ನವದೆಹಲಿ: ಎಸ್ಐಆರ್ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ದೆಹಲಿಯಲ್ಲಿ ಮೆಟ್ರೊ ಮತ್ತು ರೈಲು ಸೇವೆಗಳಿಗೆ ನಿರ್ಬಂಧ ವಿಧಿಸುವ ಮೂಲಕ ಸುಪ್ರೀಂ ಕೋರ್ಟ್ನ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಅರ್ಜಿಯಲ್ಲಿ ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಯ ಪ್ರಕರಣ ಕಂಡುಬಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಮತ್ತು ದೆಹಲಿ ಮೆಟ್ರೊ ರೈಲು ನಿಗಮದ ಅಧ್ಯಕ್ಷೆ ಡಿ. ಥಾರಾ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ದೆಹಲಿ
ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ಭಾನುವಾರ ಅರ್ಜಿಯ ವಿಚಾರಣೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳು ಅಕ್ಟೋಬರ್ 13ರೊಳಗೆ ಉತ್ತರ ಮತ್ತು ನ್ಯಾಯಾಲಯದ ಹಿಂದಿನ ಆದೇಶ ಪಾಲನೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಸದ್ಯಕ್ಕೆ ಅಧಿಕಾರಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂಬ ಆರೋಪ
ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ, ದೆಹಲಿ ಮೆಟ್ರೊ, ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರವು ನ್ಯಾಯಾಲಯದ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿವೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂಬುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 9ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ, ಪ್ರತಿಭಟನೆಯ ಕಾರಣಕ್ಕೆ ಅಕ್ಟೋಬರ್ 10ರಂದು ದೆಹಲಿಗೆ ಬರುವ ಮೆಟ್ರೊ ಮತ್ತು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಬಾರದು ಎಂದು ಸೂಚಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅವಕಾಶವಿದ್ದರೂ, ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ನ್ಯಾಯಾಲಯ ಹೇಳಿತ್ತು.
ಆದರೆ, ನ್ಯಾಯಾಲಯದ ಆದೇಶ ಮತ್ತು ಅಧಿಕಾರಿಗಳು ನೀಡಿದ್ದ ಭರವಸೆಗಳ ಹೊರತಾಗಿಯೂ ಸಾರಿಗೆ ಮಾರ್ಗಗಳಲ್ಲಿ ವ್ಯಾಪಕ ನಿರ್ಬಂಧಗಳನ್ನು ಮುಂದುವರಿಸಲಾಗಿದೆ, ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಹಾಗೂ ಸಂಚಾರ ವ್ಯವಸ್ಥೆಯ ಕುರಿತು ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ದೆಹಲಿ
ಇದನ್ನೂ ಓದಿ :ಎಸ್ಐಆರ್ ವಿರೋಧಿ ಹೋರಾಟಕ್ಕೆ ಪೊಲೀಸರ ತಡೆ: ಫ್ರೀಡಂ ಪಾರ್ಕ್ನಲ್ಲೇ ವಿದ್ಯಾರ್ಥಿಗಳ ಬಂಧನ
45 ಮೆಟ್ರೊ ನಿಲ್ದಾಣಗಳ ಪ್ರವೇಶ ದ್ವಾರ ಬಂದ್
ದೆಹಲಿ ಮೆಟ್ರೊದ ಪ್ರಕಟಣೆಯ ಪ್ರಕಾರ, ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಅಕ್ಟೋಬರ್ 9ರ ರಾತ್ರಿ 9 ಗಂಟೆಯಿಂದ ಅಕ್ಟೋಬರ್ 10ರ ಸಂಜೆ 6 ಗಂಟೆಯವರೆಗೆ 45 ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿತ್ತು. ಇದರಿಂದ ನ್ಯಾಯಾಲಯದ ನಿರ್ದೇಶನ ಪಾಲನೆಯಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಎಸ್ಐಆರ್ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಪ್ರತಿಭಟನೆಯನ್ನು ತಡೆಯುವ ಉದ್ದೇಶದಿಂದ ಸಾರಿಗೆ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.
ಇದನ್ನೂ ನೋಡಿ : SIR ಹೋರಾಟ | ಪ್ರಜಾಪ್ರಭುತ್ವಕ್ಕೆ ಬೀಗ ಹಾಕಿದ ಕೇಂದ್ರ! ತಡೆಗೋಡೆ ಭೇದಿಸಿ ಬೀದಿಗಿಳಿದ Gen Z
