ಯಶ್‌ ಧರ್ಮಸ್ಥಳ ಭೇಟಿ ವಿವಾದ | ‘ಟಾಕ್ಸಿಕ್‌’ ಬಹಿಷ್ಕಾರಕ್ಕೆ ಸೌಜನ್ಯಪರ ಹೋರಾಟಗಾರರ ಕರೆ

ಬೆಂಗಳೂರು: ಧರ್ಮಸ್ಥಳಕ್ಕೆ ನಟ ಯಶ್‌ ಭೇಟಿ ನೀಡಿ ಸೌಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಗಳನ್ನು ಎದುರಿಸುತ್ತಿರುವವರನ್ನು ಭೇಟಿಯಾಗಿರುವುದಕ್ಕೆ ಸೌಜನ್ಯ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಯಶ್‌ ಅಭಿನಯದ ‘ಟಾಕ್ಸಿಕ್‌’ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ

ಯಶ್‌ ಅವರು ಚಿತ್ರ ನಿರ್ಮಾಪಕ ಕೆ. ವೆಂಕಟ್‌ ನಾರಾಯಣ ಅವರೊಂದಿಗೆ ಧರ್ಮಸ್ಥಳಕ್ಕೆ ತೆರಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಭೇಟಿ ನೀಡುವುದು ಅವರ ವೈಯಕ್ತಿಕ ವಿಚಾರವಾಗಿದ್ದರೂ, ಸೌಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ವಿವಾದಕ್ಕೆ ಒಳಗಾಗಿರುವ ವ್ಯಕ್ತಿಗಳನ್ನು ಅವರು ಭೇಟಿ ಮಾಡಿರುವುದಕ್ಕೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೌಜನ್ಯ ಪ್ರಕರಣದ ತನಿಖೆಯನ್ನು ಸಿಬಿಐ ನಿರ್ವಹಿಸುತ್ತಿರುವ ರೀತಿಯನ್ನು ಸುಪ್ರೀಂ ಕೋರ್ಟ್‌ ಸ್ವತಃ ಪ್ರಶ್ನಿಸಿರುವ ಸಂದರ್ಭದಲ್ಲಿ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ತಾರೆಯೊಬ್ಬರ ಇಂತಹ ಭೇಟಿ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

“ನೀವು ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ?” ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ ಸಿಬಿಐಗೆ ಕೇಳಿರುವುದನ್ನು ಕಾರ್ಯಕರ್ತರು ಉಲ್ಲೇಖಿಸಿದ್ದಾರೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಕೋರಿ ಸಲ್ಲಿಸಲಾಗಿರುವ ವಿಶೇಷ ಅನುಮತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿದ್ದು, ಇತ್ತೀಚಿನ ವಿಚಾರಣೆಯ ಬಳಿಕ ಆದೇಶ ಕಾಯ್ದಿರಿಸಿದೆ ಎಂಬ ಅಂಶವನ್ನು ಹೋರಾಟಗಾರರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಎಸ್‌ಐಆರ್‌ ವಿರುದ್ಧ ಸೆ.1ರಂದು ‘ಚುನಾವಣಾ ಆಯೋಗ ಚಲೋ’: ಪ್ರಕಾಶ್‌ ರಾಜ್‌

ಸಾರ್ವಜನಿಕ ವ್ಯಕ್ತಿಗಳು ತಮ್ಮ ವೈಯಕ್ತಿಕ ಆಯ್ಕೆಗಳನ್ನು ಮೀರಿ ಸಮಾಜದ ಮೇಲೆ ಪ್ರಭಾವ ಬೀರುತ್ತಾರೆ. ಹೀಗಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟರು ಸೂಕ್ಷ್ಮ ಮತ್ತು ವಿವಾದಾತ್ಮಕ ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿಯಾಗುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

2012ರಿಂದ ಸೌಜನ್ಯ ಅವರ ತಾಯಿ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಇಷ್ಟು ದೀರ್ಘ ಕಾಲ ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಟುಂಬದ ಭಾವನೆಗಳನ್ನು ಸಾರ್ವಜನಿಕ ವ್ಯಕ್ತಿಗಳು ಗೌರವಿಸಬೇಕು. ಕನಿಷ್ಠ ಪಕ್ಷ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವವರ ಪರ ನಿಂತಂತೆ ಕಾಣುವ ಯಾವುದೇ ನಡೆಗಳಿಂದ ದೂರವಿರಬೇಕಿತ್ತು ಎಂದು ಹೋರಾಟಗಾರರು ಹೇಳಿದ್ದಾರೆ.

ಮತ್ತೊಬ್ಬ ಕಾರ್ಯಕರ್ತರೂ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದು, ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಯಶ್‌ ಅವರು ಇಂತಹ ಸಂದರ್ಭದಲ್ಲಿ ಹೆಚ್ಚು ಜಾಗರೂಕತೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ಯಶ್‌ ಅವರ ಧರ್ಮಸ್ಥಳ ಭೇಟಿಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ತೀವ್ರಗೊಂಡಿದೆ. ಸೌಜನ್ಯ ಪರ ಹೋರಾಟಗಾರರು ಹಾಗೂ ಬೆಂಬಲಿಗರ ಒಂದು ವರ್ಗ ಟಾಕ್ಸಿಕ್‌’ ಚಿತ್ರವನ್ನು ವೀಕ್ಷಿಸದಂತೆ ಕರೆ ನೀಡಿದ್ದು, ಈ ಬಹಿಷ್ಕಾರ ಅಭಿಯಾನ ಚಿತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :ಕೃಷಿ ಕೂಲಿಕಾರರ ಮಹಾ ಸಮಾಗಮ: ಬೆಂಗಳೂರಿನಲ್ಲಿ AIAWU ರಾಷ್ಟ್ರ ಸಮ್ಮೇಳನ Janashakthi Media

 

 

 

Donate Janashakthi Media

Leave a Reply

Your email address will not be published. Required fields are marked *