ಹನೂರು: ಹನೂರಿನಲ್ಲಿ ರೈತರ ಮೇಲೆ ಅರಣ್ಯ ಇಲಾಖೆ ನಡೆಸಿದ ಶೂಟೌಟ್ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು ಹನೂರಿನಲ್ಲಿ ನಡೆದ ಪ್ರತಿಭಟನೆಗೆ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ರಾಜ್ಯ ನಿಯೋಗ ಬೆಂಬಲ ನೀಡಿತು. ಹನೂರು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಆರ್ಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಎನ್.ಎಲ್. ಭರತ್ ರಾಜ್, ಅರಣ್ಯ ಇಲಾಖೆ ನಡೆಸಿದೆ ಎನ್ನಲಾದ ಈ ಅಮಾನವೀಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಕರಣದ ಸತ್ಯಾಸತ್ಯತೆ ಹೊರಬರಲು ರಾಜ್ಯ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಎನ್ಕೌಂಟರ್ನಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : ಶಾಲಾ ವಾಹನಗಳ ವಿರುದ್ಧ ಮೂರು ವರ್ಷಗಳಲ್ಲಿ 10,237 ಪ್ರಕರಣ: ಬೆಂಗಳೂರು ಅಗ್ರಸ್ಥಾನ

ಅರಣ್ಯ ಇಲಾಖೆ ರೈತರನ್ನು ಕೊಲ್ಲುವ ಮೂಲಕ ಕಾಡಂಚಿನಲ್ಲಿರುವ ರೈತರಲ್ಲಿ ಭಯ ಹುಟ್ಟಿಸಿ, ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ ಎಂದು ಭರತ್ ರಾಜ್ ಆರೋಪಿಸಿದರು. ರೈತರ ಬದುಕು ಮತ್ತು ಭೂಮಿಯ ಹಕ್ಕುಗಳನ್ನು ರಕ್ಷಿಸುವ ಬದಲು ಅವರನ್ನು ಗುರಿಯಾಗಿಸುವ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.
ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ ಅವರು, ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸಿದರೆ ರಾಜ್ಯದ ಎಲ್ಲಾ ರೈತ ಚಳವಳಿಗಳು ಹಾಗೂ ಎನ್ಕೌಂಟರ್ನಲ್ಲಿ ಬಲಿಯಾದವರ ಕುಟುಂಬಸ್ಥರನ್ನು ಒಗ್ಗೂಡಿಸಿ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹನೂರು ಪ್ರಕರಣದ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮೃತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಆರ್ಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್, ರಾಜ್ಯ ಸಮಿತಿ ಸದಸ್ಯ ಜಗದೀಶ್ ಸೂರ್ಯ, ಸ್ಥಳೀಯರಾದ ಪರಿಮಳ, ಮೇರಿಯಮ್ಮ, ಕೃಷ್ಣ ನಾಯಕ್, ಲಕ್ಷ್ಮಿಕಾಂತ್, ರಾಮಚಂದ್ರ ಹಾಗೂ ಗೋಪಾಲ್ ಭಾಗವಹಿಸಿದ್ದರು.
ಇದನ್ನೂ ನೋಡಿ : ಬೀದಿ ವ್ಯಾಪಾರಿಗಳ ಬದುಕು ಕಟ್ಟಿಕೊಡುವವರು ಯಾರು? ಸುಪ್ರೀಂ ಕೋರ್ಟ್ ಹೇಳಿರುವುದು ಏನು? Janashakthi Media
