ಕರ್ನಾಟಕದ 101 ತಾಲೂಕುಗಳು ಬರಪೀಡಿತ ಘೋಷಣೆ: 89 ತಾಲೂಕುಗಳಲ್ಲಿ ತೀವ್ರ ಬರ

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು 2026ಮುಂಗಾರು ಹಂಗಾಮಿಗೆ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ 2020ಬರ ನಿರ್ವಹಣಾ ಕೈಪಿಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ನಡೆಸಿದ ಮೌಲ್ಯಮಾಪನ ಮತ್ತು ಸ್ಥಳ ಪರಿಶೀಲನೆಯ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ. ಘೋಷಣೆ ಆರು ತಿಂಗಳ ಕಾಲ ಜಾರಿಯಲ್ಲಿರಲಿದೆ. ಕರ್ನಾಟಕದ

ಅಂದಾಜು ನಷ್ಟಗಳ ಆಧಾರದ ಮೇಲೆ ಆಗಸ್ಟ್ ಅಂತ್ಯದ ವೇಳೆಗೆ ಬರ ಪರಿಹಾರ ನೆರವು ಕೋರಿ ಕೇಂದ್ರಕ್ಕೆ ಜ್ಞಾಪಕ ಪತ್ರ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು. ಬರಪೀಡಿತ 101 ತಾಲೂಕುಗಳ ಪೈಕಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಬರ ಪರಿಸ್ಥಿತಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ಅಗತ್ಯ ಪರಿಹಾರ ಹಾಗೂ ಪ್ರತಿಕ್ರಿಯಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಅಧಿಕಾರ ನೀಡಿದೆ.

ಶೇ.30ರಷ್ಟು ಮಳೆ ಕೊರತೆ

ರಾಜ್ಯದಲ್ಲಿ ಜೂನ್‌ 1ರಿಂದ ಆಗಸ್ಟ್‌ 26ರವರೆಗೆ 465 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ 666 ಮಿ.ಮೀ. ಮಳೆಯಾಗಬೇಕಿತ್ತು. ಅಂದರೆ ರಾಜ್ಯದಲ್ಲಿ ಸುಮಾರು ಶೇ.30ರಷ್ಟು ಮಳೆ ಕೊರತೆ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.31 ಹಾಗೂ ಕರಾವಳಿ ಭಾಗದಲ್ಲಿ ಶೇ.24ರಷ್ಟು ಮಳೆ ಕೊರತೆ ಕಂಡುಬಂದಿದೆ. ಕರ್ನಾಟಕದ

ಮಳೆ ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 84.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದರೆ, ಇದುವರೆಗೆ ಸುಮಾರು 60 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. 178 ತಾಲೂಕುಗಳಲ್ಲಿ ಮಣ್ಣಿನ ತೇವಾಂಶ ಕೊರತೆ ಕಂಡುಬಂದಿದ್ದು, ಉಪಗ್ರಹ ಆಧಾರಿತ ಪರಿಶೀಲನೆಯಲ್ಲಿ 165 ತಾಲೂಕುಗಳಲ್ಲಿ ಸಸ್ಯವರ್ಗದ ಮೇಲೆ ಒತ್ತಡ ಕಂಡುಬಂದಿದೆ. 132 ತಾಲೂಕುಗಳಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ.

ಇದನ್ನೂ ಓದಿ : ಡ್ರೆಸ್‌ಕೋಡ್‌ಗಿಂತ ಅಡುಗೆಮನೆಯ ಸ್ವಚ್ಛತೆಗೆ ಆದ್ಯತೆ ನೀಡಿ: ಕ್ಲಬ್‌ಗಳಿಗೆ ಸಚಿವ ಯು.ಟಿ. ಖಾದರ್

ಜಲಾಶಯಗಳಲ್ಲೂ ನೀರಿನ ಕೊರತೆ

ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ 684.09 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 815.70 ಟಿಎಂಸಿ ನೀರು ಇತ್ತು. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 758 ಗ್ರಾಮಗಳಿಗೆ 149 ಟ್ಯಾಂಕರ್‌ಗಳು ಮತ್ತು 714 ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಈಗಾಗಲೇ 306 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಬರ ನಿರ್ವಹಣೆಗೆ ಒಟ್ಟಾರೆ 635 ಕೋಟಿ ರೂಪಾಯಿ ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಮೇವು ಬೀಜ ಕಿಟ್‌ಗಳಿಗಾಗಿ 25 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಇನ್ನಷ್ಟು ತಾಲೂಕುಗಳು ಬರ ಪಟ್ಟಿಗೆ?

ಪ್ರಸ್ತುತ 101 ತಾಲೂಕುಗಳನ್ನಷ್ಟೇ ಬರಪೀಡಿತ ಎಂದು ಘೋಷಿಸಲಾಗಿದ್ದರೂ, ಪರಿಸ್ಥಿತಿ ಇಲ್ಲಿಗೇ ಮುಗಿದಿಲ್ಲ. ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಪರಿಸ್ಥಿತಿಯನ್ನು ಪರಿಶೀಲಿಸಿ, ನಿಗದಿತ ಮಾನದಂಡಗಳನ್ನು ಪೂರೈಸುವ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವುದಾಗಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ.

ಬೆಳೆ ನಷ್ಟದ ಅಂದಾಜು ಮಾಡಲು ಅಧಿಕಾರಿಗಳಿಗೆ ಜಂಟಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದ್ದು, ವರದಿಗಳನ್ನು ತ್ವರಿತವಾಗಿ ಸಲ್ಲಿಸುವಂತೆ ಸರ್ಕಾರ ನಿರ್ದೇಶಿಸಿದೆ. ಆಗಸ್ಟ್‌ ಅಂತ್ಯದೊಳಗೆ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಈ ನಡುವೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಅವರು 101 ತಾಲೂಕುಗಳ ಬದಲಿಗೆ 175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಿತ್ತು ಎಂದು ಆರೋಪಿಸಿದ್ದಾರೆ. ಬರದಿಂದ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಸೇರಿದಂತೆ ಹೆಚ್ಚಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ, ಮಳೆ ಕೊರತೆ, ಬಿತ್ತನೆ ಕುಸಿತ, ಮಣ್ಣಿನ ತೇವಾಂಶದ ಕೊರತೆ, ಅಂತರ್ಜಲ ಮಟ್ಟ ಇಳಿಕೆ ಹಾಗೂ ಜಲಾಶಯಗಳಲ್ಲಿ ಕಡಿಮೆಯಾಗಿರುವ ನೀರಿನ ಸಂಗ್ರಹ—ಇವೆಲ್ಲವೂ ಕರ್ನಾಟಕದಲ್ಲಿ ಬರದ ತೀವ್ರತೆಯನ್ನು ಸೂಚಿಸುತ್ತಿವೆ. 101 ತಾಲೂಕುಗಳ ಘೋಷಣೆಯೊಂದಿಗೆ ಸರ್ಕಾರದ ಮುಂದೆ ಈಗ ರೈತರಿಗೆ ಪರಿಹಾರ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವುದು ಪ್ರಮುಖ ಸವಾಲಾಗಿದೆ. ಕರ್ನಾಟಕದ

ಇದನ್ನೂ ನೋಡಿ : ಪಾರ್ಕಿಂಗ್‌ ಪಾಲಿಸಿ: ಸಮಸ್ಯೆಗೆ ಪರಿಹಾರವೇ, ಸರ್ಕಾರಕ್ಕೆ ಆದಾಯವೇ? ಬೆಂಗಳೂರಿನ ಪಾರ್ಕಿಂಗ್‌ ಕಥೆ ಏನು? |

 

 

 

Donate Janashakthi Media

Leave a Reply

Your email address will not be published. Required fields are marked *