ಸಿಐಟಿಯು ನೇತೃತ್ವದ ನಿಯೋಗದೊಂದಿಗೆ ಒಂದು ಗಂಟೆ ಚರ್ಚೆ; ಹಲವು ಬೇಡಿಕೆಗಳ ಜಾರಿಗೆ ಭರವಸೆ
ಬಸವಕಲ್ಯಾಣ: ಗ್ರಾಮ ಪಂಚಾಯಿತಿ ನೌಕರರ ಬಹುದಿನಗಳ ಬೇಡಿಕೆಗಳ ಕುರಿತು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ರಾಜ್ಯ ಪದಾಧಿಕಾರಿಗಳು ಹಾಗೂ ಬೀದರ್ ಜಿಲ್ಲೆಯ ನೌಕರರ ನಿಯೋಗವು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರನ್ನು ಸೆಪ್ಟೆಂಬರ್ 16ರಂದು ರಾತ್ರಿ ಬಸವಕಲ್ಯಾಣದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು. ಸುಮಾರು ಒಂದು ಗಂಟೆ ನಡೆದ ಸಭೆಯಲ್ಲಿ ನೌಕರರ ವೇತನ, ಸೇವಾ ಹಿರಿತನ, ಸ್ವಚ್ಛ ವಾಹಿನಿ ಸಿಬ್ಬಂದಿ, ಗಣಕಯಂತ್ರ ನಿರ್ವಾಹಕರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಬೇಡಿಕೆಗಳ ಕುರಿತು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಸಂಘ ತಿಳಿಸಿದೆ. ಗ್ರಾಮ
ಹೊಸ ಕನಿಷ್ಠ ವೇತನ ಜಾರಿಗೆ ಸರ್ಕಾರ ತಡೆ ನೀಡಿರುವುದನ್ನು ಕೈಬಿಟ್ಟು, ಗ್ರಾಮ ಪಂಚಾಯಿತಿಗಳ ವಸೂಲಾತಿಯಲ್ಲಿ ಶೇ.40ರಷ್ಟು ಹಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅದರ ಆಧಾರದ ಮೇಲೆ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಲು ಸರ್ಕಾರದ ಆದೇಶ ಹೊರಡಿಸಬೇಕು ಎಂದು ನಿಯೋಗ ಮನವಿ ಮಾಡಿತು. ಈ ಬೇಡಿಕೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಸೇವಾ ಹಿರಿತನದ ಆಧಾರದ ಮೇಲೆ ನೌಕರರಿಗೆ ಇನ್ಕ್ರಿಮೆಂಟ್ ನೀಡುವ ವ್ಯವಸ್ಥೆಯನ್ನು ಈ ಹಿಂದೆ ನಿಗದಿಪಡಿಸಿದ ಮಾನದಂಡದಂತೆ ಜಾರಿಗೆ ತರಬೇಕು. ಇದಕ್ಕಾಗಿ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು. ಈ ಬೇಡಿಕೆಯನ್ನೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಗ್ರಾಮ
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ವಾಹಿನಿ ಚಾಲಕರು ಮತ್ತು ಸಹಾಯಕಿಯರಿಗೆ ಕಡ್ಡಾಯವಾಗಿ ಕೆಲಸ ಒದಗಿಸುವುದು ಹಾಗೂ ಪ್ರತಿ ತಿಂಗಳು ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು. ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿದ್ದು, ಸಿಬ್ಬಂದಿಯ ಕೆಲಸ ಮತ್ತು ವೇತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.
ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಎರಡನೇ ಗಣಕಯಂತ್ರ ನಿರ್ವಾಹಕರ ಹುದ್ದೆಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಸಚಿವರ ಮುಂದಿಡಲಾಯಿತು. ಈ ಬೇಡಿಕೆಗೆ ಸಚಿವರು ಒಪ್ಪಿಗೆ ಸೂಚಿಸಿದ್ದು, ಅಗತ್ಯ ನೇಮಕಾತಿ ಪ್ರಕ್ರಿಯೆಗೆ ಮುಂದಾಗುವ ಭರವಸೆ ನೀಡಿದ್ದಾರೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ : ತ್ಯಾಜ್ಯ ನಿರ್ವಹಣೆ ಉಲ್ಲಂಘನೆ: PVR, ಫೋರಂ ಮಾಲ್ ಸಿಬ್ಬಂದಿಗೆ ₹1.25 ಲಕ್ಷ ದಂಡ
ಗ್ರಾಮ ಪಂಚಾಯಿತಿ ನೌಕರರಿಗೆ ₹5 ಲಕ್ಷ ಇಡಿಗಂಟು ಜಾರಿಗೊಳಿಸುವಂತೆ ಸಲ್ಲಿಸಲಾದ ಬೇಡಿಕೆಯ ಬಗ್ಗೆಯೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ವೇಳೆ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಎಸ್ಡಿಎ ಹುದ್ದೆಗಳನ್ನು ಮಂಜೂರು ಮಾಡುವ ಸಂಬಂಧ ಆರ್ಥಿಕ ಇಲಾಖೆಯಲ್ಲಿ ಇರುವ ಕಡತಕ್ಕೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಸಂಘ ತಿಳಿಸಿದೆ.
ಸಭೆಯ ವೇಳೆ ಗ್ರಾಮ ಪಂಚಾಯಿತಿ ನೌಕರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಯಿತು. ಇಲಾಖೆಯ ಅಧಿಕಾರಿಗಳು ಹಾಗೂ ಸಂಘದ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಿ ಬೇಡಿಕೆಗಳ ಜಾರಿಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.
ನಿಯೋಗದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಂ.ಬಿ. ನಾಡಗೌಡ, ಪ್ರಧಾನ ಕಾರ್ಯದರ್ಶಿ ಗೈಬುಜೈನೆಖಾನ್, ಖಜಾಂಚಿ ಮಲ್ಲಿಕಾರ್ಜುನ, ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಬಸವರಾಜ, ಶೋಭಾ, ಕಾರ್ಯದರ್ಶಿಗಳಾದ ಬಸವರಾಜ ದೊರೆ, ಲಾಲ್ ಅಹಮದ್, ರೇಣುಕಾ ಪ್ರಸಾದ್, ಶ್ರೀನಿವಾಸ ಸೇರಿದಂತೆ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು. ಕಲಬುರಗಿ ಜಿಲ್ಲೆಯ ಸ್ವಚ್ಛ ವಾಹಿನಿ ಸಿಬ್ಬಂದಿ, ಬೀದರ್ ಜಿಲ್ಲೆಯ ಕರವಸೂಲಿಗಾರರು, ಗಣಕಯಂತ್ರ ನಿರ್ವಾಹಕರು, ನಿರ್ವಹಣಾ ಸಿಬ್ಬಂದಿ ಹಾಗೂ ಜಿಲ್ಲೆಯ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.ಗ್ರಾಮ
ಇದನ್ನೂ ನೋಡಿ : ಹೈ.ಕ. ವಿಲೀನ ದಿನ | ಜಗತ್ತಿಗೆ ಭತ್ತ, ತೊಗರಿ, ಚಿನ್ನ ಕೊಟ್ಟ ಪ್ರದೇಶಕ್ಕೆ ಸಿಕ್ಕಿದ್ದು ಕಹಿಯೇ? Janashakthi Media
