ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಹೊಸದಾಗಿ ಒಂಬತ್ತು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ವರದಿಯನ್ನು ಒಂದು ವಾರದೊಳಗೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸದಾಗಿ ಬರಪೀಡಿತ ಎಂದು ಗುರುತಿಸಿರುವ ಒಂಬತ್ತು ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ಪೂರ್ಣಗೊಂಡಿದೆ ಎಂದು ಹೇಳಿದರು. ಉಳಿದ ಕೆಲವು ತಾಲೂಕುಗಳಲ್ಲಿ ಬರ ಘೋಷಣೆಗೆ ಸಂಬಂಧಿಸಿದ ಮೊದಲ ಹಂತದ ಮಾನದಂಡಗಳ ಪರಿಶೀಲನೆ ನಡೆಯುತ್ತಿದೆ. ಅವು ಅರ್ಹತೆ ಪಡೆದರೆ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದರು.
ಕೇಂದ್ರದಿಂದ ಹೆಚ್ಚಿನ ಪರಿಹಾರಕ್ಕೆ ಮನವಿ
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟದ ಅಂದಾಜು ಅಂತಿಮ ವರದಿ ಸಿದ್ಧವಾದ ಬಳಿಕ ಸ್ಪಷ್ಟವಾಗಲಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್ಡಿಆರ್ಎಫ್) ಮಾರ್ಗಸೂಚಿಗಳ ಪ್ರಕಾರ ಪರಿಹಾರದ ಮೊತ್ತವನ್ನು ನಿರ್ಧರಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಕಳೆದ ವರ್ಷ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಸುಮಾರು 18,000 ಕೋಟಿ ರೂಪಾಯಿ ಕೋರಲಾಗಿತ್ತು. ಈ ಬಾರಿ ರಾಜ್ಯದ ಬಹುತೇಕ ಭಾಗಗಳಲ್ಲಿ ನಷ್ಟ ಸಂಭವಿಸಿದ್ದು, ಈಗಾಗಲೇ 226 ತಾಲೂಕುಗಳು ಬರಪೀಡಿತವಾಗಿವೆ. ಇನ್ನಷ್ಟು ತಾಲೂಕುಗಳು ಅರ್ಹತೆ ಪಡೆದರೆ ನಷ್ಟದ ಪ್ರಮಾಣ ಹೆಚ್ಚಾಗಬಹುದು. ಹೀಗಾಗಿ ಈ ಬಾರಿ ಕೇಂದ್ರದಿಂದ ಹೆಚ್ಚಿನ ಪರಿಹಾರ ಕೋರಬೇಕಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಎನ್ಡಿಆರ್ಎಫ್ ಮಾರ್ಗಸೂಚಿಗಳನ್ನು ಸಡಿಲಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈ ಕುರಿತು ತಾವು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದೇವೆ. ಕೇಂದ್ರ ಕೃಷಿ ಸಚಿವರಿಂದ ಪತ್ರ ಬಂದಿದ್ದು, ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ಕೇಂದ್ರದಿಂದ ಬೇರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಅಂತಿಮ ವರದಿ ಸಿದ್ಧವಾದ ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಇತರರನ್ನು ಒಳಗೊಂಡ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೋರಲಿದೆ. ಈ ಭೇಟಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಕಬ್ಬು ಬೆಳೆಗಾರರ ಹೋರಾಟ ತೀವ್ರ: ಅಹೋರಾತ್ರಿ ಧರಣಿ, ರಾಷ್ಟ್ರೀಯ ಹೆದ್ದಾರಿಗಳು ಸ್ತಬ್ಧ
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ 14-10-2026ರ ಅಧಿಕೃತ ಆದೇಶದ ಅನುಬಂಧದ ಪ್ರಕಾರ, ಬರಪೀಡಿತ ಎಂದು ಘೋಷಿಸಲಾದ 9 ತಾಲ್ಲೂಕುಗಳ ಪಟ್ಟಿ ಇಲ್ಲಿದೆ.
|
ಕ್ರಮ ಸಂಖ್ಯೆ |
ಜಿಲ್ಲೆ |
ಬರಪೀಡಿತ ತಾಲ್ಲೂಕು |
ಬರದ ವರ್ಗ |
|---|---|---|---|
|
1 |
ಬೆಳಗಾವಿ |
ಖಾನಾಪುರ |
ಸಾಧಾರಣ |
|
2 |
ಶಿವಮೊಗ್ಗ |
ಹೊಸನಗರ |
ಸಾಧಾರಣ |
|
3 |
ಶಿವಮೊಗ್ಗ |
ಸಾಗರ |
ಸಾಧಾರಣ |
|
4 |
ಹಾಸನ |
ಸಕಲೇಶಪುರ |
ತೀವ್ರ |
|
5 |
ದಕ್ಷಿಣ ಕನ್ನಡ |
ಪುತ್ತೂರು |
ಸಾಧಾರಣ |
|
6 |
ದಕ್ಷಿಣ ಕನ್ನಡ |
ಮೂಡುಬಿದಿರೆ |
ಸಾಧಾರಣ |
|
7 |
ದಕ್ಷಿಣ ಕನ್ನಡ |
ಮುಲ್ಕಿ |
ಸಾಧಾರಣ |
|
8 |
ಉತ್ತರ ಕನ್ನಡ |
ಸೂಪಾ (ಜೋಯಿಡಾ) |
ಸಾಧಾರಣ |
|
9 |
ಉತ್ತರ ಕನ್ನಡ |
ದಾಂಡೇಲಿ |
ಸಾಧಾರಣ |
ಎಸ್ಸಿ-ಎಸ್ಟಿ ಮೀಸಲಾತಿ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿಚಾರವೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಪರಮೇಶ್ವರ್ ಹೇಳಿದರು.
ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಮೀಸಲಾತಿ ಕಾನೂನನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೇ ಎಂಬುದರ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಚಿವ ಸಂಪುಟದ ನಿರ್ಧಾರದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ನೋಡಿ : SIR ಅಕ್ರಮ: ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಕೊಳೋದ್ಯಾಕೆ? Janashakthi Media
