ಶ್ರೀನಗರ: ಕಳೆದ ವರ್ಷ ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಲಡಾಖ್ ಆಡಳಿತ ಪರಿಹಾರಧನ ಘೋಷಿಸಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಲಡಾಖ್‌ನ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಯ ಬಳಿಕ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಪರಿಹಾರಕ್ಕೆ ಅನುಮೋದನೆ ನೀಡಿದ್ದಾರೆ.
2025ರ ಸೆಪ್ಟೆಂಬರ್ 24ರಂದು ಲಡಾಖ್‌ಗೆ ರಾಜ್ಯ ಸ್ಥಾನಮಾನ ಹಾಗೂ ಸಂವಿಧಾನದ ಆರನೇ ಅನುಸೂಚಿಯ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲೇಹ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 44 ಮಂದಿ ಗಾಯಗೊಂಡಿದ್ದರು ಎಂದು ಲಡಾಖ್ ಆಡಳಿತ ತಿಳಿಸಿದೆ.
ಮೃತ ನಾಲ್ವರಿ ಕುಟುಂಬಗಳಿಗೆ ತಲಾ ₹15 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಗಂಭೀರವಾಗಿ ಗಾಯಗೊಂಡ 24 ಮಂದಿಗೆ ತಲಾ ₹3 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡ 20 ಮಂದಿಗೆ ತಲಾ ₹1 ಲಕ್ಷ ನೀಡಲಾಗುತ್ತದೆ. ಒಟ್ಟಾರೆ ಪರಿಹಾರ ಪ್ಯಾಕೇಜ್ ₹1.52 ಕೋಟಿಯಾಗಲಿದೆ.
ಇದನ್ನೂ ಓದಿ : ಯೋಧನಿಗೆ ಜಾತಿ ಪ್ರಮಾಣಪತ್ರ ನೀಡಲು ವಿಳಂಬ: ಅಧಿಕಾರಿಗಳಿಗೆ ಸುಧೀರ್ ಕುಮಾರ್ ಮುರೊಳ್ಳಿ ಫುಲ್ ಕ್ಲಾಸ್
ಸಾರ್ವಜನಿಕ ಅಶಾಂತಿ ಅಥವಾ ಗಲಭೆ ಸಂದರ್ಭಗಳಲ್ಲಿ ಸಂಭವಿಸುವ ಸಾವು-ನೋವುಗಳಿಗೆ ಪರಿಹಾರ ನೀಡಲು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ನಿರ್ದಿಷ್ಟ ಸಾಮಾನ್ಯ ನೀತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಮಾನವೀಯ ನೆರವು ನೀಡುವ ಉದ್ದೇಶದಿಂದ ಆಡಳಿತ ಪರಿಹಾರ ಪ್ಯಾಕೇಜ್ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯದೊಂದಿಗೆ ಸೆಪ್ಟೆಂಬರ್ 9ರಂದು ನಡೆದ ಸಭೆಯಲ್ಲಿ ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (KDA) ಕೂಡ ಹಿಂಸಾಚಾರದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದವು. ಅದರ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
ಪರಿಹಾರ ಘೋಷಣೆ ಸಂತ್ರಸ್ತ ಕುಟುಂಬಗಳಿಗೆ ನೆರವಾಗುವ ಕ್ರಮವಾಗಿದೆ ಎಂದು ಲಡಾಖ್ ಆಡಳಿತ ಹೇಳಿದೆ. ಆದರೆ ಪರಿಹಾರ ನೀಡುವುದರ ಜೊತೆಗೆ ಹಿಂಸಾಚಾರದ ಕುರಿತು ನಡೆಯುತ್ತಿರುವ ತನಿಖೆ, ಪ್ರಕರಣಗಳ ಹಿಂಪಡೆಯುವಿಕೆ ಮತ್ತು ಲಡಾಖ್‌ನ ರಾಜಕೀಯ ಬೇಡಿಕೆಗಳ ಕುರಿತ ಮಾತುಕತೆಗಳೂ ಮುಂದುವರಿಯಬೇಕಿದೆ ಎಂಬುದು LAB ಮತ್ತು KDA ನಿಲುವಾಗಿದೆ.
ಇದನ್ನೂ ನೋಡಿ : ಜಿಡಿಪಿ ಬೆಳವಣಿಗೆ ಎಂದರೆ ಅಸಮಾನತೆ, ನಿರುದ್ಯೋಗದ ಬೆಳವಣಿಗೆಯೇ? Janashakthi Media
