‘ಸಮುದಾಯ ಸಂಘಟನೆ’ ಸಾಂಸ್ಕೃತಿಕ ಪ್ರತಿರೋಧದ ಧ್ವನಿಯಾಗಿ ಕೆಲಸ ಮಾಡುತ್ತಿದೆ: ಶಂಕರ ಹಲಗತ್ತಿ

ಧಾರವಾಡ: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿರುವ ಸಮುದಾಯ ಸಾಂಸ್ಕೃತಿಕ ಸಂಘಟನೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50’ ಕಾರ್ಯಕ್ರಮಗಳ ವರ್ಷವಿಡೀ ನಡೆದ ಸರಣಿಗೆ ಧಾರವಾಡದಲ್ಲಿ ಸಮಾರೋಪದ ಚಾಲನೆ ನೀಡಲಾಯಿತು.

ಕಳೆದ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಉತ್ಸವದೊಂದಿಗೆ ಜಾಥಾಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಮೈಸೂರು, ರಾಯಚೂರು, ಕುಂದಾಪುರ, ಕೋಲಾರ, ಧಾರವಾಡ, ಶಿವಮೊಗ್ಗ, ಗುಲ್ಬರ್ಗ ಸೇರಿದಂತೆ ರಾಜ್ಯದ ವಿವಿಧೆಡೆ ರಂಗೋತ್ಸವ, ವಿಚಾರ ಸಂಕಿರಣ, ಕಲಾ ಶಿಬಿರ, ಬೀದಿನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸಮುದಾಯ ಸಂಘಟಿಸಿತ್ತು.

ಧಾರವಾಡದ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸಮಾರೋಪ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವ್ಯವಸ್ಥೆಯ ವಿರುದ್ಧ ಬೀದಿನಾಟಕ ಮಾಡಲು ಹೆದರಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಳೆದ ಐವತ್ತು ವರ್ಷಗಳಿಂದ ಸಮುದಾಯ ನಿರಂತರವಾಗಿ ಸಾಂಸ್ಕೃತಿಕ ಪ್ರತಿರೋಧದ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ಮಹತ್ವದ್ದು” ಎಂದರು.

ಕುಂಚಶಿಲ್ಪಿ ಡಾ. ಹಾಲಭಾವಿ ಸ್ಮಾರಕ ಟ್ರಸ್ಟ್‌ನ ಧಾರವಾಡ ಅಧ್ಯಕ್ಷ ಬಿ. ಮಾರುತಿ ಅವರು ‘ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50’ರ ಅಂಗವಾಗಿ ಆಯೋಜಿಸಿದ್ದ ಕಲಾ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 25ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಕುರಿ, ಶ್ಯಾಮಲಾ ಗುರುಪ್ರಸಾದ್, ಸಮುದಾಯದ ರಾಜ್ಯ ಅಧ್ಯಕ್ಷ ಶಶಿಧರ್ ಹಾಗೂ ಗೌರವಾಧ್ಯಕ್ಷ ಜನಾರ್ಧನ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಾಸುದೇವ ಗಂಗೇರ ಸ್ವಾಗತಿಸಿದರು. ಜೋಸೆಫ್ ಮಲ್ಲಾಡಿ ವಂದನಾರ್ಪಣೆ ಸಲ್ಲಿಸಿದರು. ಡಾ. ಪ್ರತಾಪ್ ಬಹುರೂಪಿ ಕಾರ್ಯಕ್ರಮವನ್ನು ಸಂಯೋಜಿಸಿದರು.

ಐದು ದಶಕಗಳ ಸಾಂಸ್ಕೃತಿಕ ಪಯಣವನ್ನು ಸ್ಮರಿಸುವುದರ ಜೊತೆಗೆ, ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಮನುಷ್ಯತ್ವ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಪ್ರತಿರೋಧದ ಅಗತ್ಯವನ್ನು ಮುಂದಿಡುವ ಉದ್ದೇಶದಿಂದ ಸಮಾರೋಪ ಉತ್ಸವವನ್ನು ಆಯೋಜಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *