಈಗ ಚುನಾವಣೆಗಳಲ್ಲೂ, ಬೀದಿಗಳಲ್ಲೂ
ಆದರೆ ಈಗ ಚುನಾವಣೆಗಳಲ್ಲೂ, ಬೀದಿಗಳಲ್ಲೂ ಭಂಗ ಉಂಟಾಗುತ್ತಿದೆ. ಯುರೋಪ್ನಾದ್ಯಂತ ಇದು ವೇಗಪಡೆಯುತ್ತಿದೆ. ಫ್ರಾನ್ಸಿನಲ್ಲಿ ವಿದ್ಯಾರ್ಥಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಇಂಟರ್ನ್ಯಾಷನಾಲೆ (ಕಾರ್ಮಿಕರ ಅಂತಾರಾಷ್ಟ್ರೀಯ ಗೀತೆ) ಮತ್ತು ʼಬೆಲ್ಲಾ ಸಿಯಾವೊʼ(ಪ್ರಖ್ಯಾತ ಇಟಾಲಿಯನ್ ಫ್ಯಾಸಿಸ್ಟ್-ವಿರೋಧಿ ಹಾಡು) ಪ್ಯಾರಿಸ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಅನುರಣಿಸುತ್ತಿವೆ. ಅವರು ಶಿಕ್ಷಣದ ಸುಧಾರಣೆ ಮತ್ತು ಅದು ಕೈಗೆಟಕುವಂತೆ ಮಾಡುವುದು, ಉದ್ಯೋಗ ಲಭ್ಯತೆ ಮತ್ತು ಸಬಲೀಕರಣದ ವಿಷಯವನ್ನು ಮುಂದಿಟ್ಟು ಚಳವಳಿಯನ್ನು ಆರಂಭಿಸಿದರು. ವಾಸ್ತವವಾಗಿ, ಫ್ರೆಂಚ್ ವಿದ್ಯಾರ್ಥಿಗಳು ದೇಶದ ಕಾರ್ಮಿಕರು ಮತ್ತು ಇತರ ವಿಶಾಲ ದುಡಿಯುವ ಜನಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಅಭಿವ್ಯಕ್ತಿಗೊಳಿಸಿದ್ದರು. ಆದ್ದರಿಂದ, ಫ್ರೆಂಚ್ ಸಾಮೂಹಿಕ ಚಳವಳಿಯು ಈಗ ಮುಗಿಯಲು ನಿರಾಕರಿಸುವ ಒಂದು ಹಂತವನ್ನು ತಲುಪಿದೆ.
ಇದುವೇ ಸಂಕೇತವೆಂಬಂತೆ, ಯುರೋಪ್ನಾದ್ಯಂತ ಐಸ್ಲ್ಯಾಂಡ್ನಿಂದ ಆಲ್ಬೇನಿಯಾವರೆಗೆ, ಸ್ಪೇನ್ನಿಂದ ಬೆಲ್ಜಿಯಂವರೆಗೆ, ಇಟಲಿಯಿಂದ ಹಾಲಂಡ್ವರೆಗೆ ಕಿಡಿಯು ಕಾಡ್ಗಿಚ್ಚನ್ನು ಹೊತ್ತಿಸಿದಂತೆ ಕಾಣಿಸುತ್ತದೆ. ಈ ಎಲ್ಲ ಬೆಳವಣಿಗೆಗಳ ಹೃದಯ ಭಾಗದಲ್ಲಿ ಇರುವಂಥದ್ದು ಅಸಮಾನತೆ ಮತ್ತು ಜೀವನಾವಶ್ಯಕ ಸಾಮಗ್ರಿಗಳು ಕೈಗೆಟುಕದ ಬಿಕ್ಕಟ್ಟಿನ ಪರಿಸ್ಥಿತಿ ತಾಳಲಾರದ ಮಟ್ಟವನ್ನು ತಲುಪಿದ್ದು. ಕುತೂಹಲದ ಸಂಗತಿಯೆಂದರೆ, ಅತಿ-ಬಲಪಂಥೀಯತೆಯ ಜತೆ ತಳಕು ಹಾಕಿಕೊಂಡಿರುವ ದ್ವೇಷದ ರಾಜಕಾರಣ, ಯುರೋಪ್ ಮತ್ತು ಆಮೆರಿಕದಾದ್ಯಂತ ವಲಸಿಗರ ವಿರುದ್ಧ ವಿಷಕಾರಿ ಪ್ರಚಾರ ಮತ್ತು ಇಸ್ರೇಲ್ನಿಂದ ಗಾಜಾದಲ್ಲಿ ನರಹತ್ಯಾಕಾಂಡ, ಅದಕ್ಕೆ ಅಮೆರಿಕದ, ವಿಶೇಷವಾಗಿ ಟ್ರಂಪ್ ಆಡಳಿತದ ಬೆಂಬಲ ಇವೆಲ್ಲವೂ ಗಾಜಾ ಮತ್ತು ಪ್ಯಾಲೆಸ್ತೀನಿ ಜನರೊಂದಿಗೆ ಹುರುಪು ತುಂಬಿದ ಸೌಹಾರ್ದತೆಯ ಮೂಲಕ ಒಂದು ಸೃಜನಶೀಲ ಪ್ರತಿ-ಕಥನಕ್ಕೆ ದೊಡ್ಡ ಇಂಬು ನೀಡಿತು. ಇದು ಕೂಡ ಜನರ ಐಕ್ಯತೆಯನ್ನು, ಅದರಲ್ಲೂ ವಿಶೇಷವಾಗಿ ನಾನಾ ಅಸ್ಮಿತೆಗಳ ಯುವಜನರ ನಡುವಿನ ಒಗ್ಗಟ್ಟನ್ನು ಬೆಸೆಯಿತು.
ಇದು ಈಗ ಜೆನ್ ಜೀ ಎಂದು ಒಟ್ಟಾಗಿ ಕರೆಯಲಾಗುವ ಯುವಜನರ ಚೈತನ್ಯಶಾಲಿ ಹೋರಾಟಕ್ಕೆ ಹೊಸದೊಂದು ಜಾಗತಿಕ ಆಯಾಮವನ್ನು ಸೇರಿಸಿದೆ. ಈ ವಿಶಾಲ ಹಿನ್ನೆಲೆಯು ಸೆರ್ಬಿಯಾ ಚುನಾವಣೆಗಳಲ್ಲಿ ಪ್ರತಿಫಲಿಸಿದೆ. ಕಳೆದ ಎರಡು ವರ್ಷಗಳಿಂದ ಚಳವಳಿ ನಡೆಸುತ್ತಿದ್ದ ವಿದ್ಯಾರ್ಥಿಗಳು ವುಸಿಕ್ನನ್ನು ನಿಬ್ಬೆರಗುಗೊಳಿಸಿದ್ದಾರೆ. ಪ್ರಜಾಸತ್ತಾತ್ಮಕ ಅಣಿನೆರಿಕೆಗೆ ತಮ್ಮದೇ ವಿಧಾನಗಳನ್ನು ರೂಪಿಸಿಕೊಂಡ ವಿದ್ಯಾರ್ಥಿಗಳು ವುಸಿಕ್ ಆಡಳಿತಕ್ಕೆ ಒಂದು ರಾಜಕೀಯ ಪರ್ಯಾಯವನ್ನು ಮುಂದಿಟ್ಟರು. ಆಡಳಿತದ ಅಭ್ಯರ್ಥಿಗಳನ್ನು `ಸ್ಟುಡೆಂಟ್ ಲಿಸ್ಟ್’ನ ಅಭ್ಯರ್ಥಿಗಳು ಪರಾಭವಗೊಳಿಸಿದರು. ಇವರು ಪಟ್ಟಭದ್ರ ರಾಜಕಾರಣಿಗಳಲ್ಲ, ಬುದ್ಧಿಜೀವಿಗಳು ಮತ್ತು ವೃತ್ತಿಪರರು.
ಝಿಯೊನಿಸಂ ಮತ್ತು MAGA ರಾಜಕೀಯಕ್ಕೆ ಹಿನ್ನಡೆ
ಇಸ್ರೇಲಿ ಚುನಾವಣೆಯು ಝಿಯೋನಿಸ್ಟ್ ರಾಜಕೀಯದ ಮಿತಿಗಳನ್ನು ಎತ್ತಿತೋರಿಸಿದೆ. ಸಮಾಜದ ದೊಡ್ಡ ಭಾಗವನ್ನು ಯೆಹೂದಿಧರ್ಮದ ಸ್ಥಾನದಲ್ಲಿ ಝಿಯೋನಿಸಂ ಆವರಿಸಿಕೊಂಡಿರುವುದರಿಂದ ಇಸ್ರೇಲ್ ಸಮಾಜಕ್ಕೆ ಭಾರಿ ಹಾನಿಯಾಗಿದೆ. ಆದರೆ ಈ ಪ್ರಕ್ರಿಯೆಯ ಹೊಲಸುತನ ಈ ಇಡೀ ಪ್ರದೇಶವನ್ನು ಶಾಶ್ವತ ಕಿತ್ತಾಟದತ್ತ ತಳ್ಳಿದೆ; ಇದು ಸಮಾಜದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದ್ದು ಜನರ ಜೀವ ಹಾನಿಯಾಗುತ್ತಿದೆ ಹಾಗೂ ಜೀವನೋಪಾಯಗಳೂ ನಾಶವಾಗುತ್ತಿವೆ.ಇನ್ನೊಂದೆಡೆ, ಪ್ಯಾಲೆಸ್ಟೀನಿಯರು ಎರಡು ಅರಬ್ ರಾಜಕೀಯ ಶಕ್ತಿಗಳ ನಾಯಕತ್ವದಡಿ ದೃಢಸಂಕಲ್ಪದಿಂದ ಹೋರಾಡಿದ್ದಾರೆ, ಚುನಾವಣಾ ಬೆಂಬಲವನ್ನು ಪಡೆಯಲು ಅವರಿಗೆ ಸಾಧ್ಯವಾಗಿದೆ. ಅದು ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಈಗ ಇಸ್ರೇಲ್ನಲ್ಲಿ ಪ್ಯಾಲೆಸ್ಟೀನಿಯರ ಜತೆ ಕೈಜೋಡಿಸದೆ ಯಾರೂ ಸರಕಾರವನ್ನು ರಚಿಸುವಂತಿಲ್ಲ.
ಟ್ರಂಪ್ ಮತ್ತು ಅವರ MAGA ರಾಜಕೀಯಕ್ಕೆ ದೊಡ್ಡ ಪ್ರಮಾಣದಲ್ಲಿ ಹಿನ್ನಡೆ ಆಗುವುದು ಖಚಿತವೇ ಆಗಿತ್ತು. ಸೆನೆಟ್ ಮತ್ತು ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ರಿಪಬ್ಲಿಕನ್ನರು ಬಹುಮತವನ್ನು ಕಳೆದುಕೊಂಡಿರುವುದರಿಂದ ಟ್ರಂಪ್ ಶೈಲಿಯ ಏಕಪಕ್ಷೀಯತೆಯು ಹೆಚ್ಚು ದುರ್ಬಲವಾಗಲಿದೆ. ಇರಾನ್ ವಿರುದ್ಧ ಖಂಡಿತವಾಗಿಯೂ ಅನಗತ್ಯ ಹಾಗೂ ಅಪ್ರಚೋದಿತವಾಗಿದ್ದ ಯುದ್ಧದಿಂದಾಗಿ ಅನಿಲ ಮತ್ತು ಇಂಧನಗಳ ಬೆಲೆಗಳು ದುಬಾರಿಯಾಗಿದ್ದು ಕೈಗೆಟಕದಿರುವ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ. ಇದರಿಂದ ಚುನಾವಣೆಯಲ್ಲಿ ರಿಪಬ್ಲಿಕನ್ನರ ಹತಾಶೆ ಇನ್ನಷ್ಟು ಬಿಗಡಾಯಿಸಿತು.
ನಮ್ಮ ಸಮಕಾಲೀನ ಜಗತ್ತನ್ನು ಕಾಡಲು ಆ `ಗುಮ್ಮ’ ಮತ್ತೆ ಬಂದಿದೆಯೇ! ಅಂತಹ ದೊಡ್ಡ ಪ್ರಶ್ನೆ ಕೇಳುವ ಸನ್ನಿವೇಶ ಇನ್ನೂ ಬಂದಿರಲಿಕ್ಕಿಲ್ಲ. ಆದರೆ ಎಲ್ಲೆಡೆ ಅತಿ-ಬಲಪಂಥೀಯತೆಯ ವಿರುದ್ಧದ ಹೋರಾಟಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ ಎನ್ನುವುದನ್ನು ನಿರ್ಲಕ್ಷಿಸಲಾಗದು. ಸಾಮಾನ್ಯವಾಗಿ ಜೀವನಾವಶ್ಯಕತೆಗಳು ಕೈಗೆಟಕದಿರುವ ಬಿಕ್ಕಟ್ಟು ಎಂದು ಹೇಳಲಾಗುವ ಜೀವನೋಪಾಯದ ಪ್ರಶ್ನೆಗಳು, ಅಸ್ಮಿತೆಗಳಾದ್ಯಂತ ಒಗ್ಗಟ್ಟು ಮತ್ತು ಎಲ್ಲರನ್ನೂ ಒಳಗೊಳ್ಳುವ ಭವಿಷ್ಯದ ಆಗ್ರಹದೊಂದಿಗೆ ಪರಸ್ಪರ ತಳಕು ಹಾಕಿಕೊಳ್ಳುತ್ತಿವೆ. ಇದು ಪ್ರತಿ ಚುನಾವಣಾ ಫಲಿತಾಂಶಗಳಲ್ಲಿ ಬಿಂಬಿತವಾಗಿದೆ. ಅದು ಲುಲಾ ಅಥವಾ ಬೆರ್ನಿ ಸ್ಯಾಂಡರ್ಸ್ ಆಗಿರಬಹುದು, ಚುನಾವಣಾ ಮುನ್ನಡೆಗಳು ಯಾವತ್ತೂ ಸಮಾನತೆ, ಉದ್ಯೋಗ, ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಭವಿಷ್ಯದ ಕುರಿತ ಜನರ ಹೋರಾಟಗಳಿಂದ ಬೇರ್ಪಟ್ಟಿರಲು ಸಾಧ್ಯವಿಲ್ಲ ಎನ್ನುವುದನ್ನು ಈ ಇಬ್ಬರೂ ಬಲವಾಗಿ ಪ್ರತಿಪಾದಿಸುತ್ತಾರೆ. ಬೀಸುತಿಹುದು
ಇದನ್ನೂ ನೋಡಿ : ಪುಸ್ತಕ ಕಂಡರೆ ಭಯವೇ? ಬಂಗಾಳದಲ್ಲಿ ಬಿಜೆಪಿಯ ದ್ವೇಷ ರಾಜಕಾರಣ! Janashakthi Media
