ಮಂಗಳೂರು | ಕಂದಾಯ ನಿಯಮಗಳಿಂದ ಜನರಿಗೆ ಸಂಕಷ್ಟ; ಹೋರಾಟದ ಎಚ್ಚರಿಕೆ ನೀಡಿದ ಡಿವೈಎಫ್‌ಐ

ಭೂ ಪರಿವರ್ತನೆ, ವಿನ್ಯಾಸ ಅನುಮೋದನೆಗೆ ಜನಸಾಮಾನ್ಯರ ಪರದಾಟ; ಕಂದಾಯ ಇಲಾಖೆ ಮತ್ತು ಮೂಡಾ ಕಚೇರಿ ವಿರುದ್ಧ ಆಕ್ರೋಶ
ಮಂಗಳೂರು: ಮಂಗಳೂರಿನಲ್ಲಿ ಜಾರಿಯಲ್ಲಿರುವ ಅವೈಜ್ಞಾನಿಕ ಕಂದಾಯ ನಿಯಮಗಳಿಂದ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಈ ನಿಯಮಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ. ಭೂ ಪರಿವರ್ತನೆ, ನಿವೇಶನ ವಿನ್ಯಾಸ ಅನುಮೋದನೆ, ಪಹಣಿ ತಿದ್ದುಪಡಿ ಹಾಗೂ ಖಾತಾ ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯ ಆಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮನೋಜ್‌ ವಾಮಂಜೂರು ಎಚ್ಚರಿಸಿದ್ದಾರೆ. ಮಂಗಳೂರು

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಜಾರಿಯಲ್ಲಿರುವ ಕಂದಾಯ ನಿಯಮಗಳು ಜನಸಾಮಾನ್ಯರ ಖಾಸಗಿ ಆಸ್ತಿ ಹಕ್ಕುಗಳ ಬಳಕೆಗೆ ಅಡ್ಡಿಯಾಗುತ್ತಿವೆ ಎಂದು ಡಿವೈಎಫ್‌ಐ ಆರೋಪಿಸಿದೆ. ತನ್ನ ಸ್ವಂತ ಭೂಮಿಯ ಒಂದು ಭಾಗವನ್ನು ಆಯ್ಕೆ ಮಾಡಿಕೊಂಡು ಮನೆ ನಿರ್ಮಿಸಲು ಅಥವಾ ಇತರ ಕಟ್ಟಡಗಳನ್ನು ನಿರ್ಮಿಸಲು ಭೂ ಪರಿವರ್ತನೆ ಮಾಡಿಕೊಳ್ಳುವುದು, ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಭೂಮಿಯ ಒಂದು ಭಾಗವನ್ನು ಮಾರಾಟ ಮಾಡುವುದು ಕೂಡ ಕಷ್ಟಕರವಾಗಿದೆ. ಇಂತಹ ನಿಯಮಗಳಿಂದ ಜನರು ತಮ್ಮದೇ ಆಸ್ತಿಯನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಘಟನೆ ತಿಳಿಸಿದೆ.

ಇದನ್ನೂ ಓದಿ : ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಅ. 27ರಂದು ಪ್ರಕಟ

ದಕ್ಷಿಣ ಕನ್ನಡದಲ್ಲಿ ಖಾಸಗಿ ಭೂಮಿಯ ಒಂದು ಭಾಗವನ್ನು ಮಾತ್ರ ಭೂ ಪರಿವರ್ತನೆ ಮಾಡಿಕೊಳ್ಳಲು ಅವಕಾಶವಿಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ. ಬದಲಾಗಿ ಸಂಪೂರ್ಣ ಭೂಮಿಯನ್ನು ಪರಿವರ್ತನೆ ಮಾಡಿಸಿಕೊಳ್ಳಬೇಕಾಗುತ್ತದೆ. ನಂತರ ವಿನ್ಯಾಸ ಅನುಮೋದನೆ ಪಡೆಯುವ ಸಂದರ್ಭದಲ್ಲಿಯೂ ಇಡೀ ನಿವೇಶನಕ್ಕೆ ಅನುಮೋದನೆ ಪಡೆಯಬೇಕು ಅಥವಾ ಭಾಗಶಃ ಭೂಮಿಯನ್ನು ಆಯ್ಕೆ ಮಾಡಿಕೊಂಡರೆ ಉಳಿಕೆ ಭೂಮಿಗೆ ದಂಡ ಪಾವತಿಸಬೇಕೆಂಬ ನಿಯಮವಿದೆ. ಈ ನಿಯಮಗಳು ಅವೈಜ್ಞಾನಿಕವಾಗಿದ್ದು, ಜನರಿಗೆ ಅನಗತ್ಯ ಆರ್ಥಿಕ ಹೊರೆಯನ್ನು ಉಂಟುಮಾಡುತ್ತಿವೆ ಎಂದು ಡಿವೈಎಫ್‌ಐ ಆಕ್ಷೇಪಿಸಿದೆ. ಹಿಂದೆ ಕಡ್ಡಾಯಗೊಳಿಸಲಾಗಿದ್ದ ಪ್ರಾಪರ್ಟಿ ಕಾರ್ಡ್‌ ವ್ಯವಸ್ಥೆಯನ್ನು ರದ್ದುಗೊಳಿಸಿರುವುದು, ಅದರ ಆಧಾರದಲ್ಲಿ ನೋಂದಾಯಿಸಿದ ದಾಖಲೆಗಳ ಮಾಲಕರ ಹೆಸರುಗಳನ್ನು ಪಹಣಿಯಲ್ಲಿ ದಾಖಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಹಾಗೂ ಉಳಿಕೆ ಖಾತಾಗಳ ಸಮಸ್ಯೆಗಳು ಕಂದಾಯ ವ್ಯವಸ್ಥೆಯಲ್ಲಿನ ಗೊಂದಲವನ್ನು ಹೆಚ್ಚಿಸಿವೆ ಎಂದು ಸಂಘಟನೆ ಹೇಳಿದೆ.

ಮಂಗಳೂರಿನ ಅನೇಕ ನಿವೇಶನಗಳಿಗೆ ಕಾಲುದಾರಿಗಳು ಅಥವಾ ಕಚ್ಚಾ ರಸ್ತೆಗಳ ಸಂಪರ್ಕವಿದ್ದು, ಇಂತಹ ಪ್ರದೇಶಗಳಲ್ಲಿ ಭೂ ಪರಿವರ್ತನೆ ಮತ್ತು ವಿನ್ಯಾಸ ಅನುಮೋದನೆ ನೀಡದಿರುವುದು ಜನರಿಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಿ ಭೂ ಪರಿವರ್ತನೆ ಮತ್ತು ವಿನ್ಯಾಸ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಪತ್ರಿಕಾ ಹೇಳಿಕೆ ನೀಡಿದ್ದರೂ, ಈವರೆಗೆ ಅಗತ್ಯ ಕ್ರಮಗಳು ಜಾರಿಯಾಗಿಲ್ಲ ಎಂದು ಡಿವೈಎಫ್‌ಐ ಆರೋಪಿಸಿದೆ. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೂ ಈ ಗೊಂದಲಗಳು ಅವಕಾಶ ಕಲ್ಪಿಸಿವೆ ಎಂದು ಸಂಘಟನೆ ದೂರಿದೆ. ಸ್ಥಳೀಯ ಆಡಳಿತ ಮತ್ತು ಉಸ್ತುವಾರಿ ಸಚಿವರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನಿಯಮಗಳನ್ನು ಸರಳೀಕರಿಸಬೇಕು. ಇಲ್ಲವಾದಲ್ಲಿ ಅವೈಜ್ಞಾನಿಕ ಕಂದಾಯ ನಿಯಮಗಳು ಮತ್ತು ತಾಲೂಕು ಕಚೇರಿ ಹಾಗೂ ಮೂಡಾ ಕಚೇರಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಮನೋಜ್‌ ವಾಮಂಜೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಗಳೂರು

ಇದನ್ನೂ ನೋಡಿ : ಎಸ್‌ಐಆರ್‌ | ತಿರಂಗ ಹಿಡಿದು ರಸ್ತೆಗಿಳಿದ ಹೋರಾಟಗಾರರು: ಹತ್ತಿಕ್ಕಿದಷ್ಟೂ ಹುಟ್ಟಲಿವೆ ಸಾವಿರಾರು ಜಂತರ್ ಮಂತರ್!

Donate Janashakthi Media

Leave a Reply

Your email address will not be published. Required fields are marked *