ಕವಿವಿ ಬಿಸಿಎಂ ಹಾಸ್ಟೆಲ್‌ ಸ್ಥಳಾಂತರ ಆದೇಶ ಹಿಂಪಡೆಯಿರಿ: ಎಸ್‌ಎಫ್‌ಐ ಆಗ್ರಹ

ಹೊಸಪೇಟೆ: ಹಂಪಿಯ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳನ್ನು ಹೊಸಪೇಟೆಗೆ ಸ್ಥಳಾಂತರಿಸುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ವಿಜಯನಗರ ಜಿಲ್ಲಾ ಸಮಿತಿ ಆಗ್ರಹಿಸಿದೆ. ಕವಿವಿ

ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ 2011–12ನೇ ಸಾಲಿನಲ್ಲಿ ವಿಶೇಷ ಅಧಿನಿಯಮದಡಿ ಈ ವಸತಿ ನಿಲಯಗಳನ್ನು ಆರಂಭಿಸಲಾಗಿತ್ತು. ಆರಂಭದಲ್ಲಿ 24 ಪುರುಷ ಹಾಗೂ 18 ಮಹಿಳಾ ಸಂಶೋಧನಾರ್ಥಿಗಳು ಇಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯಾಬಲ ಕಡಿಮೆಯಾಗಿದೆ ಹಾಗೂ ವಸತಿ ನಿಲಯವನ್ನು ಸಂಶೋಧನೆಗಾಗಿ ಬಳಸಲಾಗುತ್ತಿಲ್ಲ ಎಂಬ ಕೆಲವು ಅಧಿಕಾರಿಗಳ ವರದಿಯ ಹಿನ್ನೆಲೆಯಲ್ಲಿ 2016ರ ಜೂನ್‌ 24ರಂದು ವಸತಿ ನಿಲಯ ಮುಚ್ಚಲು ಆದೇಶ ಹೊರಡಿಸಲಾಗಿತ್ತು ಎಂದು ಎಸ್‌ಎಫ್‌ಐ ತಿಳಿಸಿದೆ.

ಕನ್ನಡ ವಿಶ್ವವಿದ್ಯಾಲಯದ ವಸತಿ ನಿಲಯವನ್ನು ಬಿಸಿಎಂ ಇಲಾಖೆ ಹಲವು ವರ್ಷಗಳಿಂದ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿರುವುದನ್ನೇ ಸಮಸ್ಯೆಯಾಗಿ ಪರಿಗಣಿಸಿರುವ ಅಧಿಕಾರಿಗಳ ಧೋರಣೆ ಖಂಡನೀಯ ಎಂದು ಎಸ್‌ಎಫ್‌ಐ ಆರೋಪಿಸಿದೆ. ಕವಿವಿ

ಇದೀಗ ಸರ್ಕಾರದ ಹಿಂವಕ 495 ಬಿಎಂಎಸ್ 2026ನೇ ಆದೇಶದ ಮೂಲಕ ವಸತಿ ನಿಲಯವನ್ನು ಹೊಸಪೇಟೆ ನಗರಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ. ಈ ಆದೇಶ ವಸತಿ ನಿಲಯವನ್ನು ಮುಚ್ಚುವ ಉದ್ದೇಶ ಹೊಂದಿದ್ದು, ವಸತಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಸರ್ಕಾರದ ಆಶಯಕ್ಕೂ ವಿರುದ್ಧವಾಗಿದೆ ಎಂದು ಎಸ್‌ಎಫ್‌ಐ ಆಕ್ಷೇಪಿಸಿದೆ. ಕವಿವಿ

ಇದನ್ನೂ ಓದಿ : ಬಿಡದಿ ರೈತರ ಹೋರಾಟ: 50ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ, ದೌರ್ಜನ್ಯ ಆರೋಪ

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಸತಿ ನಿಲಯವನ್ನು ಮುಂದುವರಿಸಬೇಕು. ಕೇವಲ ವಿದ್ಯಾರ್ಥಿಗಳ ಸಂಖ್ಯಾಬಲದ ಮಾಹಿತಿಯನ್ನು ಆಧರಿಸಿ ವಸತಿ ನಿಲಯವನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಸಂಘಟನೆ ಹೇಳಿದೆ.

ವಸತಿ ನಿಲಯ ಮುಚ್ಚುವ ಅಥವಾ ಸ್ಥಳಾಂತರಿಸುವ ಕುರಿತು ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ ಇಲಾಖೆ ಆಡಳಿತ ನಿರ್ಧಾರ ಕೈಗೊಂಡಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ. ಸೆಪ್ಟೆಂಬರ್‌ 25ರಂದು ಎಸ್‌ಎಫ್‌ಐ ನೇತೃತ್ವದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿಯಾದ ಸಂದರ್ಭದಲ್ಲಿ ಉಪನಿರ್ದೇಶಕರು ಈ ಆದೇಶದ ಕುರಿತು ಮಾಹಿತಿ ನೀಡಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಅಲ್ಲದೆ, ವಸತಿ ನಿಲಯಕ್ಕಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಅರ್ಜಿ ವ್ಯವಸ್ಥೆಯಲ್ಲಿ ವಸತಿ ನಿಲಯದ ಹೆಸರನ್ನು ನಿರ್ಬಂಧಿಸಲಾಗಿತ್ತು. ಬಳಿಕ ಸೆಪ್ಟೆಂಬರ್‌ 24ರಂದು ಮತ್ತೆ ಆನ್‌ಲೈನ್‌ ಅರ್ಜಿ ವ್ಯವಸ್ಥೆಯನ್ನು ತೆರೆಯಲಾಗಿದೆ. ಈ ಬೆಳವಣಿಗೆಗಳು ಇಲಾಖೆಯು ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದನ್ನು ತೋರಿಸುತ್ತವೆ ಎಂದು ಎಸ್‌ಎಫ್‌ಐ ಆರೋಪಿಸಿದೆ.

ವಸತಿ ನಿಲಯ ಸ್ಥಳಾಂತರದ ಆದೇಶಕ್ಕೆ ಬಿಸಿಎಂ ಇಲಾಖೆಯ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರ ಒತ್ತಾಸೆಯಿದೆ ಎಂದು ಎಸ್‌ಎಫ್‌ಐ ಆರೋಪಿಸಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಪ್ರಸ್ತುತ ಬಿಸಿಎಂ ವಸತಿ ನಿಲಯಗಳಲ್ಲಿ 60ಕ್ಕೂ ಹೆಚ್ಚು ಬಾಲಕಿಯರು ಹಾಗೂ 80ಕ್ಕೂ ಹೆಚ್ಚು ಬಾಲಕರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಹಾಗೂ ಶಾಸಕರು ಕೂಡಲೇ ಮಧ್ಯಪ್ರವೇಶಿಸಿ ವಸತಿ ನಿಲಯವನ್ನು ಕನ್ನಡ ವಿಶ್ವವಿದ್ಯಾಲಯದ ಹಂಪಿ ಆವರಣದಲ್ಲೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ.

ಸರ್ಕಾರ ಕೂಡಲೇ ಆದೇಶ ಹಿಂಪಡೆಯದಿದ್ದರೆ ವಿದ್ಯಾರ್ಥಿಗಳನ್ನು ಸಂಘಟಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಸ್‌ಎಫ್‌ಐ ವಿಜಯನಗರ ಜಿಲ್ಲಾ ಸಮಿತಿ ಎಚ್ಚರಿಸಿದೆ. ಈ ಕುರಿತು ಎಸ್‌ಎಫ್‌ಐ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಹೇಳಿಕೆ ನೀಡಿದ್ದಾರೆ. ಕವಿವಿ

ಇದನ್ನೂ ನೋಡಿ : ಮತದಾರರ ಹಕ್ಕಿಗಾಗಿ ಹೋರಾಟ: SIR ವಿರುದ್ಧ ಪ್ರತಿರೋಧ ಪ್ರವಾಸ! Janashakthi Media

Donate Janashakthi Media

Leave a Reply

Your email address will not be published. Required fields are marked *