ಬೆಂಗಳೂರು: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಡಕವಾಗಿರುವ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ವಸ್ತುಸ್ಥಿತಿಯನ್ನು ಹತ್ತಿರದಿಂದ ಅರಿಯಲು ಮತ್ತು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆ.22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ವತಿಯಿಂದ ‘ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ವನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಈ ಕುರಿತು ಒಕ್ಕೂಟದ ಪದಾಧಿಕಾರಿಗಳಾದ ಜೆ.ಎಂ. ವೀರಸಂಗಯ್ಯ, ಬಿ.ಟಿ. ಲಲಿತಾ ನಾಯಕ್, ಕೆ.ಎಲ್. ಅಶೋಕ್, ಮುಹಮ್ಮದ್ ಯೂಸುಫ್ ಕನ್ನಿ, ಕೆ. ಮಹಂತೇಶ್, ತಾಹೇರ್ ಹುಸೇನ್, ಸೀತಾರಾಂ ಗುಂಡಪ್ಪ, ಕೆ.ಎಚ್. ಅಬ್ದುಲ್ ಮಜೀದ್ ಅವರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಪ್ರವಾಸದಲ್ಲಿ ಚಿತ್ರನಟ ಪ್ರಕಾಶ್ ರಾಜ್ ಸೇರಿದಂತೆ ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ನಿರೀಕ್ಷೆಗೂ ಮೀರಿದ ಅನಾಹುತವನ್ನು ಕರ್ನಾಟಕದಲ್ಲಿ ಈಗಾಗಲೇ ಮಾಡಿದೆ. ಮತದಾರರ ಪಟ್ಟಿಯಿಂದ 1.08 ಕೋಟಿ ಮತದಾರರನ್ನು ತೆಗೆದುಹಾಕಿರುವುದಲ್ಲದೆ, 43.81 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರೆಂದು ವಿಚಾರಣೆ ನಡೆಸುತ್ತಿದೆ. ನಾಗರಿಕ ಸಂಘಟನೆಗಳ ಒತ್ತಡಕ್ಕೆ ಮಣಿದು ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದರೂ, ಇಡೀ ಪ್ರಕ್ರಿಯೆ ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿರುವುದರಿಂದ ದೊಡ್ಡಮಟ್ಟದಲ್ಲಿ ಅರ್ಹ ಮತದಾರರ ಪ್ರಜಾತಾಂತ್ರಿಕ ಹಕ್ಕನ್ನು ಕಸಿಯುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಸ್‌ಐಆರ್
ಇದನ್ನೂ ಓದಿ : ಎಸ್‌ಐಆರ್: 84 ಲಕ್ಷ ಮತದಾರರಲ್ಲಿ ಕೇವಲ ಶೇ.2ರಷ್ಟು ಮಂದಿ ಮರು ಸೇರ್ಪಡೆಗೆ ಅರ್ಜಿ
ಈ ಅನಾಹುತದ ಆಳ ಮತ್ತು ಅಗಲವನ್ನು ಖಚಿತವಾಗಿ ತುಲನೆ ಮಾಡುವ ಉದ್ದೇಶದಿಂದ ರಾಜ್ಯವ್ಯಾಪಿಯಾಗಿ ಆಯ್ದ 100 ಬೂತ್‌ಗಳಲ್ಲಿ ಮತ ಪರಿಶೋಧನಾ ಕಾರ್ಯವನ್ನು ‘ನಾಗರಿಕ ಮತಕಾವಲು ಸಮಿತಿ’ಗಳ ಹೆಸರಿನಲ್ಲಿ ನಡೆಸಲಾಗುತ್ತಿದೆ. ಈ ಕೆಲಸಕ್ಕೆ ಪುಷ್ಟಿ ನೀಡಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ವಸ್ತುಸ್ಥಿತಿಯನ್ನು ಹತ್ತಿರದಿಂದ ಅರಿಯಲು ಸೆ.22ರಿಂದ ರಾಜ್ಯವ್ಯಾಪಿಯಾಗಿ ‘ಅಧ್ಯಯನ ಹಾಗೂ ಪ್ರತಿರೋಧ ಪ್ರವಾಸ’ವನ್ನು ನಾಗರಿಕ ಸಂಘಟನೆಗಳು ಹಮ್ಮಿಕೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ‘ಪ್ರತಿರೋಧ ಪ್ರವಾಸ’ ಸೆ.22ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಿಂದ ಪ್ರಾರಂಭವಾಗಿ ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿನ ಅನೇಕ ಸ್ಥಳಗಳಿಗೆ ಭೇಟಿ ನೀಡಲಿದೆ. ಈ ಪ್ರವಾಸದಲ್ಲಿ ಗಮನಿಸಿದ ಸಂಗತಿಗಳು ಮತ್ತು ನೂರು ಮತಗಟ್ಟೆಗಳಲ್ಲಿ ನಡೆಸಿದ ಪರಿಶೋಧನೆಯನ್ನು ಆಧರಿಸಿ ಸೆ.30ರಂದು ಸಮಾಜದ ಮುಂದೆ ‘ನಾಗರಿಕ ವರದಿ’ಯನ್ನು ಮುಂದಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಅದೇ ದಿನ ಸರ್ಕಾರಕ್ಕೂ ನಾಗರಿಕ ವರದಿಯನ್ನು ಸಲ್ಲಿಸಲಾಗುತ್ತದೆ. ರಾಜ್ಯದ ಮತದಾರರ ಮೂಲಭೂತ ಹಕ್ಕನ್ನು ರಕ್ಷಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ‘ನಾಗರಿಕ ಒತ್ತಾಯ’ವನ್ನು ಮುಂದಿಡಲಾಗುತ್ತದೆ. ಈ ಅಭಿಯಾನದಲ್ಲಿ ಎಲ್ಲ ಪ್ರಜ್ಞಾವಂತ ನಾಗರಿಕರು ತೊಡಗಿಸಿಕೊಳ್ಳಬೇಕು. ಜೊತೆಗೂಡಲು ಬಯಸುವವರು ಮೊಬೈಲ್ ಸಂಖ್ಯೆ 96060 87560ಕ್ಕೆ ಕರೆ ಮಾಡಬಹುದು ಎಂದು ಹೋರಾಟಗಾರರು ಹೇಳಿದ್ದಾರೆ.
ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್? ಮತದಾನದ ಹಕ್ಕಿಗೇ ಕತ್ತರಿ! | Janashakthi Media
