ನವದೆಹಲಿ : ದೆಹಲಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 10ರಂದು ನಡೆಯಲಿರುವ ಪ್ರತಿಭಟನೆಗೆ ಮುನ್ನ, ಕೇಂದ್ರ ದೆಹಲಿಯ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ 24 ಗಂಟೆಗಳ ಕಾಲ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಅಕ್ಟೋಬರ್ 9ರ ರಾತ್ರಿ 10 ಗಂಟೆಯಿಂದ ಅಕ್ಟೋಬರ್ 10ರ ರಾತ್ರಿ 10 ಗಂಟೆಯವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಮೂಲಗಳು ತಿಳಿಸಿವೆ.
ಜನಪಥ್–ಕರ್ತವ್ಯ ಪಥ್ ಜಂಕ್ಷನ್‌ನಿಂದ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ನಿರ್ಬಂಧ ಅನ್ವಯವಾಗಲಿದೆ. ದೆಹಲಿ ಉಪ ಪೊಲೀಸ್ ಆಯುಕ್ತರ ಕಚೇರಿ ಹೊರಡಿಸಿರುವ ಆದೇಶದಂತೆ, ಜಿಯೋ, ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಎಂಟಿಎನ್‌ಎಲ್ ಸೇರಿದಂತೆ ದೂರಸಂಪರ್ಕ ಸೇವಾ ಸಂಸ್ಥೆಗಳಿಗೆ ಮೊಬೈಲ್ ಇಂಟರ್‌ನೆಟ್ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಈ ಕ್ರಮಕ್ಕೆ ಕೇಂದ್ರ ಗೃಹ ಕಾರ್ಯದರ್ಶಿಯ ಅನುಮೋದನೆ ದೊರೆತಿದೆ ಎಂದು ತಿಳಿದು ಬಂದಿದೆ.
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) SFI, AISF, AISA ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪಗಳ ಕುರಿತು ಈ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿರುವುದರ ನಡುವೆಯೂ ಆಯೋಜಕರು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಯ ನೆಪದಲ್ಲಿ ಸಂಚಾರ ಮತ್ತು ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೂ ನಿರ್ಬಂಧಗಳನ್ನು ಪ್ರಕಟಿಸಲಾಗಿದೆ. ಸುಮಾರು 57 ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವ ಪ್ರಸ್ತಾವನೆಯೂ ಪ್ರಕಟವಾಗಿದ್ದು, ಈ ನಿರ್ಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಪ್ರತಿಭಟನೆಯ ವರದಿಗಾರಿಕೆಗೂ ಅಡ್ಡಿ?
ಇಂಟರ್‌ನೆಟ್ ಸ್ಥಗಿತದಿಂದ ಪ್ರತಿಭಟನಾಕಾರರು ಸ್ಥಳದಿಂದಲೇ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಮತ್ತು ನೇರ ಪ್ರಸಾರ ಮಾಡುವುದು ತೊಂದರೆಗೊಳಗಾಗಬಹುದು. ಪ್ರತಿಭಟನೆಗೆ ಸಂಬಂಧಿಸಿದ ವರದಿಗಳ ತ್ವರಿತ ಪ್ರಸಾರಕ್ಕೂ ಅಡ್ಡಿಯಾಗುವ ಸಾಧ್ಯತೆಯಿದೆ. ಈ ಹಿಂದೆ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿಯೂ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಸರಕಾರದ ಈ ಕ್ರಮಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ.
