ನವದೆಹಲಿ: ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ತಂತ್ರಜ್ಞಾನವನ್ನು ಕೇವಲ ದತ್ತಾಂಶ ಸಂಗ್ರಹಣೆ ಅಥವಾ ಯಾಂತ್ರೀಕರಣಕ್ಕೆ ಸೀಮಿತಗೊಳಿಸದೆ ರೈತರು ಮತ್ತು ಅವರ ಬದುಕನ್ನು ಕೇಂದ್ರದಲ್ಲಿಟ್ಟುಕೊಂಡು ರೂಪಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಡೌನ್‌ಟುಅರ್ಥ ವರದಿ ಮಾಡಿದೆ. ಕೃಷಿಯಲ್ಲಿ
ಹವಾಮಾನ ವೈಪರೀತ್ಯ, ಅನಿಯಮಿತ ಮಳೆ, ಬರ, ಪ್ರವಾಹ, ಉಷ್ಣತೆಯ ಹೆಚ್ಚಳ, ಕೀಟ ಮತ್ತು ರೋಗಬಾಧೆ, ಮಣ್ಣಿನ ಗುಣಮಟ್ಟ ಕುಸಿತ ಹಾಗೂ ಮಾರುಕಟ್ಟೆಯ ಏರಿಳಿತ ಸೇರಿದಂತೆ ಹಲವು ಅಪಾಯಗಳನ್ನು ಭಾರತೀಯ ರೈತರು ಏಕಕಾಲದಲ್ಲಿ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಐ ಆಧಾರಿತ ವ್ಯವಸ್ಥೆಗಳು ಅಪಾಯಗಳನ್ನು ಮುಂಚಿತವಾಗಿ ಗುರುತಿಸಿ ರೈತರಿಗೆ ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗುವಂತಿರಬೇಕು ಎಂದು ಕೃಷಿ ಕ್ಷೇತ್ರದ ತಜ್ಞರು ಪ್ರತಿಪಾದಿಸಿದ್ದಾರೆ.
ಮಣ್ಣಿನ ತೇವಾಂಶ, ಹವಾಮಾನ ಮುನ್ಸೂಚನೆ, ಬೆಳೆಗಳ ಸ್ಥಿತಿ, ಕೀಟಬಾಧೆ, ನೀರಿನ ಲಭ್ಯತೆ ಹಾಗೂ ಮಾರುಕಟ್ಟೆ ಪರಿಸ್ಥಿತಿಯಂತಹ ಮಾಹಿತಿಯನ್ನು ಒಗ್ಗೂಡಿಸಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ಸಲಹೆ ನೀಡಲು ಎಐ ಬಳಸಬಹುದು. ಇದರಿಂದ ಬೆಳೆ ಆಯ್ಕೆ, ನೀರಿನ ನಿರ್ವಹಣೆ, ಕೃಷಿ ಒಳಸುರಿಗಳ ಬಳಕೆ, ವಿಮೆ ಹಾಗೂ ಸಾಲದಂತಹ ವಿಷಯಗಳಲ್ಲಿ ರೈತರಿಗೆ ಸಮಯೋಚಿತ ನೆರವು ದೊರೆಯುವ ಸಾಧ್ಯತೆಯಿದೆ.
ಆದರೆ ಎಐ ಆಧಾರಿತ ಕೃಷಿ ವ್ಯವಸ್ಥೆಗಳು ರೈತರನ್ನು ತಂತ್ರಜ್ಞಾನದ ಬಳಕೆದಾರರನ್ನಾಗಿ ಮಾತ್ರ ನೋಡುವ ಬದಲು, ನಿರ್ಧಾರ ಪ್ರಕ್ರಿಯೆಯ ಕೇಂದ್ರದಲ್ಲಿರಿಸಬೇಕಿದೆ. ತಂತ್ರಜ್ಞಾನವು ರೈತರ ಅನುಭವ ಮತ್ತು ಕೃಷಿ ವಿಸ್ತರಣಾ ಸೇವೆಗಳಿಗೆ ಪರ್ಯಾಯವಾಗದೆ ಅವುಗಳನ್ನು ಮತ್ತಷ್ಟು ಬಲಪಡಿಸುವ ಸಾಧನವಾಗಬೇಕು ಎಂಬ ನಿಲುವು ವ್ಯಕ್ತವಾಗಿದೆ.
ಭಾರತದಂತಹ ವೈವಿಧ್ಯಮಯ ಕೃಷಿ ವ್ಯವಸ್ಥೆಯಿರುವ ದೇಶದಲ್ಲಿ ಒಂದೇ ರೀತಿಯ ತಾಂತ್ರಿಕ ಪರಿಹಾರ ಎಲ್ಲ ರೈತರಿಗೆ ಅನ್ವಯಿಸುವುದಿಲ್ಲ. ಬೆಳೆ, ಮಣ್ಣು, ಹವಾಮಾನ, ನೀರಿನ ಲಭ್ಯತೆ ಹಾಗೂ ಸ್ಥಳೀಯ ಕೃಷಿ ಪದ್ಧತಿಗಳನ್ನು ಪರಿಗಣಿಸಿ ರೈತರಿಗೆ ಸ್ಥಳೀಯವಾಗಿ ಅರ್ಥವಾಗುವ ರೀತಿಯಲ್ಲಿ ಸಲಹೆ ನೀಡುವುದು ಅಗತ್ಯ. ಭಾಷೆಯೂ ಇದರಲ್ಲಿ ಪ್ರಮುಖ ಅಂಶವಾಗಿದ್ದು, ಸಂಕೀರ್ಣ ತಾಂತ್ರಿಕ ಮಾಹಿತಿಯನ್ನು ರೈತರಿಗೆ ಸುಲಭವಾಗಿ ಅರ್ಥವಾಗುವ ಭಾಷೆ ಮತ್ತು ರೂಪದಲ್ಲಿ ತಲುಪಿಸಬೇಕಿದೆ. ಕೃಷಿಯಲ್ಲಿ
ಇದನ್ನೂ ಓದಿ : ಮೂರು ದಶಕಗಳಿಂದ ಸಂಕಷ್ಟದಲ್ಲಿರುವ ನೈಸ್ ಭೂ ಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರಗಳು ಪರಿಹರಿಸಿಲ್ಲ: ಡಾ. ಕೆ. ಪ್ರಕಾಶ್
ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ದತ್ತಾಂಶದ ಸುರಕ್ಷತೆ ಮತ್ತು ರೈತರ ಹಕ್ಕುಗಳ ಪ್ರಶ್ನೆಯೂ ಮಹತ್ವ ಪಡೆದಿದೆ. ರೈತರ ಭೂಮಿ, ಬೆಳೆ, ಉತ್ಪಾದನೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾರು ಸಂಗ್ರಹಿಸುತ್ತಾರೆ, ಹೇಗೆ ಬಳಸುತ್ತಾರೆ ಮತ್ತು ಅದರ ಮೇಲಿನ ನಿಯಂತ್ರಣ ಯಾರದ್ದು ಎಂಬುದರ ಬಗ್ಗೆ ಸ್ಪಷ್ಟ ನಿಯಮಗಳ ಅಗತ್ಯವಿದೆ. ರೈತರ ದತ್ತಾಂಶವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಂದರ್ಭದಲ್ಲಿ ಅವರ ಹಿತಾಸಕ್ತಿಗೆ ಸೂಕ್ತ ರಕ್ಷಣೆ ಇರಬೇಕು.
ಕೃತಕ ಬುದ್ಧಿಮತ್ತೆಯ ನೆರವಿನಿಂದ ಕೃಷಿಯಲ್ಲಿ ಹವಾಮಾನ ಮತ್ತು ಉತ್ಪಾದನಾ ಅಪಾಯಗಳನ್ನು ಮುಂಚಿತವಾಗಿ ಅಂದಾಜಿಸಿ, ಬೆಳೆ ಮತ್ತು ನೀರಿನ ನಿರ್ವಹಣೆಯಲ್ಲಿ ಬದಲಾವಣೆ ಮಾಡುವುದು, ಸೂಕ್ತ ಒಳಸುರಿಗಳನ್ನು ಆಯ್ಕೆ ಮಾಡುವುದು ಹಾಗೂ ವಿಮೆ ಮತ್ತು ಸಾಮಾಜಿಕ ಭದ್ರತಾ ನೆರವನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ವ್ಯವಸ್ಥೆ ರೂಪಿಸಬಹುದು. ಇಂತಹ ತಂತ್ರಜ್ಞಾನವು ಸಂಕಷ್ಟ ಸಂಭವಿಸಿದ ನಂತರ ಪರಿಹಾರ ನೀಡುವ ಮಾದರಿಯಿಂದ ಅಪಾಯ ಸಂಭವಿಸುವ ಮೊದಲೇ ಕ್ರಮ ಕೈಗೊಳ್ಳುವ ಮಾದರಿಗೆ ಕೃಷಿಯನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೃಷಿಗಾಗಿ ರೂಪುಗೊಳ್ಳುತ್ತಿರುವ ಡಿಜಿಟಲ್ ಮೂಲಸೌಕರ್ಯವನ್ನು ರೈತಕೇಂದ್ರಿತವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಎಷ್ಟು ದತ್ತಾಂಶ ಸಂಗ್ರಹಿಸಲಾಗಿದೆ ಅಥವಾ ಎಷ್ಟು ಡಿಜಿಟಲ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂಬುದಕ್ಕಿಂತ, ರೈತರ ನಷ್ಟವನ್ನು ಎಷ್ಟು ಕಡಿಮೆ ಮಾಡಲಾಗಿದೆ, ಅವರ ಆದಾಯ ಮತ್ತು ಜೀವನೋಪಾಯಕ್ಕೆ ಎಷ್ಟು ನೆರವಾಗಿದೆ ಎಂಬುದೇ ಇಂತಹ ತಂತ್ರಜ್ಞಾನಗಳ ಯಶಸ್ಸಿನ ಮಾನದಂಡವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೃಷಿಯಲ್ಲಿ ಎಐ ಬಳಕೆ ಹೆಚ್ಚಿಸುವುದರ ಜೊತೆಗೆ ಹೂಡಿಕೆ, ಸಂಶೋಧನೆ, ನವೀನತೆ ಮತ್ತು ಸೂಕ್ತ ನಿಯಂತ್ರಣ ವ್ಯವಸ್ಥೆಯೂ ಅಗತ್ಯ. ತಂತ್ರಜ್ಞಾನವು ಕೆಲವೇ ದೊಡ್ಡ ರೈತರು ಅಥವಾ ಕೃಷಿ ಕಂಪನಿಗಳಿಗೆ ಮಾತ್ರ ಲಾಭದಾಯಕವಾಗದೆ ಸಣ್ಣ ಮತ್ತು ಅತಿಸಣ್ಣ ರೈತರಿಗೂ ತಲುಪುವಂತೆ ಮಾಡುವುದೇ ಮುಂದಿನ ಪ್ರಮುಖ ಸವಾಲಾಗಿದೆ.
ಇದನ್ನೂ ನೋಡಿ : ‘ನಾವು ಕಳ್ಳರಲ್ಲ… ಈ ದೇಶದ ನಾಗರಿಕರು; ನಮ್ಮ ಮತದ ಹಕ್ಕು ಕಸಿಯಲು ಬಿಡಲ್ಲ’ Janashakthi Media
