ನಾಗಮಂಗಲ: ಬರಪೀಡಿತ ಮಂಡ್ಯ ಜಿಲ್ಲೆಗೆ ₹2,000 ಕೋಟಿ ಬರ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ನಾಗಮಂಗಲ ತಾಲ್ಲೂಕು ಸಮಿತಿ ಮುಖ್ಯಮಂತ್ರಿ ಹಾಗೂ ನಾಗಮಂಗಲ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ.
ಮಂಡ್ಯ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಇಡೀ ಜಿಲ್ಲೆಯನ್ನು ಬರ ಆವರಿಸಿದೆ. ಕಳೆದ ಹಲವು ವರ್ಷಗಳಲ್ಲಿ ಕಾಣದಷ್ಟು ಮಳೆ ಕೊರತೆಯನ್ನು ಮಂಡ್ಯ ಜಿಲ್ಲೆ ಎದುರಿಸುತ್ತಿದೆ. ರಾಜ್ಯ ಸರ್ಕಾರದ ನೀರಾವರಿ ಇಲಾಖೆಯು ಬೆಳೆಗಳಿಗೆ ಕಾವೇರಿ ನಾಲ್ಕು ನೀರನ್ನು ಸಮರ್ಪಕವಾಗಿ ನೀಡದಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ.
ಮಳೆ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೆಳೆ ನಷ್ಟವಾಗಿದ್ದು, ರೈತರು ಮತ್ತು ಕೃಷಿ ಕೂಲಿಕಾರರು ಸಂಕಷ್ಟದಲ್ಲಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಕಾವೇರಿ ವಿವಾದದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಬರಪೀಡಿತ ಮಂಡ್ಯ ಜಿಲ್ಲೆಗೆ ಕೇಂದ್ರ ಸರ್ಕಾರದಿಂದಲೂ ವಿಶೇಷ ಪರಿಹಾರ ಹಾಗೂ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ತಾಲ್ಲೂಕು ಅಧ್ಯಕ್ಷೆ ಪ್ರೇಮಮ್ಮ, ಕಾರ್ಯದರ್ಶಿ ವರಲಕ್ಷ್ಮೀ, ಖಜಾಂಚಿ ಮಂಜುಳಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ : ಅರಣ್ಯ ಇಂಡೀಕರಣ ರದ್ದುಪಡಿಸಿ ರೈತರ ಭೂಮಿ ಹಕ್ಕು ಪುನರ್ಸ್ಥಾಪಿಸಿ: ತಿಪಟೂರಿನಲ್ಲಿ ರೈತರ ಸಮಾವೇಶ

ಸಂಘಟನೆಯ ಪ್ರಮುಖ ಬೇಡಿಕೆಗಳು
- ಬರಪೀಡಿತ ಎಂದು ಘೋಷಿಸಿರುವ ಮಂಡ್ಯ ಜಿಲ್ಲೆಗೆ ಕಾವೇರಿ ನೀರಿನ ಕೊರತೆ ಮತ್ತು ಬರ ನಿವಾರಣೆಗಾಗಿ ₹2,000 ಕೋಟಿ ಅನುದಾನ ನೀಡಬೇಕು.
- ರೈತರಿಗೆ ಬೆಳೆ ನಷ್ಟಕ್ಕೆ ಎಕರೆಗೆ ₹50,000 ಪರಿಹಾರ ಹಾಗೂ ಕೂಲಿಕಾರರಿಗೆ ಕೂಲಿ ನಷ್ಟಕ್ಕೆ ಪರಿಹಾರ ನೀಡಬೇಕು.
- ಎಂ.ಜಿ.ಎನ್.ಆರ್.ಇ.ಜಿ. (ಗ್ರಾಮೀಣ) ಯೋಜನೆಯಡಿ ಕುಟುಂಬಕ್ಕೆ ವಾರ್ಷಿಕ 200 ದಿನ ಕೆಲಸ ನೀಡಬೇಕು ಮತ್ತು ದಿನಗೂಲಿ ₹700ಕ್ಕೆ ಹೆಚ್ಚಿಸಬೇಕು.
- ಮಂಡ್ಯ ಜಿಲ್ಲೆಯ ಎಲ್ಲಾ ರೈತರು ಹಾಗೂ ಕೂಲಿಕಾರರ, ಮಹಿಳಾ ಸ್ವಸಹಾಯ ಸಂಘಗಳ ಹಾಗೂ ಮೈಕ್ರೋ ಫೈನಾನ್ಸ್ ಸಾಲಗಳನ್ನು ಮನ್ನಾ ಮಾಡಬೇಕು.
- ಕಾವೇರಿ ನೀರಿನ ಕೊರತೆಯ ಸಮಸ್ಯೆಯಲ್ಲಿ ಮಧ್ಯಪ್ರವೇಶ ಮಾಡಲು ₹5,000 ಕೋಟಿ ರೂಪಾಯಿಗಳ ‘ಶಾಶ್ವತ ಪರಿಹಾರ ನಿಧಿ’ ಸ್ಥಾಪಿಸಬೇಕು.
- ಶಾಶ್ವತ ಸಂಘರ್ಷ ಪರಿಹಾರ ಸೂತ್ರ ರೂಪಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಬೇಕು.
- ಬರಪೀಡಿತ ಜಿಲ್ಲೆಯಿಂದ ಉದ್ಯೋಗ ಅರಸಿ ರೈತರು, ಕೂಲಿಕಾರರು ಹಾಗೂ ಬಡವರು ವಲಸೆ ಹೋಗುವುದನ್ನು ತಡೆಯಲು ಬರ ಪರಿಹಾರ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು.
- ಜಾನುವಾರುಗಳಿಗೆ ನೀರು ಕುಡಿಯಲು ತಕ್ಷಣವೇ ತೊಟ್ಟಿಗಳನ್ನು ಕೆರೆ ಕಟ್ಟೆಗಳಲ್ಲಿ ನಿರ್ಮಿಸಬೇಕು.
- ನಾಗಮಂಗಲ ತಾಲ್ಲೂಕಿನ ತೊರೆಮಲ್ಲೂರು, ನಾಲ್ಕನಹಳ್ಳಿ, ಮುಳ್ಳನಹಳ್ಳಿ, ಬೆಳ್ಳೂರು ಕೊಪ್ಪಲು, ದೊಡ್ಡಜಕನಹಳ್ಳಿ ಭಾಗಗಳಲ್ಲಿ ಮಾರ್ಗವಾಗಿ ಯಡಿಯೂರಿಗೆ ಬೆಳಗ್ಗೆ 8.30ಕ್ಕೆ ಎಂ.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ನೋಡಿ : ಕಾರ್ಮಿಕರ ವಿಧಾನಸೌಧ ಚಲೋ | ಏನಿದು ಹೋರಾಟ? ಪ್ರಮುಖ ಬೇಡಿಕೆಗಳೇನು? – ಮೀನಾಕ್ಷಿ ಸುಂದರಂ Janashakthi Media
