4,798 ಮಂದಿ ನಾಪತ್ತೆ; ರಸುುವಾ, ನುವಾಕೋಟ್ನಲ್ಲಿ ಶಾಲಾ ಮಕ್ಕಳಿಗಾಗಿ ತೀವ್ರ ಶೋಧ
ಕಠ್ಮಂಡು: ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ಸುಮಾರು 600 ಮಕ್ಕಳು ನಾಪತ್ತೆಯಾಗಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ರಸುುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಮಾತ್ರ ಸುಮಾರು 580ರಿಂದ 630 ಮಕ್ಕಳು ಇನ್ನೂ ಪತ್ತೆಯಾಗಿಲ್ಲ ಎಂದು ಸ್ಥಳೀಯ ಶಿಕ್ಷಣ ಇಲಾಖೆಯ ಪ್ರಾಥಮಿಕ ಮಾಹಿತಿ ತಿಳಿಸಿದೆ. ಇದೇ ವೇಳೆ ಪ್ರವಾಹ ಹಾಗೂ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 1,282ಕ್ಕೆ ಏರಿಕೆಯಾಗಿದ್ದು, ಒಟ್ಟು 4,798 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ಭದ್ರತಾ ಪಡೆಗಳು ತಿಳಿಸಿವೆ. ನೇಪಾಳ
ನೇಪಾಳ–ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮ-ಬಂಡೆಗಳ ಕುಸಿತದ ಬಳಿಕ ಭಾರೀ ಪ್ರಮಾಣದಲ್ಲಿ ನೀರು, ಕೆಸರು ಮತ್ತು ಅವಶೇಷಗಳು ಕೆಳಭಾಗಕ್ಕೆ ಹರಿದು ಬಂದಿದ್ದವು. ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳಿಗೆ ಪ್ರವಾಹ ನುಗ್ಗಿದ್ದು, ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ.
ನೇಪಾಳ ಪೊಲೀಸರ ಪ್ರಕಾರ ಚಿತ್ವಾನ್ನಲ್ಲಿ 359, ನವಲ್ಪರಾಸಿ ಪೂರ್ವದಲ್ಲಿ 218, ನವಲ್ಪರಾಸಿ ಪಶ್ಚಿಮದಲ್ಲಿ 208, ನುವಾಕೋಟ್ನಲ್ಲಿ 185, ರಸುುವಾದಲ್ಲಿ 140, ಗೋರಖಾದಲ್ಲಿ 72, ಧಾದಿಂಗ್ನಲ್ಲಿ 60 ಮತ್ತು ತನಹುನ್ನಲ್ಲಿ 38 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟ ಬಳಿಕ ಸಾವಿನ ಸಂಖ್ಯೆ 1,282ಕ್ಕೆ ಏರಿಕೆಯಾಗಿದೆ.
ನಾಪತ್ತೆಯಾಗಿರುವವರ ಪತ್ತೆಗಾಗಿ ನೇಪಾಳದ ಭದ್ರತಾ ಪಡೆಗಳ ಜಂಟಿ ತಂಡಗಳು ಹಲವು ಜಿಲ್ಲೆಗಳಲ್ಲಿ ಶೋಧ ಕಾರ್ಯ ಮುಂದುವರಿಸಿವೆ. ಆದರೆ ಸಂಪರ್ಕ ವ್ಯವಸ್ಥೆ ಹಾನಿಗೊಳಗಾಗಿರುವುದರಿಂದ ನಿಖರ ಮಾಹಿತಿಯನ್ನು ಸಂಗ್ರಹಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.
ರಸುುವಾ ಜಿಲ್ಲೆಯಲ್ಲಿ ಸುಮಾರು 280 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ನುವಾಕೋಟ್ ಜಿಲ್ಲೆಯಲ್ಲಿ 300ರಿಂದ 350 ಮಕ್ಕಳು ನಾಪತ್ತೆಯಾಗಿರಬಹುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ನುವಾಕೋಟ್ನ ಬಿದೂರ್ ಪುರಸಭೆಯೊಂದರಲ್ಲೇ ಸುಮಾರು 250 ಮಕ್ಕಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳ
ಇದನ್ನೂ ಓದಿ : ‘ಕಪಿಲ್ ಮಿಶ್ರಾ ಕರೆ ಮಾಡಿದ್ದರಿಂದ ಜೈಲಿಗೆ ಹೋಗಲಿಲ್ಲ’: ಜಂತರ್ಮಂತರ್ ಹಲ್ಲೆ ಆರೋಪದ ಸ್ವತಂತ್ರ ಭಾರದ್ವಾಜ್ ಹೇಳಿಕೆ ವೈರಲ್
ಪ್ರವಾಹದಿಂದ ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ. ರಸುುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಕನಿಷ್ಠ 22 ಶಿಕ್ಷಕರು ಹಾಗೂ ಸಿಬ್ಬಂದಿ ಇನ್ನೂ ಪತ್ತೆಯಾಗಿಲ್ಲ. ಧಾದಿಂಗ್ ಮತ್ತು ಗೋರಖಾದಿಂದ ರಸುುವಾಕ್ಕೆ ತೆರಳಿದ್ದ ಕೆಲವು ಶಿಕ್ಷಕರೂ ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೂ ಭಾರೀ ಹಾನಿಯಾಗಿದೆ. ರಸುುವಾ, ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳಲ್ಲಿ 22 ಶಾಲೆಗಳು ಪ್ರವಾಹದಿಂದ ಹಾನಿಗೊಳಗಾಗಿದ್ದು, ಅವುಗಳಲ್ಲಿ 12 ಶಾಲೆಗಳು ಸಂಪೂರ್ಣವಾಗಿ ನಾಶವಾಗಿವೆ. ಶಾಲಾ ಕಟ್ಟಡಗಳ ಹಾನಿಯ ಜತೆಗೆ ಮಕ್ಕಳ ಕುಟುಂಬಗಳೇ ಚದುರಿಹೋಗಿರುವುದರಿಂದ ನಾಪತ್ತೆಯಾದ ವಿದ್ಯಾರ್ಥಿಗಳ ನಿಖರ ಸಂಖ್ಯೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ.
ವಿಪತ್ತಿನ ಪರಿಣಾಮ ಮಕ್ಕಳ ಮೇಲೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ ಎಂದು ಯುನಿಸೆಫ್ ಎಚ್ಚರಿಸಿದೆ. ಪ್ರವಾಹದಿಂದ ಸಾವಿರಾರು ಮಕ್ಕಳು ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಕುಟುಂಬಗಳಿಂದ ಬೇರ್ಪಟ್ಟ ಮಕ್ಕಳನ್ನು ಪತ್ತೆಹಚ್ಚಿ, ನೋಂದಾಯಿಸಿ, ಅವರ ಪೋಷಕರೊಂದಿಗೆ ಪುನರ್ಮಿಲನಗೊಳಿಸುವ ಕಾರ್ಯವೂ ತುರ್ತಾಗಿ ನಡೆಯಬೇಕಿದೆ.
ಇದೇ ವೇಳೆ, ಭಾರತವು ನಾಪತ್ತೆಯಾಗಿರುವವರನ್ನು ಗುರುತಿಸಲು ನೇಪಾಳಕ್ಕೆ ಡಿಎನ್ಎ ಪರೀಕ್ಷಾ ನೆರವು ನೀಡಲು ಮುಂದಾಗಿದೆ. ಭಾರತದಲ್ಲಿರುವ ನಾಪತ್ತೆಯಾದವರ ನಿಕಟ ಜೈವಿಕ ಸಂಬಂಧಿಕರ ಮಾದರಿಗಳನ್ನು ಸರ್ಕಾರಿ ಮತ್ತು ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಸಂಗ್ರಹಿಸಿ ಡಿಎನ್ಎ ಪ್ರೊಫೈಲ್ ಸಿದ್ಧಪಡಿಸುವ ವ್ಯವಸ್ಥೆ ಮಾಡಲಾಗಿದೆ. ಇದನ್ನು ನೇಪಾಳದಲ್ಲಿ ಪತ್ತೆಯಾಗಿರುವ ಗುರುತಿಸಲಾಗದ ಮೃತದೇಹಗಳ ಡಿಎನ್ಎಯೊಂದಿಗೆ ಹೋಲಿಸಿ ಗುರುತಿಸುವ ಪ್ರಕ್ರಿಯೆಗೆ ಬಳಸಲಾಗುತ್ತದೆ.
ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರೂ, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿರುವುದು ದುರಂತದ ಭೀಕರತೆಯನ್ನು ತೋರಿಸುತ್ತಿದೆ. ವಿಶೇಷವಾಗಿ ನೂರಾರು ಮಕ್ಕಳು ಪತ್ತೆಯಾಗದಿರುವುದು ಕುಟುಂಬಗಳಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಸಂಪರ್ಕ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಪುನಃಸ್ಥಾಪಿಸುವುದರ ಜತೆಗೆ ನಾಪತ್ತೆಯಾದವರನ್ನು ಪತ್ತೆಹಚ್ಚುವುದು ಇದೀಗ ಅಧಿಕಾರಿಗಳ ಪ್ರಮುಖ ಸವಾಲಾಗಿದೆ. ನೇಪಾಳ
ಇದನ್ನೂ ನೋಡಿ : “ನಮ್ಮ ಭೂಮಿ ನಮಗೆ ಕೊಟ್ಟುಬಿಡಿ! ನೈಸ್ ಯೋಜನೆಯ ಹಗರಣದ ತನಿಖೆ ಯಾವಾಗ?” Janashakthi Media
