ರೈಲು ತಾಂತ್ರಿಕ ದೋಷ: ಪರೀಕ್ಷೆ ತಪ್ಪಿಸಿಕೊಂಡವರಿಗೆ ಮರುಪರೀಕ್ಷೆ ನಡೆಸಿ – ಡಿವೈಎಫ್ಐ

ಬೆಂಗಳೂರು: ರೈಲಿನ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ವಂಚಿತರಾದ ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷ ಮರುಪರೀಕ್ಷೆ ನಡೆಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ. ರೈಲು

ಈ ಕುರಿತು ಡಿವೈಎಫ್ಐ ರಾಜ್ಯ ಅಧ್ಯಕ್ಷ ಲವಿತ್ರ ವಸ್ತ್ರದ ಹಾಗೂ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಜಂಟಿ ಹೇಳಿಕೆ ನೀಡಿದ್ದು, ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಂದ ಮರುಪರೀಕ್ಷೆಗಾಗಿ ಯಾವುದೇ ಹೆಚ್ಚುವರಿ ಶುಲ್ಕ ಪಡೆಯಬಾರದು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿತ್ತು. ವಿಜಯಪುರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ವಿಜಯಪುರ–ಯಶವಂತಪುರ (16548) ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನಾಲ್ಕು ಗಂಟೆಗೂ ಅಧಿಕ ಕಾಲ ರೈಲು ವಿಳಂಬವಾದ ಹಿನ್ನೆಲೆಯಲ್ಲಿ ಐನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಲು ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಭ್ಯರ್ಥಿಗಳು ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗದಿರುವುದಕ್ಕೆ ಅವರೇ ಹೊಣೆಗಾರರಲ್ಲ. ರೈಲ್ವೆ ಇಲಾಖೆಯ ತಾಂತ್ರಿಕ ದೋಷದಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಭ್ಯರ್ಥಿಗಳಿಗೆ ತಮ್ಮ ತಪ್ಪಿಲ್ಲದೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಂತಾಗಿದೆ ಎಂದು ಡಿವೈಎಫ್ಐ ಮುಖಂಡರು ಹೇಳಿದ್ದಾರೆ.

ವರ್ಷಗಟ್ಟಲೆ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಅಭ್ಯರ್ಥಿಗಳು ತಮ್ಮ ಯಾವುದೇ ತಪ್ಪಿಲ್ಲದೆ ಪರೀಕ್ಷೆಯಿಂದ ವಂಚಿತರಾಗಿರುವುದು ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ತಲುಪಲು ಸಾಧ್ಯವಾಗದ ಅಭ್ಯರ್ಥಿಗಳನ್ನು ಗುರುತಿಸಿ, ಅವರ ಅರ್ಹತೆ ಕಳೆದುಹೋಗದಂತೆ ವಿಶೇಷ ಮರುಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರೈಲು

ಇದನ್ನೂ ಓದಿ : ಹಳೆಯ ಅಹಿಂದಾ ಬಳಗಕ್ಕೆ ಕೊಕ್? ಹೊಸ ತಂಡದೊಂದಿಗೆ ಅಹಿಂದಾ ಪುನರ್‌ಸಂಘಟನೆಗೆ ಸಿದ್ದರಾಮಯ್ಯ ಚಿಂತನೆ

ಈ ಘಟನೆ ಖಂಡಿಸಿ ವಿದ್ಯಾರ್ಥಿಗಳು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪರೀಕ್ಷೆಯಿಂದ ವಂಚಿತರಾದ ಎಲ್ಲ ಅಭ್ಯರ್ಥಿಗಳಿಗೂ ವಿಶೇಷವಾಗಿ ಮರುಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೆಇಎ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.

ಮರುಪರೀಕ್ಷೆಯ ದಿನಾಂಕ, ಸಮಯ ಹಾಗೂ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಕೂಡಲೇ ಪ್ರಕಟಿಸಬೇಕು. ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಸಿರುವುದರಿಂದ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಲವಿತ್ರ ವಸ್ತ್ರದ ಮತ್ತು ಬಸವರಾಜ ಪೂಜಾರ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾದರೆ ಅಭ್ಯರ್ಥಿಗಳ ಭವಿಷ್ಯವೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಪರೀಕ್ಷಾ ದಿನಗಳಲ್ಲಿ ಹೆಚ್ಚುವರಿ ರೈಲುಗಳು ಹಾಗೂ ಬಸ್ ಸೇವೆಗಳನ್ನು ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಹಿಂದೆಯೂ ರೈಲುಗಳ ಸಮಯಪಾಲನೆ, ಸಂಪರ್ಕ ವ್ಯವಸ್ಥೆ ಹಾಗೂ ತುರ್ತು ದುರಸ್ತಿ ಕಾರ್ಯಗಳಿಂದಾಗಿ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಸಮಯಕ್ಕೆ ತಲುಪಲಾಗದೆ ವಂಚಿತರಾದ ಘಟನೆಗಳು ನಡೆದಿವೆ. ಆದರೂ ಇಂತಹ ಸಂದರ್ಭಗಳಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಡಿವೈಎಫ್ಐ ಆರೋಪಿಸಿದೆ.

ರೈಲಿನ ತಾಂತ್ರಿಕ ದೋಷಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪರೀಕ್ಷಾರ್ಥಿಗಳ ಭವಿಷ್ಯದೊಂದಿಗೆ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲಾಗದು ಎಂದು ಸಂಘಟನೆ ಎಚ್ಚರಿಸಿದೆ.

ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಯಾವುದೇ ನೆಪ ಹೇಳದೆ, ಅಭ್ಯರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮರುಪರೀಕ್ಷೆ ನಡೆಸಲು ಕೆಇಎಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಲವಿತ್ರ ವಸ್ತ್ರದ ಹಾಗೂ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದ್ದಾರೆ. ರೈಲು

ಇದನ್ನೂ ನೋಡಿ : ಕಾರ್ಮಿಕರ ವಿಧಾನಸೌಧ ಚಲೋ | ಏನಿದು ಹೋರಾಟ? ಪ್ರಮುಖ ಬೇಡಿಕೆಗಳೇನು? – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *