ಮಂಗಳೂರು: ಕರಾವಳಿ ಜಿಲ್ಲೆಗಳ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವುದು, ಪ್ರವಾಸೋದ್ಯಮ ಸೇರಿದಂತೆ ಅಭಿವೃದ್ಧಿ ನೀತಿಯಲ್ಲಿ ಕಾರ್ಪೊರೇಟ್ ಪರವಾದ ಪಿ.ಪಿ.ಪಿ. ಮಾದರಿಯನ್ನು ಕೈಬಿಡುವುದು ಹಾಗೂ ಸ್ಥಳೀಯ ಜನರನ್ನು ಕೇಂದ್ರವಾಗಿಟ್ಟುಕೊಂಡ ಸಮಗ್ರ ಅಭಿವೃದ್ಧಿ ನೀತಿಯನ್ನು ರೂಪಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟದ ವಿಶೇಷ ಸಭೆಗೆ ಮೆರವಣಿಗೆ ನಡೆಸಿ ಆಗ್ರಹ ಪತ್ರ ಸಲ್ಲಿಸಲು ಸಿಪಿಐಎಂ ತೀರ್ಮಾನಿಸಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಉದ್ದೇಶದೊಂದಿಗೆ ಸಚಿವ ಸಂಪುಟದ ವಿಶೇಷ ಸಭೆಯನ್ನು 18.09.2026ರಂದು ಮಂಗಳೂರಿನಲ್ಲಿ ನಡೆಸುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಕರಾವಳಿ ಕರ್ನಾಟಕವು ಪರಿಸರ ಸೂಕ್ಷ್ಮವಾದ ಪಶ್ಚಿಮ ಘಟ್ಟ, ಅರಬಿ ಸಮುದ್ರ, ಹಲವಾರು ನದಿಗಳಿಂದ ಸಮೃದ್ಧವಾದ ಪ್ರದೇಶ. ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ವಿಶಾಲವಾದ ರಸ್ತೆ ಜಾಲಗಳಿಂದಾಗಿ ಅಭಿವೃದ್ಧಿಯ ವಿಫುಲ ಅವಕಾಶಗಳನ್ನು ಹೊಂದಿರುವುದು ಹೌದು. ಉದ್ಯಮಶೀಲ ಹಾಗೂ ಶ್ರಮಜೀವಿ, ವಿದ್ಯಾವಂತ, ಬುದ್ಧಿವಂತ ಜನರ ನೆಲೆಯೂ ಆಗಿರುವ ಕರಾವಳಿ ಜಿಲ್ಲೆಗಳು ಸಾಧಿಸಬೇಕಾದಷ್ಟು ಅಭಿವೃದ್ಧಿ ಸಾಧಿಸಿಲ್ಲ. ಸಾಧಿಸಿರುವ ಅಭಿವೃದ್ಧಿಯ ಲಾಭ ಕರಾವಳಿಯ ಎಲ್ಲಾ ಜನಸಮುದಾಯಗಳಿಗೆ ತಲುಪಿಲ್ಲ ಎಂಬುದು ಕಣ್ಣಿಗೆ ಕಾಣುವ ವಾಸ್ತವ. ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಉತ್ತರ ಭಾರತದ ಕಾರ್ಮಿಕರ, ವ್ಯಾಪಾರಿಗಳ, ಗುತ್ತಿಗೆದಾರರ ವಲಸೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಅದೇ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ವಿದ್ಯಾವಂತ ಯುವಜನರು ಉದ್ಯೋಗ ಅವಕಾಶಗಳ ತೀವ್ರ ಕೊರತೆಯಿಂದ ದೂರದ ನಗರಗಳು, ಗಲ್ಫ್ ರಾಷ್ಟ್ರಗಳು ಸಹಿತ ಯೂರೋಪಿನ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಒಳ, ಹೊರ ವಲಸೆ ಅನಿಯಂತ್ರಿತವಾಗಿ ಸಾಗುತ್ತಿದ್ದು, ಸಾಮಾಜಿಕ ಬಿಕ್ಕಟ್ಟಿಗೂ ಕಾರಣವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟದ ವಿಶೇಷ ಸಭೆಯನ್ನು ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿರುವುದು ಜನತೆಯಲ್ಲಿ ಅಪಾರ ನಿರೀಕ್ಷೆಗೆ ಕಾರಣವಾಗಿದೆ. ಆದರೆ, ಪ್ರವಾಸೋದ್ಯಮ ನೀತಿ, ಬಂಡವಾಳ ಹೂಡಿಕೆಗೆ ಸಂಬಂಧಿಸಿ ಸರ್ಕಾರದ ಕಡೆಯಿಂದ ಹೊರ ಬರುತ್ತಿರುವ ಮಾಹಿತಿಗಳು ಆಶಾದಾಯಕವಾಗಿಲ್ಲ. ಸರ್ಕಾರ ರೂಪಿಸುತ್ತಿರುವ ಪಿ.ಪಿ.ಪಿ. ಮಾದರಿಯಲ್ಲಿ ಜನಸಾಮಾನ್ಯರನ್ನು, ಕರಾವಳಿಯ ಯುವಜನರನ್ನು ಒಳಗೊಳ್ಳುವ ಬದಲಿಗೆ ಕಾರ್ಪೊರೇಟ್ ಬಂಡವಾಳದಾರರನ್ನು ಒಳಗೊಳ್ಳುವ, ಅವರಿಗೆ ಲಾಭದಾಯಕವಾಗಿಸುವ ಅಂಶಗಳು ಎದ್ದು ಕಾಣಿಸುತ್ತಿವೆ. ಇದರಿಂದಾಗಿ ಕೈಗಾರಿಕೆಗಳ ಮಾಲಿನ್ಯದಿಂದ ಈಗಾಗಲೇ ಉಂಟಾಗಿರುವ ಪರಿಸರದ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಆತಂಕವೂ ಇದೆ.
ಇದು ಬದಲಾಗಬೇಕು. ಜನಸಾಮಾನ್ಯರನ್ನು ಕೇಂದ್ರೀಕರಿಸಿದ ಅಭಿವೃದ್ಧಿ ನೀತಿ, ಸಮಗ್ರ ಅಭಿವೃದ್ಧಿ ಸಚಿವ ಸಂಪುಟ ಸಭೆಯ ಆದ್ಯತೆ ಆಗಬೇಕು. ಹಾಗೆಯೇ ದೀರ್ಘ ಕಾಲದಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು, ಬೇಡಿಕೆಗಳನ್ನು ಈಡೇರಿಸುವುದು ಸಚಿವ ಸಂಪುಟ ಸಭೆಯ ಘೋಷಣೆ ಆಗಬೇಕು ಎಂದು ನಾವು ಆಶಿಸುತ್ತೇವೆ. ಪ್ರಧಾನವಾಗಿ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿಗೆ ಸಂಬಂಧಿಸಿದಂತೆ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಈ ಸಚಿವ ಸಂಪುಟ ಸಭೆಯಲ್ಲಿ ಪರಿಹಾರ ದೊರಕುವುದು, ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳು, ಜನಸಮುದಾಯಗಳನ್ನು ಒಳಗೊಳ್ಳುವ ಅಭಿವೃದ್ಧಿ ನೀತಿಯನ್ನು ರೂಪಿಸಲು ಸಾಧ್ಯ ಆಗಬೇಕಿತ್ತು. ಆದರೆ ಅಂತಹ ಸಾಧ್ಯತೆಗಳು ಕಾಣಿಸುತ್ತಿಲ್ಲ. ಕೃಷಿ, ಮೀನುಗಾರಿಕೆಗೆ ಆಧಾರಿತ ಉದ್ಯೋಗ ಸೃಷ್ಟಿಸಬಲ್ಲ ಉದ್ಯಮಗಳು, ಹೂಡಿಕೆಗಳನ್ನು ಆಕರ್ಷಿಸುವುದು, ಅಭಿವೃದ್ಧಿಯಲ್ಲಿ ಸ್ಥಳೀಯರಿಗೆ ಅವಕಾಶ ಒದಗಿಸುವ ಯೋಚನೆಗಳು ಹೊರಹೊಮ್ಮದಿದ್ದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಒಂದು ಭ್ರಮೆಯಾಗಿ, ರಾಜಕೀಯ ಗಿಮಿಕ್ ಆಗಿ ಮುಗಿದು ಹೋಗಲಿದೆ. ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಒಂದೆರಡು ಪ್ರಮುಖ ಘೋಷಣೆಗಳು ಸಚಿವ ಸಂಪುಟದ ಘೋಷಣೆಯಾಗಿ ಉಳಿದು, ಪ್ರಮುಖ ಸಮಸ್ಯೆ, ಬೇಡಿಕೆಗಳು ಅದರ ಮರೆಯಲ್ಲಿ ಹಾಗೆಯೇ ಉಳಿದು ಹೋಗುವಂತಾಗಬಾರದು ಎಂಬ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸೇರುವ ಸಚಿವ ಸಂಪುಟ ಸಭೆಗೆ ಮೆರವಣಿಗೆಯಲ್ಲಿ ತೆರಳಲು, ಕರಾವಳಿ ಜಿಲ್ಲೆಯ ಜನಸಮುದಾಯಗಳ ಪರವಾಗಿ ಆಗ್ರಹ ಪತ್ರವನ್ನು ಸಲ್ಲಿಸಲು ಸಿಪಿಐಎಂ ಪಕ್ಷ ತೀರ್ಮಾನಿಸಿದೆ. ಸೆಪ್ಟೆಂಬರ್ 18ರಂದು ಬೆಳಿಗ್ಗೆ 9.30ಕ್ಕೆ ನಾಗುರಿ ಜಂಕ್ಷನ್‌ನಿಂದ ಸಚಿವ ಸಂಪುಟ ಸಭೆ ನಡೆಯುವ ಪಡೀಲ್‌ನ ಪ್ರಜಾಸೌಧ ಕಟ್ಟಡದವರೆಗೆ ಮೆರವಣಿಗೆ ನಡೆಸಲಿದ್ದೇವೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
ಇದನ್ನೂ ಓದಿ : ಕಸ್ತೂರಿ ರಂಗನ್ ವರದಿ: 7ನೇ ಕರಡು ಅಧಿಸೂಚನೆ ವಿರೋಧಿಸಿ ಸಚಿವ ರಾಮಲಿಂಗಾರೆಡ್ಡಿಗೆ ಸಿಪಿಐ(ಎಂ) ನಿಯೋಗ ಮನವಿ
ಕರಾವಳಿ ಜಿಲ್ಲೆಗಳ ಜನಸಮುದಾಯಗಳ ಪರವಾಗಿ ನಮ್ಮ ಆಗ್ರಹಗಳು
- ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆ, ನಿಮ್ಹಾನ್ಸ್ ನರರೋಗದ ಆಸ್ಪತ್ರೆಯ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು, ಕರಾವಳಿಯ ನೂತನ ತಾಲೂಕುಗಳಿಗೆ ನಿಯಮದಂತೆ ತಾಲೂಕು ಆಸ್ಪತ್ರೆಗಳನ್ನು ಮಂಜೂರು ಮಾಡುವುದು, ಪುತ್ತೂರಿನಲ್ಲಿ ಸ್ಥಾಪಿಸುವುದಾಗಿ ಘೋಷಿಸಿರುವ ಸರ್ಕಾರಿ ಮೆಡಿಕಲ್ ಕಾಲೇಜ್ ಅನ್ನು ತಕ್ಷಣ ಕಾರ್ಯಗತಗೊಳಿಸುವುದು, ಪಿ.ಪಿ.ಪಿ. ಮಾದರಿಗೆ ಅವಕಾಶ ನೀಡದಿರುವುದು, ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸುವುದು, ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವುದು.
- ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕರಾವಳಿ ಪ್ರವಾಸೋದ್ಯಮ ನೀತಿಯಲ್ಲಿ ದೊಡ್ಡ ಉದ್ಯಮಿಗಳನ್ನು ಒಳಗೊಳ್ಳುವ ಪಿ.ಪಿ.ಪಿ. ಮಾದರಿ ಕೈಬಿಡುವುದು, ಸ್ಥಳೀಯರನ್ನು ಒಳಗೊಳ್ಳುವ ಪಾಲುದಾರಿಕೆ ನೀತಿಯನ್ನು ರೂಪಿಸುವುದು, ಕರಾವಳಿಯ ಪರಿಸರ, ಜನಸಂಸ್ಕೃತಿಗೆ ಧಕ್ಕೆಯಾಗದಂತೆ, ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ದೊರಕುವಂತೆ ಪ್ರವಾಸೋದ್ಯಮ ನೀತಿ ರೂಪಿಸುವುದು. ಕ್ಯಾಸಿನೊ, ಜೂಜುಗಳಿಗೆ ಅವಕಾಶ ನೀಡದಿರುವುದು.
- ಕರಾವಳಿಯ ಕೃಷಿಗಳಾದ ಅಡಿಕೆ, ತೆಂಗು, ರಬ್ಬರ್ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಆದ್ಯತೆ ನೀಡುವುದು.
- ಮೀನುಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು. ಕೇರಳ ಮಾದರಿಯನ್ನು ಅನುಸರಿಸುವುದು. ಮಂಗಳೂರು ಮೀನುಗಾರಿಕಾ ಧಕ್ಕೆಯನ್ನು ಅಗತ್ಯಕ್ಕೆ ತಕ್ಕಂತೆ ವಿಸ್ತರಿಸುವುದು, ಮಂಗಳೂರು ದಕ್ಕೆ, ಮಲ್ಪೆ ಸೇರಿದಂತೆ ಕರಾವಳಿಯ ಉದ್ದಕ್ಕೂ ಇರುವ ಮೀನುಗಾರಿಕಾ ಬಂದರುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ಆಧುನೀಕರಿಸುವುದು. ಮಂಗಳೂರು ಅಳಿವೆ ಬಾಗಿಲಲ್ಲಿ ಹೂಳೆತ್ತುವುದು, ಅವಘಡಗಳನ್ನು ತಪ್ಪಿಸುವುದು. ನಾಡದೋಣಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡುವುದು. ಮೀನುಗಾರಿಕೆ ಉತ್ಪನ್ನಗಳ ಕಿರು ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು. ನಿರ್ದಿಷ್ಟ ಯೋಜನೆ ರೂಪಿಸುವುದು.
- ಸಾರ್ವಜನಿಕ ರಂಗ ಸೇರಿದಂತೆ ಕೈಗಾರಿಕೆ, ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಬೇಕು. ಸರೋಜಿನಿ ಮಹಿಷಿ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಜಾರಿಗೊಳಿಸಬೇಕು, ಉದ್ಯೋಗಾವಕಾಶಗಳಲ್ಲಿ ಸ್ಥಳೀಯ ಯುವಜನತೆಯನ್ನು ಉದ್ದೇಶಪೂರ್ವಕವಾಗಿ ಹೊರಗಿಡುವವರ ಮೇಲೆ ಕ್ರಮಗಳು ಜರುಗಬೇಕು.
- ಕರಾವಳಿ ಜಿಲ್ಲೆಗಳಲ್ಲಿ ನಿರುದ್ಯೋಗ ಸಮಸ್ಯೆ ಭೀಕರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಒಂದರಲ್ಲೇ ಪ್ರತಿ ವರ್ಷ ಕನಿಷ್ಠ 50,000 ವಿದ್ಯಾರ್ಥಿಗಳು ಉದ್ಯೋಗಾಂಕ್ಷಿಗಳಾಗಿ ಸರ್ಟಿಫಿಕೇಟ್‌ಗಳೊಂದಿಗೆ ಹೊರ ಬರುತ್ತಾರೆ. ಅರ್ಹತೆ ಆಧಾರದ ಉದ್ಯೋಗ ಸಿಗದೆ ಪರಿತಪಿಸುತ್ತಾರೆ. ಕರಾವಳಿ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸಬಲ್ಲ ಉದ್ಯಮಗಳಿಗೆ ಆದ್ಯತೆ ನೀಡಬೇಕು.
- ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಉತ್ತರ ಭಾರತದಿಂದ ವಲಸೆ ತೀವ್ರಗೊಳ್ಳುತ್ತಿದೆ. ಉದ್ಯೋಗ, ವ್ಯಾಪಾರ, ಗುತ್ತಿಗೆ ಕ್ಷೇತ್ರಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹೋಪಾದಿಯಲ್ಲಿ ಈ ವಲಸೆ ನಡೆಯುತ್ತಿದೆ. ಹಾಗೆಯೇ ಕರಾವಳಿ ಜಿಲ್ಲೆಗಳ ವಿದ್ಯಾವಂತ ಯುವಜನತೆ ಉದ್ಯೋಗಾವಕಾಶದ ಕೊರತೆಯಿಂದ ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ, ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಅನಿಯಂತ್ರಿತ ಒಳ ಹಾಗೂ ಹೊರ ವಲಸೆ ಸಾಮಾಜಿಕ ಬಿಕ್ಕಟ್ಟಿಗೂ ಕಾರಣವಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ಅಧ್ಯಯನ, ನಿಯಂತ್ರಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ವಲಸೆ ಕಾರ್ಮಿಕರ ಮೇಲಿನ ಶೋಷಣೆ, ದೌರ್ಜನ್ಯ ತಡೆಗಟ್ಟಲು ನಿಯಮಗಳನ್ನು ರೂಪಿಸಬೇಕಿದೆ.
- ಕರಾವಳಿ ಜಿಲ್ಲೆಗಳಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅರಸಿಕೊಂಡು ಯುವಜನರು ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಿಗೆ ಹೋಗುತ್ತಾರೆ. ಕರಾವಳಿ ಜಿಲ್ಲೆಗಳ ಆರ್ಥಿಕತೆ, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಕೊಡುಗೆ ನೀಡುತ್ತಾರೆ. ಈ ಅನಿವಾಸಿ ಕನ್ನಡಿಗರಿಗಾಗಿ ಕಲ್ಯಾಣ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ತರಬೇಕು, ಆ ನಿಟ್ಟಿನಲ್ಲಿ ಕೇರಳ ಮಾದರಿಯನ್ನು ಅನುಸರಿಸಬೇಕು.
- ಮರಳು ಹಾಗೂ ಕೆಂಪು ಕಲ್ಲು ಹೇರಳವಾಗಿ ಲಭ್ಯ ಇದ್ದರೂ, ಸ್ಪಷ್ಟವಾದ ಗಣಿಗಾರಿಕೆ ನೀತಿ ಇಲ್ಲದಿರುವುದರಿಂದ ಮರಳು ಹಾಗೂ ಕೆಂಪು ಕಲ್ಲು ದರ ತೀರಾ ದುಬಾರಿಯಾಗಿದೆ. ಇದು ಜನಸಾಮಾನ್ಯರ ಮನೆ ಕಟ್ಟುವ ಕನಸಿಗೂ ಅಡ್ಡಿಯಾಗಿದ್ದು, ನಿರ್ಮಾಣ ಕಾರ್ಮಿಕರು ಸೇರಿದಂತೆ ನಿರ್ಮಾಣ ವಲಯದಲ್ಲಿ ಸಂಕಷ್ಟಗಳಿಗೆ ಕಾರಣವಾಗಿದೆ. ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿ ಸರಳೀಕೃತ ಮರಳು, ಕೆಂಪು ಕಲ್ಲು ಗಣಿಗಾರಿಕೆ ನೀತಿ ಜಾರಿಗೆ ತರಬೇಕು. ಮರಳು ಹಾಗೂ ಕೆಂಪು ಕಲ್ಲು ದರ ನಿಗದಿಯನ್ನು ಜಿಲ್ಲಾಡಳಿತಗಳೇ ಮಾಡುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಸತಿ ಯೋಜನೆಗಳು ಜಾರಿಯಾಗದೆ ಎರಡು ದಶಕಗಳು ಕಳೆದಿವೆ. ಉಳಿದೆರಡು ಜಿಲ್ಲೆಗಳ ಸಮಸ್ಯೆಯೂ ಇದೇ ಆಗಿದೆ. ಮಂಗಳೂರು ನಗರ ಸೇರಿದಂತೆ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ನೂರಾರು ವಸತಿ ರಹಿತರು ಮನೆ ನಿವೇಶನ ಹಾಗೂ ವಸತಿ ಯೋಜನೆಗಾಗಿ ಅಸಹಾಯಕತೆಯಿಂದ ಕಾಯುತ್ತಿದ್ದಾರೆ. ಈ ಕುರಿತು ತಕ್ಷಣವೇ ಕ್ರಮಗಳು ಜರುಗಬೇಕು, ಸಮರೋಪಾದಿಯಲ್ಲಿ ಮನೆ ನಿವೇಶನ ವಿತರಣೆ, ವಸತಿ ಯೋಜನೆ ಜಾರಿಗೊಳಿಸಬೇಕು.
- ಖಾಸಗಿ ಶಿಕ್ಷಣ ಸಂಸ್ಥೆಗಳ ಏಕಸ್ವಾಮ್ಯ ಇಡೀ ಶಿಕ್ಷಣ ವ್ಯವಸ್ಥೆಯನ್ನು ದುಬಾರಿಗೊಳಿಸಿದೆ. ಎಸ್‌ಎಸ್‌ಎಲ್‌ಸಿ ತರುವಾಯ ಆಯ್ಕೆಯ ಶಿಕ್ಷಣ ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಅಸಾಧ್ಯ ಆಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಪಿಯು, ಪದವಿ ಕಾಲೇಜು, ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸುವ ಅಗತ್ಯ ಇದೆ. ಸರ್ಕಾರಿ ಕಾಲೇಜುಗಳಲ್ಲಿ ಖಾಸಗಿ ಕಾಲೇಜುಗಳಲ್ಲಿ ದೊರಕುವ ಕೋರ್ಸ್‌ಗಳು, ಪದವಿಗಳು ಲಭ್ಯ ಇರುವಂತೆ ನೋಡಿಕೊಳ್ಳಬೇಕಿದೆ. ಹೊಸದಾಗಿ ಖಾಸಗಿ ವಿ.ವಿ.ಗಳಿಗೆ ಅವಕಾಶ ನೀಡಬಾರದು. ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕು, ತಾಲೂಕು ಮಟ್ಟದಲ್ಲಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಬೇಕು.
- ತುಳು ಭಾಷೆಯ ಮಾನ್ಯತೆಗೆ ಸಂಬಂಧಿಸಿ ಜನತೆಯ ಬೇಡಿಕೆ ಈಡೇರಿಸಬೇಕು.
- ಕರಾವಳಿಯ ಹೆದ್ದಾರಿಗಳಲ್ಲಿ ಟೋಲ್ ಗೇಟ್‌ಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಇದು ಹೆದ್ದಾರಿ ಪ್ರಯಾಣವನ್ನು ದುಬಾರಿಗೊಳಿಸಿದೆ. ಸ್ಥಳೀಯರು ಹೆಚ್ಚು ಬಾಧಿತರಾಗುತ್ತಿದ್ದಾರೆ. ಬಹುತೇಕ ಟೋಲ್ ಬೂತ್‌ಗಳು ಅಂತರದ ನಿಯಮಗಳನ್ನು ಉಲ್ಲಂಘಿಸಿ ಸ್ಥಾಪಿಸಲಾಗುತ್ತಿದೆ. ಈ ರೀತಿಯಲ್ಲಿ ಟೋಲ್ ಗೇಟ್‌ಗಳನ್ನು ಸ್ಥಾಪಿಸುವುದನ್ನು ತಡೆಯಬೇಕು, ಅಂತರದ ನಿಯಮಗಳು ಸಹಿತ ಎಲ್ಲಾ ನಿಯಮಗಳು ಪಾಲನೆ ಆಗುವುದನ್ನು ಖಾತರಿಪಡಿಸಬೇಕು.
- ಕೊರಗ, ಮಲೆಕುಡಿಯ, ಕುಡುಬಿ ಸಹಿತ ಸಣ್ಣಪುಟ್ಟ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಅವರ ಸಂಸ್ಕೃತಿ, ಬದುಕು ರಕ್ಷಣೆಗೆ ಕ್ರಮಗಳು ಆಗಬೇಕು. ಅಳಿವಿನಂಚಿಗೆ ಸಾಗುತ್ತಿರುವ ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆ, ಕಲ್ಯಾಣ ಯೋಜನೆ ತಕ್ಷಣವೇ ಜಾರಿಗೆ ಬರಬೇಕು. ಡಾ. ಮುಹಮ್ಮದ್ ಪೀರ್ ವರದಿ ಜಾರಿಯಾಗಬೇಕು, ಅರಣ್ಯ ಹಕ್ಕು ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.
- ಡಿ.ಸಿ. ಮನ್ನಾ ಭೂಮಿ ಸಹಿತ ದಲಿತ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಬೇಕು.
- ಕಸ್ತೂರಿರಂಗನ್ ವರದಿಯ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಪಶ್ಚಿಮ ಘಟ್ಟ, ಮಲೆನಾಡಿನ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಈ ಕುರಿತು ದೃಢ ನಿರ್ಧಾರ ಕೈಗೊಳ್ಳಬೇಕು.
- ಮಂಗಳೂರು ನಗರ ಹಾಗೂ ಹೊರ ವಲಯದಲ್ಲಿ ಸಂಚಾರ ದಟ್ಟಣೆ ಬಹು ದೊಡ್ಡ ಸಮಸ್ಯೆಯಾಗಿದೆ. ವಾಹನ ಸಂಚಾರ ತ್ರಾಸದಾಯಕವಾಗಿದೆ. ಅಪಘಾತಗಳು ಹೆಚ್ಚುತ್ತಿವೆ. ವಾಹನ ದಟ್ಟಣೆ ನಿಭಾಯಿಸಲು ಮೇಲ್ಸೇತುವೆಗಳ ನಿರ್ಮಾಣ, ರಸ್ತೆಗಳ ಅಗಲೀಕರಣ, ರಿಂಗ್ ರೋಡ್‌ಗಳ ನಿರ್ಮಾಣ, ಮೆಟ್ರೊ ರೈಲು ಯೋಜನೆಗಳನ್ನು ಕಾರ್ಯಗತಗೊಳಿಸುವುದು.
- ಹೈಕೋರ್ಟ್ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು.
- ಕೋಮು ಸೌಹಾರ್ದತೆ, ಸಹಬಾಳ್ವೆ ಸಾಧ್ಯಗೊಳಿಸಲು ವಿಶೇಷ ಕಾರ್ಯಯೋಜನೆ ರೂಪಿಸುವುದು.
- ಕರಾವಳಿಯ ನದಿ, ಸಮುದ್ರವನ್ನು ಕೈಗಾರಿಕಾ ಮಾಲಿನ್ಯದಿಂದ ರಕ್ಷಿಸುವುದು, ಸಂಸ್ಕರಿಸದೆ ತ್ಯಾಜ್ಯ ನೀರು ಹರಿಸುವುದು, ಸರಿಯಾದ ಪ್ರಮಾಣದ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸದಿರುವ ಉದ್ಯಮ, ಕೈಗಾರಿಕಾ ಘಟಕಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು, ಬೈಕಂಪಾಡಿ ಕೈಗಾರಿಕಾ ವಲಯಕ್ಕೆ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸುವುದು.
- ಮೀನುಗಾರಿಕಾ ಉತ್ಪನ್ನಗಳ ಉದ್ಯಮಗಳು, ಫಿಶ್ ಮಿಲ್‌ಗಳಿಗೆ ಪ್ರತ್ಯೇಕ ಕೈಗಾರಿಕಾ ವಲಯ ಸ್ಥಾಪಿಸುವುದು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಜಯಂತಿ ಬಿ. ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಪ್ರಮೀಳಾ ಕೆ., ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.
ಇದನ್ನೂ ನೋಡಿ : SIR: ಮತದಾರರಿಗೆ ಸಂಕಟ | ರಾಜ್ಯಾದ್ಯಂತ ‘ಅಧ್ಯಯನ ಅಭಿಯಾನ’ Janashakthi Media
