ನಾಲ್ಕು ವರ್ಷಗಳ ಕಾಯುವಿಕೆ, ನೂರಾರು ಕೋಟಿ ರೂಪಾಯಿ ಬಜೆಟ್ ಹಾಗೂ ಭಾರಿ ತಾರಾಗಣದೊಂದಿಗೆ ತೆರೆಗೆ ಬಂದಿರುವ ಯಶ್ ಅಭಿನಯದ ‘ಟಾಕ್ಸಿಕ್’ ನಿರೀಕ್ಷೆ ಮತ್ತು ವಾಸ್ತವದ ನಡುವಿನ ಅಂತರವನ್ನು ತೋರಿಸುವ ಸಿನಿಮಾ. ಕತ್ತಲು, ಕ್ರೌರ್ಯ, ಹಿಂಸೆ, ಪ್ರೀತಿ, ಪಶ್ಚಾತ್ತಾಪ ಮತ್ತು ಭಾವನೆಗಳ ಸಂಘರ್ಷದ ಕಥೆಯನ್ನು ಅದ್ಧೂರಿ ದೃಶ್ಯವೈಭವದ ಮೂಲಕ ಕಟ್ಟಿಕೊಡಲು ಚಿತ್ರತಂಡ ಪ್ರಯತ್ನಿಸಿದೆ. ಆದರೆ, ಭಾರೀ ನಿರ್ಮಾಣ ಮೌಲ್ಯ ಮತ್ತು ಯಶ್ ಅವರ ಅಬ್ಬರದ ಅಭಿನಯದ ನಡುವೆಯೂ ಕಥೆಯ ವೇಗ, ಅವಧಿ ಹಾಗೂ ಸಂಗೀತ ಸೇರಿದಂತೆ ಕೆಲವು ಅಂಶಗಳು ಪ್ರೇಕ್ಷಕರಲ್ಲಿ ಪ್ರಶ್ನೆ ಮೂಡಿಸುತ್ತವೆ. ‘ಟಾಕ್ಸಿಕ್’ ಹೇಗಿದೆ? ಏನು ಮೆಚ್ಚುವಂಥದ್ದು, ಏನು ನಿರಾಸೆ ಮೂಡಿಸುತ್ತದೆ? ಎಂಬುದನ್ನು ತಿಳಿಯಲು ಈ ವಿಮರ್ಶೆಯನ್ನು ಓದಿಟಾಕ್ಸಿಕ್
-ಬಸವರಾಜ ಕರುಗಲ್
ಟಾಕ್ಸಿಕ್ ಎಂದರೆ ವಿಷ ಎನ್ನುವ ನೆಗೆಟಿವ್ ಅರ್ಥ ಇದೆ. ಈ ಹೆಸರಿನ ಸಿನಿಮಾ ವಿಷಯದಲ್ಲೂ ಅಷ್ಟೇ, ಇಲ್ಲಿ ಹೀರೋನಾ ಹುಡುಕಬೇಡಿ ಅನ್ನೋ ವಾರ್ನಿಂಗ್ ಸಹ ಹೀರೋ ಅನ್ಕೊಂಡವರಿಂದಲೇ ಬರುತ್ತದೆ. ಇದೊಂದು ಬದುಕಿನಲ್ಲಿನ ಭಾವನೆಗಳ ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆಯಾಟ. ಭಾವಿಸಿದ್ದು ಸಿಕ್ಕರೆ ಖುಷಿ, ನಿರೀಕ್ಷೆ ಹುಸಿಯಾದರೆ ಕಸಿವಿಸಿ.
ಅದು 1947 ರ ಕಥೆ. ಭಾರತಕ್ಕೆ ಸ್ವತಂತ್ರ ಸಿಕ್ಕರೂ ಗೋವಾ ಪೋರ್ಚುಗೀಸರ ವಶದಲ್ಲಿರುತ್ತೆ. ಓಪೊಯಮ್, ಲಿಕ್ಕರ್ ದಂಧೆಯಲ್ಲಿ ದರ್ಬಾರ್ ಆರಂಭಿಸುವುದು ಮಾತ್ರವಲ್ಲದೇ ಗೋವಾವನ್ನೇ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಅಲೆಕ್ಸಾಂಡರ್‌ನಂತೆ ಪ್ರಪಂಚವನ್ನೇ ಗೆಲ್ಲುವ ಛಲದ ರಾಯನಿಗೆ ಅಕ್ಕ ಗಂಗಾಳನ್ನು ಬಿಟ್ಟರೆ, ಬೇರೆ ಪ್ರಪಂಚ ಮತ್ತು ಭಾವನೆಗಳಿಲ್ಲ.
ಸಾವಿನ ಭಯ ಸಾಯೋಕಂತ ಹುಟ್ಟಿದವರಿಗೆ ಇರುತ್ತೆ, ಸತ್ತು ಹುಟ್ಟಿದೋರಿಗೆ ಅಲ್ಲ ಎನ್ನುವ ರಾಯ, ಯಾವುದಕ್ಕೂ ಅಂಜಲ್ಲ, ಅಳಕಲ್ಲ. ವೈಲೆನ್ಸೇ ಅವನ ಮದರ್ ಟಂಗ್. ಇಂಥ ರಾಯನಿಗೆ ಹೆಣ್ಣು ಮತ್ತು ಎಣ್ಣಿಯ ಹ್ಯಾಂಗೋವರ್ ಹೋಗಬೇಕಂದ್ರೆ ಮತ್ತೊಂದು ಹೆಣ್ಣನ್ನ ಭೋಗಿಸಬೇಕು, ಮತ್ತೊಂದು ಎಣ್ಣೆ ಬಾಟಲ್‌ನ ಮುಗಿಸಬೇಕು ಅನ್ನೋ ತತ್ವ. ಇಂಥ ಹೀನ ಹೃದಯದವನ ಮನಸು ಹೊಕ್ಕ ಸರ್ಕಸ್ ಕಂಪನಿಯ ನಾದಿರಾ, ಭಾವನೆಗಳ ರೇಖೆ ಎಳೆಯುತ್ತಾಳೆ. ಕಾಮದಾಟದಲ್ಲೇ ಮೈಮರೆಯುತ್ತಿದ್ದ ರಾಯನಿಗೆ ಪ್ರೇಮದ ಪಾಠ ಕಲಿಸಿ, ಅವನ ಕುಡಿಗೆ ತಾಯಿಯಾಗಿ ಪ್ರಾಪಂಚಿಕ ಬದುಕಿನಿಂದ ಮರೆಯಾಗುತ್ತಾಳೆ. ನೆನಪುಗಳಿಂದ ದೂರ ಇರಬೇಕೆಂದು ಬಯಸಿದನಿಗೆ ಅವಳ ನೆನಪು ಬದುಕಿನುದ್ದಕ್ಕೂ ಹತ್ತಿರವಾಗುತ್ತಲೇ ಹೋಗುತ್ತದೆ.
ಮಗನನ್ನೇ ಸಾಯಿಸಿದ ನಿಷ್ಕರುಣಿ ಮನಸ್ಥಿತಿಗೂ, ಎದುರಾಳಿಗಳ ಚಂಡಾಡುವ ಶೌರ್ಯಕ್ಕೂ ಅಂತ್ಯ ಇದೆ ಎನ್ನುವ ಮಗ ಬದುಕಿರುವ ಭ್ರಮೆಯ ಜೊತೆ ಗುದ್ದಾಡುವ, ಒದ್ದಾಡುವ ರಾಯನಿಗೆ ಸಾವಿಗಿಂತ ಬದುಕೇ ಕ್ರೌರ್ಯ ಎನಿಸುತ್ತದೆ. ಬದುಕಿಗೆ, ಕೆಟ್ಟತನಕ್ಕೆ ವಿದಾಯ ಹೇಳೋ ಸಮಯದಲ್ಲಿ ಈ ನರಳಾಡ, ಕೂಗಾಟವೆಲ್ಲ ವಿಷಾದದ ಕಿರುಚಾಟದಂತೆ ಕೇಳುತ್ತದೆ. ಕೊನೆಗೆ ಭಾವನೆಗಳೇ ಇಲ್ಲ ಎಂದು ವಾದಿಸುತ್ತಿದ್ದವನು ಭಾವನೆಗಳ ಬಲೆಯಲ್ಲಿ ಬಲಿಯಾಗುವುದರೊಂದಿಗೆ ರಾಯನ ವಿಷ ಕಾರುವ ಕಥೆ ಅಂತ್ಯ ಕಾಣುತ್ತದೆ. ಟಾಕ್ಸಿಕ್
ಇದನ್ನೂ ಓದಿ : ಯಶ್ ಧರ್ಮಸ್ಥಳ ಭೇಟಿ ವಿವಾದ | ‘ಟಾಕ್ಸಿಕ್’ ಬಹಿಷ್ಕಾರಕ್ಕೆ ಸೌಜನ್ಯಪರ ಹೋರಾಟಗಾರರ ಕರೆ

ಈ ಕಥೆ ಹೇಳಲು ಮೂರು ಕಾಲು ಗಂಟೆ ಹಾಗೂ ಅದ್ಧೂರಿತನದ ಅಗತ್ಯ ಇರಲಿಲ್ಲ ಎಂದು ಸಿನಿಮಾ ಮುಗಿದ ನಂತರ ಬಹುತೇಕ ಪ್ರೇಕ್ಷಕರಿಗೆ ಅನ್ನಿಸದೇ ಇರದು. ಕೇವಲ ಆರೇಳು ತಿಂಗಳಲ್ಲಿ ತೆರೆಗೆ ತರಬಹುದಾದ ಕಥೆಗೆ ನಾಲ್ಕು ವರ್ಷಗಳ ಸಮಯ, ನಾಲ್ಕು ನೂರು ಕೋಟಿ ಬಜೆಟ್ ನಿಜಕ್ಕೂ ಹೊರೆ ಎನಿಸುತ್ತದೆ.
ವಯಸ್ಕರ ಕಾಲ್ಪನಿಕ ಕಥೆ ಎಂಬ ಅಡಿಬರಹವೇ ಮಹಿಳೆಯರು ಮಕ್ಕಳು ಸಿನಿಮಾ ನೋಡಬೇಕೇ? ಬೇಡವೇ? ಎಂಬುದನ್ನು ಯೋಚಿಸಿ ಎಂದು ಹೇಳಿದಂತಿದೆ. ಹೀಗೆಂದ ಮಾತ್ರಕ್ಕೆ ಸಿನಿಮಾದಲ್ಲಿ ಮೆಚ್ಚುವ ಅಂಶಗಳಿಲ್ಲ ಎಂದಲ್ಲ, ಕನ್ನಡಿಗನೊಬ್ಬ ಬಾಲಿವುಡ್ ಲೆವೆಲ್‌ಗೆ ನಿರ್ಮಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಖಂಡಿತವಾಗಿ ಟಾಕ್ಸಿಕ್ ಅರ್ಹ. ಸಿನಿಮಾಟೋಗ್ರಫಿ, ಬಿಜಿಎಂ, ಸ್ಟಂಟ್ಸ್, ಫೈಟ್ಸ್, ಸಿನಿಮಾದ ಹೈಲೈಟ್. ಬಸ್ರೂರು ಮ್ಯೂಜಿಕ್ ಯಾವುದೇ ಮ್ಯಾಜಿಕ್ ಮಾಡಲ್ಲ ಎಂಬುದನ್ನು ಬೇಸರದಿಂದಲೇ ಹೇಳಬೇಕಿದೆ.
ದೊಡ್ಡ ತಾರಾಗಣವನ್ನು ಹೊಂದಿರುವ ಟಾಕ್ಸಿಕ್ ರಾಕಿಂಗ್ ಸ್ಟಾರ್ ಯಶ್ ಹೆಗಲ ಮೇಲಿದೆ. ಮತ್ತು ಯಶ್ ಅದನ್ನು ಹೊತ್ತು ಸಾಗಿದ್ದಾರೆ. ಎರಡೂ ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರೆ. ನಯನ ತಾರಾ ಸೈಲೆಂಟಾಗಿ ಬೊಬ್ಬಿರಿದಿದ್ದಾರೆ. ರುಕ್ಮಿಣಿ ವಸಂತ್‌ಗೆ ಇದು ಅಷ್ಟೇನು ಮಹತ್ವದ ಪಾತ್ರ ಅಲ್ಲದಿದ್ದರೂ ನೆನಪಲ್ಲುಳಿಯುತ್ತಾರೆ. ಕಿಯಾರಾ ಅಡ್ವಾಣಿ ಸಿನಿಮಾದ ಆರಂಭದ ದೃಶ್ಯದಲ್ಲಿ ಜೀವ ಕಳೆದುಕೊಳ್ಳುವ ಪಾತ್ರದಲ್ಲಿದ್ದರೂ ಸಿನಿಮಾ ಮುಗಿವವರೆಗೆ ಜೀವಂತಿಕೆ ಉಳಿಸಿಕೊಂಡಿದ್ದಾರೆ. ತಾರಾ ಸುತಾರಿಯಾ, ಹುಮಾ ಖುರೇಶಿ ಅಭಿನಯಿಸಿ, ಖುಷಿ ನೀಡಿದ್ದಾರಷ್ಟೇ. ಅಕ್ಷಯ್ ಒಬೆರಾಯ್, ಡ್ಯಾರೆಲ್ ಡಿಸಿಲ್ವಾ, ಸುದೇವ್ ನಾಯರ್, ಬಾಲಾಜಿ ಮನೋಹರ್, ಸಂಜೀದಾ ಶೇಖ್, ಅಮಿತ್ ತಿವಾರಿ ಮುಂತಾದ ಕಲಾವಿದರ ದಂಡು ‘ಟಾಕ್ಸಿಕ್’ ಯಾತ್ರೆಯಲ್ಲಿ ಕಾಣಸಿಗುತ್ತದೆ.
ಕ್ರೌರ್ಯ, ಹಿಂಸೆ, ಗುಂಡಿನ ಮೊರೆತ, ರಕ್ತದೋಕುಳಿ ಬಯಸುವ ಪ್ರೇಕ್ಷಕ ಟಾಕ್ಸಿಕ್‌ನ್ನು ಒಮ್ಮೆ ಕಣ್ತುಂಬಿಕೊಳ್ಳಬಹುದು. ಮಿಕ್ಕ ಪ್ರೇಕ್ಷಕ ವರ್ಗ ಟಾಕ್ಸಿಕ್ ಅಬ್ಬರಕ್ಕೆ ಬೆಚ್ಚಿ ಬೀಳುವುದು ಖಚಿತ. ಹಾಕಿದ ಬಂಡವಾಳ ಮೂರು ದಿನಗಳೊಳಗೆ ಬಂದರೆ ಸಿನಿಮಾ ಸೋತರೂ ಆರ್ಥಿಕವಾಗಿ ಸೇಫ್. ಇಲ್ಲದಿದ್ದರೆ ಸಿನಿಮಾ ಸೋಲಬಹುದಷ್ಟೇ. ಯಶ್‌ನಂಥ ಕನ್ನಡಿಗರ ಟಾಕ್ಸಿಕ್‌ನಂಥ ಪ್ರಯತ್ನ ಶ್ಲಾಘನಾರ್ಹ ಟಾಕ್ಸಿಕ್
ರೇಟಿಂಗ್: *** (3/5)
ಸಿನಿಮಾ : ಟಾಕ್ಸಿಕ್
ನಿರ್ದೇಶನ : ಗೀತು ಮೋಹನ್‌ದಾಸ್
ತಾರಾಗಣ :
- ಯಶ್ – ರಾಯಾ / ರೂಮಿ (ಟಿಕೆಟ್)
- ಕಿಯಾರಾ ಅಡ್ವಾಣಿ – ನಾಡಿಯಾ
- ನಯನತಾರಾ – ಗಂಗಾ (ರಾಯಾಳ ತಂಗಿ)
- ರುಕ್ಮಿಣಿ ವಸಂತ್ – ಮೆಲಿಸಾ
- ಹುಮಾ ಖುರೇಷಿ – ಎಲಿಜಬೆತ್ (ಖಳನಾಯಕಿ ಪಾತ್ರ)
- ತಾರಾ ಸುತಾರಿಯಾ – ರೆಬೆಕ್ಕಾ
ಸಂಗೀತ : ರವಿ ಬಸ್ರೂರ್
ನಿರ್ಮಾಣ :ವೆಂಕಟ್ ಕೆ. ನಾರಾಯಣ್ ಮತ್ತು ಯಶ್
ಇದನ್ನೂ ನೋಡಿ :ಉಚಿತ ಯುಪಿಐಗೆ ಶುಲ್ಕ ಬೀಳುತ್ತಾ? ಕಾರ್ಪೊರೇಟ್ ಲಾಭದ ಸಾಧನವಾಯ್ತೆ ಯುಪಿಐ? Janashakthi Media
