ಟಿ.ಎಸ್. ವೇಣುಗೋಪಾಲ್
ರಾಜರು, ವೈಸ್‌ರಾಯ್‌ಗಳು ಮತ್ತು ಗಣ್ಯ ನಾಯಕರ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಇತಿಹಾಸ ಕಥನವನ್ನು ಬದಿಗೆ ಸರಿಸಿ, ‘ತಳದ ಇತಿಹಾಸ’ (History from Below) ಹಾಗೂ ‘ತಳಸ್ಥರದ ಒತ್ತಡ’ (Pressure from Below) ಎಂಬ ಪರಿಕಲ್ಪನೆಯನ್ನು ಮುಂಚೂಣಿಗೆ ತಂದರು. ಸ್ವಾತಂತ್ರ್ಯ ಸಂಗ್ರಾಮವೆಂಬುದು ಕೇವಲ ದೆಹಲಿ, ಕಲ್ಕತ್ತಾ, ಮುಂಬೈನ ಶಾಸನಸಭೆಗಳಲ್ಲಿ ನಡೆದ ಚರ್ಚೆಯಲ್ಲ; ಅದರಲ್ಲಿ ಕಾರ್ಮಿಕರು, ಕಡುಬಡ ರೈತರು, ಆದಿವಾಸಿಗಳು, ಶೋಷಿತ ಜಾತಿಗಳು ಮತ್ತು ಮಹಿಳೆಯರ ಸ್ವಾಯತ್ತ ಪಾತ್ರವಿದೆ ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಿದ ಇತಿಹಾಸಕಾರ. ಭೂತಕಾಲವನ್ನು ವರ್ತಮಾನದ ಸ್ವಾರ್ಥಕ್ಕೆ ಬಳಸಿಕೊಳ್ಳದೆ, ಅದನ್ನು ವಸ್ತುನಿಷ್ಠವಾಗಿ, ಕೆಳಸ್ತರದ ಸಾಮಾನ್ಯ ಜನರ ಕಣ್ಣುಗಳಿಂದ ಗ್ರಹಿಸಬೇಕು” ಎಂಬ ಸುಮಿತ್ ಸರ್ಕಾರ್ ಅವರ ಚಿಂತನೆಗಳು ಭಾರತೀಯ ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ಎಂದೆಂದಿಗೂ ಧ್ರುವತಾರೆಯಾಗಿ ಉಳಿಯಲಿವೆ. ಸುಮಿತ್
ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ತರಗತಿಯೊಳಗೆ ಆ ಎತ್ತರದ ವ್ಯಕ್ತಿತ್ವ ಕಾಲಿಡುತ್ತಿದ್ದಂತೆ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದ ಆವರಿಸುತ್ತಿತ್ತು. ಯಾವುದೇ ಆಡಂಬರವಿಲ್ಲದೆ, ಅತ್ಯಂತ ಶಾಂತ ಹಾಗೂ ಮೃದು ಧ್ವನಿಯಲ್ಲಿ ಅವರು ಮಾತನಾಡಲು ಶುರುಮಾಡಿದರೆ ವಿದ್ಯಾರ್ಥಿಗಳು ಕಾಲದ ಅರಿವೇ ಇಲ್ಲದೆ ಮಂತ್ರಮುಗ್ಧರಾಗಿ ಪಾಠ ಕೇಳುತ್ತಿದ್ದರು. ಸಂಗೀತದ ‘ಆಲಾಪ’ದಂತೆ ಶಾಸ್ತ್ರೀಯ ವಿಚಾರಗಳನ್ನು ಪ್ರವಹಿಸುತ್ತಿದ್ದ ಆ ಅಪ್ರತಿಮ ಅಧ್ಯಾಪಕ ಹಾಗೂ ಭಾರತದ ಅಗ್ರಗಣ್ಯ ಇತಿಹಾಸತಜ್ಞ ಪ್ರೊಫೆಸರ್ ಸುಮಿತ್ ಸರ್ಕಾರ್ ಎಂದು ಅವರ ಅನೇಕ ಶಿಷ್ಯರುಗಳು ಸ್ಮರಿಸಿಕೊಂಡಿದ್ದಾರೆ. ತಮ್ಮ ೮೭ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸುವುದರೊಂದಿಗೆ, ಭಾರತೀಯ ಇತಿಹಾಸ ಸಂಶೋಧನಾ ರಂಗದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಂತಾಗಿದೆ. ಸುಮಿತ್
ಬೆಳೆದುಬಂದ ಬೌದ್ಧಿಕ ಪರಿಸರ
೧೯೩೯ರಲ್ಲಿ ಕಲ್ಕತ್ತಾದ ಪ್ರಸಿದ್ಧ ಬ್ರಹ್ಮ ಸಮಾಜದ ಹಿನ್ನೆಲೆಯುಳ್ಳ ಸುಸಂಸ್ಕೃತ ಕುಟುಂಬದಲ್ಲಿ ಸುಮಿತ್ ಸರ್ಕಾರ್ ಜನಿಸಿದರು. ಅವರ ತಂದೆ ಸುಶೋಭನ್ ಚಂದ್ರ ಸರ್ಕಾರ್ ಅವರು ಪ್ರೆಸಿಡೆನ್ಸಿ ಕಾಲೇಜು ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಖ್ಯಾತ ಇತಿಹಾಸ ಪ್ರಾಧ್ಯಾಪಕರಾಗಿದ್ದವರು; ‘ಬಂಗಾಳದ ನವೋದಯ’ ಹಾಗೂ ಆಧುನಿಕ ಯುರೋಪ್ ಇತಿಹಾಸವನ್ನು ಕುರಿತು ಆಳವಾದ ಸಂಶೋಧನೆ ನಡೆಸಿದವರು. ಇವರ ಸೋದರಮಾವ ಪ್ರಶಾಂತ್ ಚಂದ್ರ ಮಹಲನೋಬಿಸ್ ಅವರು ಭಾರತದ ಯೋಜನಾ ಆಯೋಗದ ರೂವಾರಿ ಹಾಗೂ ಜಗದ್ವಿಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಹೀಗಾಗಿ, ಮನೆಯ ದಿನನಿತ್ಯದ ಮಾತುಕತೆಗಳಲ್ಲೇ ಇತಿಹಾಸ, ವಿಜ್ಞಾನ, ಸಮಾಜ ಸುಧಾರಣೆ ಮತ್ತು ತರ್ಕಬದ್ಧ ಆಲೋಚನೆಗಳು ಹಾಸುಹೊಕ್ಕಾಗಿದ್ದವು.
ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಮುಗಿಸಿ, ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ಅವರು ಕಲ್ಕತ್ತಾ ಮತ್ತು ಬರ್ಧವಾನ್ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಆರಂಭಿಸಿದರು. ನಂತರ ಆಕ್ಸ್‌ಫರ್ಡ್‌ನ ವುಲ್ಫ್‌ಸನ್ ಕಾಲೇಜಿನ ಫೆಲೋ ಆಗಿ, ಯುರೋಪ್ ಹಾಗೂ ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೭೪ರಿಂದ ೨೦೦೪ರವರೆಗೆ ಸುದೀರ್ಘ ಮೂರು ದಶಕಗಳ ಕಾಲ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಸುಮಿತ್
ಇತಿಹಾಸ ಲೇಖನದಲ್ಲಿ ಹೊಸ ದಿಕ್ಕು: ‘ಕೆಳಗಿನಿಂದ ಇತಿಹಾಸ’
ಸುಮಿತ್ ಸರ್ಕಾರ್ ಅವರನ್ನು ಕೇವಲ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಕಟ್ಟಿಹಾಕಲು ಸಾಧ್ಯವಿಲ್ಲ. ಅವರು ಮಾರ್ಕ್ಸ್‌ವಾದಿ ಚಿಂತನೆಗೆ ಬದ್ಧರಾಗಿದ್ದರೂ, ಅದನ್ನು ಅವರು ಕುರುಡಾಗಿ ಒಪ್ಪಿಕೊಳ್ಳಲಿಲ್ಲ. ರಜನಿ ಪಾಮೆ ದತ್ ಅವರಂತಹ ಆರಂಭಿಕ ಮಾರ್ಕ್ಸ್‌ವಾದಿಗಳಂತೆ ಕೇವಲ ಆರ್ಥಿಕ ಸೂತ್ರಗಳನ್ನಷ್ಟೇ ನೆಚ್ಚಿಕೊಳ್ಳದೆ, ಅಥವಾ ಬಿಪನ್ ಚಂದ್ರ ಅವರಂತಹ ರಾಷ್ಟ್ರೀಯವಾದಿ ಮಾರ್ಕ್ಸ್‌ವಾದಿಗಳಂತೆ ಕೇವಲ ನಾಯಕರನ್ನಷ್ಟೇ ವೈಭವೀಕರಿಸದೆ ಅವರು ಇತಿಹಾಸ ರಚನೆಯಲ್ಲಿ ಹೊಸ ಹಾದಿಯನ್ನು ಆರಿಸಿಕೊಂಡರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಕಸ ಸಂಗ್ರಹ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್: 138 ಆಟೋ ಟಿಪ್ಪರ್‌ಗಳ ಪ್ರಾಯೋಗಿಕ ಯೋಜನೆ
ರಾಜರು, ವೈಸ್‌ರಾಯ್‌ಗಳು ಮತ್ತು ಗಣ್ಯ ನಾಯಕರ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಇತಿಹಾಸ ಕಥನವನ್ನು ಬದಿಗೆ ಸರಿಸಿ, ‘ತಳದ ಇತಿಹಾಸ’ (History from Below) ಹಾಗೂ ‘ತಳಸ್ಥರದ ಒತ್ತಡ’ (Pressure from Below) ಎಂಬ ಪರಿಕಲ್ಪನೆಯನ್ನು ಮುಂಚೂಣಿಗೆ ತಂದರು. ಸ್ವಾತಂತ್ರ್ಯ ಸಂಗ್ರಾಮವೆಂಬುದು ಕೇವಲ ದೆಹಲಿ, ಕಲ್ಕತ್ತಾ, ಮುಂಬೈನ ಶಾಸನಸಭೆಗಳಲ್ಲಿ ನಡೆದ ಚರ್ಚೆಯಲ್ಲ; ಅದರಲ್ಲಿ ಕಾರ್ಮಿಕರು, ಕಡುಬಡ ರೈತರು, ಆದಿವಾಸಿಗಳು, ಶೋಷಿತ ಜಾತಿಗಳು ಮತ್ತು ಮಹಿಳೆಯರ ಸ್ವಾಯತ್ತ ಪಾತ್ರವಿದೆ ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಿದರು.
ಮಹತ್ವದ ಕೃತಿ: ‘ಮಾಡರ್ನ್ ಇಂಡಿಯಾ ೧೮೮೫–೧೯೪೭’
೧೯೭೩ರಲ್ಲೇ ಅವರ ‘The Swadeshi Movement in Bengal: 1903–1908′ ಕೃತಿಯು ಬಂಗಾಳ ಚಳವಳಿಯ ಹಿಂದಿದ್ದ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಗಳನ್ನು ಬಿಡಿಸಿಟ್ಟು ದೊಡ್ಡ ಸಂಚಲನ ಮೂಡಿಸಿತ್ತು. ಆದರೆ ೧೯೮೩ರಲ್ಲಿ ಪ್ರಕಟವಾದ ಅವರ ‘Modern India 1885–1947’ ಕೃತಿಯು ಭಾರತೀಯ ಆಧುನಿಕ ಇತಿಹಾಸ ಅಧ್ಯಯನದ ಚಿತ್ರಣವನ್ನೇ ಬದಲಿಸಿತು.
ಈ ಕೃತಿಯ ಪ್ರಮುಖ ವೈಶಿಷ್ಟ್ಯವೆಂದರೆ, ಇಲ್ಲಿಯ ಕಥನ ಕಾಂಗ್ರೆಸ್ ಪಕ್ಷದ ಸ್ಥಾಪನೆಯ ವಿವರಣೆಯಿಂದ ಪ್ರಾರಂಭವಾಗುವುದಿಲ್ಲ. ಬದಲಿಗೆ ಕಾಂಗ್ರೆಸ್ ಉದಯಕ್ಕೆ ಮೊದಲೇ ಈ ದೇಶದ ಜನಸಾಮಾನ್ಯರು ನಡೆಸಿದ ಹೋರಾಟಗಳನ್ನು ವಿಶ್ಲೇಷಣೆಯಿಂದ ಪ್ರಾರಂಭವಾಗುತ್ತದೆ.
- ಆದಿವಾಸಿ ಮತ್ತು ರೈತ ಹೋರಾಟಗಳು: ಕಾಂಗ್ರೆಸ್ ನಡೆಸಿದ ಹೋರಾಟವನ್ನು ವಿಶ್ಲೇಷಿಸುವ ಮೊದಲು ಬಿರ್ಸಾ ಮುಂಡಾ ನೇತೃತ್ವದ ‘ಉಲ್ಗುಲನ್’ ದಂಗೆ, ಆಂಧ್ರದ ರಾಂಪಾ ಬಂಡಾಯ, ಮಹಾರಾಷ್ಟ್ರದ ದಕ್ಕನ್ ಗಲಭೆಗಳು, ಬಂಗಾಳದ ಪಾಬ್ನಾ ರೈತ ಹೋರಾಟಗಳು ಮತ್ತು ಅಸ್ಸಾಂ-ಮಹಾರಾಷ್ಟ್ರದ ಕಂದಾಯ ನಿರಾಕರಣೆ ಚಳವಳಿಗಳನ್ನು ಚರ್ಚಿಸುತ್ತಾರೆ.
- ವಸಾಹತುಶಾಹಿ ಆರ್ಥಿಕತೆಯ ವಾಸ್ತವ: ಸಂಪತ್ತಿನ ಸೋರಿಕೆ (Drain of Wealth), ಸಾಂಪ್ರದಾಯಿಕ ಕೈಗಾರಿಕೆಗಳ ನಾಶ (De-industrialization) ಹಾಗೂ ಬಲವಂತದ ಕೃಷಿ ವಾಣಿಜ್ಯೀಕರಣ ಇವೆಲ್ಲಾ ಹೇಗೆ ದೇಶದಲ್ಲಿ ಸರಣಿ ಕ್ಷಾಮಗಳಿಗೆ ಕಾರಣವಾಯಿತು ಎಂಬುದನ್ನು ವಿವರಿಸುತ್ತಾರೆ.
- ಸಮೂಹ ರಾಷ್ಟ್ರೀಯತೆ ಮತ್ತು ಗಾಂಧೀಜಿ: ಗಾಂಧೀಜಿಯವರ ಸತ್ಯಾಗ್ರಹ, ಅಸಹಕಾರ ಮತ್ತು ಕಾನೂನು ಭಂಗ ಚಳವಳಿಗಳನ್ನು ವಿವರಿಸುವಾಗ, ಗಾಂಧೀಜಿಯವರ ಕರೆಗಿಂತಲೂ ಮಿಗಿಲಾಗಿ ಜನಸಾಮಾನ್ಯರ ಆಶೋತ್ತರಗಳು, ವದಂತಿಗಳು ಮತ್ತು ಗ್ರಾಮೀಣ ಬಂಡಾಯಗಳು ಹೇಗೆ ಚಳವಳಿಗೆ ಶಕ್ತಿಯನ್ನು ತಂದುಕೊಟ್ಟವು ಎಂಬುದನ್ನು ಕಟ್ಟಿಕೊಡುತ್ತಾರೆ.
- ೧೯೪೫-೪೬ರ ಕ್ರಾಂತಿಕಾರಿ ಮುನ್ನುಡಿ ಮತ್ತು ವಿಭಜನೆಯ ದುರಂತ: ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದ ಭಾರತವನ್ನು ‘ಜ್ವಾಲಾಮುಖಿಯ ಅಂಚು’ (Edge of a Volcano) ಎಂದು ಬಣ್ಣಿಸುವ ಸರ್ಕಾರ್, INA ವಿಚಾರಣೆ ವಿರುದ್ಧದ ಪ್ರತಿಭಟನೆಗಳು, ೧೯೪೬ರ ಮುಂಬೈ ನೌಕಾಪಡೆ (RIN) ದಂಗೆ, ತೆಭಾಗಾ ಮತ್ತು ತೆಲಂಗಾಣ ರೈತ ಹೋರಾಟಗಳು ವಸಾಹತುಶಾಹಿ ಬೇರುಗಳನ್ನು ಹೇಗೆ ಅಲುಗಿಸಿದವು ಎಂಬುದನ್ನು ದಾಖಲಿಸುತ್ತಾರೆ. ಜೊತೆಗೆ, ಕೋಮುವಾದದ ಬೆಳವಣಿಗೆ ಮತ್ತು ದೇಶ ವಿಭಜನೆಯ ನೋವಿನೊಂದಿಗೆ ಸ್ವಾತಂತ್ರ್ಯವು ಹೇಗೆ ಅಪೂರ್ಣ ಆಶೋತ್ತರಗಳೊಂದಿಗೆ ಸಿಕ್ಕಿತು ಎಂಬುದನ್ನು ವಸ್ತುನಿಷ್ಠವಾಗಿ ಮಂಡಿಸುತ್ತಾರೆ.
ಸಬಾಲ್ಟರ್ನ್ ಸ್ಟಡೀಸ್ ಜೊತೆಗಿನ ನಂಟು ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ
೧೯೮೦ರ ದಶಕದ ಆರಂಭದಲ್ಲಿ ರಣಜಿತ್ ಗುಹಾ ನೇತೃತ್ವದಲ್ಲಿ ಆರಂಭವಾದ ‘ಸಬಾಲ್ಟರ್ನ್ ಸ್ಟಡೀಸ್’ (Subaltern Studies – ತಳಸಮುದಾಯಗಳ ಅಧ್ಯಯನ ) ಸಂಸ್ಥಾಪಕ ಬಳಗದಲ್ಲಿ ಸುಮಿತ್ ಸರ್ಕಾರ್ ಅವರೂ ಇದ್ದರು. ಕೆಳವರ್ಗದ ಧ್ವನಿಗಳನ್ನು ಮುನ್ನೆಲೆಗೆ ತರುವ ಆಶಯ ಅವರದಾಗಿತ್ತು.
ಆದರೆ, ೧೯೯೦ರ ಹೊತ್ತಿಗೆ ಸಬಾಲ್ಟರ್ನ್ ಬಳಗವು ಮಿಶೆಲ್ ಫೂಕೊ ಮತ್ತು ಎಡ್ವರ್ಡ್ ಸೈದ್ ಅವರ ಪ್ರಭಾವಕ್ಕೆ ಒಳಗಾಗಿ ‘ಉತ್ತರ-ಆಧುನಿಕತಾವಾದ’ (Postmodernism) ಮತ್ತು ‘ಉತ್ತರ-ವಸಾಹತುಶಾಹಿ’ ಚಿಂತನೆಗಳತ್ತ ವಾಲಿದಾಗ ಸರ್ಕಾರ್ ತೀವ್ರವಾಗಿ ಅಸಮಾಧಾನಗೊಂಡರು. ಈ ಸಂಘರ್ಷವನ್ನು ಅವರು ತಮ್ಮ ‘Writing Social History’ (೧೯೯೭) ಕೃತಿಯ ಪ್ರಸಿದ್ಧ ಪ್ರಬಂಧ *’The Decline of the Subaltern in Subaltern Studies’ ನಲ್ಲಿ ಸವಿಸ್ತಾರವಾಗಿ ದಾಖಲಿಸಿದರು:
- ನೈಜ ಶೋಷಿತರ ಕಣ್ಮರೆ: ಸಬಾಲ್ಟರ್ನ್ ಪಂಥವು ರೈತರು, ಕಾರ್ಮಿಕರ ಹೊಟ್ಟೆಪಾಡಿನ ಸಮಸ್ಯೆಗಳು, ಭೂ-ಸಂಬಂಧಗಳು ಮತ್ತು ಆರ್ಥಿಕ ಶೋಷಣೆಯನ್ನು ಬಿಟ್ಟು ಕೇವಲ ಭಾಷೆ, ಅಮೂರ್ತ ಕಥನಗಳಿಗೆ ಮತ್ತು ಸಾಂಸ್ಕೃತಿಕ ಚರ್ಚೆಗಳಿಗೆ ಸೀಮಿತವಾಯಿತು ಎಂದು ಟೀಕಿಸಿದರು.
- ಸಾಂಪ್ರದಾಯಿಕ ಸಮಾಜದ ಅತಿಯಾದ ವೈಭವೀಕರಣ: ವಸಾಹತುಶಾಹಿ ವಿರೋಧದ ಭರದಲ್ಲಿ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿದ್ದ ಜಾತಿ ಶೋಷಣೆ, ಅಸ್ಪೃಶ್ಯತೆ ಮತ್ತು ಪಿತೃಪ್ರಧಾನ ದಬ್ಬಾಳಿಕೆಗಳನ್ನು ಈ ಪಂಥ ಕಡೆಗಣಿಸುತ್ತಿದೆ ಎಂದು ಎಚ್ಚರಿಸಿದರು.
- ಕೋಮುವಾದದ ಅಪಾಯ: ಜಾತ್ಯತೀತತೆ ಮತ್ತು ವೈಚಾರಿಕತೆಯನ್ನು ಕೇವಲ ‘ಪಾಶ್ಚಾತ್ಯ ಆಮದು’ ಎಂದು ತಿರಸ್ಕರಿಸುವುದು ಭಾರತದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಕೋಮುವಾದಿಗಳಿಗೆ ತಮ್ಮ ಪ್ರತಿಗಾಮಿ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ ಎಂದು ವಾದಿಸಿ, ಆ ಕೂಟದಿಂದ ಧೈರ್ಯವಾಗಿ ಹೊರಬಂದರು.
ಬೌದ್ಧಿಕ ಪ್ರಾಮಾಣಿಕತೆ ಮತ್ತು ನಿಷ್ಕಲ್ಮಷ ವ್ಯಕ್ತಿತ್ವ
ಸುಮಿತ್ ಸರ್ಕಾರ್ ಅವರ ಬದ್ಧತೆ ಕೇವಲ ಬರವಣಿಗೆಗೆ ಸೀಮಿತವಾಗಿರಲಿಲ್ಲ. ಇತಿಹಾಸವನ್ನು ಕೋಮುವಾದಿ ಮತ್ತು ಫ್ಯಾಸಿಸ್ಟ್ ಅಜೆಂಡಾಗಳಿಗೆ ಅನುಕೂಲವಾಗುವಂತೆ ತಿರುಚುವ ಎಲ್ಲಾ ಪ್ರಯತ್ನಗಳನ್ನು ಅವರು ನಿರಂತರವಾಗಿ ವಿರೋಧಿಸಿದರು. ಅದರ ವಿರುದ್ಧದ ಎಲ್ಲಾ ಹೋರಾಟಗಳನ್ನು ಬೆಂಬಲಿಸಿದರು. ೨೦೦೭ರಲ್ಲಿ ನಂದಿಗ್ರಾಮದಲ್ಲಿ ಎಡಪಕ್ಷಗಳ ಸರ್ಕಾರದ ಅವಧಿಯಲ್ಲೇ ರೈತರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿದರು. ಪಶ್ಚಿಮ ಬಂಗಾಳ ಸರ್ಕಾರ ನೀಡಿದ ಪ್ರತಿಷ್ಠಿತ ‘ರವೀಂದ್ರ ಪುರಸ್ಕಾರ’ವನ್ನು, ಸರ್ಕಾರಕ್ಕೆ ಹಿಂತಿರುಗಿಸಿದರು. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಬುದ್ದಿಜೀವಿಗಳು ಜನಸಾಮಾನ್ಯರ ಪರವಾಗಿ ನಿಲ್ಲಬೇಕು ಎಂಬುದು ಅವರ ಅವರ ನಿಲುವಾಗಿತ್ತು.
ತಮ್ಮ ಪತ್ನಿ ಹಾಗೂ ಪ್ರಖ್ಯಾತ ಇತಿಹಾಸತಜ್ಞೆ ತನಿಕಾ ಸರ್ಕಾರ್ ಅವರ ಜೊತೆಯಲ್ಲಿ ಜಾತಿ, ಮಹಿಳೆ ಮತ್ತು ಸಮಾಜ ಸುಧಾರಣೆಯ ಕುರಿತು ಮಹತ್ವದ ಕೃತಿಗಳನ್ನು ಸರ್ಕಾರ್ ಸಂಪಾದಿಸಿದರು. ವೈಯಕ್ತಿಕ ಬದುಕಿನಲ್ಲಿ ಅತ್ಯಂತ ಸರಳ ಹಾಗೂ ಸ್ನೇಹಮಯಿಯಾಗಿದ್ದರು. ಕಿರಿಯ ಸಂಶೋಧಕರ ಮತ್ತು ವಿದ್ಯಾರ್ಥಿಗಳ ಸಂಶಯಗಳನ್ನು ಮುಗುಳುನಗುತ್ತಾ, ಅಪಾರ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು ಎಂದು ಅವರನ್ನು ಬಲ್ಲ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.
“ಭೂತಕಾಲವನ್ನು ವರ್ತಮಾನದ ಸ್ವಾರ್ಥಕ್ಕೆ ಬಳಸಿಕೊಳ್ಳದೆ, ಅದನ್ನು ವಸ್ತುನಿಷ್ಠವಾಗಿ, ಕೆಳಸ್ತರದ ಸಾಮಾನ್ಯ ಜನರ ಕಣ್ಣುಗಳಿಂದ ಗ್ರಹಿಸಬೇಕು” ಎಂಬ ಸುಮಿತ್ ಸರ್ಕಾರ್ ಅವರ ಚಿಂತನೆಗಳು ಭಾರತೀಯ ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ಎಂದೆಂದಿಗೂ ಧ್ರುವತಾರೆಯಾಗಿ ಉಳಿಯಲಿವೆ.
ಇದನ್ನೂ ನೋಡಿ : “ಕನಿಷ್ಠ ವೇತನವೂ ಇಲ್ಲ, ಜೀವಕ್ಕೆ ಗ್ಯಾರಂಟಿಯೂ ಇಲ್ಲ! ಬೇಯುತ್ತಿದೆ ವಿದ್ಯುತ್ ಕಾರ್ಮಿಕರ ಬದುಕು” | ಎಸ್ ವರಲಕ್ಷ್ಮಿ
