ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ 50:50 ಅನುಪಾತದ ನಿವೇಶನ ಹಂಚಿಕೆ ಅಕ್ರಮದ ಹಿನ್ನೆಲೆಯಲ್ಲಿ 2019ರಿಂದ 2023ರವರೆಗೆ ಹಂಚಿಕೆಯಾಗಿರುವ ಎಲ್ಲ 50:50 ನಿವೇಶನಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅವಧಿಯಲ್ಲಿ ಹಂಚಿಕೆಯಾಗಿದ್ದ 1,100ಕ್ಕೂ ಹೆಚ್ಚು ನಿವೇಶನಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ ಎಂದು ಹೇಳಿದರು. ಈ ಸಂಬಂಧದ ಸಂಪೂರ್ಣ ಆದೇಶವನ್ನು ಮುಡಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
2019–2023ರ ಅವಧಿಗೆ ಮಾತ್ರ ಕ್ರಮ ಸೀಮಿತವಾಗುವುದಿಲ್ಲ ಎಂಬ ಸುಳಿವನ್ನೂ ಸಚಿವರು ನೀಡಿದ್ದಾರೆ. 2018ಕ್ಕೂ ಹಿಂದಿನ ಅವಧಿಯಲ್ಲಿ ಹಂಚಿಕೆಯಾಗಿರುವ ನಿವೇಶನಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲಿ ಅಕ್ರಮ ನಡೆದಿರುವುದು ಕಂಡುಬಂದರೆ ಅಂತಹ ನಿವೇಶನಗಳನ್ನೂ ರದ್ದುಪಡಿಸಲಾಗುವುದು ಎಂದು ಯತೀಂದ್ರ ಹೇಳಿದ್ದಾರೆ.
ರಸ್ತೆ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗಾಗಿ ಜಮೀನು ನೀಡಿದ ಕೆಲವರಿಗೆ ಪರಿಹಾರದ ಜತೆಗೆ ನಿವೇಶನಗಳೂ ದೊರೆತಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. 50:50 ಯೋಜನೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಎಲ್ಲ ಹಂಚಿಕೆಗಳನ್ನೂ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕರ್ನಾಟಕದ 101 ತಾಲೂಕುಗಳು ಬರಪೀಡಿತ ಘೋಷಣೆ: 89 ತಾಲೂಕುಗಳಲ್ಲಿ ತೀವ್ರ ಬರ
ಮನೆ ಕಟ್ಟಿದವರ ಪಟ್ಟಿಯೂ ಸಿದ್ಧ
50:50 ಯೋಜನೆಯಡಿ ನಿವೇಶನ ಪಡೆದು ಈಗಾಗಲೇ ಮನೆ ನಿರ್ಮಿಸಿರುವವರ ವಿವರಗಳನ್ನೂ ಸರ್ಕಾರ ಪಡೆದುಕೊಳ್ಳುತ್ತಿದೆ ಎಂದು ಯತೀಂದ್ರ ತಿಳಿಸಿದ್ದಾರೆ. ಇಂತಹ ಪ್ರಕರಣಗಳ ಮುಂದಿನ ಕ್ರಮದ ಕುರಿತು ಪರಿಶೀಲನೆ ನಡೆಯಲಿದೆ.
ಇದೇ ವೇಳೆ, ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿರುವ ನಿವೇಶನಗಳ ವಿಚಾರವನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಮುಡಾ 50:50 ಹಂಚಿಕೆ ಮತ್ತೆ ಚರ್ಚೆಗೆ
ಮುಡಾದ 50:50 ಅನುಪಾತದ ನಿವೇಶನ ಹಂಚಿಕೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖೆ ಮತ್ತು ಕ್ರಮಗಳು ನಡೆಯುತ್ತಿರುವ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಮಹತ್ವ ಪಡೆದಿದೆ. ಕಳೆದ ವಾರವೂ ಸುಮಾರು 1,100 ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಿರುವುದಾಗಿ ವರದಿಯಾಗಿತ್ತು.
ಹೀಗಾಗಿ, ಈಗಾಗಲೇ ನಿವೇಶನ ಪಡೆದಿರುವವರು, ಅದರಲ್ಲಿ ಮನೆ ನಿರ್ಮಿಸಿರುವವರು ಹಾಗೂ 2018ಕ್ಕೂ ಹಿಂದಿನ ಹಂಚಿಕೆದಾರರ ಮೇಲೂ ಕ್ರಮದ ಸಾಧ್ಯತೆ ಇರುವುದರಿಂದ ಮುಡಾ 50:50 ನಿವೇಶನ ಪ್ರಕರಣ ಮತ್ತಷ್ಟು ವಿಸ್ತರಿಸುವ ಸೂಚನೆ ಸಿಕ್ಕಿದೆ.
ಇದನ್ನೂ ನೋಡಿ : ಪಾರ್ಕಿಂಗ್ ಪಾಲಿಸಿ: ಸಮಸ್ಯೆಗೆ ಪರಿಹಾರವೇ, ಸರ್ಕಾರಕ್ಕೆ ಆದಾಯವೇ? ಬೆಂಗಳೂರಿನ ಪಾರ್ಕಿಂಗ್ ಕಥೆ ಏನು? |
