ಮುಚ್ಚೂರು, ಕೊಂಪದವು ಸೇರಿ ಐದು ಗ್ರಾಮಗಳಿಗೆ ಸರ್ಕಾರಿ ಬಸ್‌ ಸೇವೆಗೆ ಆಗ್ರಹ

ಮುಚ್ಚೂರು ಗ್ರಾಮ ಪಂಚಾಯಿತಿ ಮುಂಭಾಗ ನಾಗರಿಕ ಹೋರಾಟ ಸಮಿತಿ ಪ್ರತಿಭಟನೆ | ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ಮುಚ್ಚೂರು: ಮಂಗಳೂರು ತಾಲೂಕಿನ ಮುಚ್ಚೂರು, ಕೊಂಪದವು, ನೀರ್ಕೆರೆ, ನೀರುಡೆ ಹಾಗೂ ಬಂಗೇರಪದವು ಗ್ರಾಮಗಳಿಗೆ ಸರ್ಕಾರಿ ಬಸ್‌ ಸೇವೆ ಒದಗಿಸಬೇಕು ಎಂದು ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ, ಮುಚ್ಚೂರು–ಕೊಂಪದವು ವತಿಯಿಂದ ಮುಚ್ಚೂರು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರ ಜೊತೆಗೆ, ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸದಿರುವುದು ಮತ್ತು ಏಕಾಏಕಿ ಕೆಲವು ಟ್ರಿಪ್‌ಗಳನ್ನು ಕಡಿತಗೊಳಿಸುವುದರಿಂದ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಸರ್ಕಾರಿ ಬಸ್‌ ಸೇವೆ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಖಾಸಗಿ ಬಸ್‌ ಮಾಲಕರ ಹಿತಾಸಕ್ತಿಗೆ ಸಾರಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಸಂಚಾರ ವ್ಯವಸ್ಥೆಯ ಕೊರತೆಯಿಂದ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಗ್ರಾಮಸ್ಥರು ಸತತವಾಗಿ ಮನವಿ ಸಲ್ಲಿಸುತ್ತಿದ್ದರೂ ಮಂಗಳೂರಿನ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್‌ ಸೇವೆ ಒದಗಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಜನರ ಮೂಲಭೂತ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳ ಜನರು ಉದ್ಯೋಗ, ಶಿಕ್ಷಣ ಮತ್ತು ಇತರ ದೈನಂದಿನ ಅಗತ್ಯಗಳಿಗಾಗಿ ನಗರವನ್ನು ಅವಲಂಬಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸಮರ್ಪಕ ಬಸ್‌ ಸೌಲಭ್ಯವಿಲ್ಲದಿರುವುದು ಅವರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸರ್ಕಾರಿ ಬಸ್‌ ಸೇವೆ ಆರಂಭಿಸಬೇಕು. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮಕ್ಕಳ ಕಣ್ಣಿನ ಸಮಸ್ಯೆ ಹೆಚ್ಚಳ: ದಿನನಿತ್ಯದ ಕಣ್ಣಿನ ತಪಾಸಣೆಯಲ್ಲಿ ಶೇ. 30ರಷ್ಟು ಮಕ್ಕಳು!

ಕಾರ್ಮಿಕ ನಾಯಕ ಸದಾಶಿವ ದಾಸ್ ಮಾತನಾಡಿ, ಮುಚ್ಚೂರು ಮತ್ತು ಕೊಂಪದವು ಪ್ರದೇಶಗಳಲ್ಲಿ ಶ್ರಮಿಕ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉದ್ಯೋಗಕ್ಕಾಗಿ ಮಂಗಳೂರಿಗೆ ತೆರಳುವ ಕಾರ್ಮಿಕರು ಹಾಗೂ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್‌ಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಖಾಸಗಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸದಿರುವುದು ಮತ್ತು ಬಸ್‌ಗಳ ಸಂಖ್ಯೆ ಸಾಲದಿರುವುದರಿಂದ ಜನರು ತಮ್ಮ ದೈನಂದಿನ ಕೆಲಸಗಳನ್ನು ನಿಗದಿತ ಸಮಯಕ್ಕೆ ತಲುಪಲು ಪರದಾಡುವಂತಾಗಿದೆ. ಗ್ರಾಮಸ್ಥರ ಸಾರಿಗೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಬಿಸಿಯೂಟ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಭವ್ಯ ಮುಚ್ಚೂರು ಮಾತನಾಡಿ, ಖಾಸಗಿ ಬಸ್‌ಗಳಲ್ಲಿ ಮಂಗಳೂರು ತಲುಪಲು ಕನಿಷ್ಠ ಒಂದೂವರೆ ಗಂಟೆ ಬೇಕಾಗುತ್ತದೆ. ಬೆಳಗಿನ ಸಮಯದಲ್ಲಿ ಬಸ್‌ಗಳಲ್ಲಿ ವಿಪರೀತ ಜನಸಂದಣಿ ಇರುವುದರಿಂದ ಪ್ರಯಾಣಿಸುವುದೇ ಕಷ್ಟವಾಗಿದೆ ಎಂದು ತಿಳಿಸಿದರು. ಕೆಲವು ಸಂದರ್ಭಗಳಲ್ಲಿ ಖಾಸಗಿ ಬಸ್‌ಗಳ ಟ್ರಿಪ್‌ಗಳನ್ನು ಏಕಾಏಕಿ ಕಡಿತಗೊಳಿಸುವುದರಿಂದ ಪ್ರಯಾಣಿಕರು ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರಿ ಬಸ್‌ ಸೇವೆ ಇಲ್ಲದ ಕಾರಣ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಲಭ್ಯವಿರುವ ಉಚಿತ ಪ್ರಯಾಣದ ಸೌಲಭ್ಯದಿಂದಲೂ ವಂಚಿತರಾಗುತ್ತಿದ್ದಾರೆ ಎಂದು ಅವರು ಗಮನ ಸೆಳೆದರು.

ಗ್ರಾಮೀಣ ಪ್ರದೇಶಗಳ ಜನರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಪ್ರಯಾಣದ ಸಮಸ್ಯೆ ನಿವಾರಿಸುವುದು ಹಾಗೂ ಮಹಿಳೆಯರು ಸೇರಿದಂತೆ ಎಲ್ಲ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ಕಾರಿ ಬಸ್‌ ಸೇವೆ ಆರಂಭಿಸುವುದು ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಹೋರಾಟ ಸಮಿತಿಯ ಪ್ರಮುಖರಾದ ಹರೀಶ್ಚಂದ್ರ ಗೌಡ ಕೊಂಪದವು, ಬಾಬು ಗೌಡ, ರವೀಂದ್ರ ಶೆಟ್ಟಿಗಾರ್ ಮುಚ್ಚೂರು, ರಾಮಣ್ಣ ಶೆಟ್ಟಿಗಾರ್ ಕೊಂಪದವು, ವೇದಾವತಿ ಮುಚ್ಚೂರು, ಹೇಮಲತಾ, ಆನಂದ ದೇವಾಡಿಗ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹೋರಾಟ ಸಮಿತಿಯ ಸಂಚಾಲಕ ನೋಣಯ್ಯ ಗೌಡ ಸ್ವಾಗತಿಸಿದರು. ಪ್ರದೇಶ ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಮುಚ್ಚೂರು, ಕೊಂಪದವು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸರ್ಕಾರಿ ಬಸ್‌ ಸೇವೆ ಆರಂಭಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿರುವುದಾಗಿ ಹೋರಾಟ ಸಮಿತಿ ತಿಳಿಸಿದೆ. ಅಧಿಕಾರಿಗಳು ಮನವಿಗೆ ಸ್ಪಂದಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಇದನ್ನೂ ನೋಡಿ : ಪುಸ್ತಕ ಕಂಡರೆ ಭಯವೇ? ಬಂಗಾಳದಲ್ಲಿ ಬಿಜೆಪಿಯ ದ್ವೇಷ ರಾಜಕಾರಣ! Janashakthi Media

Donate Janashakthi Media

Leave a Reply

Your email address will not be published. Required fields are marked *