ಬಂಟರಿಂದ ಪೇಚು, ನ್ಯಾಯಾಲಯಗಳ ತರಾಟೆ, ಮತ್ತು ‘ನಾರಾಜ್ ಪೂಫ’!

ಪಕ್ಷದ ಕಟ್ಟಾ ಬೆಂಬಲಿಗರಾದ ಒಂದು ದೊಡ್ಡ ಕಾರ್ಪೊರೇಟ್ ಕುಳದ 22000 ಕೋಟಿ ರೂ. ಸುಸ್ತಿಸಾಲವನ್ನು ಕೇವಲ 6.5 ಕೋಟಿ ರೂ. ಪಾವತಿ ಮಾಡಿ ಸಾಲಮುಕ್ತಿ ಪಡೆಯಬಹುದು ಎಂಬ ರಾಷ್ಟೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಆದೇಶಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಅದಕ್ಕೆ ತಡೆಯಾಜ್ಞೆ ನೀಡಿ ಈ ಬಗ್ಗೆ ಐವರು ಸದಸ್ಯರ ಪೀಠವನ್ನು ರಚಿಸಬೇಕಾಯಿತು ಎಂಬ ಸುದ್ದಿಯ ಬೆನ್ನಲ್ಲೇ  ಈ ವಾರ ಪಶ್ಚಿಮ ಬಂಗಾಲದಲ್ಲಿ ಬಾಗೇಶ್ವರ ಬಾಬಾ ಎಂಬಾತ ತಂದ ಪೇಚು ಸೇರಿದಂತೆ  ಇನ್ನೂ ಕೆಲವು ಸುದ್ದಿಗಳು ಬಂದವು. ಅವುಗಳಲ್ಲಿ ಕೆಲವನ್ನು ನೋಡೋಣ:‌ ಬಂಟರಿಂದ
ಸಂಗ್ರಹ:ಕೆ.ವಿ.
  1. ಅಲಹಾಬಾದ್ ಹೈಕೋರ್ಟ್ ಚಾಟಿ

ಸಪ್ಟಂಬರ್ 2ರಂದು ಒಂದು ಎನ್‌ಎಸ್‌ಎ ಬಂಧನದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟಿನಿಂದ ಉತ್ತರ ಪ್ರದೇಶದ ನೋಯ್ಡ ಅಥವ ಗೌತಮಬುದ್ಧ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕಟುಮಾತುಗಳ ಚಾಟಿಯೇಟು ಇಡೀ ದೇಶದ ಗಮನ ಸೆಳೆದಿದೆ. ಇದರ ಜತೆಗೇ ಉತ್ತರ ಪ್ರದೇಶ ಸರಕಾರ ಹೈಕೋರ್ಟಿನ ಆದೇಶದ ವಿರುದ್ಧ ಸುಪ್ರಿಂ ಕೋರ್ಟಿನಲಿ ಅಪೀಲು ಸಲ್ಲಿಸಿದೆ ಎಂಬ ಸುದ್ದಿಯೂ ಬಂದಿದೆ.

ಈ ಪ್ರಕರಣ ಎಪ್ರಿಲ್ ತಿಂಗಳಲ್ಲಿ ನೋಯ್ಡಾದಲ್ಲಿ ಕಾರ್ಮಿಕರ ಅಸಂತೃಪ್ತಿ ಸ್ಫೋಟಗೊಂಡ ಸಂದರ್ಭದ್ದು. ದಿಲ್ಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ 24 ವರ್ಷದ ಆಕೃತಿ ಚೌಧುರಿ ಮೇಲೆ ಆಕೆ ಕಾರ್ಮಿಕರ ಚಳವಳಿಯ ಸಮಯದಲ್ಲಿ ಹಿಂಸಾಚಾರ ಪ್ರಚೋದಿಸುವ ಪಿತೂರಿ ಮಾಡಿದಳೆಂದು ಎನ್‌ಎಸ್‌ಎ ಕೇಸು ಹೇರಿ ಜೈಲಿಗೆ ಹಾಕಲಾಯಿತು.

ಆದರೆ ಈ ಪ್ರಕರಣ ದಾಖಲಿಸಿದ ವಿಧಾನವೇ ಕಪಟತನದ್ದು ಎಂದು ನ್ಯಾಯ ಪೀಠ ಗಮನಿಸಿತು. ಏಕೆಂದರೆ ಹಿಂಸಾಚಾರ ನಡೆದದ್ದು, ಎಪ್ರಿಲ್ 13ರಂದು, ಪೊಲಿಸ್ ದಾಖಲೆಯ ಪ್ರಕಾರವೂ ಆಕೆಯ ಬಂಧನವಾದದ್ದು ಎಪ್ರಿಲ್ 12ರಂದು, ವಾಸ್ತವವಾಗಿ ಎಪ್ರಿಲ್ 11ರಿಂದಲೇ ಆಕೆ ಬಂಧನದಲ್ಲಿದ್ದಳು ಎಂಬುದೂ ಸಾಂದರ್ಭಿಕವಾಗಿ ಕಂಡುಬಂದಿದೆ. ಅಲ್ಲದೆ ಆಕೆ ಬಂಧನದ ಮೊದಲು ಸನ್ನಡತೆಯ ಬಾಂಡು ಕೊಡಲು ನಿರಾಕರಿಸಿದಳು ಎಂಬ ಆರೋಪವೂ ನಿಜವಲ್ಲ ಎಂಬುದನ್ನು ಅದಕ್ಕೆ ಸಂಬಂಧಪಟ್ಟ ನೋಟೀಸಿನಲ್ಲಿ ಬಂಧನದ ನಂತರವೇ ಕೊಡುವ ಡೈರಿ ನಂಬರ್ ಇರುವುದು ತೋರಿಸಿದೆ.

ಇನ್ನು, ಆರೋಪಿ ಸಾರ್ವಜನಿಕ ಶಾಂತಿಗೆ ಬೆದರಿಕೆ ತರಲಿದ್ದಾಳೆ ಎಂಬ ಜಿಲ್ಲಾ ಮ್ಯಾಜಿಸ್ಟೇಟರ ಅಭಿಪ್ರಾಯವನ್ನು ಪುಷ್ಟೀಕರಿಸುವ ಯಾವ ಅಂಶವೂ ಕಾಣಬಂದಿಲ್ಲ ಎಂದು ನ್ಯಾಯಾಲಯ ಟಿಪ್ಪಣಿ ಮಾಡಿತು. ಸರಕಾರದ ವಕೀಲರಿಗೆ ಹೆಚ್ಚುವರಿ ಕಾಲಾವಧಿ ನೀಡಿದರೂ ಅವರಿಗೆ ಪ್ರಚೋದನೆಯನ್ನು ತೋರಿಸುವ ಯಾವ ದೃಶ್ಯ ಸಾಮಗ್ರಿಯನ್ನೂ ಗುರುತಿಸಲು ಸಾಧ್ಯವಾಗಲಿಲ್ಲ. ವಾಟ್ಸ್ಆಫ್ ಸಂದೇಶಗಳಲ್ಲಿಯೂ ಪ್ರಚೋದನೆಗಿಂತ ಹೆಚ್ಚಾಗಿ ಕಾರ್ಮಿಕರ ಹಕ್ಕುಗಳ ರಕ್ಷಣೆಯ ಮನವಿಯೇ ಕಾಣುತ್ತದೆ, ಇದು ವಾಕ್‌ಸ್ವಾತಂತ್ರ್ಯದ ಹಕ್ಕಿಗೆ ಅನುಗುಣವಾಗಿಯೇ ಇದೆ ಎಂದು ನ್ಯಾಯಪೀಠ ಗಮನಿಸಿತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟೇಟರ ಕ್ರಿಯೆಗಳಲ್ಲಿ ನಿರಂಕುಶ ಆಡಳಿತದ ವಾಸನೆ ಹೊಡೆಯುತ್ತದೆ, ಬೇರೆ ಯಾರೂ ಹೀಗೆ ತಮ್ಮ ವಾಕ್‌ಸ್ವಾತಂತ್ರ್ಯವನ್ನು ಚಲಾಯಿಸದಂತೆ, ಶ್ರಮಿಕರಿಗೆ ಬೆಂಬಲ ವ್ಯಕ್ತಪಡಿಸದಂತೆ ಒಂದು ಉದಾಹರಣೆಯನ್ನು ಸೃಷ್ಟಿಸುವುದು ಅವರ ಆಕಾಂಕ್ಷೆಯಾಗಿತ್ತು, ಅವರ ವರ್ತನೆ ಧಿಕ್ಕಾರಕ್ಕೆ ಅರ್ಹವಾದದ್ದು , ಈ ಮೂಲಕ ಅವರು ತನ್ನ ನಿಷ್ಠೆಯ ಪ್ರತಿಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿತು. ಅಧಿಕಾರಶಾಹಿಯ ನಿಷ್ಠೆ ಸಂವಿಧಾನಕ್ಕೆ ಮಾತ್ರ, ಯಾವುದೇ ರಾಜಕೀಯ ಕಾರ್ಯಾಂಗಕ್ಕೆ ಅಲ್ಲ ಎಂದೂ ಎಚ್ಚರಿಸಿದ ನ್ಯಾಯಪೀಠ, ಅಪಮಾರ್ಗ ಹಿಡಿದ ಅಧಿಕಾರಶಾಹಿಗಳು ಇಂತಹ ನಿರಂಕುಶ ವರ್ತನೆಯನ್ನು ಮುಂದುವರೆಸಿದರೆ ಅದು ಇಡೀ ರಾಜ್ಯವನ್ನು ನರಕಸದೃಶಗೊಳಿಸಬಹುದು ಎಂದಿತು.

ಐದು ತಿಂಗಳುಗಳ ಕಾಲ ಅನಗತ್ಯವಾಗಿ ಜೈಲುವಾಸ ಅನುಭವಿಸಬೇಕಾಗಿ ಬಂದ ಆಕೃತಿ ಚೌಧುರಿಗೆ 5ಲಕ್ಷ ರೂ.ಗಳ ಪರಿಹಾರ ನೀಡಬೇಕು ಮತ್ತು ಈ ಮೊತ್ತವನ್ನು ಜಿಲ್ಲಾ ಮ್ಯಾಜಿಸ್ಟೇಟರ ಮತ್ತು ಸಂಬಂಧಪಟ್ಟ ಇತರ ಸಿಬ್ಬಂದಿಯ ಸಂಬಳದಿಂದ ಕಡಿತ ಮಾಡಬೇಕು ಎಂಬ ಹೈಕೋರ್ಟ್ ಪೀಠದ ಆದೇಶ ಇಂದಿನ ದಿನಗಳಲ್ಲಿ ಬಹಳ ಮಹತ್ವದ್ದಾಗಿದೆ. ಇದಲ್ಲದೆ ಅವರುಗಳ ಕೆಲಸದ ದಾಖಲೆಗಳಲ್ಲಿ ಹೈಕೋರ್ಟಿನ ಅಸಂತೋಷವನ್ನು ದಾಖಲಿಸಬೇಕು ಎಂದೂ ಹೇಳಲಾಗಿದೆ.

ಇದು ಉತ್ತರದಾಯಿತ್ವದ ಒಂದು ಅಪರೂಪದ ಮತ್ತು ಮೂರ್ತ ಕ್ರಮ ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಹೇಳುತ್ತಾರೆ.

ಇಲ್ಲಿ ಇನ್ನೊಂದು ಗಮನ ಸೆಳೆಯುವ ಸಂಗತಿಯೆಂದರೆ, ಈ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎಸ್‌ಐಆರ್ ‘ಖ್ಯಾತಿ’ಯ ದೇಶದ ಮುಖ್ಯ ಚುನಾವಣಾ ಆಯುಕ್ತರ ಮಗಳು ಎಂಬುದು. ಇದು ಕೇವಲ ಕಾಕತಾಳೀಯವಾಗಿರಬಹುದೇನೋ ಗೊತ್ತಿಲ್ಲ.

 ಓವರ್‌ ಆಕ್ಟಿಂಗ್‌ಗಾಗಿ ೫ಲಕ್ಷ ರೂ.ಕಾಟ್!‌

ವ್ಯಂಗ್ಯಚಿತ್ರ : ಆರ್‌ಪ್ರಸಾದ್‌, ಇಕನಾಮಿಕ್‌ ಟೈಮ್ಸ್

  1. ಮುಖ್ಯ ನ್ಯಾಯಾಧೀಶರ ತರಾಟೆ

ಇದನ್ನೂ ಓದಿ : ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳಿಗೆ ಈಶ್ವರ ಖಂಡ್ರೆ ಸಕಾರಾತ್ಮಕ ಸ್ಪಂದನೆ

ಸಪ್ಟಂಬರ್ 9ರಂದು ಅದೇ ಉತ್ತರಪ್ರದೇಶದ ಬೃಹತ್ ನೋಯ್ಡಾದ ಕಾರ್ಯಪಾಲಿಕಾ ಮ್ಯಾಜಿಸ್ಟ್ರೇಟರನ್ನು ಗೌತಮ್ ಬುದ್ಧ ವಿ.ವಿ.ಯ ವಿದ್ಯಾರ್ಥಿಗೆ ಜಂತರ್ ಮಂತರ್ ಚಳುವಳಿಗೆ ಸಂಬಂಧಪಟ್ಟಂತೆ ನೋಟೀಸು ಜಾರಿಮಾಡಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ತರಾಟೆಗೆ ತಗೊಂಡ ಸುದ್ದಿ ಬಂದಿದೆ.

ಸುಪ್ರಿಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸಿ ಜಂತರ್ ಮಂತರ್‌ನಲ್ಲಿ ಜುಲೈ 20ರಿಂದ 25ರ ವರೆಗೆ ನಡೆದ ಮತಪ್ರದರ್ಶನಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳ ಮೇಲೆ ಹಾಕಿದ್ದ ಎಲ್ಲ ಎಫ್‌ಐಆರ್‌ಗಳನ್ನು ರದ್ದುಪಡಿಸಿದ ಆದೇಶವನ್ನು ಹೊರಡಿಸಿದ ನಂತರವೂ ಗ್ರೇಟರ್ ನೋಯ್ಡಾದ ಮ್ಯಾಜಿಸ್ಟ್ರೇಟರಿಂದ ಗೌತಮ್ ಬುದ್ಧ ವಿ.ವಿ.ಯ ವಿದ್ಯಾರ್ಥಿ ಅಕ್ಷಯ್ ತ್ರಿಪಾಠಿಗೆ ಆತ ಜಂತರ್‌ಮಂತರ್‌ನ ಪ್ರತಿಭಟನೆಯಲ್ಲಿ ಭಾಗವಹಿಸಿದ ಮತ್ತು ತನ್ನ ವಿ.ವಿ.ಯ ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಎಂದು 5ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ನೋಟೀಸು ಬಂತು. ಹಿರಿಯ ಅಡ್ವೊಕೇಟ್ ಬಿಸ್ವಜಿತ್ ಭಟ್ಟಾಚಾರ್ಯ ಇದು ಭಾರತದ ವಿದ್ಯಾರ್ಥಿಗಳೊಂದಿಗೆ ಒಂದು ಪ್ರಯೋಗ, ಮೇಲ್ನೋಟಕ್ಕೇ ನ್ಯಾಯಾಂಗ ನಿಂದನೆಯ ಪ್ರಕರಣ ಎಂದು ಸುಪ್ರಿಂ ಕೋರ್ಟಿನ ಗಮನಕ್ಕೆ ತಂದಾಗ ಮುಖ್ಯ ನ್ಯಾಯಾಧೀಶರು “ಅದು ಹೇಗೆ ಒಬ್ಬ ಮ್ಯಾಜಿಸ್ಟ್ರೇಟ್ ನೋಟೀಸು ಜಾರಿ ಮಾಡುವ ಧೈರ್ಯ ಮಾಡಿದ್ದಾರೆ? ಯಾವುದೇ ವಿದ್ಯಾರ್ಥಿಯ ಮೇಲೆ ದಬಾವಣೆಯ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದೇವೆ. ಯಾವ ಮ್ಯಾಜಿಸ್ಟ್ರೇಟ್ ಕೂಡ ಆ ಆದೇಶವನ್ನು ಉಲ್ಲಂಘಿಸಲು ಸಾಧ್ಯವಿಲ್ಲ” ಎಂದು ಕಟುವಾಗಿ ಹೇಳಿದರು. ನೋಟೀಸನ್ನು ಈಗ ಹಿಂದಕ್ಕೆ ಪಡೆಯಲಾಗಿದೆ ಮತ್ತು ಆ ಮ್ಯಾಜಿಸ್ಟ್ರೇಟ್ ನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.

3.ಅಧಿಕಾರಸ್ಥರ ಸಂಪರ್ಕ ಪ್ರದರ್ಶನ ತಂದ ಬಂಧನ

ಜುಲೈ 20ರಂದು ಜಂತರ್‌ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ 14 ವರ್ಷದ ವಿದ್ಯಾರ್ಥಿನಿ ನಿಶು ಆಜಾದ್‌ಳ ತಂದೆಯ ತಲೆಗೆ ಜೋರಾಗಿ ಹೊಡೆದು ಅವರಿಗೆ ಐದಾರು ಸ್ಟಿಚ್‌ಗಳನ್ನು ಹಾಕಲಾಗಿದೆ, ಆದರೂ ತಾನು ಆರಾಮವಾಗಿ ಓಡಾಡಿಕೊಂಡಿದ್ದೆ, ದಿಲ್ಲಿಯ ಮಂತ್ರಿ ಕಪಿಲ್ ಮಿಶ್ರ, ಎಲ್‌ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ತನ್ನ ಅಣ್ಣಂದಿರು ಎಂದು ಕೊಚ್ಚಿಕೊಂಡ ‘ಸನಾತನಿ ಯೋಧ’ ಸ್ವತಂತ್ರ ಭಾರದ್ವಾಜ್‌ನ್ನು ಕೊನೆಗೂ ಉತ್ತರಪ್ರದೇಶದ ಬುಲಂದ್‌ಶಹರಿನಲ್ಲಿ ಪೋಲೀಸರು ಸಪ್ಟಂಬರ್ 4ರಂದು ಬಂಧಿಸಿದರು. ಚಿರಾಗ್ ಪಾಸ್ವಾನ್ ಮಾತ್ರವೇ ತನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳ್ಳುತ್ತಿದ್ದಾನೆ ಎಂದು ಸ್ಪಷ್ಟೀಕರಣ ನೀಡಿದರು. ಭಾರದ್ವಾಜ್ ಬಂಧನವನ್ನು ಪ್ರಶ್ನಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಸಪ್ಟಂಬರ್ 9ರಂದು ತಿರಸ್ಕರಿಸಿತು..

‌“ಮಕ್ಕಳೇ, ನೀವು ವಿದ್ಯಾವಂತರಾಗಿ ಐಪಿಎಸ್‌ ಆಗ್ತೀರೋ ಅಥವ

ಅವಿದ್ಯಾವಂತರಾಗಿ ಉಳಿದು ಸ್ವತಂತ್ರ ಭಾರಧ್ವಾಜ್‌ ಆಗ್ತೀರೋ?”

ಮಕ್ಕಳು: “ ಎರಡರಲ್ಲಿ ವ್ಯತ್ಯಾಸವೇನಿದೆ ಸಾರ್!”‌

ವ್ಯಂಗ್ಯಚಿತ್ರ: ರಾಜೇಂದ್ರ ದೋಢಪ್‌ಕರ್‌ @ ಫೇಸ್‌ಬುಕ್

 ಈ ನಡುವೆ ಆತನ ಬೆಂಬಲಿಗರಿಂದ ಬಾಲಕಿಗೆ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆ ಮತ್ತು ಕಿರುಕುಳ ಆರಂಭವಾದಾಗ ಈ ಬಗ್ಗೆ ದೂರು ನೀಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಆಕೆಯ ವಿರುದ್ಧವೇ ಎಫ್‌ಐಆರ್ ದಾಖಲಾಯಿತು. ಇದನ್ನು ಸುಪ್ರಿಂ ಕೋರ್ಟಿನ ಗಮನಕ್ಕೆ ತಂದಾಗ ಮುಖ್ಯ ನ್ಯಾಯಾಧೀಶರಿರುವ ಪೀಠ ಆಕೆಯ ದೂರನ್ನು ದಾಖಲಿಸಿಕೊಂಡು ಕ್ರಮ ವಹಿಸುವಂತೆ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ನೀಡುವಂತೆಯೂ ಸೂಚಿಸಿದೆ. ಈ ಪ್ರಕರಣಕ್ಕೆ ಸಂಬAಧಿಸಿದಂತೆ ದಿಲ್ಲಿ ಮತ್ತು ಉತ್ತರಪ್ರದೇಶದ ಸರಕಾರಗಳಿಂದ ವರದಿಯನ್ನು ಪಡೆಯಲೂ ನ್ಯಾಯಾಲಯ ನಿರ್ಧರಿಸಿದೆ.

4.ಪ್ಯಾರಿಸಿನಲ್ಲಿ ಐಫೆಲ್ ಟವರ್ ಇರುಸುಮುರುಸು

ಕಂಪನಿ ವಲಯದಲ್ಲಿ ಝೀ ಸಮೂಹದ ಒಡೆಯರಂತೆ, ‘ಸಾಂಸ್ಕೃತಿಕ’ ರಂಗದಲ್ಲಿ ಆಳುವ ಪಕ್ಷದೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಸ್ವಾಮಿನಾರಾಯಣ ಪಂಥಧ ಬ್ರಹ್ಮಚಾರಿಗಳಿಂದಲೂ ಕಳೆದ ವಾರ ಭಾರತ ಸರಕಾರ ಮತ್ತು ಬಿಜೆಪಿ ಪೇಚಿಗೆ ಸಿಲಕುವಂತಾಗಿದೆ. ಯಮುನಾ ನದಿ ದಂಡೆಯಲ್ಲಿ ಅಕ್ಷರಧಾಮ ದೇವಾಲಯದಂತೆ, ಪಾಶ್ಚಿಮಾತ್ಯ ದೇಶಗಳಲ್ಲಿ ಬೃಹತ್ ದೇವಾಲಯಗಳನ್ನು ನಿರ್ಮಿಸಿ ಭಾರತದ ಸಂಸ್ಕೃತಿಯ ಪ್ರತೀಕ ಎಂದು ಪ್ರಧಾನಿಗಳಿಂದಲೇ ಬೆಂಬಲ ಗಳಿಸಿಕೊಂಡಿರುವ ಈ ಪಂಥದ ಅನುಯಾಯಿಗಳು ಪ್ಯಾರಿಸಿನಲ್ಲಿ ಇನ್ನೊಂದು ಬೃಹತ್ ದೇವಸ್ಥಾನದ ಉದ್ಘಾಟನೆಯ ನಂತರ ಅಲ್ಲಿನ ಪ್ರಸಿದ್ಧ ಐಫೆಲ್ ಟವರ್ ಭೇಟಿಯ ಸಂದರ್ಭದಲ್ಲಿ ಮಹಿಳೆಯರು ತಮ್ಮ ಕಣ್ಣಿಗೆ ಬೀಳದಂತೆ ವ್ಯವಸ್ಥೆ ಮಾಡಬೇಕೆಂದು ತಮ್ಮ ಪ್ರಭಾವದ ಪ್ರದರ್ಶನಕ್ಕೆ ಮುಂದಾದದ್ದು ಮತ್ತು ಅದಕ್ಕೆ ಆ ಗೋಪುರದ ಇಡೀ ಸಿಬ್ಬಂದಿಯಿಂದ ಮಾತ್ರವಲ್ಲ, ಫ್ರಾನ್ಸಿನ ಎಲ್ಲ ರಾಜಕೀಯ ಪಕ್ಷಗಳಿಂದ ಬಂದ ಪ್ರತಿಭಟನೆ ‘ನಾರೀವಂದನಾ’ ಘೋಷಣೆಯ ಸರಕಾರಕ್ಕೆ ಇರುಸುಮುರುಸು ಉಂಟು ಮಾಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

“ಮೋನ್ಶಿಯರ್‌, ಮಹಿಳೆಯರು ಐಫೆಲ್‌ ಟವರ್‌ ಪ್ರವೇಶಿಸದಂತೆ ತಡೆಯಿರಿ ಎಂದು ನೀವು ಕೇಳುವಂತಿಲ್ಲ”

“ ತೂ ಜಾನ್ತಾ ನಹೀ ಮೇರಾ ಬಾಪ್ಸ್‌ ಕೌನ್‌ ಹೈ”

ವ್ಯಂಗ್ಯಚಿತ್ರ: ಸ್ಯಾನಿಟರಿ ಪ್ಯಾನಲ್ಸ್‌, ನ್ಯೂಸ್‌ ಮಿನಿಟ್

  1. ಬಂಗಾಲದಲ್ಲಿ ‘ಬಾಗೇಶ್ವರ ಬಾಬಾ’ ಪೇಚು

ಇದಕ್ಕೆ ಮೊದಲು ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯ ಮತ್ತೊಬ್ಬ ‘ಸಾಂಸ್ಕೃತಿಕ’ ಮಿತ್ರನೆನಿಸಿಕೊಂಡಿರುವ ಮಧ್ಯಪ್ರದೇಶದ ‘ಬಾಗೇಶ್ವರ ಬಾಬಾ’ ದುರ್ಗಾಪೂಜೆಯ ದಿನಗಳಲ್ಲಿ ಮಾಂಸಾಹಾರ ‘ಪಾಖಂಡೀ’(ಧರ್ಮವಿರೋಧಿ) ನಡೆ ಎಂದು ಹೇಳಿರುವುದು ಬಂಗಾಲಿಗಳಿಗೆ ಮಾಡಿರುವ ಅವಮಾನ ಎಂದು ರಾಜ್ಯದಾದ್ಯಂತ ವ್ಯಕ್ತಗೊಂಡ ಆಕ್ರೋಶ ಬಂಗಾಲದ ಬಿಜೆಪಿ ಮುಖಂಡರನ್ನು ಪೇಚಿಗೆ ಸಿಲುಕಿಸಿದರೆ, ಯಾವ ಬಾಬಾ ಏನೇ ಹೇಳಲಿ, ಬಂಗಾಲಿಗಳು ತಮಗೆ ಬೇಕಾದುದನ್ನೇ ತಿನ್ನುತ್ತಾರೆ, ಉಣ್ಣುತ್ತಾರೆ, ಅಂದರೆ ಮಾಂಸಾಹಾರವನ್ನು ಬಿಡುವುದಿಲ್ಲ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರೂ ಸೇರಿದಂತೆ ಬಿಜೆಪಿ ಮುಖಂಡರೆಲ್ಲ ಹೇಳಿರುವುದು, ಸಾಲದ್ದಕ್ಕೆ ಬಾಬಾರನ್ನು ಸಮರ್ಥಿಸಿದ ಬಿಜೆಪಿ ಮುಖ್ಯಮಂತ್ರಿಗಳಿಂದಲೇ ದೇವಸ್ಥಾನದ ಆವರಣದಲ್ಲಿ ಮೀನು ತಿನ್ನುವ ಪ್ರದರ್ಶನ ರಾಜ್ಯದ ಹೊರಗಿನ ಬಿಜೆಪಿ ಮುಖಂಡರನ್ನು ಪೇಚಿಗೆ ಸಿಲುಕಿಸಿದೆ.

ಈಗ , ಸಪ್ಟಂಬರ್‌ ೧೭ರಂದು ನಮ್ಮ ಪ್ರಧಾನಿಗಳ ಜನ್ಮದಿನದ ಸಂದರ್ಭದಲ್ಲಿ ಬಿಜೆಪಿ ʼಸೇವಾ ಸಂಕಲ್ಪ ಅಭಿಯಾನʼವನ್ನು ಆರಂಭಿಸಿದೆ. ಇದು ಅವರ ʼಸಾರ್ವಜನಿಕ ಜೀವನʼದ ಬೆಳ್ಳಿ ಉತ್ಸವ ಎಂದೂ ಹೇಳಲಾಗುತ್ತಿದೆ. ಏಕೆಂದರೆ ಅವರು ಗುಜರಾತಿನ ಮುಖ್ಯಮಂತ್ರಿಯಾಗಿ (ಅಕ್ಟೋಬರ್‌ ೧, ೨೦೦೧) ದೇಶದ ಗಮನ ಸೆಳೆದು ೨೫ ವರ್ಷಗಳಾಗುತ್ತಿದೆ.  ಅವರು ಮುಖ್ಯಮಂತ್ರಿಗಳಾಗುವ ಮೊದಲೂ ಸಾರ್ವಜನಿಕ ಜೀವನದಲ್ಲಿ ಇದ್ದರು ಎಂಬುದನ್ನು ಅದೇಕೋ ಪರಿಗಣಿಸಿದಂತಿಲ್ಲ. ಅದೇನೇ ಇರಲಿ,  ಈ ಮೇಲಿನ ಪ್ರಕರಣಗಳು ಕಳೆದ ೨೫  ವರ್ಷಗಳ ವಿಭಜಕ ರಾಜಕೀಯ ತನ್ನ ಮಿತಿಯನ್ನು ತಲುಪುತ್ತಿದೆ ಎಂಬುದರ ಲಕ್ಷಣಗಳೇ ಎಂದು ಪ್ರಜಾಪ್ರಭುತ್ವವಾದಿಗಳು ಯೋಚಿಸ ಲಾರಂಭಿಸಿದ್ದಾರಂತೆ. ಆದರೆ ಇಷ್ಟೊಂದು ಆಶಾವಾದಕ್ಕೆ ಇನ್ನೂ ಸಮಯ ಬಂದಿಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ನೋಯ್ಡಾ ಮ್ಯಾಜಿಸ್ಟ್ರೇಟ್‌ ಬಗ್ಗೆ ಅಲಹಾಬಾದ್‌ ಹೈಕೋರ್ಟಿನ ಆದೇಶದ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಅಪೀಲು ಸಲ್ಲಿಸಲಾಗಿದೆ ಎಂಬ ಸುದ್ದಿ ಬಂದಿದೆ. ‘ಸನಾತನಿ ಯೋಧ’ ಸ್ವತಂತ್ರ ಭಾರದ್ವಾಜ್‌ ಗೆ ಮೂರು ವಾರಗಳ ಜಾಮೀನು ಸಿಕ್ಕಿದೆ, ಹೊರಬಂದು ಮತ್ತೆ ಅಂತಹುದೇ ʼಬಲಪ್ರದರ್ಶನʼ ಮಾಡಿದ್ದಾನೆಂಬ ಸುದ್ದಿ ಬಂದಿದೆ.

ಈ ನಡುವೆ  ಜೆನ್‌ಝೀಯೊಂದಿಗೆ ಸಂಪರ್ಕಕ್ಕೆಂದು ಒಂದು ಪ್ರತಿಷ್ಠಿತ ಕಾಲೇಜಿಗೆ ಹೋದ ಪ್ರಧಾನಿಗಳು ಅಲ್ಲಿಯೂ ಜಿಡಿಪಿ 7.8%, ದಿಮಾಗೀ ನಕ್ಸಲ್‌ನ ಹೊಮಿಯೊಪೆಥಿಕ್ ಡೋಸ್ ಇತ್ಯಾದಿ ಚುನಾವಣಾ ಭಾಷಣವನ್ನೇ ಮಾಡಿದರು, ಜತೆಗೆ ತಮ್ಮ ಶಬ್ದ ಭಂಡಾರಕ್ಕೆ ‘ನಾರಾಜ್ ಪೂಫ’ ಎಂಬ ಹೊಸ ಸೇರ್ಪಡೆಯನ್ನೂ ಮಾಡಿದರು ಎಂದು ವರದಿಯಾಗಿದೆ. ಏನೇ ಮಾಡಿದರೂ ಅದರಲ್ಹುಲಿ ಹುಳುಕು ಕಂಡು ಹಿಡಿಯುವ ವಯಸ್ಸಾದವರನ್ನು ಗೇಲಿ ಮಾಡುವ ಹಿಂದಿ ಭಾಷೆಯ ಪದ ಇದು-ಮುಖ ಸಿಂಡರಿಸಿಕೊಳ್ಳುವ ಅಂಕಲ್! ಆದರೆ ಈಗ ಇಲ್ಲಿ ನಿಜವಾಗಿಯೂ ‘ನಾರಾಜ್ ಪೂಫ’ ಯಾರು ಎಂಬ ಪ್ರಶ್ನೆ ಮೇಲೆ ಹೇಳಿದ ರೀತಿಯ ಇನ್ನೂ ಹಲವು ಘಟನೆಗಳ ಹಿನ್ನೆಲೆಯಲ್ಲಿ ಎದ್ದಿದೆ.

ಕೃಷಿ ಕಾಯ್ದೆ-ಆಂದೋಲನ ಜೀವಿ;  ಸಿಎಎ?- ಟುಕ್ಡೆ ಟುಕ್ಡೆ ಗ್ಯಾಂಗ್‌

ಖಾನ್‌ ಮಾರ್ಕೆಟ್‌ ಗ್ಯಾಂಗ್‌

ಪೇಪರ್‌ ಲೀಕ್-ದಿಮಾಗಿ ನಕ್ಸಲ್ ; ವಿಕಾಸ್‌?- ನಾರಾಜ್‌ ಪೂಫ

ವ್ಯಂಗ್ಯಚಿತ್ರ: ರಾಕೇಶ್‌ ರಂಜನ್‌, ಮೊಲಿಟಿಕ್ಸ್‌.ಇನ್

ಇದನ್ನೂ ನೋಡಿ : ಹೈ.ಕ. ವಿಲೀನ ದಿನ | ಜಗತ್ತಿಗೆ ಭತ್ತ, ತೊಗರಿ, ಚಿನ್ನ ಕೊಟ್ಟ ಪ್ರದೇಶಕ್ಕೆ ಸಿಕ್ಕಿದ್ದು ಕಹಿಯೇ? Janashakthi Media

Donate Janashakthi Media