ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಾದವ್‌ಪುರ ವಿಶ್ವವಿದ್ಯಾಲಯವು ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೊಂದು. ತಾಂತ್ರಿಕ ಶಿಕ್ಷಣದ ನೆಲೆಯಿಂದ ಆರಂಭಗೊಂಡ ಈ ಸಂಸ್ಥೆ ಕಾಲಕ್ರಮೇಣ ವಿಜ್ಞಾನ, ಕಲೆ, ಸಮಾಜ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲೂ ತನ್ನದೇ ಆದ ಸ್ಥಾನವನ್ನು ರೂಪಿಸಿಕೊಂಡಿದೆ. ಜಾದವ್‌ಪುರ
ಜಾದವ್‌ಪುರ ವಿಶ್ವವಿದ್ಯಾಲಯದ ಬೇರುಗಳು 1905ರ ಸ್ವದೇಶಿ ಚಳವಳಿಯ ಕಾಲಘಟ್ಟಕ್ಕೆ ಸೇರಿವೆ. 1906ರ ಡಿಸೆಂಬರ್ 22ರಂದು ಆರಂಭವಾದ ಸಂಸ್ಥೆ ಮೂರು ಪ್ರಮುಖ ವಿಭಾಗಗಳೊಂದಿಗೆ ತನ್ನ ಶೈಕ್ಷಣಿಕ ಪಯಣ ಆರಂಭಿಸಿತು. ನಂತರ ಅದು ವಿಸ್ತಾರಗೊಂಡು 1955ರಲ್ಲಿ ಜಾದವ್‌ಪುರ ವಿಶ್ವವಿದ್ಯಾಲಯವಾಗಿ ರೂಪುಗೊಂಡಿತು.
ಶಿಕ್ಷಣದ ಜೊತೆಗೆ ಭಿನ್ನಮತದ ಧ್ವನಿಗೂ ವೇದಿಕೆ
ಜಾದವ್‌ಪುರ ವಿಶ್ವವಿದ್ಯಾಲಯವು ಕೇವಲ ಶೈಕ್ಷಣಿಕ ಸಾಧನೆಗಳಿಗಾಗಿ ಮಾತ್ರವಲ್ಲ, ವಿದ್ಯಾರ್ಥಿ ರಾಜಕೀಯ, ಮುಕ್ತ ಚಿಂತನೆ ಮತ್ತು ಭಿನ್ನಮತದ ಸಂಸ್ಕೃತಿಗಾಗಿ ಕೂಡ ಗಮನ ಸೆಳೆದಿದೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳು ಹಲವು ವರ್ಷಗಳಿಂದ ಸಕ್ರಿಯವಾಗಿದ್ದು, ಕ್ಯಾಂಪಸ್ ಸ್ವಾಯತ್ತತೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತ ಚರ್ಚೆಗಳು ನಿರಂತರವಾಗಿವೆ.
ಇತ್ತೀಚಿನ ವರ್ಷಗಳಲ್ಲಿ ಜಾದವ್‌ಪುರ ವಿಶ್ವವಿದ್ಯಾಲಯದ ಕ್ಯಾಂಪಸ್ ರಾಜಕೀಯವೂ ತೀವ್ರಗೊಂಡಿದೆ. 2026ರ ಏಪ್ರಿಲ್‌ನಲ್ಲಿ ನಡೆದ ಆಂತರಿಕ ದೂರುಗಳ ಸಮಿತಿ ಚುನಾವಣೆಯಲ್ಲಿ ಎಸ್‌ಎಫ್‌ಐ ಭರ್ಜರಿ ಗೆಲುವು ಸಾಧಿಸಿತ್ತು. ಕಲೆ ವಿಭಾಗದಲ್ಲಿ ಎಸ್‌ಎಫ್‌ಐ, ಟಿಎಂಸಿಪಿ ಮತ್ತು ಎಬಿವಿಪಿ ವಿರುದ್ಧ ಮುನ್ನಡೆ ಸಾಧಿಸಿತ್ತು.
ಆಗಸ್ಟ್‌ನಲ್ಲಿ ಹಿಂಸಾಚಾರದಿಂದ ಮತ್ತೆ ಸುದ್ದಿಯಲ್ಲಿ
ಆಗಸ್ಟ್ 19ರಂದು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರ ಮತ್ತು ಧ್ವಂಸ ಘಟನೆಗಳ ಬಳಿಕ ಜಾದವ್‌ಪುರ ವಿಶ್ವವಿದ್ಯಾಲಯ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಿದೆ. ಘಟನೆಯಲ್ಲಿ ವಿಶ್ವವಿದ್ಯಾಲಯದ ರವೀಂದ್ರನಾಥ ಟ್ಯಾಗೋರ್ ಅವರಿಗೆ ಸಂಬಂಧಿಸಿದ ಲಾಂಛನವೂ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ವಿಶ್ವವಿದ್ಯಾಲಯದ ಉಪಕುಲಪತಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆಗಾಗಿ ಮೂರು ಸದಸ್ಯರ ಸಮಿತಿಯನ್ನೂ ರಚಿಸಲಾಗಿದೆ.
ಘಟನೆಯ ಸಂದರ್ಭದಲ್ಲಿ ಹೊರಗಿನ ವ್ಯಕ್ತಿಗಳು ಕ್ಯಾಂಪಸ್‌ಗೆ ಪ್ರವೇಶಿಸಿ ಹಿಂಸಾಚಾರ ಮತ್ತು ಧ್ವಂಸ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದ ಕೆಲವರು, ಹೊರಗಿನವರ ಪ್ರವೇಶಕ್ಕೆ ಒಳಗಿನಿಂದಲೇ ಕೆಲವರು ನೆರವು ನೀಡಿದ್ದಾರೆಯೇ ಎಂಬುದನ್ನೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ನೇಪಾಳ ಗಡಿಯಲ್ಲಿ ಮತ್ತೊಂದು ಪ್ರವಾಹದ ಆತಂಕ: 3 ದಿನಗಳಲ್ಲಿ ನೈಸರ್ಗಿಕ ತಡೆಗೋಡೆ ಒಡೆಯುವ ಸಾಧ್ಯತೆ
ಎಬಿವಿಪಿ–ಎಡಪಂಥೀಯ ಸಂಘಟನೆಗಳ ನಡುವೆ ಸಂಘರ್ಷ
ಘಟನೆಯ ಹಿನ್ನೆಲೆಯಲ್ಲಿ ಎಬಿವಿಪಿ ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ನಡುವೆ ಪರಸ್ಪರ ಆರೋಪ–ಪ್ರತ್ಯಾರೋಪಗಳು ನಡೆದಿವೆ. ಎಂಜಿನಿಯರಿಂಗ್ ವಿಭಾಗದ ಸಭೆಯನ್ನು ಕೇಂದ್ರವಾಗಿಸಿಕೊಂಡು ಸಂಘರ್ಷ ಆರಂಭವಾಯಿತು ಎಂಬ ವರದಿಗಳಿವೆ. ನಂತರ ಕ್ಯಾಂಪಸ್‌ನಲ್ಲಿ ಪ್ರತಿಭಟನೆ, ಪ್ರತಿರೋಧ ಮತ್ತು ಮೆರವಣಿಗೆಗಳ ಸರಣಿ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಬಿವಿಪಿ ಮುಖಂಡರು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ಪಾತ್ರವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ತನಿಖಾ ಸಮಿತಿಗೂ ಹಿನ್ನಡೆ
ಕ್ಯಾಂಪಸ್ ಹಿಂಸಾಚಾರದ ತನಿಖೆಗಾಗಿ ರಚಿಸಲಾದ ಸಮಿತಿಗೂ ಆರಂಭದಲ್ಲೇ ಹಿನ್ನಡೆ ಎದುರಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ವಿಶ್ವವಿದ್ಯಾಲಯದ ಉಪಕುಲಪತಿ ಅರುಣಾಸಿಸ್ ಗೋಸ್ವಾಮಿ ಅವರು ತಮ್ಮ ವಿಶ್ವವಿದ್ಯಾಲಯದ ಪ್ರವೇಶಾತಿ ಮತ್ತು ಘಟಿಕೋತ್ಸವದ ಕೆಲಸಗಳ ಕಾರಣ ನೀಡಿ ಸಮಿತಿಯಿಂದ ಹಿಂದೆ ಸರಿದಿದ್ದಾರೆ.
ಇದರ ನಡುವೆ ಪಶ್ಚಿಮ ಬಂಗಾಳ ಸರ್ಕಾರವೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಂಡುಬಂದಿದೆ ಎನ್ನಲಾದ ‘ದೇಶವಿರೋಧಿ’ ಬರಹಗಳ ಕುರಿತು ತನಿಖೆಗೆ ಸೂಚಿಸಿದೆ. ಬರಹಗಳು ನಿಜವಾಗಿಯೂ ಅಸ್ತಿತ್ವದಲ್ಲಿದ್ದವು ಎಂಬುದು ದೃಢಪಟ್ಟರೆ ಅವುಗಳನ್ನು ತೆರವುಗೊಳಿಸಿ, ಹೊಣೆಗಾರರನ್ನು ಗುರುತಿಸಿ ಕಾನೂನು ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ದೇಶದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ
ಇಷ್ಟೆಲ್ಲ ವಿವಾದಗಳ ನಡುವೆಯೂ ಜಾದವ್‌ಪುರ ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆ ಗಮನಾರ್ಹವಾಗಿದೆ. 2025ರ ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 9ನೇ ಸ್ಥಾನ ಪಡೆದಿತ್ತು. ಸಂಶೋಧನೆ, ಎಂಜಿನಿಯರಿಂಗ್, ಸಾಹಿತ್ಯ ಮತ್ತು ಇತರ ವಿಷಯಗಳಲ್ಲೂ ಸಂಸ್ಥೆ ಉತ್ತಮ ಸ್ಥಾನಗಳನ್ನು ಗಳಿಸಿದೆ.
ಹೀಗಾಗಿ ಜಾದವ್‌ಪುರ ವಿಶ್ವವಿದ್ಯಾಲಯದ ಇಂದಿನ ಚರ್ಚೆ ಕೇವಲ ಕ್ಯಾಂಪಸ್ ಹಿಂಸಾಚಾರಕ್ಕೆ ಸೀಮಿತವಾಗಿಲ್ಲ. ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ, ವಿದ್ಯಾರ್ಥಿ ರಾಜಕೀಯ, ಮುಕ್ತ ಚಿಂತನೆ, ರಾಜಕೀಯ ಹಸ್ತಕ್ಷೇಪ ಮತ್ತು ಕ್ಯಾಂಪಸ್ ಸುರಕ್ಷತೆ—ಈ ಎಲ್ಲ ಪ್ರಶ್ನೆಗಳನ್ನೂ ಈ ವಿವಾದ ಮತ್ತೆ ಮುನ್ನೆಲೆಗೆ ತಂದಿದೆ.
ಇದನ್ನೂ ನೋಡಿ :ಪಾರ್ಕಿಂಗ್ ಪಾಲಿಸಿ: ಸಮಸ್ಯೆಗೆ ಪರಿಹಾರವೇ, ಸರ್ಕಾರಕ್ಕೆ ಆದಾಯವೇ? ಬೆಂಗಳೂರಿನ ಪಾರ್ಕಿಂಗ್ ಕಥೆ ಏನು? |
