ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿಯೊಬ್ಬರಿಗೆ ಬೆದರಿಕೆ ಕರೆಗಳು ಬಂದಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿಐಡಿಯ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ನಿರ್ದೇಶನ ನೀಡಿದೆ.
ಪ್ರಕರಣದ ಪ್ರಾಸಿಕ್ಯೂಷನ್ ಪರ ನಾಲ್ಕನೇ ಸಾಕ್ಷಿಯಾಗಿರುವ 43 ವರ್ಷದ ಸಾಮಾಜಿಕ ಕಾರ್ಯಕರ್ತೆಯ ಹೇಳಿಕೆಯನ್ನು ಆಧರಿಸಿ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್ ಅವರು ಎಸ್ಐಟಿ ಮುಖ್ಯಸ್ಥರಾಗಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಜುಲೈ 6ರಂದು ಸಾಕ್ಷಿ ಹೇಳಿಕೆ ದಾಖಲಿಸಿದ್ದರು. ಆಗಸ್ಟ್ 20ರಂದು ನಡೆದ ಪಾಟೀ ಸವಾಲಿನ ಸಂದರ್ಭದಲ್ಲಿ, ಹಿಂದಿನ ವಿಚಾರಣೆಯ ಬಳಿಕ ಆರೋಪಿ ಕಡೆಯವರಿಂದ ಬೆದರಿಕೆ ಫೋನ್ ಕರೆಗಳು ಬಂದಿವೆ ಎಂದು ಸಾಕ್ಷಿ ಆರೋಪಿಸಿದ್ದಾರೆ.
ತಾನು ಸಾಕ್ಷ್ಯ ನೀಡಿದ ಬಳಿಕ ತನಗೆ ಅಥವಾ ತನ್ನ ಪುತ್ರನಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಆರೋಪಿಗಳೇ ಹೊಣೆ ಎಂದು ಅವರು ನ್ಯಾಯಾಲಯದ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಕಡೆಯಿಂದ ಮತ್ತಷ್ಟು ಬೆದರಿಕೆ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆದರಿಕೆ ಕರೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ಸಾಕ್ಷಿಗೆ ಕಾನೂನಿನ ಅಡಿಯಲ್ಲಿ ಅಗತ್ಯ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಇದನ್ನೂ ಓದಿ : ಭ್ರಷ್ಟಾಚಾರ ವರದಿ ಮಾಡಿದ್ದಕ್ಕೆ ಪತ್ರಕರ್ತನ ಮೇಲೆ ಹಲ್ಲೆ ಆರೋಪ: ಸರ್ಕಾರಿ ವೈದ್ಯನ ವಿರುದ್ಧ ಆಕ್ರೋಶ
100ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ
ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ 2024ರ ಏಪ್ರಿಲ್ 28ರಂದು ಮನೆಕೆಲಸದಾಕೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಎಚ್.ಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ವಿಭಜಿಸಿ ಪ್ರಜ್ವಲ್ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಎಸ್ಐಟಿ 100ಕ್ಕೂ ಹೆಚ್ಚು ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ವಿಚಾರಣೆ ಮುಂದುವರಿದಿದೆ. ಸಂತ್ರಸ್ತೆ, ಅವರ ಪುತ್ರ ಮತ್ತು ಪ್ರಜ್ವಲ್ ಅವರ ಕಾರು ಚಾಲಕ ಸೇರಿದಂತೆ ಹಲವು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಸಾಕ್ಷಿಗೆ ಬೆದರಿಕೆ ಕರೆ ಬಂದಿರುವ ಆರೋಪದ ತನಿಖೆಯ ವರದಿಯನ್ನು ಎಸ್ಐಟಿ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಲಾಗಿದೆ.
ಈ ಬೆಳವಣಿಗೆಯ ನಡುವೆಯೇ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪ್ರಜ್ವಲ್ ರೇವಣ್ಣ ಇರಿಸಲಾಗಿರುವ ಅತಿಭದ್ರತಾ ಬ್ಯಾರಕ್ನಿಂದ ಮೊಬೈಲ್, ಚಾರ್ಜರ್, ಪೆನ್ಡ್ರೈವ್ ಸೇರಿದಂತೆ ಹಲವು ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ ವಿಚಾರವೂ ಗಮನ ಸೆಳೆದಿದೆ.
ಇದನ್ನೂ ನೋಡಿ : ಹಳೇ ಕ್ಯಾಮರಾ ಹೇಗಿತ್ತು ನೋಡಿ! ಆಗಿನ ತಂತ್ರಜ್ಞಾನ ಕಂಡರೆ ಅಚ್ಚರಿಯಾಗುತ್ತೆ! Janashakthi Media
